ಬುಧವಾರ, ಮೇ 12, 2021
24 °C

ಹರ್ಷೋದ್ಘಾರದ ಮಧ್ಯೆ ಗ್ರಾಮದೇವಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಳ್ನಾವರ: ಪಟ್ಟಣದ ಗ್ರಾಮದೇವಿಯರಾದ ಶ್ರೀ ಲಕ್ಷ್ಮಿ ಹಾಗೂ ಶ್ರೀ ದುರ್ಗಾದೇವಿಯರ ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ರಥೋತ್ಸವ ಶುಕ್ರವಾರ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರಿದ  ಭಕ್ತರ ಹರ್ಷೋದ್ಘಾರದ ನಡುವೆ ನಡೆಯಿತು.ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ತೇರಿಗೆ ಪೂಜೆ ಮಾಡುವ ಮುನ್ನ ರಥೋತ್ಸವದ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ಆದಿಶಕ್ತಿ ದೇವಿಯರ ಆರಾಧನೆಯಿಂದ ಸಮಾಜದಲ್ಲಿ ಏಕತೆ, ಸುಖ, ಶಾಂತಿ ಸಮೃದ್ಧಿ ಲಭಿಸಲಿ ಎಂದು ಶುಭ ಹಾರೈಸಿದರು.ವರ್ಣಮಯವಾದ ರಥವನ್ನು ಎಳೆಯಲು ಲಕ್ಷಾಂತರ ಭಕ್ತರು ಆಗಮಿಸಿದ್ದರು. ತೇರು ಎಳೆಯುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲ ಮುಟ್ಟಿತ್ತು. ಪಟಾಕಿಗಳ ಆರ್ಭಟ ಗಮನ ಸೆಳೆಯಿತು. ಭಕ್ತರು ತೇರಿಗೆ ಬಾಳೆ ಹಣ್ಣು, ಉತ್ತತ್ತಿ ಎಸೆದು ಭಕ್ತಿ ಅರ್ಪಿಸಿದರು. ತೇರಿನ ತುದಿಯ ಮೇಲೆ ಇಟ್ಟ ನವಿಲು ಆಕರ್ಷಣೀಯವಾಗಿತ್ತು.ತೇರು ಸರಿಯಾಗಿ ಒಂದು ಗಂಟೆಗೆ ಆರಂಭವಾದಾಗ ತುಸು ಸಂಖ್ಯೆಯಲ್ಲಿ ಜನರು ಇದ್ದರು. ನಂತರ ಜನಸಾಗರವೇ ಹರಿದು ಬಂತು. ಎಲ್ಲರೂ ಲಗುಬಗೆಯಿಂದ ತೇರು ಎಳೆಯಲು ಆಗಮಿಸುತ್ತಿದ್ದರು. ತೇರು ಎಲ್ಲಿ ಬಂದಿದೆ? ಯಾವಾಗ ಚಾಲು ಆಯಿತು ಎಂದು ಜನ ಕೇಳುತ್ತಾ ರಥೋತ್ಸವದ ಸಡಗರ ಸವಿಯಲು ದೌಡಾಯಿಸುತ್ತಿದ್ದರು.ಹರಿದು ಬಂದ ಜನಸಾಗರ: ಬಹು ವರ್ಷದ ನಂತರ ನಡೆದ ಈ ಐತಿಹಾಸಿಕ ಗ್ರಾಮದೇವಿ ಜಾತ್ರೆಗೆ ಜನ ಸಾಗರವೇ ಹರಿದು ಬಂತು ಎಲ್ಲಿ ನೋಡಿದರಲ್ಲಿ ಜನ ಕಾಣುತ್ತಿದ್ದರು. ಪ್ರತಿಯೊಂದು ಮನೆ ಮನೆ ಎದುರು ರಂಗೋಲಿಯ ಚಿತ್ತಾರ ಬಿಡಿಸಿದ್ದು, ಎಲ್ಲರನ್ನು ಕೈ ಮಾಡಿ ಕರೆಯುವಂತಿತ್ತು. ಬಿಸಿಲಿನ ಬೇಗೆಯನ್ನು ಲೆಕ್ಕಿಸದೇ ತೇರಿನ ಗುಂಟ ಸಾಗುತ್ತಾ ಸಂಭ್ರಮ ಪಟ್ಟರು.