ಶುಕ್ರವಾರ, ಜನವರಿ 17, 2020
22 °C

ಸ್ವಾವಲಂಬಿ ಬದುಕಿಗೆ ‘ಪಾನ್‌ಬೀಡಾ’ ಆಸರೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಾವಲಂಬಿ ಬದುಕಿಗೆ ‘ಪಾನ್‌ಬೀಡಾ’ ಆಸರೆ!

ಶಹಾಪುರ: ‘ಸರ್ಕಾರದಿಂದ ಅಂಗವಿಕಲರಿಗೆ ಸಿಗುವ ಪಾಲು ದಲ್ಲಾಳಿ ಪಾಲಾಗುತ್ತದೆ. ಅಂಗವಿಕಲನಾಗಿ ಸ್ವಾವಲಂಬನೆಯ ಬದುಕು ಸಾಗಿಸಲು ಒಂದಿಷ್ಟು ಆರ್ಥಿಕ ನೆರವಿನ ಅಭಯ ನೀಡುವಂತೆ ಬ್ಯಾಂಕಿಗೆ ಅಲೆದು ಸಾಕಾಗಿದೆ. ಸರ್ಕಾರದ ಯೋಜನೆ ಪಡೆಯಲು ಅರ್ಜಿ ಸಲ್ಲಿಸಿಯೇ ಸಾಲಗಾರನಾಗಿದ್ದೇನೆ’ ಎನ್ನುವುದು ಪಟ್ಟಣದ ಮಾರುತಿ ದೇವಸ್ಥಾನದ ಬಳಿ ಪಾನ್‌ಶಾಪ್ ಇಟ್ಟುಕೊಂಡು ಜೀವನ ಸಾಗಿಸುತ್ತಿರುವ ಆದಪ್ಪ ಮಲ್ಲಪ್ಪ ಹಡಪದ ಅವರ ಅಭಿಪ್ರಾಯವಾಗಿದೆ.ನಾನು ಐದು ವರ್ಷದವನಿರುವಾಗ ಎರಡೂ ಕಾಲಿಗೆ ಪೋಲಿಯೊ ತಗುಲಿತು. ಹೀಗಾಗಿ, ಕಾಳುಗಳಲ್ಲಿ ಸ್ವಾಧೀನ ಕಳೆದುಕೊಂಡೆ. ಆದಾಗ್ಯೂ, ಕಷ್ಟಪಟ್ಟು ಎಸ್ಸೆಸ್ಸೆಲ್ಸಿ ವರೆಗೆ ಅಭ್ಯಾಸ ಮಾಡಿದೆ. ಆದರೆ, ಅದರಲ್ಲಿ ಅನುತ್ತೀರ್ಣನಾದೆ. ನಾವು ಐದು ಜನ ಅಣ್ಣ ತಮ್ಮಂದಿರಿದ್ದು, ಕುಲ ಕಸುಬು ಕ್ಷೌರಿಕ ವೃತ್ತಿಯಾಗಿದೆ. ನನಗೂ ಕ್ಷೌರ ಮಾಡುವ ಹಂಬಲವಿದೆ. ಆದರೆ, ಎದ್ದು ನಿಂತು ಕೆಲಸ ನಿರ್ವಹಿಸಲು ಕಾಲು ಇಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.ನನಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ತಂದೆ ತೀರಿಕೊಂಡಿದ್ದು, ಹಳೆ ಕಾಲದ ಚಿಕ್ಕದಾದ ಮನೆಯಲ್ಲಿ ಎಲ್ಲರೂ ವಾಸವಾಗಿದ್ದೇವೆ. ಪತ್ನಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಪಾನ್‌ಶಾಪ್‌ನಿಂದ ಒಂದಿಷ್ಟು ಆದಾಯ, ಸರ್ಕಾರದಿಂದ ₨ 1,000 ಮಾಸಾಶನ ಊರುಗೋಲಾಗಿದೆ. ಆದರೆ, ಅದು ಯಾತಕ್ಕೂ ಸಾಲದು.ನಮಗೆ ದೊಡ್ಡ ತಾಪತ್ರಯವೆಂದರೆ ಸೂರು. ಅದೆಷ್ಟು ಬಾರಿ ಪುರಸಭೆಗೆ ಮನವಿ ಸಲ್ಲಿಸಿದರೂ ನಿವೇಶನ ನೀಡಿಲ್ಲ. ಮನೆ ನನ್ನ ಪಾಲಿಗೆ ಗಗನ ಕುಸುಮ. ಸಂಬಂಧಪಟ್ಟ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಲು ತೊಂದರೆ ಅನುಭವಿಸಬೇಕು. ಕಚೇರಿಗೆ ಹೋದಾಗ ಅಧಿಕಾರಿಗಳು ತಾತ್ಸಾರದಿಂದ ನೋಡುತ್ತಾರೆ ಎಂದು ಅಳಲು ತೋಡಿಕೊಂಡರು.ಕೈ ಕಾಲು ಇದ್ದರೂ ದುಡಿಯದೇ ಮೈಗಳ್ಳರಂತೆ ಅಲೆದಾಡುವ ಪ್ರವೃತ್ತಿ ನನ್ನದಲ್ಲ.  ಕಷ್ಟಪಟ್ಟು ದುಡಿಯುವ ತುಡಿತವಿದೆ.

ಜೀವನದಲ್ಲಿ ಮುಂದೆ ಬರಬೇಕು ಎನ್ನುವ ಹಂಬಲವಿದೆ. ಅಂಗವಿಕಲರ ಬಗ್ಗೆ ಅನುಕಂಪ  ವ್ಯಕ್ತಪಡಿಸಿದರೆ ಸಾಲದು. ನೆರವಿನ ಅಭಯ ನೀಡಿ ಸ್ವಾಲಂಬನೆಯ ಬದುಕು ಸಾಗಿಸಲು ಪ್ರೇರಣೆ ನೀಡಬೇಕು.

 

ಪ್ರತಿಕ್ರಿಯಿಸಿ (+)