ಶುಕ್ರವಾರ, ಮೇ 29, 2020
27 °C

ಸ್ವರ್ಗಕ್ಕೆ ಮೂರೇ ಗೇಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲಗಿದ್ದ ಯಾರಿಗೂ ನಿದ್ದೆ ಬಂದಿರಲಿಲ್ಲ. ರಾತ್ರಿ ಹತ್ತೂವರೆ ಸಮಯ, ಎಲ್ಲರನ್ನೂ ಎಬ್ಬಿಸುತ್ತಿದ್ದರು. ಎದ್ದವರೆಲ್ಲರೂ ತಮ್ಮ ಬಟ್ಟೆಯ ಬ್ಯಾಗನ್ನು ತೆಗೆದು ಅದರಲ್ಲಿದ್ದ ಬಟ್ಟೆಯನ್ನು ಧರಿಸುತ್ತಿದ್ದರು. ಮೂರು ಜೊತೆ ಪ್ಯಾಂಟ್-ಶರ್ಟ್ ಧರಿಸಿ ಅದರ ಮೇಲೆ ಉಣ್ಣೆಯ ಮತ್ತೊಂದು ಕವಚ. ಇವೆಲ್ಲದರ ಮೇಲೆ ನೀರು ನಿರೋಧಕ ಪ್ಯಾಂಟ್ ಮತ್ತು ಶರ್ಟ್. ತಲೆಗೆ ಉಣ್ಣೆಯ ಟೋಪಿ, ಮತ್ತದರ ಮೇಲೆ ಮಂಕಿ ಟೋಪಿ. ಅದರ ಮೇಲೆ ತಲೆಗೆ ಟಾರ್ಚ್ ಸಿಕ್ಕಿಸಿಕೊಂಡೆವು. ಕೈಗೆ ಬಟ್ಟೆಯ ಎರಡು ಗ್ಲೌಸ್, ಮೇಲೆ ಮತ್ತೊಂದು ನೀರು ನಿರೋಧಕ ಗ್ಲೌಸ್. ಕಾಲಿಗೆ ಮೂರು ಜೊತೆ ಅಥವಾ ನಾಲ್ಕು ಜೊತೆ ಕಾಲು ಚೀಲ.ಅವುಗಳನ್ನು ಮುಚ್ಚುವ ಪರ್ವತವೇರುವ ಶೂ. ಇದೆಲ್ಲದರ ಮೇಲೆ ಕಾಲಿಗೆ ಮತ್ತೊಂದು ಕವಚ, ಅದು ಮಂಡಿಯಿಂದ ಹಿಡಿದು ಪಾದದ ತನಕ ನೀರಿನಿಂದ ಮತ್ತು ಮುಳ್ಳುಗಳಿಂದ ರಕ್ಷಿಸಲು ಧರಿಸುವ ಒಂದು ಪ್ಲಾಸ್ಟಿಕ್ ಚೀಲ. ಅದನ್ನು ಗೇಟರ್ಸ್ ಎಂದು ಕರೆಯುತ್ತಾರೆ. ಇದನ್ನೆಲ್ಲ ಧರಿಸಿ ಊಟದ ಮನೆಗೆ ಹೋದರೆ ಎಲ್ಲರೂ ಅವರವರ ಆಕಾರವನ್ನು ಎರಡು ಪಟ್ಟು ದಪ್ಪ ಮಾಡಿಕೊಂಡಿದ್ದರು. ಕುಳಿತು ಸಮಾಧಾನವಾಗಿ ಟೀ ಮತ್ತು ಬಿಸ್ಕತ್ತು ತಿಂದು, ಮೊದಲನೆ ಗ್ರೂಪ್‌ನಲ್ಲಿ ಹೋಗುವವರೆಲ್ಲ ಹೊರಗೆ ಹೋಗಿ ನಿಂತೆವು.ಒಬ್ಬರ ಹಿಂದೆ ಒಬ್ಬರು. ಎಲ್ಲರ ಕೈಯಲ್ಲೂ ಕೋಲು, ತಲೆಯಲ್ಲಿ ಬೆಳಕು ಬೀರುವ ಟಾರ್ಚ್, ಕಣ್ಣು ಮತ್ತು ಬಾಯಿ ಮಾತ್ರ ಕಾಣುವ ಮುಸುಕು. ಯಾರ ಮುಖದಲ್ಲೂ ಮಂದಹಾಸವಿಲ್ಲ. ಏನೋ ಒಂದು ತರಹದ ಆತಂಕ. ನಿಂತಿದ್ದ ಜಾಗದಿಂದ ಕೇವಲ ಎರಡು ಮೀಟರ್‌ನಷ್ಟು ಮಾತ್ರ ಕಾಣಿಸುತ್ತಿತ್ತು. ಮಿಕ್ಕೆಲ್ಲ ಕತ್ತಲು. ನಮ್ಮನ್ನೆಲ್ಲ ಒಬ್ಬರ ಹಿಂದೆ ಒಬ್ಬರಂತೆ ನಿಲ್ಲಿಸಿ, ನಮ್ಮ ಮುಂದೆ, ಮಧ್ಯೆ ಮತ್ತು ಹಿಂದೆ ಎನ್ನುವಂತೆ ಮೂರು ಜನ ಗೈಡ್. ರಾತ್ರಿ ಸಮಯ ಹನ್ನೊಂದು. ಎಲ್ಲರೂ ರೆಡಿಯಾಗಿ ನಿಂತಿದ್ದ ನಮಗೆ ಮುಂದೆ ನಿಂತಿರುವ ಗೈಡ್‌ನನ್ನು ಹಿಂಬಾಲಿಸುವಂತೆ ತಿಳಿಸಿದರು. ಯಾರೂ ಜಾಸ್ತಿ ತಲೆ ಉಪಯೋಗಿಸುವ ಹಾಗಿಲ್ಲ, ಗೈಡ್ ಹೇಗೆ ಹೇಳುತ್ತಾರೊ ಹಾಗೆ ನಡೆದುಕೊಳ್ಳಬೇಕೆಂದು ಮತ್ತೊಮ್ಮೆ ನೆನಪಿಸಿದರು.