ಗುರುವಾರ , ಫೆಬ್ರವರಿ 25, 2021
25 °C

ಸ್ವಾತಂತ್ರ್ಯ ದಿನಾಚರಣೆಗೆ ವ್ಯಾಪಕ ಭದ್ರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಾತಂತ್ರ್ಯ ದಿನಾಚರಣೆಗೆ ವ್ಯಾಪಕ ಭದ್ರತೆ

ಬೆಂಗಳೂರು: ಫೀಲ್ಡ್‌ ಮಾರ್ಷಲ್‌ ಮಾಣೆಕ್ ಷಾ ಪರೇಡ್‌ ಮೈದಾನದಲ್ಲಿ  ಸೋಮವಾರ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು  ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ತಿಳಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಿಗ್ಗೆ 9ಕ್ಕೆ  ಧ್ವಜಾರೋಹಣ ನೆರವೇರಿಸುತ್ತಾರೆ’ ಎಂದು ತಿಳಿಸಿದರು.‘ಸೇನಾ ಪಡೆ, ಸೇವಾದಳ, ಶ್ವಾನ ಪಡೆ ಸೇರಿದಂತೆ ಒಟ್ಟು 54 ತುಕಡಿಗಳಲ್ಲಿ ಸುಮಾರು 2 ಸಾವಿರ ಮಂದಿ ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇರಳ ರಾಜ್ಯದ ಸಶಸ್ತ್ರ ಪಡೆಯ ತುಕಡಿಯೂ ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿದೆ. ‘ವಿವಿಧ ಶಾಲೆಗಳ ಸುಮಾರು 2,730 ಮಕ್ಕಳು, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಬೆಳಗಾವಿಯ ಮರಾಠ ಲೈಟ್‌ ಇನ್‌ಫೆಂಟ್ರಿ ರೆಜಿಮೆಂಟಿನ ಯೋಧರು ಮಲ್ಲಕಂಬ ಪ್ರದರ್ಶನ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದರು.ಹೆಚ್ಚಿದ ಭದ್ರತೆ: ನಗರ ಪೊಲೀಸ್ ಕಮಿಷನರ್ ಎನ್‍.ಎಸ್.ಮೇಘರಿಕ್ ಮಾತನಾಡಿ, ‘ಕಾರ್ಯಕ್ರಮ ನಡೆಯುವ ಮಾಣೆಕ್ ಷಾ ಪರೇಡ್‌ ಮೈದಾನ ಸೇರಿದಂತೆ ನಗರದಾದ್ಯಂತ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಗರುಡಾ ಕಮಾಂಡೊ  ಪಡೆಯೂ ಹದ್ದಿನ ಕಣ್ಣಿಡಲಿದೆ’ ಎಂದು ಹೇಳಿದರು.

‘ಪರೇಡ್‌ ಮೈದಾನದ ಸುತ್ತಲೂ 40 ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಲಾಗಿದೆ.   ಭಾರತೀಯ ಭೂಸೇನೆಯ ‘ಮೈನ್‌ ಡಿಟೆಕ್ಷನ್‌’ (ನೆಲಬಾಂಬ್‌ ಪತ್ತೆ) ದಳವನ್ನು ಈ ಬಾರಿ ನಿಯೋಜನೆ ಮಾಡಲಾಗಿದೆ. ಅದರೊಟ್ಟಿಗೆ ಬಾಂಬ್‌ ನಿಷ್ಕ್ರಿಯ ದಳದ ಎರಡು ತಂಡ, ಎರಡು ಗುಂಡು ನಿರೋಧಕ ವಾಹನಗಳು ಹಾಗೂ ಸ್ಕೈ ಸೆಂಟ್ರಿಗಳು ಇರಲಿದ್ದಾರೆ’ ಎಂದು ತಿಳಿಸಿದರು.‘ಪೊಲೀಸ್‌ ಭದ್ರತೆಯ ಜೊತೆಗೆ 16 ಆಂಬುಲೆನ್ಸ್‌ಗಳು, 20 ವೈದ್ಯರು, 30 ಜನ  ಪ್ಯಾರಾ ಮೆಡಿಕಲ್‌ ಸಿಬ್ಬಂದಿ ಹಾಗೂ 10 ಹಾಸಿಗೆಗಳನ್ನು ಒಳಗೊಂಡ ವೈದ್ಯಕೀಯ ವ್ಯವಸ್ಥೆಯೂ ಮೈದಾನದಲ್ಲಿ ಇರಲಿದೆ.   25 ಎಸ್‌ಡಿಆರ್‌ಎಫ್‌ ಸಿಬ್ಬಂದಿ ಹಾಗೂ  8 ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿಯೂ ಇರಲಿದ್ದಾರೆ’ ಎಂದು ವಿವರಿಸಿದರು.

