ಶುಕ್ರವಾರ, ಮೇ 7, 2021
26 °C

ಹಣ್ಣು-ತರಕಾರಿ ಸಂಗ್ರಹಣಾ ಘಟಕ ಸಿದ್ಧ

ಪಿ.ಕೆ. ರವಿಕುಮಾರ್/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಅಂತೂ ಇಂತು ಹಾಪ್‌ಕಾಮ್ಸನ ನೂತನ ಹಣ್ಣು-ತರಕಾರಿ ಸಂಗ್ರಹಣಾ ಘಟಕದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಉದ್ಘಾಟನೆಗೆ ಸಜ್ಜುಗೊಂಡಿರುವ ಘಟಕವು ಶೀಘ್ರದಲ್ಲಿಯೇ ಸೇವೆಗೆ ಲಭ್ಯವಾಗಲಿದೆ.ನಗರದ ತಿ.ನರಸೀಪುರ ರಸ್ತೆಯ ಲಲಿತ್‌ಮಹಲ್ ಹೋಟೆಲ್ ಹಿಂಭಾಗವಿರುವ ತೋಟಗಾರಿಕೆ ಇಲಾಖೆಯ 14 ಎಕರೆ ಮಾವಿನ ಕ್ಷೇತ್ರದ ಜಾಗದಲ್ಲಿ ರಾಜ್ಯ ಸರ್ಕಾರ 2 ಎಕರೆ ಪ್ರದೇಶವನ್ನು ಜಿಲ್ಲಾ ಹಾಪ್‌ಕಾಮ್ಸಗೆ ಮಂಜೂರು ಮಾಡಿದೆ. ಈ ಎರಡು ಎಕರೆ ಜಾಗದ 50*75 ವಿಸ್ತೀರ್ಣದಲ್ಲಿ ಹಣ್ಣು- ತರಕಾರಿ ನೂತನ ಸಂಗ್ರಹಣಾ ಘಟಕವನ್ನು ನಿರ್ಮಾಣ ಮಾಡಲಾಗಿದೆ.ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 2008-09ನೇ ಸಾಲಿನಲ್ಲಿ ಮೈಸೂರಿನಲ್ಲಿ ನೂತನ ಸಂಗ್ರಹಣಾ ಘಟಕ ತೆರೆಯಲು ಮಂಜೂರಾತಿ ಸಿಕ್ಕಿತ್ತು. ಘಟಕ ನಿರ್ಮಾಣಕ್ಕೆ 2010ರಲ್ಲಿ 50 ಲಕ್ಷ ರೂಪಾಯಿ ಅನುದಾನ ಕೂಡ ಬಿಡುಗಡೆಯಾಗಿತ್ತು. 2011-12ನೇ ಸಾಲಿನಲ್ಲಿ ಆರಂಭವಾದ ಕಟ್ಟಡ ಕಾಮಗಾರಿ ಈಗಷ್ಟೇ ಪೂರ್ಣಗೊಂಡು, ಉದ್ಘಾಟನೆಯ ಭಾಗ್ಯಕ್ಕೆ ಎದುರು ನೋಡುತ್ತಿದೆ.ನಗರದ ಸಿಟಿ ಬಸ್‌ನಿಲ್ದಾಣಕ್ಕೆ ಹೊಂದಿ ಕೊಂಡಂತಿರುವ ಕರ್ಜನ್ ಪಾರ್ಕ್‌ನಲ್ಲಿ ಸದ್ಯ ಜಿಲ್ಲಾ ಹಾಪ್‌ಕಾಮ್ಸ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಈ ಕಟ್ಟಡ ಕಿರಿದಾಗಿರುವುದರಿಂದ ಇಲ್ಲಿನ ಕಾರ್ಯ ಚಟುವಟಿಕೆಗಳಿಗೆ ಅನನುಕೂಲವಾಗಿದೆ ಹಾಗೂ ಇಲ್ಲಿ 10-12 ಟನ್‌ಗಳಷ್ಟು ಮಾತ್ರ ಹಣ್ಣು- ತರಕಾರಿಗಳನ್ನು ಸಂಗ್ರಹ ಮಾಡಬಹುದು.ಹಾಪ್‌ಕಾಮ್ಸಗೆ ಜಿಲ್ಲೆಯಿಂದ ಒಟ್ಟು 2,705 ರೈತ ಸದಸ್ಯರಿದ್ದಾರೆ. ಈ ರೈತರು ತಾವು ಬೆಳೆದ ಹಣ್ಣು- ತರಕಾರಿಗಳನ್ನು ಇಲ್ಲಿಗೆ ತಂದು ಮಾರಾಟ ಮಾಡುತ್ತಾರೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಹಣ್ಣು-ತರಕಾರಿಗಳನ್ನು ತಂದರೂ ಇಲ್ಲಿ ಸಂಗ್ರಹ ಮಾಡಲು ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ 220-25 ಟನ್ ಸಂಗ್ರಹಣಾ ಸಾಮರ್ಥ್ಯವಿರುವ ನೂತನ ಸಂಗ್ರಹಣಾ ಘಟಕವು ಹಾಪ್‌ಕಾಮ್ಸ ಹಾಗೂ ರೈತರಿಗೆ ತುಂಬಾ ಉಪಯುಕ್ತವಾಗಲಿದೆ.`ಜಿಲ್ಲೆಯ ಹಾಪ್‌ಕಾಮ್ಸ ರೈತ ಸದಸ್ಯರಿಂದ ಹಾಲಿ 7ರಿಂದ 10 ಟನ್ ಹಣ್ಣು- ತರಕಾರಿಗಳನ್ನು ಖರೀದಿಸಲಾಗುತ್ತಿದೆ. ಮೈಸೂರು ನಗರದಲ್ಲಿರುವ 43 ಮಾರಾಟ ಮಳಿಗೆಗಳಿಗೆ ಸಾಕಾಗುವಷ್ಟು ಮಾತ್ರ ಖರೀದಿ ಮಾಡಲಾಗುತ್ತಿದೆ. ಆದರೆ, ರೈತ ಸದಸ್ಯರಿಂದ ನಿತ್ಯ ಸರಾಸರಿ 60-70 ಟನ್‌ನಷ್ಟು ಹಣ್ಣು-ತರಕಾರಿ ಉತ್ಪಾದನೆಯಾಗುತ್ತಿದ್ದು, ಸಂಗ್ರಹಣಾ ಘಟಕದ ಕೊರತೆ ಇತ್ತು. ನೂತನ ಸಂಗ್ರಹಣಾ ಘಟಕವು ಈ ಕೊರತೆಯನ್ನು ನೀಗಿಸಲಿದೆ. ಶೀಘ್ರದಲ್ಲಿಯೇ ಘಟಕಕ್ಕೆ ಚಾಲನೆ ದೊರೆಯಲಿದೆ' ಎಂದು ಹಾಪ್‌ಕಾಮ್ಸ ವ್ಯವಸ್ಥಾಪಕ ನಿರ್ದೇಶಕ ಶಿವಲಿಂಗಪ್ಪ `ಪ್ರಜಾವಾಣಿ'ಗೆ ತಿಳಿಸಿದರು. 

