ಶನಿವಾರ, ಏಪ್ರಿಲ್ 10, 2021
30 °C

ಸ್ವಾತಂತ್ರ್ಯಕ್ಕೆ ಸಾವಿರ ಸಲಾಂ, ಹೋರಾಟಗಾರರ ಗುಣಗಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಾತಂತ್ರ್ಯಕ್ಕೆ ಸಾವಿರ ಸಲಾಂ, ಹೋರಾಟಗಾರರ ಗುಣಗಾನ

ಬೆಂಗಳೂರು: ಹೊಸಕೋಟೆ, ನೆಲಮಂಗಲ ಸೇರಿದಂತೆ ನಗರದ ಹೊರ ವಲಯದ ವಿವಿಧ ಕಡೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.ಹೊಸಕೋಟೆ ವರದಿ: ದೇಶವನ್ನು ಕಾಡುತ್ತಿರುವ ಭ್ರಷ್ಟಾಚಾರ ಹಾಗೂ ಜಾತೀಯತೆಯನ್ನು ನಿರ್ಮೂಲನೆ ಮಾಡಲು ಪ್ರತಿಯೊಬ್ಬರೂ ಹೋರಾಟ ನಡೆಸಬೇಕು ಎಂದು ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಬುಧವಾರ ಇಲ್ಲಿ ಕರೆ ನೀಡಿದರು.ತಾಲ್ಲೂಕು ಸ್ವಾತಂತ್ರ್ಯೋತ್ಸವ ಸಮಿತಿ ಆಶ್ರಯದಲ್ಲಿ ಇಲ್ಲಿನ ಚನ್ನಬೈರೇಗೌಡ ಕ್ರೆಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

`ಸ್ವಾತಂತ್ರ್ಯ ಪಡೆಯಲು ಹೋರಾಟ ಮಾಡಿದ ವ್ಯಕ್ತಿಗಳ ಹಿನ್ನೆಲೆಯನ್ನು ಮಕ್ಕಳಿಗೆ ತಿಳಿಸುವುದರ ಮೂಲಕ ಅವರಲ್ಲಿ ರಾಷ್ಟ್ರಪ್ರೇಮ ಬೆಳೆಸಬೇಕಾಗಿದೆ~ ಎಂದು ಅವರು ಹೇಳಿದರು.ತಹಶೀಲ್ದಾರ್ ಮಲ್ಲಿಕಾರ್ಜುನ, ಜಿ.ಪಂ. ಸದಸ್ಯ ತಿರುವರಂಗ ನಾರಾಯಣಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಎಚ್.ಆರ್.ಶಫೀವುಲ್ಲಾ, ಉಪ ನಿರ್ದೇಶಕ ವೆಂಕಟೇಶಪ್ಪ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜೇಗೌಡ ಸ್ವಾಗತಿಸಿದರು. ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರು ಹಾಗೂ ಹಿರಿಯ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.ನೆಲಮಂಗಲದಲ್ಲಿ ಸ್ವಾತಂತ್ರ್ಯೋತ್ಸವ

ನೆಲಮಂಗಲ:
ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ತಹಶೀಲ್ದಾರ್ ಆರ್.ಅನಿಲ್‌ಕುಮಾರ್ ಧ್ವಜಾರೋಹಣ ನೆರವೇರಿಸಿ ಪೊಲಿಸರು ಮತ್ತು ಎನ್‌ಸಿಸಿ ವಿದ್ಯಾರ್ಥಿಗಳಿಂದ ಧ್ವಜ ವಂದನೆ ಸ್ವೀಕರಿಸಿದರು.