ಇರುವೆಗಳಂತೆ ಒಬ್ಬರ ಬೆನ್ನ ಹಿಂದೆ ಇನ್ನೊಬ್ಬರು ತಲೆ ಬಗ್ಗಿಸಿ, ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ನಡೆಯುತ್ತಿದ್ದೆವು. ಹೊರಗಿನ ತಾಪಮಾನ ಮೈನಸ್ ಎರಡು ಡಿಗ್ರಿ! ನಮ್ಮ ನಡಿಗೆ ಬಹಳ ನಿಧಾನವಾಗಿತ್ತು. ಸ್ವಲ್ಪ ದೂರಕ್ಕೆಲ್ಲ ಎಲ್ಲರ ಮುಖದಲ್ಲಿ ಸುಸ್ತು ಕಾಣಿಸುತ್ತಿತ್ತು. ಯಾರಿಗೂ ದಾರಿ ಕಾಣಿಸುತ್ತಿರಲಿಲ್ಲ. ಸುಮ್ಮನೆ ಮುಂದುಗಡೆ ಇದ್ದವರನ್ನು ಹಿಂಬಾಲಿಸುತ್ತ ನಡೆಯುತ್ತಿದ್ದೆವು. ಉಸಿರಾಟದ ಶಬ್ದ ಕೇಳಿಸುತ್ತಿತ್ತೇ ಹೊರತು ಯಾರಿಂದಲೂ ಮಾತು ಹೊರಡುತ್ತಿರಲಿಲ್ಲ.

ಸುಮಾರು ಒಂದು ಗಂಟೆಯ ನಂತರ ಸುಮ್ಮನೆ ಹಾಗೆ ಹಿಂತಿರುಗಿ ನೋಡಿದರೆ ಕೂಗಳತೆ ದೂರದಲ್ಲಿ ನಾವು ತಂಗಿದ್ದ ಗುಡಿಸಲು ಕಾಣಿಸುತ್ತಿತ್ತು. ಒಂದು ಗಂಟೆಯ ಸತತ ನಡಿಗೆಯ ನಂತರವೂ ಬಹಳವೇನು ದೂರ ಸಾಗಿರಲಿಲ್ಲ. ಮತ್ತೆ ಒಂದು ಗಂಟೆಯೊಳಗೆ ನಮ್ಮ ಹಿಂದಿನ ಗುಂಪು ನಮ್ಮನ್ನು ಸೇರಿಕೊಂಡಿತ್ತು. ಒಬ್ಬೊಬ್ಬರಾಗೆ ಸುಸ್ತಾಗಿ ಬೀಳಲು ಶುರುಮಾಡಿದರು. ಕೆಲವರು ವಾಂತಿ ಮಾಡಿಕೊಳ್ಳುತ್ತಿದ್ದರು. ಹೊರಟಿದ್ದ ಇಪ್ಪತ್ಮೂರು ಜನರಲ್ಲಿ ಹತ್ತು ಜನಕ್ಕೂ ಜಾಸ್ತಿ ನಡೆಯಲಾರದಷ್ಟು ಸುಸ್ತಾಗಿದ್ದರು. ಸುಮಾರು ಎರಡು ಗಂಟೆಯ ಪ್ರಯಾಣ ಕೂಡ ನಮ್ಮನ್ನು ಬಹಳ ದೂರಕ್ಕೆ ಕರೆದುಕೊಂಡು ಹೋಗಿರಲಿಲ್ಲ. ಇನ್ನೊಂದು ಗಂಟೆ ನಡೆದರೆ ಒಂದು ಗುಹೆ ಸಿಗುತ್ತದೆ, ಅಲ್ಲಿಯತನಕ ಯಾರೂ ಸುಧಾರಿಸಿಕೊಳ್ಳುವ ಹಾಗಿಲ್ಲ ಎಂದು ತಿಳಿಸಿದರು.ಸತತವಾಗಿ ನಾಲ್ಕು ಗಂಟೆಗಳ ಪ್ರಯಾಣದ ನಂತರ ಹನ್ಸ್ ಮೇಹರ್ ಗುಹೆ ಸಿಕ್ಕಿತು. ಹನ್ಸ್ ಮೇಹರ್ ಎಂಬ ವ್ಯಕ್ತಿ ಈ ಪರ್ವತವನ್ನು ಮೊದಲ ಬಾರಿಗೆ ಹತ್ತಿದವನು. ಅವನು ಈ ನೈಸರ್ಗಿಕ ಗುಹೆಯಲ್ಲಿ ಮೂರು ದಿನ ಉಳಿದುಕೊಂಡಿದ್ದನಂತೆ. ಆದುದರಿಂದ ಈ ಗುಹೆಗೆ ಅವನ ಹೆಸರು. ಈ ಗುಹೆ ಮತ್ತು ಮವೇನ್‌ಜಿ ಎನ್ನುವ ಮತ್ತೊಂದು ಶಿಖರ- ಎರಡೂ ಒಂದೇ ಎತ್ತರದಲ್ಲಿವೆ ಎಂದು ತಿಳಿಸಿದರು. ಅಷ್ಟೊಂದು ವಿಶಾಲವಾಗಿರದ ಈ ಗುಹೆಯಲ್ಲಿ ಬಹಳ ಹೊತ್ತು ಕೂರಲು ಅವಕಾಶ ಕೊಡಲಿಲ್ಲ. ಎಲ್ಲಿ ನಿದ್ದೆ ಮಾಡುತ್ತಾರೊ ಎನ್ನುವ ಭಯದಿಂದ ಸ್ವಲ್ಪ ಹೊತ್ತು ಸುಧಾರಿಸಿಕೊಳ್ಳಲು ಮಾತ್ರ ಅವಕಾಶ ಕೊಟ್ಟು, ಹೊರಡಲು ಹೇಳಿದರು. ನಾವು ತಲುಪಬೇಕಾದ ಸ್ಥಳಕ್ಕೂ ಮತ್ತು ಉಳಿದುಕೊಂಡಿದ್ದ ಗುಡಿಸಲಿಗೂ ಈ ಗುಹೆ ಮಧ್ಯದಲ್ಲಿದೆ ಎಂದು ತಿಳಿಸಿದರು. ನಮಗೆ ಇನ್ನೂ ಬಹಳ ದೂರದವರೆಗೆ ಹೋಗಬೇಕು ಎಂದಷ್ಟೆ ತಿಳಿಯಿತು. ನಿಜ ಏನೆಂದರೆ ಈ ಗುಹೆಗೆ ನಾವು ನಡೆದುಬಂದಿದ್ದ ಮಾರ್ಗದ ನಾಲ್ಕು ಪಟ್ಟು ಕಠಿಣ ಮಾರ್ಗ ನಮ್ಮ ಮುಂದಿದೆ ಎಂದು ನಮಗೆ ತಿಳಿದಿರಲಿಲ್ಲ.ನಮ್ಮ ಪ್ರಯಾಣ ಮುಂದುವರೆಯಿತು. ಈಗ ನಮ್ಮ ಮುಂದಿದ್ದ ದಾರಿಯ ಕಲ್ಪನೆ ನಮಗಿರಲಿಲ್ಲ. ನೇರವಾಗಿ ಹತ್ತಲಾಗದ ಬೆಟ್ಟವನ್ನು ಜಿಗ್-ಜಾಗ್ ಮಾದರಿಯಲ್ಲಿ ಹತ್ತಲು ಶುರುಮಾಡಿದೆವು. ಎರಡು ಹೆಜ್ಜೆ ಇಟ್ಟು ಹತ್ತಬಹುದಾದ ಮಾರ್ಗವನ್ನು ಸುಮಾರು ಹನ್ನೆರಡು ಹೆಜ್ಜೆ ಇಟ್ಟು ಹತ್ತುತ್ತಿದ್ದೆವು. ಬೂದಿಯಂತಹ ಮಣ್ಣಿನಿಂದ ಕೂಡಿದ ಈ ದಾರಿಯನ್ನು ನೇರವಾಗಿ ಹತ್ತುವುದು ಅಸಾಧ್ಯದ ಕಾರ್ಯವಾಗಿತ್ತು. ಕೇವಲ ನೂರು ಮೀಟರ್‌ನಷ್ಟು ಬೆಟ್ಟವನ್ನು ಹತ್ತಲು ಸುಮಾರು ಒಂದು ಗಂಟೆ ತೆಗೆದುಕೊಂಡೆವು. ನಮ್ಮಲ್ಲಿ ಗೈಡ್‌ಗಳು ಕಡಿಮೆ ಇದ್ದರು. ಇದ್ದ ಗೈಡ್‌ಗಳು ಸುಸ್ತಾದವರನ್ನು ಹಿಂದಕ್ಕೆ ಬಿಡಲು ಹೋಗಿದ್ದರು. ಆಮ್ಲಜನಕ ಬಹಳ ಕಡಿಮೆ ಇದ್ದ ಕಾರಣ ಉಸಿರಾಟದ ತೊಂದರೆ ಬಹಳ. ಏನೂ ಕೆಲಸ ಮಾಡದೆ ಸುಸ್ತಾಗುವ ಅಂತಹ ಜಾಗದಲ್ಲಿ, ಪರ್ವತ ಹತ್ತುವಂತಹ ಕಠಿಣ ಕಾರ್ಯ ಬಹಳ ಆಯಾಸದಾಯಕ.ನನ್ನ ಹಿಂದೆ ನಮ್ಮ ಗುಂಪಿನ ಇನ್ನೊಬ್ಬ ಹುಡುಗ ಬಂದ. ನಾನು ಅವನನ್ನು ನೋಡಿ ಸ್ವಲ್ಪ ನಿಧಾನವಾಗಿ ಚಲಿಸತೊಡಗಿದೆ. ಸ್ವಲ್ಪವೇ ದೂರದಲ್ಲಿ ಹತ್ತಿಯ ಹಾಸಿಗೆಯಂತೆ ಕಾಣಿಸತೊಡಗಿತು. ಅದು ಮಂಜಿರಬೇಕು ಎಂದು ಅನ್ನಿಸಿದರೂ ಅಂತಹ ಖುಷಿ ಅನ್ನಿಸಲಿಲ್ಲ. ಈ ಪರ್ವತ ಹತ್ತುವ ಮೊದಲು, ಕೆಳಗಿನಿಂದ ಶಿಖರದ ತುದಿಯಲ್ಲಿದ್ದ ಮಂಜಿನ ಟೋಪಿಯನ್ನು ನೋಡಿ ಅದರ ಹತ್ತಿರ ಹೋದಾಗ ಹತ್ತಿ ಕುಣಿಯುತ್ತೇನೆ, ಅದನ್ನು ಉಂಡೆ ಮಾಡಿ ಬೇರೆಯವರಿಗೆ ಹೊಡೆಯುತ್ತೇನೆ ಎಂದು ಕಲ್ಪಿಸಿಕೊಂಡಿದ್ದೆ. ಆದರೆ ಈಗ ನನ್ನ ಕಾಲಿನ ಪಕ್ಕದಲ್ಲೆ ಮಂಜಿನ ಹಾಸಿಗೆ ಬಿದ್ದಿದ್ದರೂ ಅದನ್ನು ಮುಟ್ಟುವ ಆಸೆ ಕೂಡ ನನ್ನಲ್ಲಿ ಉಳಿದಿರಲಿಲ್ಲ.