ಬುಧವಾರ, ಜೂನ್ 3, 2020
27 °C

ಹರಕೆ ಹರಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಚಿನ ದಿನಗಳಲ್ಲಿ ಪತ್ರಿಕೆಯ ಮುಖಪುಟಗಳಲ್ಲೇ ಎರಡು ಸುದ್ದಿಗಳು ಕಾಣಿಸಿಕೊಂಡಿವೆ- ಒಂದು, ಸುಬ್ರಹ್ಮಣ್ಯದ ದೇವಾಲಯವೊಂದರಲ್ಲಿ ಕೆಲವು ಹರಕೆದಾರರು ಎಂಜಲೆಲೆಗಳ ಮೇಲೆ ಹೊರಳಾಡಿದ ಸುದ್ದಿ; ಇನ್ನೊಂದು, ನಮ್ಮ ಕ್ರಿಕೆಟ್ ಆಟಗಾರರನ್ನು ಎಮ್ಮೆದನಗಳ ಹಾಗೆ ಹರಾಜು ಹಾಕಿದ ಸುದ್ದಿ. 2011ರ ಭಾರತದಲ್ಲಿ ಬದುಕುತ್ತಿರುವ ನನ್ನಂಥವರಿಗೆ ಈ ಎರಡು ಸುದ್ದಿಗಳಲ್ಲಿ ಯಾವುದು ಹೆಚ್ಚು ಅವಮಾನಕರ?ನಾನು ಓದಿದ ಪತ್ರಿಕಾ ವರದಿಗಳನ್ನೇ ಆಧರಿಸಿ ಮಾತನಾಡುವುದಾದರೆ, ಇದರಲ್ಲಿ ಮೊದಲನೆಯದನ್ನು ಅವಮಾನಕರವೆಂದು ಹಲವರು ಗುರುತಿಸಿದ್ದಾರೆ. ಹಾಗೆ ನೋಡಿದರೆ, ಹರಾಜಿನ ಸುದ್ದಿಗೆ ಹೋಲಿಸಿದರೆ, ಹರಕೆಯ ಸುದ್ದಿಯು ಅದು ಸಂಭವಿಸಿದ ಭೌಗೋಲಿಕ ಸ್ಥಳದ ದೃಷ್ಟಿಯಿಂದಲೇ ಆಗಲಿ, ಅಥವಾ ಅದರ ಪರಿಣಾಮದ ವ್ಯಾಪ್ತಿಯಲ್ಲೇ ಆಗಲಿ, ಅಥವಾ ಈ ವ್ಯವಹಾರದ ಹಿಂದೆ ಅಡಗಿರುವ ಹಣದ ಪ್ರಮಾಣದಿಂದಲೇ ಆಗಲಿ ಅಷ್ಟು ಮುಖ್ಯವಲ್ಲದ್ದೆಂಬಂತೆ ಕಾಣುತ್ತದೆ.ಆ ಸುದ್ದಿಯ ಪ್ರಕಾರ, ಯಾವುದೋ ಒಂದು ಪುಟ್ಟ ಊರಿನ ದೇವಾಲಯದಲ್ಲಿ, ಯಾರೋ ಒಂದಿಷ್ಟು ಜನ, ತಮ್ಮದೇ ಸ್ವಂತ ನಂಬಿಕೆಯಿಂದ ಪ್ರೇರಿತರಾಗಿ ನಮ್ಮಂಥ ಹಲವರಿಗೆ ಅಸಹ್ಯಕರವಾಗಿ ಕಾಣಬಹುದಾದ ಒಂದು ಕೆಲಸವನ್ನು ಮಾಡಿದರು. ನಮ್ಮ ಮಾಧ್ಯಮವರದಿಗಳು ಅಷ್ಟನ್ನು ಮಾತ್ರ ಹೇಳದೆ, ಇದು ಭಾರತದಲ್ಲಿ ಶತಶತಮಾನಗಳಿಂದ ಸತತವಾಗಿ ನಡೆದುಕೊಂಡು ಬಂದಿರುವ ಒಂದು ಮೂಢನಂಬಿಕೆಯೆಂಬ ಅರ್ಥದಲ್ಲಿ ಅದನ್ನು ಚಿತ್ರಿಸಿದವು.