ಶುಕ್ರವಾರ, ಫೆಬ್ರವರಿ 26, 2021
30 °C

ಹನ್ನೊಂದೇ ತಾಸು ಶೂಟಿಂಗ್ ಮುಗೀತು!

ಇ.ಎಸ್.ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ಹನ್ನೊಂದೇ ತಾಸು ಶೂಟಿಂಗ್ ಮುಗೀತು!

ಕನ್ನಡದಲ್ಲಿ ಮತ್ತೊಂದು ದಾಖಲೆಯ ಸಿನಿಮಾ ಸಿದ್ಧಗೊಂಡಿದೆ. ಹದಿನೆಂಟು ಗಂಟೆಗಳಲ್ಲಿ ಶೂಟಿಂಗ್ ಮುಗಿಸಿ ದಾಖಲೆ ಮಾಡಿದ್ದ `ಸುಗ್ರೀವ~ ಚಿತ್ರದ ನಂತರ ಥ್ರಿಲ್ಲರ್ ಮಂಜು ನೇತೃತ್ವದ ಚಿತ್ರತಂಡ ಕೇವಲ 11 ಗಂಟೆ 20 ನಿಮಿಷಗಳಲ್ಲಿ ಸಿನಿಮಾ ಚಿತ್ರೀಕರಿಸಿದೆ, ಗಿನ್ನಿಸ್ ಹಾಗೂ ಲಿಮ್ಕಾ ದಾಖಲೆಗೆ ತಮ್ಮ ಚಿತ್ರವನ್ನು ಸೇರಿಸುವ ಪ್ರಯತ್ನದಲ್ಲಿದೆ.ಥ್ರಿಲ್ಲರ್ ಮಂಜು ನಿರ್ದೇಶನದ `ಪೊಲೀಸ್ ಸ್ಟೋರಿ~ಯ ಎರಡು ಭಾಗ ಈಗಾಗಲೇ ತೆರೆಕಂಡಿವೆ. ಈಗ ಮೂರನೇ ಭಾಗದ ಸರದಿ. ಈ `ಸ್ಟೋರಿ ನಂ 3~ ವಿಭಿನ್ನವಾಗಿರಬೇಕು ಎನ್ನುವ ಕಾರಣಕ್ಕಾಗಿ ಥ್ರಿಲ್ಲರ್ ಪ್ರಯೋಗಶೀಲರಾಗಿದ್ದಾರೆ.ಇದಕ್ಕಾಗಿ ಕಳೆದ ಮೂರ‌್ನಾಲ್ಕು ತಿಂಗಳುಗಳಿಂದ ಯೋಜನೆ ರೂಪಿಸಿದ್ದಾರೆ. ಅದು ಕಾರ್ಯರೂಪಕ್ಕೆ ಬಂದದ್ದು ಜೂನ್ 6ರಂದು. ಅಂದು ಬೆಳಿಗ್ಗೆ 6ಕ್ಕೆ ಮುಹೂರ್ತ. ಆರು ನಿರ್ದೇಶಕರ ನೇತೃತ್ವದಲ್ಲಿ ಆರು ತಂಡಗಳು, ಆರು ಕ್ಯಾಮೆರಾಗಳು ಚಾಲೂ ಆದವು.

 

ಮಧ್ಯದಲ್ಲಿ ಮಳೆ ಬಂತು. ನಲವತ್ತು ನಿಮಿಷದ ಚಿತ್ರೀಕರಣ ಮಳೆಪಾಲಾಯಿತು. ಆದರೆ, ನಿಗದಿತ ಸಮಯದಲ್ಲಿ ಚಿತ್ರೀಕರಣ ಮುಗಿಸಬೇಕೆಂಬ ಹಟ ಚಿತ್ರತಂಡದ ಎಲ್ಲರಲ್ಲಿತ್ತು. ಸಂಜೆ 6ಕ್ಕೆ ಸಿನಿಮಾದ ಸಂಪೂರ್ಣ ಶೂಟಿಂಗ್ ಮುಗಿದಾಗ ತಂಡದ ಪ್ರತಿಯೊಬ್ಬರಲ್ಲೂ ಸಾರ್ಥಕಭಾವ.`ಪೊಲೀಸ್ ಸ್ಟೋರಿ -3~ ಸಾಹಸ ಸಂಭ್ರಮವನ್ನು ಹಂಚಿಕೊಳ್ಳಲೆಂದೇ ಅಂದು ಸಂಜೆ ಚಿತ್ರತಂಡ ಪತ್ರಕರ್ತರಿಗೆ ಮುಖಾಮುಖಿಯಾಯಿತು. ಥ್ರಿಲ್ಲರ್ ಮಂಜು ಜೊತೆ ಉಳಿದ ಐವರು ನಿರ್ದೇಶಕರಾದ ಸಾಧು ಕೋಕಿಲಾ, ಜೆ.ಜೆ.ಕೃಷ್ಣ, ವಾಸು, ಲಕ್ಕಿ ಶಂಕರ್, ಆನಂದ ರಾಜ್ ಹಾಜರಿದ್ದರು. ಕಲಾವಿದರು, ಸಾಹಸ ಕಲಾವಿದರು, ಸಂಗೀತ ಸಂಯೋಜಕ, ಹಾಡುಗಾರರು ಸೇರಿದಂತೆ ಚಿತ್ರತಂಡದ ಬಹುತೇಕರು ಅಲ್ಲಿದ್ದರು.`ತಂಡದ ಪರಶ್ರಮದಿಂದ ಇಂಥದ್ದೊಂದು ಸಾಧನೆ ಸಾಧ್ಯವಾಯಿತು~ ಎಂದು ಥ್ರಿಲ್ಲರ್ ಮಾತು ಆರಂಭಿಸಿದರು. ನಗರದ ಆರು ಕಡೆ ಏಕಕಾಲದಲ್ಲಿ ಆರಂಭವಾದ ಚಿತ್ರೀಕರಣ ಸುಮಾರು ಅರವತ್ತಕ್ಕೂ ಹೆಚ್ಚು ದೃಶ್ಯಗಳು, ಹನ್ನೆರಡು ಸಾಹಸ ದೃಶ್ಯಗಳು ಹಾಗೂ ಎರಡು ಹಾಡುಗಳನ್ನು ಯಶಸ್ವಿಯಾಗಿ ಚಿತ್ರೀಕರಿಸಿದ್ದರ ಕುರಿತು ಅವರ ಮಾತುಗಳಲ್ಲಿ ಹೆಮ್ಮೆಯಿತ್ತು. ಪ್ರತಿಯೊಬ್ಬರೂ ನಿದ್ದೆಗೆಟ್ಟು ಇಂಥದ್ದೊಂದು ಸಾಧನೆಗೆ ಕೈಜೋಡಿಸಿದ್ದರ ಕುರಿತು ಥ್ರಿಲ್ಲರ್ ಮಂಜು ಅವರಿಗೆ ಅತೀವ ಸಂತೋಷವಾಗಿತ್ತು. ಹೀಗಾಗಿ ತಂಡದ ಪ್ರತಿಯೊಬ್ಬರಿಗೂ ಮುಕ್ತಕಂಠದ ಶ್ಲಾಘನೆ ಹಾಗೂ ಅಭಿನಂದನೆಯನ್ನು ಸಲ್ಲಿಸಿದರು.ಪೊಲೀಸ್ ಸ್ಟೋರಿ ಭಾಗ-1ರಲ್ಲಿ ಛಾಯಾಗ್ರಾಹಕರಾಗಿದ್ದ ಜೆ.ಜೆ.ಕೃಷ್ಣ ಈ ಚಿತ್ರದಲ್ಲಿ ಪ್ರಧಾನ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. `ಇಂಥದ್ದೊಂದು ಸಾಧನೆಗೆ ಕೈಹಾಕುವ ಮೊದಲು ಮಾಸ್ಟರ್ (ಥ್ರಿಲ್ಲರ್ ಮಂಜು) ನನ್ನನ್ನು ಸಂಪರ್ಕಿಸಿದ್ದರು.ಚಿತ್ರೀಕರಣದ ಸಾಧಕ ಬಾಧಕಗಳನ್ನು ಪಟ್ಟಿಮಾಡಿದೆವು. ಮೂವತ್ತು ನಲವತ್ತು ದಿನಗಳಲ್ಲಿ ಆಗಬೇಕಾದ ಚಿತ್ರೀಕರಣವನ್ನು ಕೇವಲ ಒಂದು ಹಗಲಿನಲ್ಲಿ ಮುಗಿಸುವುದು ದೊಡ್ಡ ಸವಾಲು.