ಹಿಂದೆ ಬರುತ್ತಿದ್ದ ನನ್ನ ಸ್ನೇಹಿತನಿಗೆ ನಿಧಾನವಾಗಿ ಹೇಳಿದೆ, ‘ನೋಡಿಲ್ಲಿ, ಮಂಜು ಬಿದ್ದಿದೆ’ ಎಂದು. ಅದಕ್ಕೆ ಅವನು, ‘ಅದನ್ನು ನೋಡುವ ಆಸಕ್ತಿ ನನ್ನಲ್ಲಿ ಉಳಿದಿಲ್ಲ, ಬೇಕಿದ್ದರೆ ನೀನೆ ಮುಟ್ಟಿ ನೋಡು’ ಎಂದು ಹೇಳಿ ನನ್ನ ಹತ್ತಿರ ಬಂದು ನಿಂತುಕೊಂಡ. ನಮಗೆ ಎಷ್ಟು ಸುಸ್ತಾಗಿತ್ತೆಂದರೆ, ಮಂಜನ್ನು ಮುಟ್ಟಲು ಎರಡು ಹೆಜ್ಜೆ ಮುಂದೆ ಹೋಗಬೇಕಿತ್ತು, ಹೋದರೆ ಮತ್ತೆ ಎರಡು ಹೆಜ್ಜೆ ಹಿಂದೆ ಬರಬೇಕು, ಎಲ್ಲಾ ಸೇರಿ ನಾಲ್ಕು ಹೆಜ್ಜೆ. ಮಂಜನ್ನು ಮುಟ್ಟುವ ಖುಷಿಗಿಂತ ನಾಲ್ಕು ಹೆಜ್ಜೆ ಉಳಿಸಿದ ಖುಷಿ ಜಾಸ್ತಿ ಎನಿಸಿ ಸುಮ್ಮನೆ ಮುಂದುವರೆದೆವು. ಕೊನೆಗೊಮ್ಮೆ ಜಿಗ್-ಜಾಗ್ ಮಾದರಿಯ ಪ್ರಯಾಣ ಮುಗಿಯಿತು ಮತ್ತು ಕಲ್ಲು ಬಂಡೆಗಳು ಶುರುವಾದವು.ನಮ್ಮ ಕೈಲಿದ್ದ ಕೋಲುಗಳನ್ನು ಮಡಚಿ ಬಂಡೆಗಳನ್ನು ಹಿಡಿದು ಹತ್ತಲು ಶುರುಮಾಡಿದೆವು. ಹಿಂತಿರುಗಿ ನೋಡಿದರೆ ನಮ್ಮ ಜೊತೆಗಾರರು ಬಹಳ ದೂರದಲ್ಲಿ ಬರುತ್ತಿದ್ದರು. ಕೂತರೆ ಅಲ್ಲಿಯ ಚಳಿಗೆ ಮತ್ತು ಕಡಿಮೆ ಆಮ್ಲಜನಕಕ್ಕೆ ಇನ್ನೂ ಸುಸ್ತಾಗುತ್ತಿದ್ದೆವು. ಹಾಗಾಗಿ ಪ್ರಯಾಣವನ್ನು ಮುಂದುವರೆಸಿದೆವು. ಕೆಲವು ಬಂಡೆಗಳನ್ನು ತೆವಳಿ ಹತ್ತಬೇಕಾಗಿತ್ತು. ಎಲ್ಲಿಗೆ ಹೋಗುತ್ತಿದ್ದೇವೆ, ನಮ್ಮ ದಾರಿ ಸರಿ ಇದೆಯಾ ಎನ್ನುವುದೆ ನಮಗೆ ತಿಳಿಯದಂತಾಗಿತ್ತು. ನನ್ನ ಸ್ನೇಹಿತ ಸ್ವಲ್ಪ ಹಿಂದೆ ಉಳಿದುಕೊಂಡ. ಅವನಿಗಾಗಿ ಕಾದ ನನಗೆ ಚೈನೀಸ್ ಹುಡುಗಿ ಮತ್ತು ಅವಳ ಗೈಡ್ ಕೂಡ ಕಾಣಿಸದಾದರು. ಆದರೂ ಅಲ್ಲಿ ದಾರಿಯಂತೆ ಕಾಣಿಸುತ್ತಿದ್ದ ಮಾರ್ಗದಲ್ಲಿ ನಡೆಯುತ್ತ ಹೋದೆ. ಎಲ್ಲೋ ಒಂದು ಕಡೆ ಅವರು ಹೋಗುತ್ತಿದ್ದುದು ಕಾಣಿಸಿತು. ವೇಗವಾಗಿ ಹೋದರೆ ಮತ್ತೆ ಅವರು ಕಾಣಿಸುತ್ತಿರಲಿಲ್ಲ.