ಮಾತ್ರವಲ್ಲ, ನಗಣ್ಯವೆನ್ನಬಹುದಾದ ಪುಟ್ಟ ಊರಿನ ಈ ಒಂದು ಘಟನೆಯು ಮುಖಪುಟಗಳಲ್ಲಿ ವರದಿಯಾದ ರೀತಿಯಿಂದಲೇ, ಇದು ನಮ್ಮ ಸಮಾಜವನ್ನು ಕಾಡುತ್ತಿರುವ ಮುಖ್ಯವಾದ ಪಿಡುಗಿನ ಒಂದು ಉದಾಹರಣೆ- ಎಂಬ ಧ್ವನಿಯೂ ಈ ವರದಿಗಳ ಹಿಂದಿತ್ತು.ಅದಕ್ಕೆ ಹೋಲಿಸಿದರೆ, ಹರಾಜಿನ ಸುದ್ದಿಯು ವರದಿಯಾದ ವಿಧಾನದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಇದು ಭೌಗೋಲಿಕ ವ್ಯಾಪ್ತಿಯಲ್ಲಿಯೂ ಜನಪ್ರಿಯತೆಯಲ್ಲಿಯೂ ಹಾಗೂ ಹಣದ ವಹಿವಾಟಿನ ದೃಷ್ಟಿಯಿಂದ ಕೂಡಾ ಗಣನೀಯ ವಿದ್ಯಮಾನವಾದ್ದರಿಂದ ಇದು ಮುಖಪುಟಗಳಲ್ಲಿ ಹಲವು ದಿನ ಕಾಣಿಸಿಕೊಂಡಿದ್ದೇನೋ ಸಹಜವೇ ಸರಿ. ಆದರೆ, ಅಂಥ ಯಾವುದೇ ವರದಿಯಲ್ಲಾಗಲಿ- ಅಥವಾ ಅದಕ್ಕೆ ಪ್ರತಿಕ್ರಿಯೆಯಾಗಿಯಾಗಲಿ- ಇದು ನಮ್ಮ ಸಮಾಜಕ್ಕೆ ಅವಮಾನವನ್ನು ಸೃಷ್ಟಿಸುವ ಒಂದು ಘಟನೆ ಎಂಬ ಚಿತ್ರಣ ಇರಲಿಲ್ಲ.ಮಾತ್ರವಲ್ಲ, ಹರಕೆಯ ಘಟನೆಯನ್ನು ಕೆಲವು ವರದಿಗಳು ‘ಮಧ್ಯಯುಗದ ಭಾರತದ ಅನಾಗರಿಕ ಮನಃಸ್ಥಿತಿಯು ಇನ್ನೂ ಮುಂದುವರೆಯುತ್ತಿರುವ ಸಂಕೇತ’ ಎಂಬರ್ಥದಲ್ಲಿ ವರ್ಣಿಸಿದ್ದರೆ, ಹರಾಜಿನ ವಿಚಾರದಲ್ಲಿ ಈ ಬಗೆಯ ಇತಿಹಾಸದ ಉಲ್ಲೇಖವನ್ನು ಯಾರೂ ಮಾಡಲಿಲ್ಲ. ಮೇಲುಮೇಲಿನ ಇತಿಹಾಸವನ್ನಷ್ಟೇ ಗಮನಿಸಿದರೂ, ಈ ಬಗೆಯ ಹರಾಜುಗಳು ಪ್ರಾಚೀನ ರೋಮಿನಲ್ಲಿ ನಡೆಯುತ್ತಿದ್ದ ಕಥೆ ನಮಗೆ ಗೊತ್ತಿದೆ; ಅಲ್ಲಿ ಹೋರಿಕಾಳಗದ ಆಟಗಾರರನ್ನು ಮತ್ತು ಗುಲಾಮರನ್ನೂ ಸ್ತ್ರೀಯರನ್ನೂ ಇದೇ ಬಗೆಯಲ್ಲಿ ಹರಾಜು ಹಾಕುತ್ತಿದ್ದರೆಂದು ಪ್ರಾಥಮಿಕ ಇತಿಹಾಸದ ಪುಸ್ತಕಗಳೂ ಹೇಳುತ್ತವೆ.ಆದರೆ, ಹರಾಜಿನ ಘಟನೆಯನ್ನು ವರದಿ ಮಾಡಿದ ಯಾರೂ ಇದನ್ನು ‘ಪ್ರಾಚೀನ ರೋಮಿನ ಅನಾಗರಿಕ ಮನಃಸ್ಥಿತಿಯು ಇನ್ನೂ ಮುಂದುವರೆದಿರುವ ಸಂಕೇತ’ವೆಂದು ವರ್ಣಿಸಲಿಲ್ಲ. ಅಂತೆಯೇ, ಹರಕೆಯ ಘಟನೆಯು ಆ ಕಾರ್ಯದಲ್ಲಿ ತೊಡಗಿಕೊಂಡವರಿಗೆ ಮಾತ್ರವಲ್ಲ, ಅಂಥ ಸಮಾಜದಲ್ಲಿ ಬದುಕುತ್ತಿರುವ ನಮ್ಮೆಲ್ಲರಿಗೂ ಅವಮಾನಕರವೆಂದು ವರ್ಣಿತವಾದರೆ, ಈ ಆಟಗಾರರ ಹರಾಜಿನ ಕೆಲಸವು ನಮ್ಮೆಲ್ಲರಿಗೆ ಹಾಗಿರಲಿ, ಅಂಥ ಮಾರುಕಟ್ಟೆಯಲ್ಲಿ ಕುರಿಗಳ ಹಾಗೆ ಬೆಲೆಪಟ್ಟಿ ಹಚ್ಚಿಕೊಂಡು ನಿಂತ ಆಟಗಾರರಿಗೂ ಅವಮಾನ ಎಂದು ಯಾರೂ ವ್ಯಾಖ್ಯಾನಿಸಲಿಲ್ಲ. ಯಾತಕ್ಕೆ ಈ ವ್ಯತ್ಯಾಸ? ಇವೆರಡರಲ್ಲಿ ಯಾವುದು ನಿಜವಾಗಿ ಅವಮಾನ? ಇವೆರಡರಲ್ಲಿ ಪರಸ್ಪರ ಯಾವುದು ಹೆಚ್ಚು ಅವಮಾನಕರ? ಮತ್ತು ಇವೆರಡೂ ಬೇರೆಬೇರೆ ರೀತಿಯ ಅವಮಾನಗಳೇ ಹೌದು ಎನ್ನುವುದಾದರೆ, ನಮ್ಮ ಮಾಧ್ಯಮದ ಕಣ್ಣುಗಳಿಗೆ ಮತ್ತು ನಮ್ಮ ಹಲವು ವಿಚಾರವಂತರ ಮನಸ್ಸುಗಳಿಗೆ ಅದೇಕೆ ಹಾಗೆ ಕಾಣುತ್ತಿಲ್ಲ? ಯಾತಕ್ಕೆ ಇವೆರಡರ ವರದಿಗಳಲ್ಲಿ ಇಂಥ ಅಸಮಾನತೆ?ಇದಕ್ಕೆ ಕಾಣಿಸುವ ಒಂದು ಉತ್ತರವೆಂದರೆ, ಇವತ್ತಿನ ಕಾಲದ ಸಾಂಸ್ಕೃತಿಕ ಹವಾಮಾನದಲ್ಲಿ ಕೆಲವು ಬಗೆಯ ಅವಮಾನಗಳನ್ನು ನಾವು ಅವಮಾನವೆಂದು ಗುರುತಿಸುವುದನ್ನು ಕಲಿತುಕೊಂಡಿದ್ದೇವೆ; ಆದರೆ ಇನ್ನೂ ಕೆಲವು ಬಗೆಯ ಅವಮಾನಗಳಿಗೆ ನಾವು ಎಷ್ಟು ಒಗ್ಗಿಕೊಂಡಿದ್ದೇವೆಂದರೆ, ಅವು ಅವಮಾನಗಳೆಂದು ನಮಗೆ ಕಾಣುವುದೇ ಇಲ್ಲ. ಉದಾಹರಣೆಗೆ ಹಿಂದೊಂದು ಕಾಲದಲ್ಲಿ ಪ್ರಾಯಶಃ ಮೇಲೆ ಉಲ್ಲೇಖಿಸಿದ ಹರಕೆಯ ವಿದ್ಯಮಾನವು ಕೇವಲ ನಂಬಿಕೆಯ ಪ್ರಶ್ನೆಯಾಗಿ ಕಾಣುತ್ತಿತ್ತು, ಅದನ್ನು ಅವಮಾನವೆಂದು ಯಾರೂ ತಿಳಿಯುತ್ತಿರಲಿಲ್ಲ.

