ಸ್ವಸ್ಥ ಸೌಖ್ಯ: ಜೀವ ತುಂಬಿದ ಸಾಗರವಾಗಿ....

7

ಸ್ವಸ್ಥ ಸೌಖ್ಯ: ಜೀವ ತುಂಬಿದ ಸಾಗರವಾಗಿ....

Published:
Updated:
ಸ್ವಸ್ಥ ಸೌಖ್ಯ: ಜೀವ ತುಂಬಿದ ಸಾಗರವಾಗಿ....

ಹಳತಾದ ಒಂದೇ ಅಭಿಪ್ರಾಯ, ನಂಬಿಕೆಗೆ ಜೋತು ಬೀಳುವುದಕ್ಕಿಂತ ಪ್ರಶ್ನೆಗಳನ್ನು ಕೇಳುವುದು ಯಾವಾಗಲೂ ಉತ್ತಮ.

ಒಂದೇ ಅಭಿಪ್ರಾಯಕ್ಕೆ ಜೋತು ಬೀಳುವುದು ಅಂದರೆ ಪ್ಯಾಲೆಸ್ಟೀನ್‌ನ ಮೃತ ಸಮುದ್ರದಂತೆ ಸಾಂದ್ರವಾಗುವುದು. ಮಂದವಾಗುವುದು. ಆಗ ನಾನು ಬಹುಬೇಗ ದಣಿಯುತ್ತೇನೆ. ಒತ್ತಡಕ್ಕೆ ಒಳಗಾಗುತ್ತೇನೆ, ವಯಸ್ಸಾದವರಂತೆ ಕಾಣುತ್ತೇನೆ. ನಾನು ಅಂದುಕೊಂಡಂತೆ ಆಗದಿದ್ದಾಗ ಖಿನ್ನತೆಗೆ ಜಾರುತ್ತೇನೆ.ಅಂತರ್ಮುಖಿಯಾಗುತ್ತೇನೆ. ಎಲ್ಲರ ಬಗ್ಗೆ ಕಹಿ ಭಾವನೆ ತುಂಬಿಕೊಳ್ಳುತ್ತೇನೆ. ಮೃತ ಸಮುದ್ರ ಉಪ್ಪು ಮತ್ತು ಕಲ್ಮಶ ಹಿಡಿದಿಟ್ಟಂತೆ ನಾನು ಭಾವನೆಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳುತ್ತೇನೆ. ಆಗ ಕಪ್ಪಾದ ಋಣಾತ್ಮಕ ಶಕ್ತಿ ನನ್ನಲ್ಲಿ ಆಕರಗೊಳ್ಳುತ್ತದೆ. ಯಾರೂ ನನ್ನ ಬಳಿ ಸಮಯ ಕಳೆಯಲು ಬಯಸುವುದಿಲ್ಲ.

