ಭಾನುವಾರ, ಜನವರಿ 19, 2020
27 °C

ಹಲಸಿನ ತೊಳೆ ಸಹಕಾರಿ ಬೆಳೆ

ಪ.ರಾಮಕೃಷ್ಣ ಶಾಸ್ತ್ರಿ Updated:

ಅಕ್ಷರ ಗಾತ್ರ : | |

ನಿಮಗೆ ಹಲಸು ಕೃಷಿಯ ವೈಭವ ನೋಡಬೇಕೇ? ಹಾಗಾದರೆ ದೊಡ್ಡಬಳ್ಳಾಪುರದ ತೂಬುಗೆರೆ ಹೋಬಳಿಗೆ ಹೋಗಬೇಕು. ಅಲ್ಲಿ ಎಲ್ಲಿ ನೋಡಿದರೂ ಹಲಸಿನ ಮರಗಳೇ ಕಾಣಿಸುತ್ತವೆ. ರೈತರು ಹೊಲದ ಬದುವಿನಲ್ಲಿಯೂ ಅದನ್ನೇ ಬೆಳೆಸಿದ್ದಾರೆ. ಬಿಳಿ, ಹಳದಿ, ಕೆಂಪು ಬಣ್ಣದ ತೊಳೆಗಳಿರುವ ಇಲ್ಲಿಯ ಹಣ್ಣು ರಾಜ್ಯದಲ್ಲೇ ಸಿಹಿ ಮತ್ತು ರುಚಿಗೆ ಹೆಸರಾಗಿದೆ. ಚಂದ್ರ, ಅರ್ಧಚಂದ್ರ ಮೊದಲಾದ ಹೆಸರುಗಳಿಂದಲೂ ಖ್ಯಾತವಾಗಿವೆ.ಒಂಬತ್ತು ತಲೆಮಾರು ಹಿಂದಿನ ಅಂದರೆ ಸುಮಾರು ಮೂರೂವರೆ ಶತಮಾನಗಳಷ್ಟು ಹಿಂದಿನದು ಎನ್ನಲಾಗುವ ಕಾಡುಸಿಂಗನ ಹಲಸಿನ ಮರ ಇರುವುದು ಇಲ್ಲಿಯೇ. ಅದರ ಹಣ್ಣು ಸ್ವಾದಿಷ್ಟ. ಅಷ್ಟೇ ಅಲ್ಲ ಎಳೆ ಹಲಸಿಗೂ ಪ್ರತ್ಯೇಕ ರುಚಿಯಿದೆ. ನಾಲ್ಕು ಮಂದಿಯ ತೆಕ್ಕೆಗೆ ಸಿಗದಷ್ಟು ದಪ್ಪವಿರುವ ಈ ಮರ ಪ್ರತಿ ವರ್ಷ ನೂರಾರು ಹಣ್ಣು ಬಿಡುತ್ತದೆ.ನಾಡಿನೆಲ್ಲೆಡೆ ರುಚಿಯಲ್ಲಿ ಖ್ಯಾತಿ ಪಡೆದ ಮೂರು ಸಾವಿರಕ್ಕೂ ಹೆಚ್ಚು ಹಲಸು ಬೆಳೆಗಾರರು ಇಲ್ಲಿದ್ದಾರೆ. ಆದರೆ ಇವರ‌್ಯಾರೂ ಇತ್ತೀಚಿನ ವರೆಗೆ ಧಾರಾಳ ಹಣದ ಮುಖ ಕಂಡವರಲ್ಲ. ದಲ್ಲಾಳಿಗಳು ಬಂದು ಲಾರಿಗಳಲ್ಲಿ ಲೋಡುಗಟ್ಟಲೆ ಹಲಸಿನಕಾಯಿ ಹೇರಿಕೊಂಡು ಹೋಗುತ್ತಿದ್ದರು. ಆದರೆ ಪ್ರತಿಫಲವೆಂದು ರೈತರಿಗೆ ಕವಡೆಯೂ ಸಿಗುತ್ತಿರಲಿಲ್ಲ. ಅನೇಕ ವರ್ಷಗಳಿಂದ ಈ ಪದ್ಧತಿ ನಡೆಯುತ್ತ ಬಂದಿತ್ತು. ರೈತರಿಗಂತೂ ಹಲಸಿನ ಬೆಲೆ ಗೊತ್ತಿರಲಿಲ್ಲ.ಒಂದು ಸಲ ತೂಬುಗೆರೆಯ ಕೆಲ ರೈತರು ಕಾರ್ಯ ನಿಮಿತ್ತ ಬೆಂಗಳೂರಿನ ಯಶವಂತಪುರ ಮಾರ್ಕೆಟ್‌ಗೆ ಹೋದಾಗ ಅಲ್ಲಿ ಒಂದು ತೊಳೆಗೆ ವ್ಯಾಪಾರಿಗಳು ಐದು ರೂಪಾಯಿ ಬೆಲೆ ಪಡೆಯುತ್ತಿದ್ದರು. `ತೊಳೆಗೆ ಐದು ರೂಪಾಯಿಯೇ?~ ಎಂದು ಅಚ್ಚರಿಪಟ್ಟಾಗ, `ಇದು ತೂಬುಗೆರೆ ಹಲಸು ಕಣ್ರೀ. ಇದಕ್ಕೆ ಚಿನ್ನದ ಬೆಲೆ. ಇದಕ್ಕಿಂತ ರುಚಿಯ ಹಣ್ಣು ಇದ್ರೆ ತಂದುಕೊಡಿ~ ಎಂದರಂತೆ.ಹೀಗೆ ತಮ್ಮ ಬೆಳೆಯ ಬೆಲೆ ತಿಳಿದುಕೊಂಡ ರೈತರು ಆ ಸಲ ಹಲಸಿಗೆ ಹೆಚ್ಚು ಹಣ ಕೇಳಿದರೆ ದಲ್ಲಾಳಿಗಳು `ಆಗೊಲ್ಲ~ ಎಂದು ಕೈಯಾಡಿಸಿಬಿಟ್ಟರು. `ಮರ ಹತ್ತಿ ಕಾಯಿ ಕೊಯ್ದು ಲಾರಿಗೆ ಹೇರಿ ಬೆಂಗಳೂರು ತಲುಪುವಾಗ ಎಷ್ಟು ಖರ್ಚು ತಗಲುತ್ತದೆ ಗೊತ್ತಾ?~

ಎಂದು ರೈತರಿಗೇ ಟೋಪಿ ತೊಡಿಸಲು ಯತ್ನಿಸಿದರು. ಆಗ ರೈತರಿಗೆ ಅಮೂಲ್ಯ ಸಲಹೆ ನೀಡಿ ನೆರವಿಗೆ ಬಂದವರು ಕೃಷಿ ವಿಶ್ವವಿದ್ಯಾಲಯದ ಈಗಿನ ಕುಲಪತಿ ನಾರಾಯಣ ಗೌಡರು. ಅಂದು ಅವರ ಮಾರ್ಗದರ್ಶನದಲ್ಲಿತೂಬುಗೆರೆಯ ರೈತರು ಸೇರಿ 2007ರಲ್ಲಿ ಹಲಸು ಮಾರಾಟಗಾರರ ಸಹಕಾರಿ ಸಂಘ ಸ್ಥಾಪಿಸಿದರು. ಒಂದು ಮರದಿಂದ ಹಿಡಿದು ನೂರರ ವರೆಗೂ ಮರ ಬೆಳೆಸಿದ್ದವರು ನೂರು ರೂಪಾಯಿ ಸದಸ್ಯತ್ವ ಶುಲ್ಕ ತುಂಬಿ ಸಂಘದ ಸದಸ್ಯರಾದರು. ಕಾಡುಸಿಂಗನ ಮರದ ಒಡೆಯ ನರಸಿಂಹಯ್ಯ ಅಧ್ಯಕ್ಷರಾದರು. ರವಿಕುಮಾರ್ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು. ತೋಟಗಾರಿಕೆ ಇಲಾಖೆ ಒಂದಿಷ್ಟು ಹಣದ ನೆರವು ಕೊಟ್ಟಿತು.ಸಂಘ ಆರಂಭಿಸಲು ಕಟ್ಟಡದ ವ್ಯವಸ್ಥೆ ಇರಲಿಲ್ಲ. ಸನಿಹದ ಹಾಲಿನ ಸಹಕಾರ ಸಂಘದಲ್ಲಿ ಒಂದಿಷ್ಟು ಜಾಗ ಸಿಕ್ಕಿತು. ರೈತರಿಂದ ಸಂಗ್ರಹಿಸಿದ ಹಲಸಿನಕಾಯಿಗಳನ್ನು ಬೆಂಗಳೂರಿನ ಹಾಪ್‌ಕಾಮ್ಸ ಮಳಿಗೆಗೆ ಸಾಗಿಸಿದಾಗ ಒಂದೊಂದು ಹಲಸಿಗೂ ಅದರ ತೂಕ, ಗುಣಮಟ್ಟ ಆಧರಿಸಿ ಇಪ್ಪತ್ತು ರೂ.ಗಳಿಂದ ಒಂದು ಸಾವಿರದ ವರೆಗೆ ಬೆಲೆ ಸಿಕ್ಕಿತು. ಆ ಮೇಲೆ ದಾಬಸ್‌ಪೇಟೆಗೆ ಸಾಗಿಸಿದರು. ಅಲ್ಲಿ ತಮ್ಮೂರಿನ ಹಲಸಿಗೆ ಭಾರೀ ಬೇಡಿಕೆಯಿರುವುದು ಕಂಡು ರೈತರಿಗೇ ಅಚ್ಚರಿ. ಮೊದಲ ವರ್ಷದ ವ್ಯವಹಾರ ಐದು ಲಕ್ಷ ರೂಪಾಯಿ ದಾಟಿತು. ಈ ವರ್ಷ ಅಂದಾಜು ಇಪ್ಪತ್ತೈದು ಲಕ್ಷ ದಾಟಲಿದೆ ಎನ್ನುತ್ತಾರೆ ಸಂಘದ ಕಾರ್ಯದರ್ಶಿ ರವಿಕುಮಾರ್.ಇದೆಲ್ಲದರ ಪರಿಣಾಮವಾಗಿ ದಲ್ಲಾಳಿಗಳು ತಾವಾಗಿಯೇ ರೈತರಿಗೆ ಶರಣಾಗಿದ್ದಾರೆ, ಹಾಪ್‌ಕಾಮ್ಸಗಿಂತ ಅಧಿಕ ಬೆಲೆ ಕೊಟ್ಟು ಹಲಸು ಖರೀದಿಗೆ ಮುಂದಾಗಿದ್ದಾರೆ, ರೈತರು ಬಿಗಿಪಟ್ಟು ಹಿಡಿದು ಕಡೆಗೂ ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಗಳಿಸುತ್ತಿದ್ದಾರೆ. ತೂಬುಗೆರೆ ವ್ಯಾಪ್ತಿಯ ಬೆಳೆಗಾರರು ಸಹಕಾರ ಸಂಘದ ಅಡಿಯಲ್ಲಿ ಒಂದಾಗಿದ್ದಾರೆ, ಮೂರು ತಿಂಗಳಿಗೊಮ್ಮೆ ಸರ್ವ ಸದಸ್ಯರ ಸಭೆ ನಡೆಯುತ್ತದೆ.ಜನವರಿಯಿಂದ ಜುಲೈ ತನಕ ಹಲಸಿನ ವ್ಯಾಪಾರದ ಭರಾಟೆ ಭರ್ಜರಿಯಾಗಿರುತ್ತದೆ. ರೈತರೊಬ್ಬರು ರುದ್ರಾಕ್ಷಿ ಮತ್ತು ಕೆಂಪು ಚಂದ್ರ ಹಲಸಿನಿಂದ ಈ ವರ್ಷ ಗಳಿಸಿದ್ದು ಬರೋಬ್ಬರಿ 12 ಸಾವಿರ ರೂಪಾಯಿ. ಐದೇ ಮರಗಳಿರುವ ರೈತ ನರಸಿಂಹ ಅವರಿಗೆ ಬಂದ ಆದಾಯ 8 ಸಾವಿರ. ವಾರಕ್ಕೆ ಮೂರು ಟನ್‌ನಷ್ಟು ಹಲಸು ಹಾಪ್‌ಕಾಮ್ಸ ಮಳಿಗೆಗೆ ಸಾಗುತ್ತದೆ. ಉಳಿದುದನ್ನು ಖಾಸಗಿ ವ್ಯಾಪಾರಿಗಳು ಆಕರ್ಷಕ ಬೆಲೆ ಕೊಟ್ಟು ಒಯ್ಯುತ್ತಾರೆ.ತೂಬುಗೆರೆಯ ರೈತರಿಗೆ ಹಣ್ಣನ್ನು ಹಾಗೆಯೇ ತಿನ್ನುವುದು ಬಿಟ್ಟರೆ ಅನ್ಯ ಉಪಯೋಗಗಳ ಅರಿವಿಲ್ಲ. ಹಲಸಿನಿಂದ ಹಪ್ಪಳ ಮಾಡಬಹುದು ಎಂಬುದು ಗೊತ್ತಿಲ್ಲ. ಕರಾವಳಿ ಸೇರಿದಂತೆ ರಾಜ್ಯದ ಇತರೆಡೆ ಸಾಕಷ್ಟು ಹಲಸಿನ ಹಣ್ಣು ಕೊಳೆತು ಹೋಗುತ್ತದೆ. ಅದರಿಂದ ಲಾಭ ಹೊಂದಲು ತೂಬುಗೆರೆ ರೈತರ ಸಂಘಟಿತ ಪ್ರಯತ್ನ ಮಾರ್ಗದರ್ಶಕವಾದೀತು. ಅಲ್ಲವೇ!

ಮಾಹಿತಿಗೆ ಕಾರ್ಯದರ್ಶಿ ರವಿಕುಮಾರ್ ಅವರ ಮೊಬೈಲ್ ಸಂಖ್ಯೆ 96321 29566.

ಪ್ರತಿಕ್ರಿಯಿಸಿ (+)