‘ಬೆದರಿಕೆ ಇರುವ ಕುರಿತು ಕೇಂದ್ರೀಯ ಭದ್ರತಾ ಸಂಸ್ಥೆಗಳಿಂದ ಯಾವುದೇ ಖಚಿತ ಮಾಹಿತಿ ಬಂದಿಲ್ಲ. ಭದ್ರತಾ ದೃಷ್ಟಿಯಿಂದ ನಗರದಲ್ಲಿ ಆಗಸ್ಟ್ 13ರಿಂದ ಆಗಸ್ಟ್ 15ರ ತನಕ ಡ್ರೋನ್‌, ಬಲೂನ್‌ ಸೇರಿದಂತೆ ದೂರ ನಿಯಂತ್ರಿತ ವಿಮಾನಗಳ ಹಾರಾಟ ನಿಷೇಧಿಸಲಾ ಗಿದೆ’ ಎಂದು ಹೇಳಿದರು.

ಸಂಚಾರ ಮಾರ್ಗ ಬದಲಾವಣೆ

‘ದಿನಾಚರಣೆಯಂದು ಬೆಳಿಗ್ಗೆ 8.30ರಿಂದ 10.30ರವರೆಗೆ ಕಬ್ಬನ್ ರಸ್ತೆಯ ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೆ (ಕಬ್ಬನ್‌ ರಸ್ತೆ) ಎರಡೂ ದಿಕ್ಕುಗಳಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್‌ (ಸಂಚಾರ ವಿಭಾಗ) ಆರ್.ಹಿತೇಂದ್ರ ತಿಳಿಸಿದರು.

ಪಾರ್ಕಿಂಗ್‌ ಎಲ್ಲಿ ಮಾಡಬೇಕು

* ಹಳದಿ ಕಾರ್‌ ಪಾಸುಗಳನ್ನು ಹೊಂದಿರುವವರು ಕಬ್ಬನ್‌     ರಸ್ತೆ ಮೂಲಕ  ಪ್ರವೇಶ ದ್ವಾರ-1ರಲ್ಲಿ ಬಂದು, ತಮ್ಮ ವಾಹನಗಳನ್ನು ಪರೇಡ್‌ ಮೈದಾನದ ಪಶ್ಚಿಮ ಭಾಗದಲ್ಲಿ ನಿಲುಗಡೆ ಮಾಡಬೇಕು.

* ಬಿಳಿ ಕಾರ್‌ ಪಾಸು ಹೊಂದಿದವರು, ಸೇನಾಧಿಕಾರಿಗಳು ಹಾಗೂ ಇತರರು ಮೈದಾನದ ಈಶಾನ್ಯ ಭಾಗದಲ್ಲಿ ವಾಹನ ನಿಲುಗಡೆ ಮಾಡಬೇಕು.

* ಗುಲಾಬಿ ಪಾಸು ಹಾಗೂ ಹಸಿರು ಪಾಸು ಹೊಂದಿದವರು      ತಮ್ಮ ವಾಹನಗಳನ್ನು ಮಣಿಪಾಲ್‌ ಸೆಂಟರ್‌ನಿಂದ  ಕೆ.ಆರ್‌.ರಸ್ತೆ ಜಂಕ್ಷನ್‌ ವರೆಗಿನ ಕಬ್ಬನ್‌ ರಸ್ತೆ ಹಾಗೂ   ಕಾಮರಾಜ ರಸ್ತೆ, ಸೇನಾ ಶಾಲೆ ಮುಂಭಾಗ ನಿಲುಗಡೆ ಮಾಡಬಹುದು.

* ದ್ವಿಚಕ್ರ ವಾಹನಗಳು ಹಾಗೂ ಕಾರು ಪಾಸು ಹೊಂದಿಲ್ಲದವರು ತಮ್ಮ ವಾಹನಗಳನ್ನು ಕಾಮರಾಜ ರಸ್ತೆಯಲ್ಲಿ ನಿಲ್ಲಿಸಿ ಪ್ರವೇಶ ದ್ವಾರ 4 ಹಾಗೂ 5ರ ಮೂಲಕ ಒಳ ಪ್ರವೇಶಿಸಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.