ಆದರೆ, ನಾನು ಪ್ರಶ್ನೆಗಳನ್ನು ಕೇಳುತ್ತ ಹೋದಂತೆ ವಿಭಿನ್ನವಾದ ಸಾಧ್ಯತೆಗಳಿಗೆ ತೆರೆದುಕೊಳ್ಳುತ್ತೇನೆ. ಎಲ್ಲ ದಿಕ್ಕುಗಳಿಂದ ಹೊಸ ವಿಚಾರಗಳು ನನ್ನೊಳಗೆ ತುಂಬಿಕೊಳ್ಳಲು ಸಾಧ್ಯವಾಗುತ್ತದೆ. ಗೆಲಿಲಿಯ ಸಮುದ್ರದಂತೆ ಸದಾ ಹೊಸದಾಗಿರುತ್ತೇನೆ. ಪಾರದರ್ಶಕವಾಗಿರುತ್ತೇನೆ. ಚಟುವಟಿಕೆಯಿಂದ ಉತ್ಸಾಹದ ಬುಗ್ಗೆಯಾಗಿರುತ್ತೇನೆ. ಕ್ರಿಸ್ತ ಓಡಾಡುತ್ತಿದ್ದ ಗೆಲಿಲಿಯ ಸಮುದ್ರ ತೀರದಂತೆ ನಾನು ಜೀವಂತವಾಗಿರುತ್ತೇನೆ. ಈ ಸಮುದ್ರ ಮುಕ್ತವಾಗಿದೆ. ಚಲನಶೀಲವಾಗಿದೆ,ನಗುತ್ತಿದೆ. ತನ್ನ ಆಳ ನೀರಿನೊಳಗೆ ಆಟವಾಡುವ, ಅನ್ವೇಷಿಸುವ ಮೀನಿನೊಂದಿಗೆ ಈ ಸಮುದ್ರ ಯಾವಾಗಲೂ ಸಂಭಾಷಣೆ ನಡೆಸುತ್ತಿರುತ್ತದೆ. ಸೂರ್ಯನ ಕಿರಣಗಳಿಂದ ಹೊಳೆಯುವ ಈ ಸಮುದ್ರದ ತಟದಲ್ಲಿ ಮೀಯಲೆಂದು, ಬೆಳಕಿನ ಶಕ್ತಿಯನ್ನು ಹೀರಿಕೊಳ್ಳಲೆಂದು ಜಗತ್ತಿನ ನಾನಾ ಮೂಲೆಯಿಂದ ಜನ ಇಲ್ಲಿಗೆ ಬರುತ್ತಾರೆ.ನೀವು ದೇಹದಲ್ಲಿ ಕೊಬ್ಬು ಸಂಗ್ರಹಿಸಿ ಇಟ್ಟಂತೆ ಒತ್ತಡವನ್ನು ಸಹ ಸಂಗ್ರಹಿಸಿ ಇಟ್ಟುಕೊಳ್ಳುತ್ತೀರಿ. ಅದಕ್ಕಾಗಿ ಒತ್ತಡಕ್ಕೆ ಒಳಗಾದಾಗ ಸಿಮೆಂಟ್‌ನಿಂದ ಬಂಧಿತರಾದಂತೆ ಅನಿಸುತ್ತದೆ. ಅದು ನಿಮ್ಮ ಮನಸ್ಸು, ದೇಹವನ್ನು ಭಾರವಾಗಿಸುತ್ತದೆ. ಶಾಂತಿ ಹಾಗಲ್ಲ. ನೀವು ಅದನ್ನು ಅನುಭವಿಸಬಹುದು. ಆದರೆ, ಅದನ್ನು ನೀವು ದಾಸ್ತಾನು ಮಾಡಿಟ್ಟುಕೊಳ್ಳಲು ಸಾಧ್ಯವಿಲ್ಲ. ಸ್ತಬ್ಧತೆಯಲ್ಲಿ, ಮೌನದಲ್ಲಿ ಶಾಂತಿ ಇರುತ್ತದೆ. ಕೊಡುವುದರಲ್ಲಿ, ಪ್ರೀತಿ, ಕರುಣೆ ತುಂಬಿದ ಭಾವನೆಯಲ್ಲಿ ಶಾಂತಿ ಇರುತ್ತದೆ. ಮಾತುಕತೆ, ಚರ್ಚೆ, ಸಂಬಂಧಗಳನ್ನು ಒತ್ತಡ ಮುಕ್ತವಾಗಿರಿಸಲು, ಸುಂದರವಾಗಿರಿಸಲು ನೀವೇ ಪ್ರಶ್ನೆ ಕೇಳಿಕೊಳ್ಳಿ. ನಾನೇನು ಕೊಡಬಹುದು? ನಾನೇನು ಹಂಚಿಕೊಳ್ಳಬಹುದು? ಈ ಕ್ಷಣವನ್ನು ನಾನು ಸುಂದರವಾಗಿಸುವುದು ಹೇಗೆ?ನೀವು ಉದಾತ್ತ ಉದ್ದೇಶದಿಂದ ಸಮರ್ಪಕವಾದ ಪ್ರಶ್ನೆಗಳನ್ನು ಕೇಳಿಕೊಂಡಾಗ ನಿಮ್ಮ ಅಹಂಕಾರ ತಣ್ಣಗಾಗುತ್ತದೆ. ಅಹಂಕಾರ ಕೂಡ ಪ್ರಶ್ನೆಗಳನ್ನು ಕೇಳುತ್ತದೆ. ಆದರೆ, ಅಹಂಕಾರ ಎತ್ತುವ ಪ್ರಶ್ನೆಗಳು ಯಾವಾಗಲೂ ಸಮಸ್ಯೆ ತಂದೊಡ್ಡುತ್ತವೆ. ಅವರು ನನ್ನ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ? ನನ್ನ ಸ್ಥಾನಮಾನ ಹೆಚ್ಚಿಸಿಕೊಳ್ಳುವುದು ಹೇಗೆ? ನನ್ನ ಸಂಗಾತಿಯನ್ನು