ಭಾನುವಾರ, ಜೂನ್ 20, 2021
28 °C
ರಷ್ಯಾದ ಜೋಡಿಯ ಸ್ಮಾರಕ ಪ್ರೇಮ...

ಹಂಪಿ ವೀಕ್ಷಣೆಗೆ ಆಸರೆಯಾದ ಪತಿ!

ಪ್ರಜಾವಾಣಿ ವಾರ್ತೆ/ ಬಸವರಾಜ ಮರಳಿಹಳ್ಳಿ Updated:

ಅಕ್ಷರ ಗಾತ್ರ : | |

ಹೊಸಪೇಟೆ: ನೆತ್ತಿ ಸುಡುವ ಬಿಸಿಲು, ಕಾಯ್ದ ಕಲ್ಲುಬಂಡೆಗಳಿಂದ ಹೊರಡುವ ಬಿಸಿಗಾಳಿ, ಎಷ್ಟು ನೀರು ಕುಡಿದರೂ ತೀರದ ದಾಹ.... ಇಂತಹ ವಾತಾವರಣದಲ್ಲಿ ಪತ್ನಿಯನ್ನು ಹೊತ್ತು ಸಾಗುವ ಪತಿ. ವಿದೇಶದ ಯುವ ಜೋಡಿಯ ಈ ದೃಶ್ಯಕ್ಕೆ ಸಾಕ್ಷಿಯಾದುದು ಹಂಪಿಯ ಬೀದಿಗಳು.ರಷ್ಯಾದ ಟಿಕೊವೊ ನಗರದಲ್ಲಿ ಹೋಟೆಲ್‌ ಉದ್ಯಮದಲ್ಲಿ ತೊಡಗಿಕೊಂಡಿರುವ ಯುವಕ ಲಿನೊ, ಭಾರತ ದರ್ಶನಕ್ಕೆ ಪತ್ನಿಯೊಂದಿಗೆ ಬಂದಿದ್ದಾರೆ. ಗೋವಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಎಡಗಾಲಿಗೆ ತೀವ್ರ ಗಾಯ ಮಾಡಿಕೊಂಡಿರುವ ಪತ್ನಿ ಹಾಲಿ ಅವರನ್ನು ಬೆನ್ನ ಮೇಲೆ ಹೊತ್ತುಕೊಂಡು ಮಂಗಳವಾರ ಹಂಪಿಯ ಬೀದಿಗಳಲ್ಲಿ ಸಾಗುತ್ತಿದ್ದರೆ ಎಲ್ಲರೂ ನಿಬ್ಬೆರಗಾಗಿ ನೋಡುತ್ತಿದ್ದರು. ಕಾಲಿಗೆ ಪೆಟ್ಟಾಗಿ ನಡೆಯಲು ಆಗದ ಹಾಲಿ ಅವರಿಗೆ ಹಂಪಿಯ ಸ್ಮಾರಕಗಳ ದರ್ಶನ ಮಾಡಿಸಲೆಂದೇ ಲಿನೊ ಎರಡು ದಿನಗಳಿಂದ ಪತ್ನಿಯನ್ನು ಹೊತ್ತು ತಿರುಗುತ್ತಿದ್ದಾರೆ.ಈಗಾಗಲೇ ವಿರೂಪಾಕ್ಷೇಶ್ವರ ದೇವಸ್ಥಾನ, ಅದರ ಎದುರಿಗಿನ ಬಸವಣ್ಣ, ಸಾಸುವೆ ಕಾಳು ಗಣಪ, ಕೃಷ್ಣ ದೇವಸ್ಥಾನ, ಉಗ್ರ ನರಸಿಂಹ, ನೆಲಸ್ತರ ಶಿವಾಲಯ, ಕಮಲ ಮಹಲ್‌, ಆನೆ ಹಾಗೂ ಒಂಟೆ ಸಾಲು, ಮಹಾನವಮಿ ದಿಬ್ಬ, ಪುಷ್ಕರಣಿ, ವಿಜಯ ವಿಠ್ಠಲ ದೇವಸ್ಥಾನ ಸೇರಿದಂತೆ ಹಲವು ಸ್ಮಾರಕಗಳನ್ನು ಪತ್ನಿಗೆ ತೋರಿಸಿದ್ದು, ಇತ್ತ ತಮ್ಮ ಪ್ರವಾಸಿ ವೀಸಾದ ಅವಧಿ ಮುಗಿಯುತ್ತಿರುವ ಕಾರಣ ನಿಗದಿತ ಅವಧಿಯೊಳಗೆ ಅಂದುಕೊಂಡ ಸ್ಥಳಗಳನ್ನು ಅವರು ತಲುಪಲೇ  ಬೇಕಿದೆ. ಅದಕ್ಕೆಂದೇ ಬಿಸಿಲಿನಲ್ಲಿ ಬೆವರು ಸುರಿಸುತ್ತಲೇ ಲಿನೊ ಒಂದು ಕ್ಷಣವೂ ಬೇಜಾರು ಪಟ್ಟುಕೊಳ್ಳದೆ ಪತ್ನಿಯ ಸ್ಮಾರಕ ಪ್ರೇಮಕ್ಕೆ ಇಂಬು ನೀಡಿ, ಆಸರೆಯಾಗಿದ್ದಾರೆ.‘ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ನಮಗೆ ಹಂಪಿಗೆ ಭೇಟಿ ನೀಡುವುದು ಪ್ರಮುಖವಾಗಿತ್ತು. ಅಪಘಾತದಲ್ಲಿ ನನ್ನ ಕಾಲಿಗೆ ತೀವ್ರ ಪೆಟ್ಟಾಗಿದ್ದರಿಂದ ನನ್ನ ಆಸೆ ಕೈಗೊಡದು ಎಂದುಕೊಂಡಿದ್ದೆ. ಆದರೆ, ಲಿನೊ ನನ್ನ ಬಯಕೆಯನ್ನು ಈಡೇರಿಸಿದ್ದಾರೆ’ ಎಂದು ಹಾಲಿ ‘ಪ್ರಜಾವಾಣಿ’ಗೆ ಭಾವುಕರಾಗಿ ತಿಳಿಸಿದರು.‘ಇಂತಹ ಸಂದರ್ಭಗಳು ಎದುರಾಗುವುದರಿಂದ ನಮ್ಮಿಬ್ಬರ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ ಎಂಬುದು ನನ್ನ ನಂಬಿಕೆ. ಇದರಿಂದ ನನಗೆ ಎರಡು ದಿನ ದಣಿವು, ಆಯಾಸ ಆಗಿರಬಹುದು. ಆದರೆ, ಪತ್ನಿಯ ಬಯಕೆಯನ್ನು ಈಡೇರಿಸಿದ ತೃಪ್ತಿಯಿದೆ’ ಎಂದು ಲಿನೊ ಅಷ್ಟೇ ವಿನಮ್ರವಾಗಿ ತಿಳಿಸಿದರು.ಇದೇ 15ರಂದು ಗೋವಾದಲ್ಲಿ ಸಂಭವಿಸಿದ ಬೈಕ್‌ ಡಿಕ್ಕಿಯಲ್ಲಿ ಹಾಲಿ ಅವರ ಎಡಗಾಲಿಗೆ ತೀವ್ರ ಪೆಟ್ಟಾಯಿತು. ಅಪಘಾತದಿಂದ ಅವರು ನಡೆದಾಡುವ ಸ್ಥಿತಿಯಲ್ಲಿ ಇರಲಿಲ್ಲ. 15 ದಿನ ನಡೆದಾಡದಂತೆ ವೈದ್ಯರು ಸೂಚಿಸಿದ್ದರು. ಇದರಿಂದ ಹಂಪಿ ನೋಡಬೇಕು ಎಂದುಕೊಂಡಿದ್ದ ಹಾಲಿಗೆ ತೀವ್ರ ನಿರಾಸೆಯಾಗಿತ್ತಾದರೂ ಪತಿಯ ನೆರವಿನಿಂದ ಬಯಕೆ ಈಡೇರಿದಂತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.