ಈ ಸವಾಲನ್ನು ಎದುರಿಸಲಿಕ್ಕಾಗಿ ಸಮರ್ಥ ತಂಡ ಕಟ್ಟಿಕೊಂಡೆವು. ಈ 12 ಗಂಟೆಗಳ ಚಿತ್ರೀಕರಣದ ಸಿನಿಮಾದಲ್ಲಿ ಸಾಹಸ, ಹಾಡು, ಹಾಸ್ಯ, ದುಃಖ ಸೇರಿದಂತೆ ಅನೇಕ ಸನ್ನಿವೇಶಗಳಿವೆ. ಸಾಕಷ್ಟು ಪೂರ್ವ ತಯಾರಿಯಿಂದ ಆ ಬೃಹತ್ ಸವಾಲನ್ನು ಸಲೀಸಾಗಿ ನಿಭಾಯಿಸಿದೆವು~ ಎಂದು ಕೃಷ್ಣ ಹೇಳಿದರು.ಚಿತ್ರದಲ್ಲಿ ಸುದೀಪ್ ಕೂಡಾ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಈ ಭಾಗವನ್ನು ಸಾಧು ನಿರ್ದೇಶಿಸಿದ್ದಾರೆ. ಅಷ್ಟು ಮಾತ್ರವಲ್ಲ, ಹಾಸ್ಯ ಪಾತ್ರವೊಂದರಲ್ಲಿ ನಟಿಸಿರುವ ಸಾಧು, ಸಂಕಲನ ನಿರ್ವಹಣೆಯ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಅವರ ಪ್ರಕಾರ, `ಎಲ್ಲರ ಅನುಭವಕ್ಕೊಂದು ಅನುಭವ ಈ ಚಿತ್ರ~.ಪೊಲೀಸ್ ಆಗಬಯಸುವ ನಾಲ್ಕು ಯುವಕರಿಗೆ ತರಬೇತಿ ನೀಡಿ ಅವರನ್ನು ಪೊಲೀಸ್ ಅಧಿಕಾರಿಗಳನ್ನಾಗಿ ಮಾಡುವುದೇ ಚಿತ್ರದ ಒಂದೆಳೆಯ ಕಥೆ. ಚಿತ್ರದಲ್ಲಿ ಥ್ರಿಲ್ಲರ್ ಮಂಜು ನಾಯಕ. ಸುದೀಪ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ದಿಶಾ ಪೂವಯ್ಯ ಹಾಗೂ ನೇಹಾ ಪಾಟೀಲ್ ನಾಯಕಿಯರು. ಸಾಧು, ಬುಲೆಟ್ ಪ್ರಕಾಶ್ ಹಾಗೂ ಮೈಕಲ್ ಮಧು ಹಾಸ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಾಗರ್ ಅವರ ಸಂಗೀತದಲ್ಲಿ ಎರಡು ಹಾಡುಗಳು ಮೂಡಿ ಬಂದಿವೆ. ಅದರ್ಲ್ಲಲೊಂದು ಐಟಂ ಗೀತೆ. ಚಿತ್ರದ ಸಾಧನೆಯನ್ನು ಗಿನ್ನಿಸ್ ಹಾಗೂ ಲಿಮ್ಕಾದಲ್ಲಿ ದಾಖಲಿಸಲು ಲಂಡನ್‌ಗೆ ತೆರಳುವುದಾಗಿ ಥ್ರಿಲ್ಲರ್ ವಿವರಿಸಿದರು.ಚಿತ್ರೀಕರಣದ ನಂತರವೂ ದಾಖಲೆ ನಿರ್ಮಿಸಲು ಥ್ರಿಲ್ಲರ್ ಬಳಗ ಉದ್ದೇಶಿಸಿದೆ. ಸಂಕಲನವನ್ನು ಆರು ಕೇಂದ್ರಗಳಲ್ಲಿ ಒಂದೇ ರಾತ್ರಿಯಲ್ಲಿ ಮುಗಿಸುವುದು ಹಾಗೂ ಡಬ್ಬಿಂಗ್ ಅನ್ನು ಮೂರು ಸ್ಥಳಗಳಲ್ಲಿ ಒಂದು ರಾತ್ರಿಯಲ್ಲಿ ಮುಗಿಸುವುದು ಚಿತ್ರತಂಡದ ಯೋಜನೆ. ಸಂಕಲನ ಕೆಂಪರಾಜ್ ಅವರ ನೇತೃತ್ವದಲ್ಲಿ ನಡೆಯಲಿದೆ.ಹನ್ನೊಂದು ದಿನಗಳಲ್ಲಿ ಮೊದಲ ಪ್ರತಿ ತೆಗೆಯುವುದರ ಜತೆಗೆ ಹದಿನಾಲ್ಕನೇ ದಿನಕ್ಕೆ ಸಿನಿಮಾ ಬಿಡುಗಡೆ ಮಾಡಲು ಥ್ರಿಲ್ಲರ್ ಉದ್ದೇಶಿಸಿದ್ದಾರೆ. ಅಂದಹಾಗೆ, ಎರಡು ಗಂಟೆ ಅವಧಿಯ ಈ ಸಿನಿಮಾಕ್ಕೆ ಒಟ್ಟು 12 ಸಾವಿರ ಅಡಿ ಉದ್ದದ ರೀಲನ್ನು ಬಳಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.