 

ಆದರೆ, ಇವತ್ತಿನ ಕಾಲದಲ್ಲಿ ಅದು ಕೇವಲ ಹರಕೆ ಹೊತ್ತವರಿಗೆ ಮಾತ್ರವಲ್ಲ, ಇಡಿಯ ಸಮಾಜಕ್ಕೇ ಅವಮಾನವೆಂದು ನಮ್ಮಲ್ಲನೇಕರಿಗೆ ಕಾಣುತ್ತಿದೆ. ಅದೇ ಹರಾಜಿನ ವಿಷಯಕ್ಕೆ ಬಂದರೆ, ಇವತ್ತಿನ ಸಮಾಜದಲ್ಲಿ- ಅದರಲ್ಲೂ ಮುಖ್ಯವಾಗಿ ಮಧ್ಯಮ ಮತ್ತು ಮೇಲುವರ್ಗಗಳ ಕಣ್ಣಿಗೆ- ಇದೊಂದು ಬಗೆಯ ಜೀವನವಿಧಾನವೆಂದು ಕಾಣುತ್ತದೆಯೇ ಹೊರತು ಯಾವ ರೀತಿಯಿಂದಲೂ ಇದರಲ್ಲಿ ಅವಮಾನ ಗೋಚರಿಸುವುದಿಲ್ಲ.

 

ಚಿತ್ರಕೃತಿಗಳನ್ನು ಹರಾಜು ಹಾಕುವ ಹಾಗೆಯೇ ಮನುಷ್ಯರ ನಿರ್ದಿಷ್ಟ ಕೌಶಲಗಳನ್ನೂ ಹರಾಜು ಹಾಕುವುದರಲ್ಲಿ ತಪ್ಪೇನಿದೆ?- ಎಂದು ನಮ್ಮಲ್ಲನೇಕರಿಗೆ ಕಾಣುತ್ತದೆ. ಇನ್ನು, ನಮ್ಮ ನವಮಧ್ಯಮವರ್ಗಗಳಿಗಂತೂ ಕ್ರಿಕೆಟ್ಟಿಗರ ಹರಾಜೇ ಆಗಲಿ ಅಥವಾ ಅದೇ ಬಗೆಯ ಸೌಂದರ್ಯಸ್ಪರ್ಧೆಯೇ ಆಗಲಿ, ಅದು ಸಹಜವಾದ ವ್ಯಾಪಾರ ವಹಿವಾಟಿನ ಚಟುವಟಿಕೆಯಾಗಿ ಕಾಣುತ್ತದೆ. ಮಾತ್ರವಲ್ಲ, ಕೆಲವರಿಗಂತೂ ಅದು ‘ಊಳಿಗಮಾನ್ಯ ಮೌಲ್ಯಗಳಿಂದ’ ನಮ್ಮ ಸಮಾಜ ಬಿಡುಗಡೆ ಪಡೆದುಕೊಂಡಿರುವುದರ ಪ್ರಗತಿಶೀಲ ಪ್ರತೀಕವಾಗಿಯೂ ಕಾಣಿಸಿಕೊಳ್ಳುತ್ತದೆ.ಅಂದರೆ, ಅರ್ಥ ಇಷ್ಟೇ- ಯಾವುದೇ ಸಮಾಜದಲ್ಲೇ ಆಗಲಿ, ಅವಮಾನವೆಂಬುದು ಒಂದು ಕಾಲದೇಶಾಧೀನ ಸಾಂಸ್ಕೃತಿಕ ಪರಿಕಲ್ಪನೆಯೇ ಹೊರತು ಅದು ಸಾರ್ವತ್ರಿಕವಾಗಿ ಮತ್ತು ಸಾರ್ವಕಾಲಿಕವಾಗಿ ನಿರ್ವಚಿತವಾದ ಒಂದು ಸ್ಥಿತಿಯಲ್ಲ. ಆದ್ದರಿಂದ, ಹರಕೆ ಮತ್ತು ಹರಾಜುಗಳಲ್ಲಿ ಒಂದು ಅವಮಾನವಾಗಿಯೂ ಇನ್ನೊಂದು ಸಹಜವಾಗಿಯೂ ಕಂಡರೆ, ಅದರ ಹಿಂದೆ ಐತಿಹಾಸಿಕವಾದ ಹಲವು ಕಾರಣಗಳಿವೆ; ನಮ್ಮ ವಸಾಹತುಶಾಹಿ ಗತಕಾಲವು ನಮ್ಮ ಗ್ರಹಿಕೆಯನ್ನು ನಿರೂಪಿಸಿದ ಒಂದು ವಿಶಾಲ ಕಥನವೇ ಅದರ ಹಿಂದಿದೆ. ಈ ಪುಟ್ಟ ಟಿಪ್ಪಣಿಯಲ್ಲಿ ಆ ವಿವರಗಳಿಗೆ ನಾನು ಹೋಗುವುದಿಲ್ಲ.ಆದರೆ, ಈ ಎಲ್ಲ ಪ್ರಶ್ನೆಗಳು ಇನ್ನೂ ಒಂದು ಮೂಲ ಪ್ರಶ್ನೆಯ ಕಡೆಗೆ ನಮ್ಮನ್ನು ಎಳೆದೊಯ್ಯುತ್ತವೆ- ಅವಮಾನ ಎಂದರೆ ಅದೇನು?  ಯಾರಿಗಾದರೂ ಅವಮಾನವಾದರೆ ಅದನ್ನು ಗುರುತಿಸುವುದು ಹೇಗೆ? ಈ ಪ್ರಶ್ನೆಗೆ ಈಚಿನ ಹಲವು ಸಂಸ್ಕೃತಿ ಜಿಜ್ಞಾಸುಗಳು ಬಗೆಬಗೆಯಿಂದ ಉತ್ತರ ಹುಡುಕಲು ಹವಣಿಸಿದ್ದಾರೆ.ಭಾರತದ ಸಂದರ್ಭದಲ್ಲಿ ಇಂದು ನಡೆಯುತ್ತಿರುವ, ಸಾಮಾಜಿಕ ಅವಮಾನದ ಘಟನೆಗಳೆಂದು ಹೇಳಲಾಗುವ ಹಲವು ಬಗೆಯ ದೃಷ್ಟಾಂತಗಳನ್ನು ಅಂಥ ಚಿಂತಕರು ತುಂಬ ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ. ಆ ಎಲ್ಲ ವಿಶ್ಲೇಷಣೆಗಳ ಸಮೀಕ್ಷೆಗೆ ಹೋಗದೆ, ಅಂಥ ಹಲವು ಜಿಜ್ಞಾಸೆಗಳಲ್ಲಿ ವ್ಯಕ್ತವಾಗಿರುವ ಒಂದು ಕ್ಲಿಷ್ಟವಾದ ಪ್ರಶ್ನೆಯನ್ನು ನಾನಿಲ್ಲಿ ಒಂದು ರೂಪಕವಾಗಿ ರೂಪಾಂತರಿಸಿ ಪ್ರಸ್ತುತಪಡಿಸುತ್ತೇನೆ. ಆ ರೂಪಕ ಹೀಗಿದೆ: ಒಂದು ಕೋಣೆಯಲ್ಲಿ ಎತ್ತರವಾದ ಆಸನವೊಂದರ ಮೇಲೆ ಒಬ್ಬ ಕಾಲಿನ ಮೇಲೆ ಕಾಲು ಹಾಕಿ ಕೂತಿದ್ದಾನೆಂದು ಭಾವಿಸಿ; ಇನ್ನೊಬ್ಬ ಆತನ ಕಾಲಿನ ಕೆಳಗೆ ಬಾಗಿ ನಿಂತಿದ್ದಾನೆಂದು ಭಾವಿಸಿ; ಮತ್ತು ಇನ್ನೂ ಒಬ್ಬ ಆ ಕೋಣೆಯ ಬಾಗಿಲಿನಲ್ಲಿ ನಿಂತು ಇವರಿಬ್ಬರನ್ನೂ ನೋಡುತ್ತಿದ್ದಾನೆಂದು ಊಹಿಸಿಕೊಳ್ಳಿ.