18 ನೂತನ ಮಳಿಗೆ`ಮೈಸೂರಿನಲ್ಲಿ ಒಟ್ಟು 42 ಳಿಗೆಗಳಿದ್ದು, ಹೆಚ್ಚುವರಿಯಾಗಿ 18 ಮಳಿಗೆಗಳನ್ನು ತೆರೆಯುವ ಯೋಜನೆ ಇದೆ. 2011-12ರಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 12 ಮಳಿಗೆಗಳಿಗೆ ಮಂಜೂರಾತಿ ಸಿಕ್ಕಿದ್ದು, ಇದಕ್ಕಾಗಿ 33 ಲಕ್ಷ ರೂಪಾಯಿ ಅನುದಾನ ಕೂಡ ಬಿಡುಗಡೆಯಾಗಿದೆ.    ಇದರೊಂದಿಗೆ ಇನ್ನೂ ಆರು ಮಳಿಗೆಗಳಿಗೆ ಮಂಜೂರಾತಿ ಸಿಕ್ಕಿ 24 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಆದರೆ, ಮಳಿಗೆಗಳ ಆರಂಭಕ್ಕೆ ಅಗತ್ಯವಾದ ಜಾಗ ಮಾತ್ರ ಸಿಕ್ಕಿಲ್ಲ. ಜಾಗ ನೀಡಲು ಮೈಸೂರು ಮಹಾನಗರ ಪಾಲಿಕೆ ಹಾಗೂ `ಮುಡಾ' ವಿಳಂಬ ಮಾಡಿರುವುದರಿಂದ ಮಳಿಗೆಗಳು ಇನ್ನೂ ಆರಂಭವಾಗಿಲ್ಲ' ಎನ್ನುತ್ತಾರೆ ಅವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.