ಸ್ವಲ್ಪ ಸುಧಾರಿಸಿಕೊಳ್ಳಲು ಒಂದು ಬಂಡೆಗೆ ಬೆನ್ನು ತಾಗಿಸಿ ಕುಳಿತರೆ ಕೈ ಮತ್ತು ಕಾಲುಗಳು ಉರಿಯತೊಡಗಿದವು. ಕೊರೆಯುವ ಚಳಿಯಲ್ಲಿ ಕೈ ಮತ್ತು ಪಾದಗಳು ಬೆಂಕಿಯಲ್ಲಿಟ್ಟಂತೆ ಉರಿಯುತ್ತಿವೆ. ಕೂತರೆ ಕೆಲಸ ಕೆಡುತ್ತದೆ ಎಂದು ಮತ್ತೆ ನಡೆಯಲು ಶುರುಮಾಡಿದೆ. ಒಂದು ಕವಲುದಾರಿಯಲ್ಲಿ ತಪ್ಪು ದಾರಿ ಹಿಡಿದು ಹೊರಟೆ. ಹೋಗುತ್ತಾಹೋಗುತ್ತ ಕಣಿವೆಯ ತುದಿಗೆ ನಡೆದೆ. ಅಲ್ಲಿ ಮುಂದೆ ನನಗೆ ಮಾರ್ಗವೇ ಇಲ್ಲ, ಮುಂದೆ ಹೋದರೆ ಕಣಿವೆಗೆ ಬೀಳುತ್ತೇನೆ ಎನ್ನುವ ಅರಿವೂ ಇಲ್ಲ. ಹಿಂದೆ ಹೋಗಲು ಮತ್ತೆ ದಾರಿ ಸರಿಯಾಗಿ ತಿಳಿಯುತ್ತಿಲ್ಲ.ಹೆದರಿ ಸುತ್ತಲೂ ನೋಡುತ್ತಿದ್ದೆ. ಅಲ್ಲೆ ಒಂದು ಬಂಡೆಯ ಮೇಲೆ ಇಬ್ಬರು ನಿಂತಿದ್ದರು. ಒಬ್ಬಾತ, ತಲೆಯ ಮೇಲಿದ್ದ ಟಾರ್ಚ್‌ಅನ್ನು ಅಪಘಾತದ ಸೂಚನೆಯೆಂಬಂತೆ ಮಿಣುಕಿಸಿದ. ಅಲ್ಲಿಂದ ಜೋರಾಗಿ ಕೂಗಿ ಕೇಳಿದೆ, ‘ಅಲ್ಲಿಗೆ ಬರಲು ದಾರಿ ಯಾವುದು?’. ಅದಕ್ಕೆ ಉತ್ತರಿಸುತ್ತ ಅವನು ಹೇಳಿದ, ‘ಹಾಗೇ ಬಂಡೆಯನ್ನು ಹಿಡಿದು ಮೇಲಕ್ಕೆ ಬಾ. ಯಾವುದೇ ಕಾರಣಕ್ಕೂ ಬಲಗಡೆಗೆ ಹೋಗಬೇಡ’. ಅವನು ಹೇಳಿದ್ದು ಏಕೆ ಎಂದು ನಾನು ಮೇಲೆ ಹೋಗಿ ಬೆಳಕಿನಲ್ಲಿ ನೋಡಿದಾಗ ತಿಳಿಯಿತು. ಅದೊಂದು ದೊಡ್ಡ ಪ್ರಪಾತ. ಅದರ ತುಂಬ ಹಿಮ ಹರಡಿದೆ. ಅದರ ಆಳ ಗೊತ್ತಿಲ್ಲ, ಹತ್ತಲು ಕಲ್ಲು ಬಂಡೆಯಿಲ್ಲ. ಸತ್ತು ಬದುಕಿದೆ ಎಂದು ಮನಸ್ಸಿನಲ್ಲೆ ಅಂದುಕೊಂಡೆ.ನನಗೆ ಅಪಘಾತದ ಸೂಚನೆ ಕೊಟ್ಟು ಕರೆಸಿಕೊಂಡ ಆ ಜಾಗದ ಹೆಸರು ಗಿಲ್ಮನ್ಸ್ ಪಾಯಿಂಟ್. ಅದನ್ನು ಕೂಡ ಈ ಪರ್ವತದ ಒಂದು ಉನ್ನತ ತುದಿ ಎಂದು ಹೇಳುತ್ತಾರೆ. ಅಲ್ಲಿಂದ ಕೇವಲ ಎರಡು ನೂರು ಮೀಟರ್ ನಂತರ ಸಿಗುವುದೇ ಉಹುರು ತುದಿ. ಆಫ್ರಿಕಾದ ಅತೀ ಎತ್ತರವಾದ ಜಾಗ. ನಮ್ಮ ಗುಂಪಿನಲ್ಲಿ ಬಂದ ಬಹುತೇಕ ಜನ ಗಿಲ್ಮನ್ಸ್ ಪಾಯಿಂಟ್ ಮುಟ್ಟಿ ಹಿಂತಿರುಗಿದ್ದರು.ನಾನು ಗಿಲ್ಮನ್ಸ್ ಪಾಯಿಂಟ್‌ಗೆ ತಲುಪಿದ ತಕ್ಷಣ ಅಲ್ಲಿದ್ದ ಆ ಚೈನೀಸ್ ಹುಡುಗಿ ಮತ್ತು ಅವಳ ಗೈಡ್ ತಮ್ಮ ಪ್ರಯಾಣ ಮುಂದುವರೆಸಿದರು. ನನ್ನ ಜೊತೆಗಾರರು ಯಾರಾದರೂ ಬರಲಿ ಎಂದು ನಾನು ಅಲ್ಲೇ ಕುಳಿತೆ. ಕುಳಿತ ಎರಡೇ ನಿಮಿಷದಲ್ಲಿ ಮತ್ತೆ ಕೈ ಕಾಲುಗಳು ಉರಿಯಲಾರಂಭಿಸಿದವು. ಏನೂ ಮಾಡಲಾಗದ ಸ್ಥಿತಿ ನನ್ನದಾಗಿತ್ತು. ಅಲ್ಲಿ ಕಾಯುತ್ತಿದ್ದ ನನಗೆ ಇನ್ನೊಬ್ಬ ಜೊತೆಗಾರನನ್ನು ನೋಡುವ ತನಕ ಬದುಕುತ್ತೇನೆ ಎನ್ನುವ ಭರವಸೆ ಇಲ್ಲದಾಗಿತ್ತು.