ಆಗ, ಮೇಲೆ ಕೂತವ ಕೆಳಗೆ ನಿಂತವನಿಗೆ ಅವಮಾನ ಮಾಡುತ್ತಿದ್ದಾನೆಂದು ಬಾಗಿಲಿನಲ್ಲಿ ನಿಂತವನಿಗೆ ಕಾಣಲಿಕ್ಕೆ ಸಾಧ್ಯವಿದೆ. ಆದರೆ, ಸ್ವತಃ ಬಾಗಿ ನಿಂತವನೇ ತನಗೆ ಅವಮಾನವಾಗುತ್ತಿಲ್ಲ; ತಾನು ಗೌರವದಿಂದ ಹೀಗೆ ನಿಂತಿದ್ದೇನೆಂದು ಹೇಳಿದರೆ, ಆಗೇನು ಮಾಡಬೇಕು? ಆದರೆ, ಬಾಗಿಲಲ್ಲಿ ನಿಂತವನು ಅಷ್ಟಕ್ಕೆ ಸಮಾಧಾನಗೊಳ್ಳುವುದಿಲ್ಲ ಅಂದುಕೊಳ್ಳೋಣ.  ಆತ, ತನ್ನ ವಾದವನ್ನು ಸಮರ್ಥಿಸಿಕೊಳ್ಳಲಿಕ್ಕೆ ಹೀಗೆ ಹೇಳಿಯಾನು- ‘ಕಾಲಿನ ಕೆಳಗೆ ಬಾಗಿ ನಿಂತಿರುವ ಆತನಿಗೆ ನಿಜವಾಗಿ ಅವಮಾನವಾಗುತ್ತಿದೆ; ಆದರೆ ದೀರ್ಘಕಾಲ ಹಾಗೇ ನಿಂತು ರೂಢಿಯಾಗಿರುವುದರಿಂದ ಅದನ್ನು ಆತ ಸಹಜವೆಂದು ಭಾವಿಸಿದ್ದಾನೆ, ಅದು ತನಗೆ ಅವಮಾನವೆಂದು ತಿಳಿದುಕೊಳ್ಳುತ್ತಿಲ್ಲ, ಅಷ್ಟೇ!’. ಇಂಥ ಒಂದು ಇಕ್ಕಟ್ಟಿನ ಸನ್ನಿವೇಶದಲ್ಲಿ ಯಾರು ಯಾರಿಗೆ ಅವಮಾನ ಮಾಡುತ್ತಿದ್ದಾರೆ ಎಂಬುದನ್ನಾಗಲಿ, ಅಥವಾ ನಿಜವಾಗಿಯೂ ಇಲ್ಲಿ ಯಾರಿಗಾದರೂ ಅವಮಾನ ಆಗುತ್ತಿದೆಯೋ ಎಂಬುದನ್ನೇ ಆಗಲಿ ಹೇಳುವುದು ಎಷ್ಟು ಕ್ಲಿಷ್ಟವೆಂಬುದನ್ನು ನಾವು ಹಲವು ನಿರ್ದಿಷ್ಟ ಉದಾಹರಣೆಗಳ ಮೂಲಕ ವಿವರಿಸಬಹುದು. ಒಂದೇ ಉದಾಹರಣೆ ಹೇಳುವುದಾದರೆ, ಕೋಣೆಯೊಳಗೆ ಕೂತವರಿಬ್ಬರೂ ಭಾರತದವರು ಮತ್ತು ಬಾಗಿಲಲ್ಲಿ ನಿಂತವನು ಪಾಶ್ಚಿಮಾತ್ಯ ಮೂಲದ ಒಬ್ಬ ಮಾನವಶಾಸ್ತ್ರಜ್ಞ ಎಂದೇನಾದರೂ ನೀವು ಭಾವಿಸಿಕೊಂಡರೆ, ಆಗ ಈ ಇಕ್ಕಟ್ಟಿಗೆ ಸಾಂಸ್ಕೃತಿಕ ರಾಜಕಾರಣದ ಹೊಸದೊಂದು ಆಯಾಮವೂ ಸೇರಿಕೊಳ್ಳುತ್ತದೆ. ಆದರೆ, ಈ ಪ್ರಶ್ನೆಯ ವ್ಯಾಪ್ತಿ-ವಿಸ್ತಾರಗಳೇನೇ ಇರಲಿ, ಒಂದನ್ನಂತೂ ನಾವು ಗಮನಿಸಬಹುದು- ಕಡೆಗೂ ಸ್ವತಃ ಅವಮಾನವನ್ನು ಅನುಭವಿಸುತ್ತಿದ್ದಾನೆಂದು ಹೇಳಲಾಗುವಾತನೇ ತನಗೆ ಅವಮಾನವಾಗುತ್ತಿದೆ ಎಂಬುದನ್ನು ಒಪ್ಪಿಕೊಳ್ಳದೆಹೋದರೆ, ಅದನ್ನು ಅವಮಾನ ಎಂದು ಕರೆಯುವುದು ಕಷ್ಟವೇ ಸರಿ.ಹಾಗಂತ, ಇದನ್ನೆಲ್ಲ ನೋಡುವವನಿಗೆ ಇದೊಂದು ಅವಮಾನಕರ ಘಟನೆಯೆಂದು ನಿಜವಾಗಿಯೂ ಅನ್ನಿಸಿದ್ದೇ ಆದರೆ, ಆಗ ಆ ‘ಅವಮಾನಿತ’ನೊಂದಿಗೆ ಈ ಬಾಗಿಲಿನಲ್ಲಿ ನಿಂತವ ಚರ್ಚೆ ಮಾಡಿ, ಅವನಿಗೆ ‘ತಿಳಿವಳಿಕೆ’ ಕೊಡಬಹುದು; ಆತನಿಗೆ ಅವಮಾನವಾಗುತ್ತಿದೆ ಎಂಬುದನ್ನು ಆತನಿಗೇ ಮನವರಿಕೆ ಮಾಡಲು ಪ್ರಯತ್ನಿಸಬಹುದು; ಅದೆಲ್ಲಕ್ಕೂ ಈ ನೋಡುಗನಿಗೆ ಸ್ವಾತಂತ್ರ್ಯ ಇದೆ. ಆದರೆ ಅದರ ಜತೆಗೇ, ಆತ್ಯಂತಿಕವಾಗಿ ತನಗೆ ಅವಮಾನ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ತೀರ್ಮಾನಿಸುವಾತ ಸ್ವತಃ ಆ ಅವಮಾನಿತನೇ ಆಗಿರಬೇಕೆ ಹೊರತು, ಆತನ ಪರವಾಗಿ ಇನ್ನೊಬ್ಬರು ‘ಅವನಿಗೆ ಅವಮಾನವಾಗುತ್ತಿದೆ’ ಎಂದು ತೀರ್ಮಾನಿಸಲಾಗದು.