ನಿಯಂತ್ರಣದಲ್ಲಿ ಇಡುವುದು ಹೇಗೆ? ಇವೆಲ್ಲ ನನ್ನನ್ನು ಚಿಂತೆಗೆ ದೂಡುವ ಪ್ರಶ್ನೆಗಳು ಈ ಪ್ರಶ್ನೆಗಳೆಲ್ಲ ನನ್ನ ದೇಹದಲ್ಲಿ ಕಾರ್ಟಿಸೋಲ್ ಮಟ್ಟ ಹೆಚ್ಚಿಸುತ್ತವೆ. ಕಾರ್ಟಿಸೋಲ್ ಒತ್ತಡ ಹೆಚ್ಚಿಸುವ ಅಪಾಯಕಾರಿ ಹಾರ್ಮೋನ್. ಇದು ಆಗಾಗ್ಗೆ ಊತ, ನೋವಿಗೆ ಕಾರಣವಾಗುತ್ತದೆ. ಕಾರ್ಟಿಸೋಲ್ ದೇಹದಲ್ಲಿ ಕೊಬ್ಬನ್ನು ಸಹ ಸಂಗ್ರಹಿಸಿಟ್ಟುಕೊಳ್ಳುತ್ತದೆ. ಇದರಿಂದಾಗಿ ಎಷ್ಟೇ ಕಸರತ್ತು ಮಾಡಿದರೂ ದೇಹದ ತೂಕ ಕರಗಿಸುವುದು ಸಮಸ್ಯೆಯಾಗುತ್ತದೆ.ಆರೋಗ್ಯಕರ ದೇಹ ಮತ್ತು ಶಾಂತಿಯುತ ಮನಸ್ಥಿತಿಗಾಗಿ ಸಮರ್ಪಕವಾದ ಪ್ರಶ್ನೆ ಕೇಳುವುದನ್ನು ರೂಢಿಸಿಕೊಳ್ಳಿ. ಇದಕ್ಕಾಗಿ ಅಧ್ಯಾತ್ಮಿಕ ಗುರುಗಳು ಹೃದಯ ಧ್ಯಾನವೊಂದನ್ನು ಕಂಡುಹಿಡಿದಿದ್ದಾರೆ.ದೇಹವನ್ನು ಸಡಿಲಿಸಿ, ಆರಾಮಾಗಿ ಕುಳಿತುಕೊಳ್ಳಿ. ಬೆನ್ನೆಲುಬು ನೆಟ್ಟಗಿರಲಿ. ಕಣ್ಣು ಮುಚ್ಚಿರಲಿ. ಎರಡೂ ಹಸ್ತಗಳು ತೊಡೆಯ ಮೇಲೆ ತೆರೆದಿರಲಿ. ಈ ಸ್ಥಿತಿಯಲ್ಲಿ ಮಾನಸಿಕ, ದೈಹಿಕ ಒತ್ತಡಗಳನ್ನೆಲ್ಲ ಸಡಿಲಿಸಿ. ಆಳವಾಗಿ ಉಸಿರಾಡಿ. ಪ್ರಾಣವಾಯು ನಿಮ್ಮ ದೇಹದ ಪ್ರತಿ ಜೀವಕೊಶವನ್ನು ಪ್ರವೇಶಿಸಿ ಆಮ್ಲಜನಕ ನೀಡಿದಂತೆ ಕಲ್ಪಿಸಿಕೊಳ್ಳಿ. ಈಗ ನಿಮ್ಮ ಹೃದಯದ ಮೇಲೆ ಗಮನ ಕೇಂದ್ರೀಕರಿಸಿ.  ನಿಮಗೆ ಇರುವ ಸೌಲಭ್ಯಗಳು, ನಿಮ್ಮ ಸುಂದರ ಸಂಬಂಧಗಳನ್ನು ನೆನಪಿಸಿಕೊಳ್ಳಿ. ನಿಮ್ಮ ಮನದಲ್ಲಿ ಮೂಡಿರುವ ಕೃತಜ್ಞತಾ ಭಾವ ನಿಮ್ಮ ಪ್ರತಿ ಜೀವಕೋಶವನ್ನು ತಲುಪುವಂತೆ ನೋಡಿಕೊಳ್ಳಿ. ಅದು ನಿಮ್ಮನ್ನು ಎಲ್ಲ ಋಣಾತ್ಮಕ ಆಲೋಚನೆಗಳಿಂದ ಮುಕ್ತಗೊಳಿಸುತ್ತದೆ.ಆನಂತರ, ಉತ್ತರಕ್ಕೆ ಹುಡುಕದೇ ನಾಲ್ಕು ಪ್ರಶ್ನೆಗಳನ್ನು ಕೇಳಿಕೊಳ್ಳಿ. ನಾನು ಯಾರು? ನನ್ನ ಬದುಕಿನ ಉದ್ದೇಶವೇನು? ನಾನು ಏನು ಮಾಡಲು ಬಯಸುತ್ತೇನೆ? ಯಾವುದರಿಂದ ನನಗೆ ಖುಷಿ ಸಿಗುತ್ತದೆ? ಸಾಮಾನ್ಯವಾಗಿ ಮನಸ್ಸು ಉತ್ತರ ನೀಡಲು ತವಕಿಸುತ್ತದೆ. ಆದರೆ, ಮನಸ್ಸು ವ್ಯಾವಹಾರಿಕವಾದುದ್ದು. ಅದು ಲೆಕ್ಕಾಚಾರ ಹಾಕುತ್ತದೆ. ಮನಸ್ಸನ್ನು ದೂರವಿಡಿ. ಇದು ಹೃದಯದ ಸಮಯ. ಹತ್ತು ನಿಮಿಷ ಹಾಗೆಯೇ ಕುಳಿತುಕೊಳ್ಳಿ. ನಿಧಾನವಾಗಿ ಕಣ್ಣು ತೆರೆಯಿರಿ. ನಿಮಗೆ ಉತ್ತರ ಸಿಕ್ಕಿರುತ್ತದೆ. ಹಾಗೆಯೇ ಎಲ್ಲ ದೈಹಿಕ, ಮಾನಸಿಕ ನೋವು ದೂರವಾಗಿರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry