ಸೋಮವಾರ, ಮಾರ್ಚ್ 1, 2021
23 °C

ಹರಳುಗಳ ನೆರಳು ಬೆನ್ನತ್ತಿ

ಸುರೇಖಾ ಹೆಗಡೆ Updated:

ಅಕ್ಷರ ಗಾತ್ರ : | |

ಹರಳುಗಳ ನೆರಳು ಬೆನ್ನತ್ತಿ

ಫಳ ಫಳ ಹೊಳೆಯವ, ಕಣ್ಣು ಕೋರೈಸುವ ಬಣ್ಣಗಳ ಹರಳುಗಳಿಗೆ ಮಾರುಹೋಗಿ ವಿನ್ಯಾಸ ಕ್ಷೇತ್ರವನ್ನು ಅಪ್ಪಿಕೊಂಡವರು ಭಾರತಿ ರವಿಪ್ರಕಾಶ್‌. ಇತ್ತೀಚೆಗೆ ನಫೀಸ್‌ ಫಜಲ್‌ ಅವರ ಜ್ಯುವೆಲ್ಲರಿ ಸ್ಟುಡಿಯೊದಲ್ಲಿ ಅತಿಥಿ ವಿನ್ಯಾಸಕಿಯಾಗಿ ಅವರು ಭಾಗವಹಿಸಿದ್ದರು.

ವಿದೇಶಿ ವಿನಿಮಯಕ್ಕೆ ಸಂಬಂಧಿಸಿದಂತೆ ಮಹಿಳಾ ಉದ್ಯಮಿಯಾಗಿ ತೊಡಗಿಸಿಕೊಂಡಿದ್ದ ಅವರಿಗೆ ಆಭರಣಗಳ ಸೆಳೆತ ಇದೇ ಉದ್ಯೋಗದಲ್ಲಿ ಬೇರೂರುವಂತೆ ಮಾಡಿತು. ಇದೇ ಪ್ರೀತಿಯ ಸೆಳೆತದಿಂದಲೇ ಅವರು ಲಂಡನ್‌ನ ಜೆಮಾಲಜಿಕಲ್‌ ಸಂಸ್ಥೆಯಲ್ಲಿ (ಜಿಐಎ) ಪದವಿಯನ್ನೂ ಪಡೆದಿದ್ದಾರೆ. ‘ಮಾಡುತ್ತಿದ್ದ ಉದ್ಯಮದಿಂದ ಬಂದ ಹಣವನ್ನೆಲ್ಲಾ ಆಭರಣಗಳಿಗಾಗಿಯೇ ವ್ಯಯಿಸುತ್ತಿದ್ದೆ.ಹೀಗಾಗಿ ಆಭರಣ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗವನ್ನೇ ಮಾಡು ಎಂದು ಪತಿ ಸಲಹೆ ನೀಡಿದರು’ ಎಂದು ನಗುವ ಅವರು, ಕಳೆದ 12 ವರ್ಷ ಇದೇ ಕ್ಷೇತ್ರದಲ್ಲಿದ್ದಾರೆ. ಪ್ರಪಂಚದ ನಾನಾ ಕಡೆಗಳಿಂದ ದುಬಾರಿ ಹರಳುಗಳನ್ನು ತರಿಸಿ ಅವುಗಳಿಂದ ಆಭರಣ ವಿನ್ಯಾಸ ಮಾಡುತ್ತಾರೆ ಭಾರತಿ.ಸಮಕಾಲೀನ ಹಾಗೂ ಸಾಂಪ್ರದಾಯಿಕ ಎರಡೂ ಬಗೆಯ ಆಭರಣಗಳನ್ನು ತಯಾರಿಸುವ ಅವರಿಗೆ ಸಮಕಾಲೀನ ಆಭರಣಗಳಿಗೆ ರಂಗು ನೀಡುವುದು ಹೆಚ್ಚು ಇಷ್ಟವಾಗುತ್ತದೆ. ‘ವಿವಿಧ ಬಗೆಯ ಹರಳುಗಳ ಬಗ್ಗೆ ನನಗೆ ಮೊದಲಿನಿಂದಲೂ ಆಕರ್ಷಣೆ. ಅವುಗಳ ಬಣ್ಣ, ವಿನ್ಯಾಸ ಏನಾದರೂ ಮಾಡಬೇಕು ಎಂಬ ಆಸೆಯನ್ನು ಹುಟ್ಟುಹಾಕುತ್ತಿತ್ತು. ಹೀಗಾಗಿ ಇದೇ ಕ್ಷೇತ್ರವನ್ನು ವೃತ್ತಿಯಾಗಿಸಿಕೊಂಡೆ. ವಿನ್ಯಾಸ ಮಾಡುವಾಗ ನನಗೆ ಬಣ್ಣ ಮುಖ್ಯವಾಗುವುದೇ ಇಲ್ಲ. ಹರಳುಗಳ ಸೌಂದರ್ಯಕ್ಕನುಗುಣವಾಗಿ ಆಭರಣಗಳ ವಿನ್ಯಾಸ ಮೂಡುತ್ತದೆ’ ಎನ್ನುತ್ತಾರೆ ಅವರು.ಪ್ರಕೃತಿ ಹಾಗೂ ರಜಾದಿನಗಳು ವಿಭಿನ್ನ ವಿನ್ಯಾಸ ರಚನೆಗೆ ಸ್ಫೂರ್ತಿ ನೀಡುತ್ತವಂತೆ. ‘ವರ್ಷದಲ್ಲಿ ಮೂರು ಬಾರಿ ಊಟಿ, ಪ್ಯಾರಿಸ್‌, ಸ್ವಿಟ್ಜರ್ಲೆಂಡ್‌ ಹೀಗೆ ದೇಶದ ವಿವಿಧ ಭಾಗಗಳಿಗೆ ಓಡಾಡುತ್ತೇನೆ. ಬೇರೆ ಬೇರೆ ಪ್ರದೇಶಗಳಲ್ಲಿ ಸುತ್ತಾಡುತ್ತೇನೆ. ಸ್ಕೈ ಡೈವಿಂಗ್‌ ನನ್ನ ಇಷ್ಟದ ಹವ್ಯಾಸವೂ ಹೌದು. ಈ ಎಲ್ಲಾ ಅನುಭವಗಳು ನನ್ನಲ್ಲಿ ಹೊಸ ಚಿಂತನೆ, ಹೊಸ ವಿನ್ಯಾಸಗಳನ್ನು ಮಾಡುವಂತೆ ಪ್ರೇರೇಪಿಸುತ್ತವೆ.ಹೀಗಾಗಿ ಪ್ರತಿಬಾರಿಯೂ ವಿಭಿನ್ನ ವಿನ್ಯಾಸ ಮಾಡುವುದು ನನಗೆ ಕಷ್ಟವೇ ಅಲ್ಲ. ನಾನು ಮಾಡಿದ ಕಸಬರಕೆ ಕಿವಿಯೋಲೆ ವಿನ್ಯಾಸಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿತ್ತು’ ಎಂದು ವಿನ್ಯಾಸ ಪರಿಕಲ್ಪನೆಗಳ ಹುಟ್ಟಿನ ಬಗ್ಗೆ ಹೇಳುತ್ತಾರೆ ಭಾರತಿ.