ಅವನನ್ನು ನೋಡಿ ನನ್ನ ಕಷ್ಟ ಹೇಳಿಕೊಂಡರೆ, ಅವನು ನನಗಿಂತ ಕಷ್ಟದ ಸ್ಥಿತಿಯಲ್ಲಿದ್ದ. ಹೀಗೆ ಕೂತರೆ ನಾವು ಮಂಜುಗಡ್ಡೆಯಂತೆ ಕಲ್ಲಾಗುತ್ತೇವೆ, ನಮ್ಮ ಪ್ರಯಾಣ ಮುಂದುವರೆಸೋಣ ಎಂದು ತೀರ್ಮಾನಿಸಿ ಹೊರಟೆವು. ಇಲ್ಲಿಂದ ಮುಂದಿನ ಮಾರ್ಗ ಅಷ್ಟೊಂದು ಸುಲಭವಾಗಿರಲಿಲ್ಲ. ಒಂದು ಕಡೆ ಕಂದರ, ಮತ್ತೊಂದು ಕಡೆ ಬಂಡೆ. ಕಾಲ ಕೆಳಗೆ ಮಂಜುಗಡ್ಡೆ. ಸ್ವಲ್ಪ ಅಜಾಗರೂಕರಾದರೂ ಜಾರಿ ಮಂಜಿನ ಕಂದರಕ್ಕೆ ಹೋಗುವ ಅವಕಾಶ ಜಾಸ್ತಿ. ಹಾಗೆ ನಡೆಯುತ್ತ ಸುಮಾರು ದೂರ ಹೋಗಿದ್ದೆವು. ಯಾರೋ ಕೂಗಿದ ಹಾಗಾಯಿತು. ತಿರುಗಿ ನೋಡಿದರೆ ನಮ್ಮ ಗುಂಪಿನ ಮತ್ತೊಬ್ಬ ಹುಡುಗ. ನಮ್ಮನ್ನು ಇಲ್ಲೇ ಇರುವಂತೆ ತಿಳಿಸಿದ್ದಾರೆ, ಮುಂದೆ ಹೋಗಬಾರದಂತೆ ಎಂದು ವಾಪಸ್ ಕರೆದ. ನಾವು ಗಿಲ್ಮನ್ ಪಾಯಿಂಟ್‌ಗೆ ವಾಪಸ್ ಬಂದೆವು.ಕೊರೆಯುವ ಚಳಿಯಲ್ಲಿ ಕೈ ಮತ್ತು ಕಾಲಿನ ಪಾದ ಉರಿಯುತ್ತಿತ್ತು. ನನ್ನ ಕಷ್ಟ ಹೇಳಿಕೊಂಡರೂ ಅದರ ಬಗ್ಗೆ ಕನಿಕರಿಸುವವರು ಯಾರೂ ಇರಲಿಲ್ಲ. ಏಕೆಂದರೆ ಉಳಿದವರ ಪಾಡು ನನಗಿಂತ ಬೇರೆ ಏನಿರಲಿಲ್ಲ. ನನ್ನ ಕೈ ಉರಿಯುತ್ತಿದ್ದ ಕಾರಣ ಎರಡು ಕೈಯನ್ನು ಉಜ್ಜಿಕೊಳ್ಳೋಣ ಎಂದು ಹಾಕಿದ್ದ ಗ್ಲೌಸ್ ತೆಗೆಯುತ್ತಿದ್ದೆ, ಅಲ್ಲೆ ದೂರದಲ್ಲಿ ನಿಂತಿದ್ದ ಇನ್ನೊಬ್ಬ ಕಿರುಚಿದ, ಯಾವುದೇ ಕಾರಣಕ್ಕೂ ಗ್ಲೌಸ್ ತೆಗೆಯಬೇಡ, ರಕ್ತ ಹೆಪ್ಪು ಗಟ್ಟಿ ಅಥವಾ ಚರ್ಮ ಕಿತ್ತು ಬಂದರೆ ಏನು ಮಾಡುತ್ತೀಯ ಎಂದು ಹೆದರಿಸಿದ. ಸತ್ಯ ಅಸತ್ಯದ ವಿಚಾರಕ್ಕೆ ಹೋಗದೆ ಸುಮ್ಮನೆ ನನ್ನ ಕಷ್ಟವನ್ನು ಸಹಿಸಿಕೊಂಡೆ. ಯಾಕಾದರೂ ಈ ಪರ್ವತ ಹತ್ತಲು ಬಂದೆನೊ ಎಂದು ಮನಸ್ಸಿನಲ್ಲಿಯೆ ಗೊಣಗುತ್ತಿದ್ದೆ.ಸುಮಾರು ಜನ ಬಂದು ನಮ್ಮನ್ನು ಸೇರಿದರು. ಕೆಲವರು ಚಳಿಯಿಂದಾಗುವ ತೊಂದರೆಗೆ ಅಳುತ್ತಿದ್ದರೆ, ಕೆಲವರು ನಡೆಯಲಾಗದು ಎಂದು ಕುಳಿತಲ್ಲಿಂದ ಮೇಲೇಳಲೇ ಇಲ್ಲ. ಅಂತೂ ನಮ್ಮ ಮುಖ್ಯ ಗೈಡ್ ನಮ್ಮನ್ನೆಲ್ಲ ಮುಂದುವರೆಯುವಂತೆ ಸೂಚಿಸಿದ. ಅಲ್ಲಿಂದ ಸುಮಾರು ಎರಡು ನೂರು ಮೀಟರ್ ದೂರದ ದಾರಿಯನ್ನು ಕ್ರಮಿಸಲು ಎರಡು ಗಂಟೆಗಳು ಬೇಕಾಗುತ್ತವೆ ಎಂದು ತಿಳಿಸಿದರು. ಮಂಜುಗಡ್ಡೆಯ ಕಿರಿದಾದ ಹೆದ್ದಾರಿಯಲ್ಲಿ ನಮ್ಮ ಪ್ರಯಾಣ ಶುರುವಾಯಿತು. ನಡೆಯುತ್ತಾ ನಡೆಯುತ್ತಾ ಬೆಳಕು ಹರಿಯಿತು. ಸುತ್ತಲೂ ಏನಿದೆ ಎಂದು ಕಾಣಿಸುತ್ತಿತ್ತು. ಸ್ವರ್ಗ ಎಂದರೆ ಹೀಗೆ ಇರುತ್ತದೆ ಎಂದು ಆಗ ತಿಳಿಯಿತು. ಸುತ್ತಲೂ ಬೆಳಕು. ಬಣ್ಣ ಎನ್ನುವುದಿದ್ದರೆ ಅದು ಬಿಳಿ ಮಾತ್ರ. ಆಗಸಕ್ಕೂ, ಭೂಮಿಗೂ, ಮಂಜುಗಡ್ಡೆಗೂ ಏನೂ ವ್ಯತ್ಯಾಸವೇ ಇಲ್ಲ.