ಭಾನುವಾರ, ಜನವರಿ 19, 2020
23 °C

ಹಡಗು ದುರಂತ: ದೇವರೇ ನಮ್ಮನ್ನು ರಕ್ಷಿಸಿದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: `ನಾವು ಬದುಕಿ ಬರುತ್ತೇವೆ ಎಂದು ನಂಬಿರಲಿಲ್ಲ. ದೇವರೇ ನಮ್ಮನ್ನು ರಕ್ಷಿಸಿದ~ ಹೀಗೆ ಹೇಳುತ್ತಿದ್ದಂತೆ `ಕೊಸ್ಟಾ ಕಾನ್‌ಕಾರ್ಡಿಯಾ~ ಹಡಗು ದುರಂತದಿಂದ ಪಾರಾಗಿ ಬಂದ ತಾಲ್ಲೂಕಿನ ಮಖೇರಿಯ ನಿವಾಸಿ ಝೇವಿಯರ್ ರಫೆಲ್ ಡಿಕೋಸ್ಟಾ, ಚೆಂಡಿಯಾದ ಟೋನಿ ಫರ್ನಾಂಡೀಸ್ ಮತ್ತು ವಿಲ್ಸನ್‌ನ ಫರ್ನಾಂಡೀಸ್ ಅವರ ಕಣ್ಣಾಲಿಗಳು ತೇವಗೊಂಡಿತು.ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮುಗಿಸಿದ ಈ ಮೂವರಲ್ಲಿ ಝೇವಿಯರ್ ಕಳೆದ ಆಗಸ್ಟ್‌ನಲ್ಲಿ, ಟೋನಿ ಫರ್ನಾಂಡೀಸ್ ಜುಲೈನಲ್ಲಿ ಮತ್ತು ವಿಲ್ಸನ್ ನವೆಂಬರ್‌ನಲ್ಲಿ ಕಾನ್‌ಕಾರ್ಡಿಯಾ ಪ್ರಯಾಣಿಕರ ಹಡಗಿನಲ್ಲಿ ಹೌಸ್ ಕಿಪಿಂಗ್ ಮತ್ತು ಅಡುಗೆ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ವಿಶ್ವದ ವೈಭವೋಪೇತ ಹಡಗು ಜ. 14ರಂದು ದುರಂತಕ್ಕೀಡಾದ ಸಂದರ್ಭವನ್ನು ಅವರು `ಪ್ರಜಾವಾಣಿ~ಯೊಂದಿಗೆ ಹಂಚಿಕೊಂಡರು.ಝೇವಿಯರ್ ಮತ್ತು ಟೋನಿ ಜ. 19ರಂದು ಊರಿಗೆ ಮರಳಿದರೆ, ವಿಲನ್ಸ್ ಶನಿವಾರ ಸಂಜೆ ಊರು ತಲುಪಿದರು. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಸೇರಿದಂತೆ ಕರ್ನಾಟಕದ 16ಜನ ಈ ಹಡಗಿನಲ್ಲಿ ಕೆಲಸ ಮಾಡುತ್ತಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.3200ಜನ ಪ್ರಯಾಣಿಕರು, 1500 ಸಿಬ್ಬಂದಿ ಯಿದ್ದ ಹಡಗು ಇಟಲಿಯ ಕಾಲ್ಗೆರಿಯಾದಿಂದ ಸವುನಾ ಬಂದರಿಗೆ ಹೊರಟಿತ್ತು. ಜ. 14ರಂದು 7ಗಂಟೆಗೆ ಹೊರಟ ಹಡಗು ಮಾರನೇ ದಿನ ಬೆಳಿಗ್ಗೆ 8ಕ್ಕೆ ಸವುನಾ ಬಂದರು ತಲುಪಬೇಕಿತ್ತು. ಆದರೆ, ಮೆಡಿಟರೇನಿಯನ್ ಸಮುದ್ರದಲ್ಲಿ ಗಿಗ್ಲಿಯೋ ದ್ವೀಪದ ಬಳಿ ಸ್ಥಳೀಯ ಕಾಲಮಾನದ ಪ್ರಕಾರ 8ಕ್ಕೆ ದುರಂತಕ್ಕಿಡಾಯಿತು.