ಚೆನ್ನೈ ಮೂಲದವರಾದ ಭಾರತಿ ಅಲ್ಲಿ ತಮ್ಮದೇ ಆದ ತಾರಾ ಸ್ಟುಡಿಯೊ ಹೊಂದಿದ್ದಾರೆ. ಆಭರಣಗಳನ್ನು ವಿನ್ಯಾಸ ಮಾಡುವ ಅವರು ಹರಳುಗಳನ್ನು ಕತ್ತರಿಸಲು ಬೇರೆ ಕಂಪೆನಿಯೊಂದನ್ನು ಅವಲಂಬಿಸಿದ್ದಾರೆ. ಪ್ರಪಂಚದ ನಾನಾ ಭಾಗಗಳಲ್ಲಿ ಹಾಗೂ ಭಾರತದ ಹಲವೆಡೆ ನಿರಂತರ ಪ್ರದರ್ಶನಗಳಲ್ಲಿ ಭಾಗವಹಿಸುವ ಅವರು ಈಗಾಗಲೇ ಸಿಂಗಪುರ, ಲಂಡನ್‌, ನ್ಯೂಯಾರ್ಕ್‌, ವಾಷಿಂಗ್‌ಟನ್‌ ಮೊದಲೆಡೆ ಗ್ರಾಹಕರನ್ನು ಹೊಂದಿದ್ದಾರೆ.ಅತ್ಯುತ್ತಮವಾದ ಹರಳುಗಳ ಪ್ರದರ್ಶನ ಎಲ್ಲಿಯೇ ಇದ್ದರೂ ಅಲ್ಲಿಗೆ ತೆರಳಿ ಅವುಗಳನ್ನು ಖರೀದಿಸುತ್ತಾರೆ. ಸ್ಟೋನ್‌ ಮೈನಿಂಗ್‌ ಹಾಗೂ ಕಟ್ಟಿಂಗ್‌ ಕೇಂದ್ರಗಳಾಗಿ ಗುರುತಿಸಿಕೊಂಡಿರುವ ಬ್ಯಾಂಕಾಕ್‌, ಶ್ರೀಲಂಕಾ ಹಾಗೂ ಬರ್ಮಾಗಳಿಂದಲೂ ಅವರು ಹರಳುಗಳನ್ನು ಆಮದು ಮಾಡಿಕೊಳ್ಳುತ್ತಾರೆ.ತುಸು ದೊಡ್ಡದೆನಿಸುವ ಆಭರಣಗಳನ್ನೇ ಅವರು ಹೆಚ್ಚಾಗಿ ತಯಾರಿಸುತ್ತಾರೆ. ಅವರು ಮಾಡುವ ವಿನ್ಯಾಸದ ಆಭರಣಗಳು ಸಾಂಪ್ರದಾಯಿಕ ಇಲ್ಲವೇ ಪಾಶ್ಚಾತ್ಯ ಇಲ್ಲವೇ ಪಾರ್ಟಿ ವೇರ್‌ ದಿರಿಸುಗಳಲ್ಲಿಯೂ ಬಳಸಬಹುದಾಗಿದೆ. ಆದರೆ ಯಾವುದೇ ದಿರಿಸಿರಲಿ ಆಕರ್ಷಕ ಎನಿಸುವ ಒಂದೇ ಆಭರಣ ತೊಟ್ಟರೆ ಸಾಕು ಎನ್ನುವುದು ಅವರ ಫ್ಯಾಷನ್‌ ಮಂತ್ರ. ಅಂದರೆ ಕಿವಿಯೋಲೆ/ನೆಕ್‌ಲೆಸ್‌/ ಬಳೆ/ಬ್ರೇಸ್‌ಲೆಟ್‌ ಯಾವುದಾದರೂ ಒಂದು ಆಭರಣ ಮಾತ್ರ ಎದ್ದು ಕಾಣುವಂತೆ ಧರಿಸಬೇಕು.‘ಕಾಲಕಾಲಕ್ಕೆ ಫ್ಯಾಷನ್‌ ಟ್ರೆಂಡ್‌ ಬದಲಾಗುತ್ತಲೇ ಇದೆ. ಇತ್ತೀಚಿನ ಮಹಿಳೆಯರು ಸಾಂಪ್ರದಾಯಿಕ, ಸಮಕಾಲೀನ ಎರಡು ಬಗೆಯ ಆಭರಣಗಳನ್ನು ಧರಿಸಲು ಇಷ್ಟಪಡುತ್ತಾರೆ. ಆಯಾ ಸಂದರ್ಭಕ್ಕೆ ಅನುಗುಣವಾಗಿ ಆಯ್ಕೆಯಲ್ಲೂ ಜಾಣ್ಮೆ ತೋರುತ್ತಿದ್ದಾರೆ. ಇಂದಿನ ಮಹಿಳೆಯರು ದೊಡ್ಡ ದೊಡ್ಡ ಆಭರಣಗಳನ್ನು ಧರಿಸಲು ಹಿಂಜರಿಯದ ಕಾಲವಿದು.ನಮ್ಮ ವ್ಯಕ್ತಿತ್ವ ಏನು ಎನ್ನುವುದರ ಮೇಲೆ ನಮ್ಮ ಆಭರಣಗಳು ಇರಬೇಕು ಎಂದು ಬಯಸುತ್ತಾರೆ’  ಎಂದು ಮಾಹಿತಿ ನೀಡುವ ಭಾರತಿ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಆಭರಣಗಳ ವಿನ್ಯಾಸ ಮಾಡಿ ಕೊಡುತ್ತಾರೆ. ₹50 ಸಾವಿರದಿಂದ ₹15ಲಕ್ಷಕ್ಕೂ ದುಬಾರಿ ಬೆಲೆಯ ಆಭರಣಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಮಾಹಿತಿಗೆ: www.studiotara.com

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.