ಶನಿವಾರ, ಮೇ 15, 2021
24 °C

ಹಟಮಾರಿ ಧೋರಣೆ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರಗಳನ್ನು (ಎನ್‌ಸಿಟಿಸಿ) ರಾಜ್ಯಗಳಲ್ಲಿ ಸಂಸ್ಥಾಪಿಸುವ ವಿಷಯ ಮತ್ತೆ ನೆನೆಗುದಿಗೆ ಬಿದ್ದಿದೆ. ಈ ವಿಷಯದಲ್ಲಿ ಸರ್ವಾನುಮತ ಮೂಡಿಸಲು ಕೇಂದ್ರ ಸರ್ಕಾರ ಮರಳಿ ಯತ್ನವ ಮಾಡಿ ವಿಫಲವಾಗಿದೆ. ಎನ್‌ಸಿಟಿಸಿ ಸ್ಥಾಪನೆ ಕ್ರಮ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ ಎಂಬ ವಾದವನ್ನೇ ಕಾಂಗ್ರೆಸ್ಸೇತರ ರಾಜ್ಯಗಳ ಮುಖ್ಯಮಂತ್ರಿಗಳು ಇತ್ತೀಚೆಗೆ ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ಪುನುರುಚ್ಚರಿಸಿದ್ದಾರೆ. ಈ ಘಟಕವನ್ನು ದುರ್ಬಳಕೆ ಮಾಡಿಕೊಳ್ಳಬಹುದೆಂಬ ಶಂಕೆಯನ್ನು ಹೋಗಲಾಡಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ.ಚಿದಂಬರಂ ಗೃಹಸಚಿವರಾಗಿದ್ದಾಗ ರೂಪಿಸಿದ್ದ ಈ ನೀತಿಗೆ, ಈಗ ಹಲವಾರು ಬದಲಾವಣೆಗಳನ್ನು ತರಲಾಗಿದೆ. ಹಿಂದಿನ ಸಭೆಯಲ್ಲಿ ಕಾಂಗ್ರೆಸ್ಸೇತರ ಸರ್ಕಾರಗಳ ಮುಖ್ಯಮಂತ್ರಿಗಳೇ ನೀಡಿದ ಹಲವಾರು ಸಲಹೆಗಳನ್ನು ಅಳವಡಿಸಿ ರೂಪಿಸಿದ ಪರಿಷ್ಕೃತ ರೂಪವನ್ನೂ ಈಗ ಮುಖ್ಯಮಂತ್ರಿಗಳ ಸಭೆಯಲ್ಲಿ ಅನುಮಾನದಿಂದ ನೋಡಲಾಗಿದೆ. ಭಯೋತ್ಪಾದನೆ ಸಮಯದಲ್ಲಿ ಹಾಗೂ ಪಡೆಗಳನ್ನು ಕಳುಹಿಸುವ ಸಂದರ್ಭದಲ್ಲಿ ಆಯಾ ರಾಜ್ಯಗಳ ಒಪ್ಪಿಗೆ ಪಡೆದೇ ವಿಶೇಷ ಪಡೆ ಕಳುಹಿಸಲಾಗುವುದು ಎಂದು ಕೇಂದ್ರ ಸ್ಪಷ್ಟಪಡಿಸಿದೆ.ಆದರೆ ಈ ರೀತಿಯ ಹೊಸ ಸಂಸ್ಥೆಯನ್ನು ಕೇಂದ್ರ ರಾಜ್ಯಗಳ ನಡುವಿನ ಸಂಪೂರ್ಣ ಒಪ್ಪಿಗೆ ಮೂಲಕವೇ ಮಾಡಬೇಕು ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ. ಕಾಂಗ್ರೆಸ್ಸೇತರ ಸರ್ಕಾರಗಳ ವಿರೋಧಕ್ಕೆ ರಾಜಕೀಯ ಕಾರಣದ ಹೊರತು ಅನ್ಯ ನೆಪಗಳಿಲ್ಲ ಎನಿಸುತ್ತದೆ. ದೇಶದ ಭದ್ರತೆ ಮತ್ತು ಸಮಗ್ರತೆಗೆ  ಧಕ್ಕೆ ತರುತ್ತಿರುವ ಭಯೋತ್ಪಾದನೆ ನಿಗ್ರಹ ಕೇಂದ್ರ ಸರ್ಕಾರದ ಹೊಣೆಗಾರಿಕೆ.