ಮಳೆ ಗಾಳಿ ಇಲ್ಲದಿದ್ದರೂ ಹಡಗು ವಾಲುತ್ತಿರುವುದನ್ನು ನೋಡಿ ಝೇವಿಯರ್ ಸ್ನೇಹಿತ ವಿಲ್ಸನ್‌ಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದೆ. ಏನೋ ತಾಂತ್ರಿಕ ಸಮಸ್ಯೆ ಇರಬೇಕು ಎಂದು ವಿಲ್ಸನ್ ಹೇಳಿದ್ದಾನೆ. ಹೀಗೆ ಅನುಭವವಾದ ಕೆಲವೇ ಕ್ಷಣದಲ್ಲಿ ಇಡೀ ಹಡಗಿನಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆ ಸ್ಥಗಿತಗೊಂಡಿತು. ಹಡಗಿನಲ್ಲಿ ಕತ್ತಲೆ ಆವರಿಸಿದ್ದ ಆತಂಕಗೊಂಡೆವು ಎಂದು ಡಿಕೋಸ್ಟಾ ದುರಂತ ಆರಂಭದ ಕ್ಷಣಗಳನ್ನು ವಿವರಿಸಿದರು.ಕೆಲ ಕ್ಷಣಗಳ ನಂತರ ವಿದ್ಯುತ್ ಬಂತು. ಆದರೆ, ಹಡಗು ಒಂದೇ ಕಡೆ ವಾಲುತ್ತಿತ್ತು. `ಹಡಗು ಬಂಡೆಗೆ ಡಿಕ್ಕಿ ಹೊಡೆದಿದೆ. ಜೀವ ರಕ್ಷಕ ಕವಚಗಳನ್ನು ತೊಟ್ಟು ಎಲ್ಲರೂ ಡೆಕ್‌ನ ಮೇಲೆ ಬರಬೇಕು~ ಎಂದು 9.45ಕ್ಕೆ ಹಡಗಿನ ನಿಯಂತ್ರಣ ಕೊಠಡಿಯಿಂದ ತುರ್ತು ಸಂದೇಶ ಘೋಷಣೆಯಾಯಿತು. ಕೂಡಲೇ ನಮ್ಮ ವಿಭಾಗದ ಮುಖ್ಯಸ್ಥರು ಸಭೆ ನಡೆಸಿ, ಬಳಿಕ ಎಲ್ಲರೂ ಡೆಕ್‌ನ ಮೇಲೆ ಹೋದೆವು. ತೀರ ಪ್ರದೇಶದಿಂದ 500 ಮೀಟರ್ ದೂರದಲ್ಲಿ ಹಡಗು ದುರಂತಕ್ಕೀಡಾಗಿತ್ತು ಎನ್ನುವುದು ಗೊತ್ತಾಯಿತು ಎಂದರು.ಪ್ರಯಾಣಿಕರ ನೂಕುನುಗ್ಗಲು, ಚಿರಾಟ ಕೇಳಿ ದಿಗಿಲಾಯಿತು. ಹೆಲಿಕಾಪ್ಟರ್, ಲೈಫ್ ರಾಫ್ಟ್ ಮತ್ತು ಲೈಫ್ ಬೋಟ್‌ನ ಮೂಲಕ ಕರಾವಳಿ ರಕ್ಷಣಾ ಪಡೆಯವರು ಪ್ರಯಾಣಿಕರು ಹಡಗಿನಿಂದ ರಕ್ಷಿಸಿ ದಡಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಕೆಲ ಪ್ರಯಾಣಿಕರು ನೀರಿಗೆ ಹಾರಿದರು. ದಡಕ್ಕೆ ಸಮೀಪದಲ್ಲಿ ದುರಂತರ ನಡೆದಿರುವುದರಿಂದ ಹಡಗನ್ನು ತೀರಕ್ಕೆ ಎಳೆದುಕೊಂಡು ಹೋಗುವ ಪ್ರಯತ್ನ ನಡೆಯಿತು.ಹಡಗು ಅತ್ತಿಂದಿತ್ತ ವಾಲುತ್ತ ಮುಳುಗುವ ಸಾಧ್ಯತೆ ಇರುವುದರಿಂದ ಆ ಪ್ರಯತ್ನವನ್ನು ಕೈಬಿಟ್ಟರು. ರಾತ್ರಿ 11.45ರ ಸುಮಾರಿಗೆ ನಿಯಂತ್ರಣ ಕೊಠಡಿಯಿಂದ ಅಂಬ್ಯಾಡನ್ ಶಿಪ್ ಘೋಷಣೆ ಹೊರಬಿದ್ದಿತ್ತು. ಸಿಬ್ಬಂದಿಗಳೆಲ್ಲ ಕೈಕೈ ಹಿಡಿದುಕೊಂಡು ನಿಂತಿದ್ದರು. ಹಡಗು ಒಂದೆಡೆ ವಾಲಿಕೊಂಡು ನಿಂತಿದ್ದರಿಂದ ಕೆಳಗಿಳಿಯುವುದೂ ಕಷ್ಟವಾಗಿತ್ತು. ಏನೆಲ್ಲ ಕಸರತ್ತು ಮಾಡಿ ದೋಣಿ ಹತ್ತಿ ದಡಕ್ಕೆ ಬಂದೇವು ಎಂದು ಪಾರಾದ ಬಗೆಯನ್ನು ಟೊನಿ ವಿವರಿಸಿದರು.

ಪ್ರತಿಕ್ರಿಯಿಸಿ (+)