ಶಾಸಕ ಎಂ.ವಿ.ನಾಗರಾಜು ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಜನೆಯೊಂದಿಗೆ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ ಮಾತನಾಡಿ, `ಅಂದು ಹೊರಗಿನ ಶತ್ರುಗಳ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಗಳಿಸಿದರೆ, ಇಂದು ಒಳಗಿನ ಶತ್ರುಗಳ ವಿರುದ್ಧ ಹೋರಾಟ ಮಾಡಬೇಕಾದಂತಹ ಪರಿಸ್ಥಿತಿ ಬಂದೊದಗಿದೆ~ ಎಂದು ವಿಷಾದಿಸಿದರು.ಪುರಸಭೆ ಅಧ್ಯಕ್ಷ ಪಿಳ್ಳಪ್ಪ, ಉಪಾಧ್ಯಕ್ಷ ಹೇಮಂತಕುಮಾರ್, ತಾ.ಪಂ.ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷೆ ಅಶ್ವತ್ಥಮ್ಮ, ಜಿ.ಪಂ. ಸದಸ್ಯ ರಾಮು, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆನಂದ್, ಮುರಾರಯ್ಯ, ಪುರಸಭೆ ಮಾಜಿ ಅಧ್ಯಕ್ಷ ಆರ್.ಉಮಾಶಂಕರ್ ಮತ್ತಿತರ ಗಣ್ಯರು ವೇದಿಕೆಯಲ್ಲಿದ್ದರು.`ಯುವ ಶಕ್ತಿ ಸಮರ್ಪಕ ಬಳಕೆ ದೊಡ್ಡ ಸವಾಲು~

ಯಲಹಂಕ ವರದಿ:
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರ ತ್ಯಾಗ ಬಲಿದಾನದ ಮಹತ್ವವನ್ನು ಇಂದಿನ ಯುವಜನತೆಗೆ ತಿಳಿಸುವ ಮೂಲಕ ಅವರನ್ನು ಜವಾಬ್ದಾರಿ ನಾಯಕರನ್ನಾಗಿ ರೂಪಿಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ನಾರಾಯಣಗೌಡ ಹೇಳಿದರು.ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, `ಭಾರತದ ಒಟ್ಟು ಜನಸಂಖ್ಯೆಯ ಶೇಕಡ 40ರಷ್ಟು ಜನ ಯುವಕರೇ ಆಗಿರುವುದು ಈ ರಾಷ್ಟ್ರದ ಬಹುದೊಡ್ಡ ಶಕ್ತಿ. ಹೀಗಾಗಿ, ವಿಶ್ವವು ಭಾರತವನ್ನು ಒಂದು ಯುವರಾಷ್ಟ್ರ ಎಂದು ಪರಿಗಣಿಸಿದೆ. ಆದರೆ, ಯುವಶಕ್ತಿಯ ಸಮರ್ಪಕ ಬಳಕೆ ಬಹುದೊಡ್ಡ ಸವಾಲಾಗಿದೆ ಎಂದರು.ಕೃಷಿ ವಿವಿ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ.ಕೆ.ಪಿ.ರಾಮಪ್ರಸನ್ನ, ದೈಹಿಕ ಶಿಕ್ಷಣ ವಿಭಾಗದ ಸಹ ಪ್ರಾಧ್ಯಾಪಕರಾದ ಅಜಿತ್ ಕುಮಾರ್, ರಾಜಶೇಖರಪ್ಪ ಮೊದಲಾದವರು ಉಪಸ್ಥಿತರಿದ್ದರು. ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಪ್ರಾದ್ಯಾಪಕರು ದೇಶಭಕ್ತಿಗೀತೆಗಳನ್ನು ಹಾಡಿದರು.`ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಕಟಿಬದ್ಧರಾಗಬೇಕು~

ರಾಜರಾಜೇಶ್ವರಿನಗರ:
ತ್ಯಾಗ, ಬಲಿದಾನದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ನಾಯಕರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಕಟಿಬದ್ಧರಾಗಬೇಕಾಗಿದೆ ಎಂದು ಬೆಂಗಳೂರು ದಕ್ಷಿಣ ಶಾಸಕ ಎಂ. ಕೃಷ್ಣಪ್ಪ ಕರೆ ನೀಡಿದರು.ಉತ್ತರಹಳ್ಳಿ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಪಾಲಿಕೆ ಸದಸ್ಯ ಕೆ.ರಮೇಶ್‌ರಾಜು, ಬಿಎಂಟಿಸಿ ನಿರ್ದೇಶಕ ವಿಜಯಕುಮಾರ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಹನುಮಂತು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಶಿವಲಿಂಗೇಗೌಡ ಹಾಜರಿದ್ದರು.ಹುತಾತ್ಮರ ಸ್ಮರಣೆ ಅಗತ್ಯ