ರಾಜ್ಯಗಳಲ್ಲಿ ಎನ್‌ಸಿಟಿಸಿ ಆರಂಭಿಸುವ ಉದ್ದೇಶವೇ ಭಯೋತ್ಪಾದಕ ಬೆದರಿಕೆ ಕುರಿತ ಮಾಹಿತಿಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡುವುದಾಗಿರುವುದರಿಂದ ಈ ಕ್ರಮವನ್ನು ಕಾನೂನು ವ್ಯವಸ್ಥೆಯನ್ನು ರಕ್ಷಿಸುವ ರಾಜ್ಯಗಳ ಹೊಣೆಗಾರಿಕೆಯ ಮೇಲೆ ಕೇಂದ್ರದ ಸವಾರಿ ಎಂದು ವಿಶ್ಲೇಷಿಸುವುದೇ ತಪ್ಪಾಗುತ್ತದೆ. ಇದನ್ನು ರಾಜಕೀಯ ಪ್ರತಿಷ್ಠೆ ಮಾಡಿಕೊಂಡು ವೃಥಾ ಕಾರಣಕ್ಕೆ ವಿರೋಧಿಸುವುದು ಅರ್ಥಹೀನ. ಅಮೆರಿಕದಂತಹ ರಾಷ್ಟ್ರದಲ್ಲೇ ಇಂತಹ ಒಂದು ವ್ಯವಸ್ಥೆ ಇದೆ. ಆಡಳಿತಪಕ್ಷ ಮಾಡುವ ಎಲ್ಲ ಕೆಲಸಗಳನ್ನೂ ವಿರೋಧಿಸಲೇಬೇಕೆಂಬ ಹಟಕ್ಕೆ ಬಿದ್ದಿರುವ ಪ್ರತಿಪಕ್ಷಗಳು ಜನರ ಸುರಕ್ಷೆಯ ಕಡೆಯೂ ಗಮನಹರಿಸಬೇಕಲ್ಲವೇ?ಎನ್‌ಸಿಟಿಸಿ ಪಡೆ ರಾಜ್ಯಗಳಲ್ಲಿ ಕಾನೂನು ವ್ಯವಸ್ಥೆಯ ಉಸ್ತುವಾರಿಗೆ ನಿಯೋಜಿತವಾಗುವಂಥದ್ದಲ್ಲ. ಭಯೋತ್ಪಾದನೆ ನಿಗ್ರಹಕ್ಕೆ ವಿಶೇಷ ಪರಿಣತಿ ಪಡೆದ ಕೇಂದ್ರದ ಸಿಬ್ಬಂದಿಗೆ ತಮ್ಮಲ್ಲಿರುವ ಮಾಹಿತಿಯನ್ನು ರಾಜ್ಯಗಳು ಒದಗಿಸುವುದರಲ್ಲಿ ತಪ್ಪೇನಿದೆ? ದೇಶದ ಸಮಗ್ರತೆಗೆ ಧಕ್ಕೆ ತರುತ್ತಿರುವ ಉಗ್ರರ ದಮನಕ್ಕೆ ಸಹಕಾರ ನೀಡದೆ, ಕ್ಷುಲ್ಲಕ ನೆಪಗಳನ್ನು ನೀಡುತ್ತಾ ವಿರೋಧಿಸುವುದು ಭಯೋತ್ಪಾದನಾ ಕೃತ್ಯಗಳಿಗೆ ಪರೋಕ್ಷವಾಗಿ ಕುಮ್ಮಕ್ಕು ನೀಡಿದಂತಾಗುತ್ತದೆ.ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಕಂಟಕವಾಗಿ ಬೆಳೆದಿರುವ ಭಯೋತ್ಪಾದನೆಗೆ ಈಚಿನ ದಿನಗಳಲ್ಲಿ ಭಾರತವೂ ಗುರಿಯಾಗಿದೆ. ದೇಶಕ್ಕೆ ಹೊರಗಿನಿಂದ ಮಾತ್ರವಲ್ಲದೆ ಒಳಗಿನಿಂದಲೂ ಅಪಾಯ ತಂದೊಡ್ಡುವ ಪ್ರವೃತ್ತಿ ಹೆಚ್ಚುತ್ತಿದೆ.ಆದುದರಿಂದ ರಾಜ್ಯಗಳ ಹೊಣೆಗಾರಿಕೆಯೂ ಇಲ್ಲಿ ಬಹಳ ಮುಖ್ಯವಾಗಿದೆ. ರಾಜ್ಯಗಳ ಈ ರೀತಿಯ ಹಟಕ್ಕೆ ಮುಂದೆ ದುಬಾರಿ ಬೆಲೆಯನ್ನೇ ತೆರಬೇಕಾಗುತ್ತದೆ ಎಂದು ಕೇಂದ್ರ ಸಚಿವ ಚಿದಂಬರಂ ಎಚ್ಚರಿಸಿರುವುದು ಸಕಾಲಿಕವಾಗಿದೆ. ರಾಜ್ಯಸರ್ಕಾರಗಳ ಇಂತಹ ಅಪಾಯಕಾರಿ ನಿಲುವು ಸಮರ್ಥನೀಯವೆನಿಸುವುದಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.