ಭಾನುವಾರ, ಏಪ್ರಿಲ್ 18, 2021
24 °C

ಹದಿನೆಂಟರ ತಿರುವು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಮ್ಮಮ್ಮೆ ಹೀಗೂ ಆಗಿ ಬಿಡುತ್ತದೆ. ಹಿಂದಿಟ್ಟ ಹೆಜ್ಜೆಯೇ ಹೆದ್ದಾರಿ ರೂಪಿಸುತ್ತದೆ. ವರ್ಷಾನುಗಟ್ಟಲೆ ಸಿನಿಮಾವೊಂದು ವಿಳಂಬವಾದಾಗ ಅದರ ಚುಕ್ಕಾಣಿ ಹಿಡಿದಿದ್ದ ನಿರ್ದೇಶಕ ಶಂಕರರಿಗೆ ವಿಶ್ವಾಸ ಹೊರಟು ಹೋಗಿತ್ತು. ಅವರು ಅದನ್ನು ಮತ್ತೆ ಪಡೆದದ್ದು `18ನೇ ಕ್ರಾಸ್~ ಬಿಡುಗಡೆಯಾದ ನಂತರ.ನಿರ್ಮಾಪಕರ ಅಕಾಲಿಕ ಮರಣ ಮತ್ತಿತರ ಅಡೆತಡೆಗಳು ಚಿತ್ರವನ್ನು ಬಾಧಿಸಿದವು. ಆರು ವರ್ಷದ ನಂತರ ಕಡೆಗೂ ಚಿತ್ರ ಬಿಡುಗಡೆಯಾಯಿತು. ತಪ್ಪು ಒಪ್ಪುಗಳನ್ನು ಹೇಳುತ್ತಲೇ ಪ್ರೇಕ್ಷಕರು ಬೆನ್ನು ತಟ್ಟಿದರು. ಇದು ಶಂಕರರ ಖುಷಿಯನ್ನು ಇಮ್ಮಡಿಗೊಳಿಸಿದೆ.ಮೊಗ್ಗಿನ ಮನಸ್ಸು ಚಿತ್ರದೊಂದಿಗೇ ರಾಧಿಕಾ ಪಂಡಿತ್ ಗುರುತಿಸಿಕೊಂಡರೂ ವಾಸ್ತವದಲ್ಲಿ ಅವರ ಮೊದಲ ಚಿತ್ರ `18ನೇ ಕ್ರಾಸ್~. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಕೂಡ ಇದೇ ಮೊದಲ ಚಿತ್ರ. ಇಬ್ಬರೂ ಮುಂದೆ ಚಿತ್ರರಂಗದ ಕಣ್ಮಣಿಗಳಾಗುತ್ತಾರೆ ಎಂದು ಆಗಲೇ ಶಂಕರ್ ಚಿತ್ರತಂಡದವರೊಂದಿಗೆ ಹಂಚಿಕೊಂಡಿದ್ದರಂತೆ. ಅದು ಈಗ ನಿಜವಾಗಿದೆ.ತಮ್ಮ ಎಂಟನೇ ಚಿತ್ರ `ಅದ್ದೂರಿ~ ಐವತ್ತನೇ ದಿನ ಆಚರಿಸಿಕೊಂಡ ದಿನವೇ 18ನೇ ಕ್ರಾಸ್ ಬಿಡುಗಡೆಯಾಗಿದ್ದು ರಾಧಿಕಾ ಪಾಲಿಗೆ `ಡಬಲ್ ಧಮಾಕಾ~ ಅಂತೆ. ನಿರ್ಮಾಪಕ ಚಿಕ್ಕಣ್ಣ ಅವರಿಗೆ ಚಿತ್ರವನ್ನು ಸಮರ್ಪಿಸಿದರು ರಾಧಿಕಾ. ಮಾಗಿದ ನಟನೆ ಸಾಧ್ಯವಾಗಿಲ್ಲ ಎಂಬ ಆತಂಕವನ್ನು ಚಿತ್ರ ನಿವಾರಿಸಿದೆ. ಚಿತ್ರದಲ್ಲಿ ತೋರಿದ ನಟನೆಗೂ ಇಂದಿನ ಅಭಿನಯಕ್ಕೂ ಹೆಚ್ಚೇನೂ ವ್ಯತ್ಯಾಸ ಇಲ್ಲದಿರುವ ಬಗ್ಗೆ ಅವರ ಸಂತಸಗೊಂಡರು.ಮೊದಲ ಚಿತ್ರ ಈಗಲೂ ತನ್ನೊಂದಿಗಿದೆ ಎಂಬ ಭಾವುಕತೆಯೊಂದಿಗೆ ಮಾತಿಗಿಳಿದರು ಅರ್ಜುನ್ ಜನ್ಯ. ಆಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಅವರಿಗೆ ಭಿನ್ನ ಸಂಗೀತ ನೀಡಬೇಕೆಂಬ ತುಡಿತ. ಅದರಲ್ಲಿ ಯಶ ಕಂಡ ತೃಪ್ತಿ ಅವರಿಗೆ. ನಿರ್ಮಾಪಕರು ಈ ಹೊತ್ತಿನಲ್ಲಿ ಇದ್ದಿದ್ದರೆ ಖುಷಿ ಪಡುತ್ತಿದ್ದರು. ಶಂಕರ್ ಅಂದು ತಮ್ಮನ್ನು ಗುರುತಿಸಿ ಅವಕಾಶ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.ನಟ ದೀಪಕ್, ನಿರ್ಮಾಪಕ ಚಿಕ್ಕಣ್ಣ ಅವರ ಮಗ ಶಶಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.