ದೂರ ದೂರದವರೆಗೂ ತನ್ನದೇ ಆದ ಸೌಂದರ್ಯವನ್ನು ಮಂಜು ತೋರಿಸುತ್ತಿತ್ತು. ನಮ್ಮಲ್ಲಿದ್ದ ಎಲ್ಲಾ ಶ್ರಮ ಮಾಯವಾಯಿತು. ನಾನು ಮತ್ತು ಇನ್ನೊಬ್ಬ ಸ್ನೇಹಿತ ನಡೆಯುತ್ತ ಮುಂದುವರೆದೆವು. ಹಿಂದೆ ಯಾರು ಬರುತ್ತಿದ್ದಾರೆ ಎಂದು ಯೋಚಿಸುವುದಕ್ಕೂ ಆಗದಷ್ಟು ಸಂತೋಷ ನಮ್ಮಲ್ಲಿತ್ತು. ಬಹಳ ದೂರ ಬಂದ ಮೇಲೆ ನೋಡಿದರೆ ಅಲ್ಲಿದ್ದವರು ನಾವಿಬ್ಬರೇ! ಆಮೇಲೆ ತಿಳಿಯಿತು, ಬಹಳಷ್ಟು ಜನ ಸುಸ್ತಾಗಿ ವಾಪಸ್ ಹೋದರು, ಮತ್ತೆ ಕೆಲವರು ನಡೆಯಲಾಗದೆ ಅಲ್ಲೆ ಬಿದ್ದು, ಅವರನ್ನು ಉಳಿದವರು ಎತ್ತಿಕೊಂಡು ಹೋದರು ಎಂದು. ನಾವು ಇಬ್ಬರು ಮಾತ್ರ ನಿಧಾನವಾಗಿ ನಡೆಯುತ್ತ ಅಲ್ಲಲ್ಲಿ ಮಂಜನ್ನು ಕಡಿದು ತಿನ್ನುತ್ತ ಹೋಗುತ್ತಿದ್ದೆವು.ದೂರದಲ್ಲಿ ಬಣ್ಣ ಬಣ್ಣದ ಬಟ್ಟೆ ಕಟ್ಟಿದ್ದ ಕೆಲವು ಕಟ್ಟಿಗೆಗಳು ಕಾಣಿಸಿದವು. ಅದೇ ನಾವು ತಲುಪಬೇಕಾದ ಉಹುರು ತುದಿ ಎಂದು ತಿಳಿಯಿತು. ಬಹಳ ಸುಸ್ತಾಗಿದ್ದ ನಮಗೆ ಓಡಿ ಹೋಗುವಷ್ಟು ಶಕ್ತಿ ಇರಲಿಲ್ಲ. ನಿಧಾನವಾಗಿಯೇ ಹೋಗಿ ಅದನ್ನು ಮುಟ್ಟಿದೆವು, ಅಪ್ಪಿದೆವು, ಅದಕ್ಕೆ ಮುತ್ತಿಟ್ಟೆವು. ನಮಗೆ ಸ್ವರ್ಗ ಮೂರು ಗೇಣಾಗಿರಲಿಲ್ಲ. ನಾವು ಸ್ವರ್ಗದಲ್ಲಿಯೇ ಇದ್ದೆವು. ದೂರ ದೂರದವರೆಗೂ ಕಾಣಿಸುತ್ತಿದ್ದ ಮಂಜಿನ ಬೆಟ್ಟಗಳು, ಅಲ್ಲಲ್ಲಿ ಮಂಜಿನ ಕಲಾಕೃತಿಗಳು, ಮಂಜಿನಿಂದ ನಿರ್ಮಿತವಾಗಿರುವ ಬಹಳಷ್ಟು ವಿಸ್ಮಯಗಳನ್ನು ನೋಡಿ ಆನಂದಿಸಿದೆವು.ನಾನು ತೆಗೆದುಕೊಂಡು ಹೋಗಿದ್ದ ಕರ್ನಾಟಕದ ಬಾವುಟವನ್ನು ಬ್ಯಾಗಿನಿಂದ ತೆಗೆದು, ಕೋಲಿಗೆ ಸಿಕ್ಕಿಸಿ, ಜಗತ್ತಿನ ಅತೀ ಎತ್ತರದ ಸ್ವಾವಲಂಬಿ ಪರ್ವತದ ಮೇಲೆ ಹಾರಿಸಿದೆ. ಆಫ್ರಿಕಾದ ಅತೀ ಎತ್ತರದ ಸ್ಥಾನದಲ್ಲಿ ನಿಂತು ಒಂದು ಪೂರ್ತಿ ಖಂಡವನ್ನು ಮೆಟ್ಟಿ ನಿಂತ ಅನುಭವ ಏನೇ ಹೇಳಿದರೂ ಕಡಿಮೆ ಅನ್ನಿಸುವಷ್ಟು ದೊಡ್ಡದು. ನಾಲ್ಕು ದಿನದ ದಣಿವು ಮಂತ್ರ ಪ್ರೋಕ್ಷಿಸಿದ ಹಾಗೆ ನಮ್ಮ ದೇಹದಿಂದ ಮಾಯವಾಗಿತ್ತು. ನಾವು ತಲುಪಿ ಮೂವತ್ತು ನಿಮಿಷಗಳ ನಂತರ ಇನ್ನಿಬ್ಬರು ಬಂದರು.