ಭಾನುವಾರ, ಮೇ 16, 2021
21 °C

ಹರಟೆ ಬಿಡಿ: ಶಾಲೆ ಕಡೆ ಗಮನ ಕೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಮುಖ್ಯ ಶಿಕ್ಷಕರು ಒಣ ಹರಟೆ, ರಾಜಕೀಯ ಮಾಡುವುದನ್ನು ಬಿಟ್ಟು ಶಾಲೆ, ಮಕ್ಕಳ ಶಿಕ್ಷಣದ ಕಡೆಗೆ ಗಮನ ಕೊಡಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರಣ್ಣ ತುರಮರಿ ಸಲಹೆ ನೀಡಿದರು.



ಸ್ಥಳೀಯ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಸೋಮವಾರ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮುಖ್ಯ ಶಿಕ್ಷಕರಿಗೆ ಏರ್ಪಡಿಸಿದ್ದ ಆಡಳಿತಾತ್ಮಕ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.



ಶಾಲೆ ಸಮಯದಲ್ಲಿ ಬೇರೆಯವರ ಸಂಸಾರದ ವಿಚಾರಗಳನ್ನು ಹಾಗೂ ಬೇರೆ ಬೇರೆ ವಿಷಯಗಳ ಬಗ್ಗೆ ಮಾತನಾಡುತ್ತ ಕಾಲಹರಣ ಮಾಡದೆ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸಬೇಕು. ಅವರ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕು. ವೃತ್ತಿಯಲ್ಲಿ ನಿಷ್ಠೆ, ಪ್ರಾಮಾಣಿಕತೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.



ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಶಿಸ್ತಿನ ಸಿಪಾಯಿಯಂತೆ ಕಾರ್ಯನಿರ್ವಹಿಸಬೇಕು. ಮಕ್ಕಳಲ್ಲಿ ಉತ್ತಮ ಶಿಕ್ಷಣ ನೀಡುವ ಜವಬ್ದಾರಿಯನ್ನು ಜಾಗೂರಕತೆಯಿಂದ ನಿರ್ವಹಿಸಬೇಕು. ಸಹದ್ಯೋಗಿ ಶಿಕ್ಷಕರ ಜೊತೆಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು ಎಂದರು.



ಮಕ್ಕಳಿಗೆ ನೀಡುವ ಶಿಕ್ಷಣದಿಂದ ಸಮಾಜ ಪರಿವರ್ತನೆಗೊಳುತ್ತದೆ. ಈ ಹಿನ್ನಲೆಯಲ್ಲಿ ಮುಖ್ಯ ಶಿಕ್ಷಕರು ಉತ್ತಮ ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ದೇಶದ ಬಡತನ ಪರಿಸ್ಥಿತಿ ನಿರ್ಮೂಲನೆ ಆಗಬೇಕಾದರೆ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.



ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ಮುಖ್ಯ ಶಿಕ್ಷಕರ ವಿವಿಧ ಬೇಡಿಕೆ ಹಾಗೂ ಸಮಸ್ಯೆಗಳನ್ನು ಬಗೆ ಹರಿಸಲು ಸಂಘಟನೆ ಮೂಲಕ ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸಲಾಗಿದೆ.



ಅವರಿಗೆ 6 ನೇ ವೇತನ ಆಯೋಗ ಜಾರಿ ಮಾಡಬೇಕು. ಮಧ್ಯಂತರ ಪರಿಹಾರ ನೀಡಬೇಕು. ಅವರಿಗೆ ಪ್ರತ್ಯೇಕ ವೇತನ ಸೇರಿದಂತೆ ಇತರ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅವುಗಳನ್ನು ಸರ್ಕಾರ ಈಡೇರಿಸಲು ಕ್ರಮ ಕೈಗೊಳ್ಳಬೇಕು. ವಿಳಂಬವಾದಲ್ಲಿ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು ಎಂದು ಅವರು ಹೇಳಿದರು.



ಡಯಟ್ ಪ್ರಾಚಾರ್ಯ ಅಬ್ದುಲ್ ಅಜೀಮ್, ಡಾ. ಬಸವರಾಜ ಧಾರವಾಡ ಮಾತನಾಡಿದರು. ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮನಾಥ ಗರಗ, ಎಸ್.ಎನ್. ಬಳ್ಳಾರಿ, ಜಿ.ಎಲ್. ಬಾರಾಟಕ್ಕೆ, ಯುವರಾಜ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಐ.ಬಿ. ಬೆನಕೊಪ್ಪ, ಎಸ್.ಎಸ್. ಗುಡ್ಲಾನೂರ, ಕೆ.ವಿ. ಪಾಟೀಲ, ಎಂ.ಎ. ರಡ್ಡೇರ, ವಿ.ಎಂ. ಹಿರೇಮಠ, ಎಸ್.ಎಸ್. ಬಾರಡ್ಡಿ, ಎಸ್.ಎಂ. ನಧಾಫ್, ಎ.ವೈ. ಹಲಗತ್ತಿ, ಬಿ.ಎಸ್. ಹರ್ಲಾಪುರ, ಎ.ಡಿ. ಕುಲಕರ್ಣಿ ಮತ್ತಿತರರು ಹಾಜರಿದ್ದರು.



ಎಸ್.ಎಸ್. ಗೌಡರ ಪ್ರಾರ್ಥಿಸಿದರು. ಸಂಘದ ಶಹರ ಘಟಕ ಅಧ್ಯಕ್ಷ ಬಿ.ಎಫ್. ಪೂಜಾರ ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ನಿರೂಪಿಸಿದರು. ವಿ.ಎಂ. ಹಿರೇಮಠ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.