ಇದನ್ನೇ ಬೇರೆ ರೀತಿಯಿಂದ ಹೇಳುವುದಾದರೆ, ಅವಮಾನ ಎಂದರೇನು ಎಂಬ ಪ್ರಶ್ನೆಯನ್ನು ಪ್ರತಿಯೊಂದು ಕಾಲದೇಶಗಳ ಸಂಸ್ಕೃತಿಯೂ ತನಗೆ ತಾನೇ ನಿರ್ವಚಿಸಿ ವಿವರಿಸಿಕೊಳ್ಳಬೇಕು. ಅದಕ್ಕೆ ಬೇಕಿದ್ದರೆ ಬೇರೆ ಸಂಸ್ಕೃತಿಗಳ ಅವಮಾನ ಕುರಿತ ಪರಿಕಲ್ಪನೆಗಳ ಸಹಾಯ ಪಡೆಯುವುದು ತಪ್ಪಲ್ಲವಾದರೂ ಇನ್ನೊಂದು ಸಂಸ್ಕೃತಿಯ ಮಾನ-ಅವಮಾನಗಳ ನಿರ್ವಚನೆಯನ್ನು ನಾವು ಸಾರಾಸಗಟಾಗಿ ಎರವಲು ಪಡೆದರೆ, ಅದರಿಂದ ಅಪಾರ್ಥಗಳೇ ಹುಟ್ಟುತ್ತವೆ. ಅಂಥ ಸಂದರ್ಭಗಳಲ್ಲಿಯೇ ಯಾವುದು ಸಹಜ ಮತ್ತು ಯಾವುದು ಅವಮಾನ ಎಂಬುದು ನಮಗೇ ಗೊತ್ತಾಗದೆಹೋಗುತ್ತದೆ- ಇದು ನಾನು ಉಲ್ಲೇಖಿಸಿರುವ ಎರಡು ವರದಿಗಳಲ್ಲಾಗಿರುವ ಸಮಸ್ಯೆ.ಆದ್ದರಿಂದ, ಈ ಹರಕೆ ಮತ್ತು ಹರಾಜುಗಳಲ್ಲಿ ಯಾವುದು ಸಹಜ ಮತ್ತು ಯಾವುದು ಅವಮಾನ ಎಂಬುದನ್ನು ಈ ಕೂಡಲೇ ಖಡಾಖಂಡಿತವಾಗಿ ತೀರ್ಮಾನಿಸುವ ತರಾತುರಿಯಿಂದ ನಾನು ಈ ಟಿಪ್ಪಣಿ ಬರೆದಿಲ್ಲ; ಅಥವಾ ಇವುಗಳಲ್ಲಿ ಯಾವುದೇ ಒಂದರ ಪರವಾಗಿ ವಕಾಲತ್ತು ಮಾಡುವುದೂ ನನ್ನ ಉದ್ದೇಶವಲ್ಲ. ಬದಲು, ನಮ್ಮ ಕಾಲದೇಶ ಸಂದರ್ಭಕ್ಕೆ ನಮ್ಮದೇ ಸ್ವಂತ ಮಾನಾವಮಾನಗಳ ಪರಿಕಲ್ಪನೆಯೇ ಇನ್ನೂ ಹುಟ್ಟಿಲ್ಲವೇನೋ ಎಂಬ ಅನುಮಾನದಿಂದ ಈ ಬರಹಕ್ಕೆ ತೊಡಗಿದ್ದೇನೆ. ಅದೇನಾದರೂ ನಿಜವಾಗಿದ್ದರೆ, ನಮ್ಮ ಸಮಾಜಕ್ಕೆ ಅದಕ್ಕಿಂತ ದೊಡ್ಡ ಅವಮಾನ ಇನ್ನೊಂದಿಲ್ಲ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.