ಕೃಷ್ಣರಾಜಪುರ:
ತ್ಯಾಗ- ಬಲಿದಾನಗಳ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಹುತಾತ್ಮರನ್ನು ಸ್ಮರಿಸುವ ಮೂಲಕ ಯುವ ಪೀಳಿಗೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಪಾಲಿಕೆ ಸದಸ್ಯೆ ಆರ್.ಮಂಜುಳಾದೇವಿ ನುಡಿದರು.ಸಿಂಗಯ್ಯನಪಾಳ್ಯ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಾಲ ನಟ ಪ್ರಶಸ್ತಿ ಪುರಸ್ಕೃತ ವಿ.ಅನಿಲ್‌ಕುಮಾರ್‌ನನ್ನು ಸನ್ಮಾನಿಸಿ ಅವರು ಮಾತನಾಡಿದರು.ಶಾಲಾ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ವಿ.ರಾಜು, ಸದಸ್ಯ ರವಿ, ಕುಮಾರ್, ಕೆಂಪಣ್ಣ, ಸಾಮಾಜಿಕ ಕಾರ್ಯಕರ್ತ ಪುಟ್ಟರಾಜು, ಪ್ರಕಾಶ್‌ರೆಡ್ಡಿ, ಟಿ.ಕೆ. ತಾಯಪ್ಪ, ದಾನಿ ಶ್ರೀನಿವಾಸರೆಡ್ಡಿ, ರೋಟರಿ ಸಂಸ್ಥೆಯ ಸುರೇಶ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.ಮಕ್ಕಳಿಂದ ಆಕರ್ಷಕ ಯೋಗ ಪ್ರದರ್ಶನ

ಪೀಣ್ಯ ದಾಸರಹಳ್ಳಿ:
ಹೆಸರಘಟ್ಟ ರಸ್ತೆಯ ಬಾಗಲಗುಂಟೆ ಎಂ.ಇ.ಐ. ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆ ಹಾಗೂ ಪಾಲಿಕೆ ದಾಸರಹಳ್ಳಿ ವಲಯದ ವತಿಯಿಂದ ಅದ್ದೂರಿಯಾಗಿ ಸ್ವಾತಂತ್ರೋತ್ಸವ ಆಚರಿಸಲಾಯಿತು.

ಯೋಗ ವಿಜ್ಞಾನ ಆರೋಗ್ಯ ಕೇಂದ್ರದ ಮಕ್ಕಳು ಪ್ರದರ್ಶಿಸಿದ ಯೋಗ ಪ್ರದರ್ಶನ ನೆರೆದಿದ್ದವರ ಮನಸೆಳೆಯಿತು. ಕ್ಷೇತ್ರದ ನಲವತ್ತಕ್ಕೂ ಹೆಚ್ಚು ಸರ್ಕಾರಿ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.ಶಾಸಕ ಎಸ್.ಮುನಿರಾಜು, ಮಾಜಿ ಮೇಯರ್ ಶಾರದಮ್ಮ, ಪಾಲಿಕೆ ಸದಸ್ಯರಾದ ಪುಟ್ಟಮ್ಮ ತಮ್ಮಣ್ಣ, ಚಂದ್ರಶೇಖರ್, ಆರ್.ಪಿ. ಶಶಿ ಶಿವಕುಮಾರ್, ಪಾಲಿಕೆ ಜಂಟಿ ಆಯುಕ್ತ ಎಲ್.ರಾಧಾಕೃಷ್ಣ,  ಜಯರಂಗ, ಎಂ.ಗೋಪಾಲಕೃಷ್ಣ, ಪೊಲೀಸ್ ಅಧಿಕಾರಿಗಳಾದ ಹನುಮಂತಪ್ಪ, ರಂಗಸ್ವಾಮಿ,   ಇತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.