ಮೆರವಣಿಗೆಯಲ್ಲಿ ಜೋಗತಿಯರು, ವೃದ್ಧರು, ಯುವಕರು ಭಾಗವಹಿಸಿದ್ದರು. ಅನೇಕ ಯುವಕರು ಪಿರಾಮಿಡ್ ಮಾಡಿ ಸಂಭ್ರಮಿಸಿದರು. ಡೊಳ್ಳು ಕುಣಿತ, ಕರಡಿ ಮಜಲು ಮುಂತಾದ ಗ್ರಾಮೀಣ ಸೊಗಡಿನ ವಾದ್ಯಗಳು ಮೆರಗು ತಂದಿದ್ದವು.ಜಾತ್ರೆಯಲ್ಲಿ ಲಕ್ಷಕ್ಕೂ ಮಿಕ್ಕಿ ಭಕ್ತರು ಭಾಗವಹಿಸಿದ್ದರು. ತೇರು ಸುಮಾರು ನಾಲ್ಕು ತಾಸು ಎಳೆದು ನಂತರ ಎಪಿಎಂಸಿ ಹತ್ತಿರ ಹಾಕಿದ ಸುಂದರ ವೇದಿಕೆಯಲ್ಲಿ ಪಾದಗಟ್ಟೆ ಮೇಲೆ ದೇವಿಯರನ್ನು ಪ್ರತಿಷ್ಠಾಪಿಸಲಾಗಿದ್ದು, ಇದೇ 11ರ ವರೆಗೆ ಭಕ್ತರಿಗೆ ಉಡಿ ತುಂಬಲು ಅನುಕೂಲ ಮಾಡಿಕೊಡಲಾಗಿದೆ.ಧರ್ಮದರ್ಶಿ ಬಿ.ಎ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ಮುಕ್ತಿಮಠದ ಶಿವಾಚಾರ್ಯ ಸ್ವಾಮೀಜಿ, ಕಾದ್ರೋಳ್ಳಿಯ ಗುರುಪುತ್ರ ಸ್ವಾಮೀಜಿ, ಕುಂಬಾರಡಾದ ಸಿದ್ಧನಾಥ ಮಹಾರಾಜರು, ಮಾಜಿ ಶಾಸಕರಾದ ವಿನಯ ಕುಲಕರ್ಣಿ, ಶಿವಾನಂದ ಅಂಬಡಗಟ್ಟಿ, ಪ.ಪಂ.ಅಧ್ಯಕ್ಷೆ ಪ್ರಭಾವತಿ ರೈ, ಮೌಲಾನ ತೋಲಗಿ, ಮುಜಾಹಿದ್ ಕಾಂಟ್ರ್ಯಾಕ್ಟರ್, ಛಗನಲಾಲ ಪಟೇಲ, ಸಿಪಿಐ ರಾಮನಗೌಡ ಹಟ್ಟಿ, ಎಸ್.ಬಿ. ಪಾಟೀಲ, ಪ್ರಭಾಕರ ಪಾಟೀಲ ಮುಂತಾದವರು ಹಾಜರಿದ್ದರು.ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ

ಅಳ್ನಾವರ: ಶ್ರೀ ಲಕ್ಷ್ಮಿ ಹಾಗೂ ಶ್ರೀ ದುರ್ಗಾದೇವಿಯರ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ಹೆಲಿಕಾಪ್ಟರ್ ಮೇಲಿನಿಂದ ಪುಷ್ಪವೃಷ್ಟಿ ಮಾಡಲಾಯಿತು.ತೇರು  ಸ್ವಲ್ಪ ದೂರ ಕ್ರಮಿಸಿದ ನಂತರ ಬಂದ ಹೆಲಿಕಾಪ್ಟರ್ ಒಂದು ಸುತ್ತು ಹಾಕಿ ಆಕಾಶದಿಂದ ಪುಷ್ಟ ವೃಷ್ಟಿಯಾಗುತ್ತಿದ್ದಂತೆ ಭಕ್ತರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಇಂತಹ ಅದ್ಭುತವನ್ನು ತಮ್ಮ ಜೀವಮಾನದಲ್ಲಿ ಎಂದು ನೋಡಿಲ್ಲ. ಹಿಂದಿನ ಜಾತ್ರೆಗಳಿಗಿಂತ ಈ ಜಾತ್ರೆ ವಿಶಿಷ್ಟ. ಸಡಗರ ನೋಡಲು ಎರಡು ಕಣ್ಣು ಸಾಲದು ಎಂದು ಕಾಶೇನಟ್ಟಿಯ 80 ವರ್ಷದ ವೃದ್ಧೆ ಕಾಶವ್ವ ಪಾಶೇಟ್ಟಿ ಹೇಳಿದರು. ಧಾರವಾಡ ತಾಲ್ಲೂಕಿನ ಹಳ್ಳಿಗೇರಿಯಿಂದ 120 ಕೆ.ಜಿ. ಚೆಂಡು ಹೂ ತರಿಸಿ ತೇರಿನ ಮೇಲೆ ಹಾಕಲಾಯಿತು. ಶಾಸಕ ಸಂತೋಷ ಲಾಡ್ ಹೆಲಿಕಾಪ್ಟರ್ ನೀಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.