ಸುಮಾರು ನಲವತ್ತು ನಿಮಿಷಗಳನ್ನು ಪರ್ವತದ ತುದಿಯಲ್ಲಿ ಕಳೆದು ನಂತರ ಕೆಳಕ್ಕೆ ಇಳಿಯಲು ಶುರುಮಾಡಿದೆವು. ಸೂರ್ಯ ಮೇಲೇರುವ ಮೊದಲು ನಾವು ಇಳಿಯಬೇಕು. ಹಾಗಾಗಿ ಪರ್ವತದ ತುದಿಯಲ್ಲಿ ಜಾಸ್ತಿ ಹೊತ್ತು ನಿಲ್ಲಲು ಆಗುವುದಿಲ್ಲ. ಕೆಲವು ಸಾರಿ ವಾತಾವರಣ ಸರಿ ಇಲ್ಲದಿದ್ದಾಗ ಕೇವಲ ಐದು ನಿಮಿಷ ಮಾತ್ರ ಇರಲು ಅವಕಾಶ ಇರುತ್ತದೆ. ನಮ್ಮ ಪುಣ್ಯ ಎಲ್ಲವೂ ನಮಗೆ ಅನುಕೂಲಕರವಾಗಿಯೇ ಇತ್ತು. ಹಾಗಾಗಿ ನಾವು ಸುಮಾರು ನಲವತ್ತು ನಿಮಿಷಗಳನ್ನು ಆಫ್ರಿಕಾದ ಛಾವಣಿಯ ಮೇಲೆ ಕಳೆದು ಬಂದೆವು.ಇಷ್ಟೆಲ್ಲಾ ಕಷ್ಟವಿದ್ದ ಈ ಪ್ರಯಾಣವನ್ನು ನನ್ನ ಮಡದಿ ಮಾಡಿರಲು ಸಾಧ್ಯವೇ ಇಲ್ಲ ಎನ್ನುವಂತಹ ಅನುಮಾನ ನನ್ನಲ್ಲಿತ್ತು. ಅವಳ ಶಕ್ತಿಯನುಸಾರವಾಗಿ ಜಾಸ್ತಿ ಎಂದರೆ ಹನ್ಸ್ ಮೇಯರ್ ಗುಹೆತನಕ ಮಾತ್ರ ಹತ್ತಬಹುದು ಎಂದುಕೊಂಡು ವಾಪಸ್ ಹೋಗುತ್ತಿದ್ದೆ. ಎದುರಿಗೆ ಸಿಕ್ಕ ಸಸ್ಯಶಾಸ್ತ್ರದ ಪ್ರಾಧ್ಯಾಪಕರು ನನಗೆ ಕರೆದು ಹೇಳಿದರು- ‘ಈ ಪರ್ವತ ಹತ್ತುವುದು ಒಂದು ವಿಸ್ಮಯ, ಆದರೆ ಶ್ರಿಮತಿ ಪ್ರಶಾಂತ್ ಗಿಲ್ಮನ್ಸ್ ಪಾಯಿಂಟ್ ಮುಟ್ಟಿದ್ದು ಎಲ್ಲಕ್ಕಿಂತ ವಿಸ್ಮಯ’. ಈ ಮಾತು ಕೇಳಿ ನನಗೆ ನಂಬಲು ಆಗಲೇ ಇಲ್ಲ. ಮತ್ತೊಮ್ಮೆ ಅವರೊಂದಿಗೆ ಖಚಿತ ಪಡಿಸಿಕೊಂಡೆ. ಹೆಂಡತಿಯನ್ನು ಯಾವತ್ತೂ ಕಡಿಮೆ ಎಂದು ತಿಳಿಯಬಾರದು ಎಂದು ಪರ್ವತದ ಮೇಲೆ ಜ್ಞಾನೋದಯವಾಯಿತು!

ಜೀವನದ ಅತೀ ತ್ರಾಸದಾಯಕ ಪ್ರಯಾಣ ಮತ್ತು ಅತೀ ಆನಂದದಾಯಕ ಕ್ಷಣ ಎನ್ನಬಹುದಾದ ವಿಚಿತ್ರ ಅನುಭವ ಈ ಪರ್ವತ ಹತ್ತುವುದು. ಪರ್ವತಾರೋಹಣದ ಹುಚ್ಚು ಇರುವ ಯಾರಿಗಾದರೂ ಇದು ಸ್ವರ್ಗ. ಜೀವನದಲ್ಲಿ ಬದುಕಿದ್ದಾಗಲೇ ಸಿಗುವ ಸ್ವರ್ಗ ಸುಖ.ಉಳಿದ ಎರಡು ದಿನಗಳಲ್ಲಿ, ಮೇಲೆ ಕಳೆದ ನಲವತ್ತು ನಿಮಿಷಗಳನ್ನು ನೆನೆಯುತ್ತ ಕೆಳಗಿಳಿದೆವು.

(‘ಕಿಲಿಮಂಜಾರೋ’ ಪುಸ್ತಕದ ಒಂದು ಅಧ್ಯಾಯ. ‘ಛಂದ ಪುಸ್ತಕ’ದ ‘ಕಿಲಿಮಂಜಾರೋ’ ಜನವರಿ 26ರಂದು ಬೆಂಗಳೂರಿನಲ್ಲಿ ಬಿಡುಗಡೆ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.