ಗುರುವಾರ , ಏಪ್ರಿಲ್ 22, 2021
27 °C

ಹಲ್ಲು ಕೀಳುವ ಹುನ್ನಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾಯಿತ ಸರ್ಕಾರದ ಮೇಲೆ ಆಂತರಿಕವಾಗಿ ನಿಗಾ ಇಟ್ಟು ನಿಯಂತ್ರಿಸುವ ಉದ್ದೇಶದಿಂದಲೇ ಸಂವಿಧಾನ ಮಹಾಲೇಖಪಾಲ (ಸಿಎಜಿ) ಎಂಬ ಸಂಸ್ಥೆಯನ್ನು ರಚಿಸಿದೆ.  ಸಾರ್ವಜನಿಕ ಉತ್ತರದಾಯಿತ್ವವನ್ನು ರೂಪಿಸುವ ಬಹುಮುಖ್ಯ ಕೆಲಸವನ್ನು ಈ ಸಂಸ್ಥೆ ಮಾಡುತ್ತಾ ಬಂದಿದೆ. ಕಾಮನ್‌ವೆಲ್ತ್ ಗೇಮ್ಸನಿಂದ ಹಿಡಿದು 2ಜಿ ತರಂಗಾಂತರದ ವರೆಗೆ ಭ್ರಷ್ಟಾಚಾರದ ಇತ್ತೀಚಿನ ಹಲವಾರು ದೊಡ್ಡ ಹಗರಣಗಳನ್ನು ಬಯಲುಮಾಡಿದ್ದು ಇದೇ ಸಂಸ್ಥೆ. ಸಹಜವಾಗಿಯೇ ಆಡಳಿತಾರೂಢ ಪಕ್ಷದ ಕೆಂಗಣ್ಣು ಮಹಾಲೇಖಪಾಲ ಸಂಸ್ಥೆಯ ಮೇಲೆ ಬಿದ್ದಿದೆ.  ಈ ಸ್ಥಾನದಲ್ಲಿ ಕೂತಿರುವವರಿಗೆ ಇರಬೇಕಾಗಿರುವ ಪ್ರಾಮಾಣಿಕತೆ ಮತ್ತು ನಿಷ್ಠುರತೆಯನ್ನು ಹೊಂದಿರುವ ವಿನೋದ್ ರಾಯ್ ಅವರು ಮುಂದಿನ ವರ್ಷದ ಅಂತ್ಯದ ವರೆಗೆ ನಿವೃತ್ತಿಯಾಗುವುದಿಲ್ಲ ಎಂಬುದನ್ನು ಅರಿತಿರುವ ಕೇಂದ್ರ ಸರ್ಕಾರ ಈಗ ಅವರ ಅಧಿಕಾರವನ್ನು ಮೊಟಕುಗೊಳಿಸುವ ಹುನ್ನಾರ ನಡೆಸಿದೆ. ಒಬ್ಬ ಮಹಾಲೇಖಪಾಲರ ಬದಲಿಗೆ ಸಿಎಜಿಯನ್ನು ಬಹುಸದಸ್ಯ ಸಂಸ್ಥೆಯಾಗಿ ಮಾಡುವ ಪ್ರಸ್ತಾವ ಪರಿಶೀಲನೆಯಲ್ಲಿದೆ ಎಂಬ ಪ್ರಧಾನಿ ಕಾರ್ಯಾಲಯ ರಾಜ್ಯ ಸಚಿವ ವಿ.ನಾರಾಯಣಸ್ವಾಮಿ ಅವರ ಹೇಳಿಕೆಯ ಹಿಂದೆ ದುಷ್ಟ ಉದ್ದೇಶ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ವಿವಾದ ಭುಗಿಲೇಳುವ ಸೂಚನೆ ಕಂಡ ಸಚಿವರು ಹೇಳಿಕೆಯನ್ನು ವಾಪಸು ಪಡೆಯಲು ಪ್ರಯತ್ನಿಸಿದರೂ ಸರ್ಕಾರದ ಬಣ್ಣ ಬಯಲಾಗಿ ಹೋಗಿದೆ. ಹೆಚ್ಚಿನ ಪಾರದರ್ಶಕತೆಗಾಗಿ ಸಿಎಜಿಯನ್ನು ತ್ರಿಸದಸ್ಯ ಸಂಸ್ಥೆಯನ್ನಾಗಿ ಮಾಡಬೇಕೆಂದು ನಿವೃತ್ತ ಮಹಾಲೇಖಪಾಲರಾದ ವಿ.ಕೆ.ಶುಂಗ್ಲು ಅವರು ತನ್ನ ವರದಿಯಲ್ಲಿ ಹೇಳಿದ್ದರೂ ಸಚಿವ ನಾರಾಯಣಸ್ವಾಮಿ  ಅವರಿಗೆ ಅಂತಹ ಸದುದ್ದೇಶ ಇದ್ದ ಹಾಗಿಲ್ಲ.ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿನ ಭ್ರಷ್ಟಾಚಾರ, ಸೋರಿಕೆ, ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ, ಕಳಪೆ ಕಾಮಗಾರಿ ಇತ್ಯಾದಿ ಹುಳುಕುಗಳನ್ನು ಲೆಕ್ಕಪತ್ರಪರಿಶೋಧನೆಯ ಮೂಲಕ ಬಯಲಿಗೆಳೆಯುವುದು ಮಹಾಲೇಖಪಾಲರ ಮುಖ್ಯ ಕರ್ತವ್ಯ. ಇದಕ್ಕಾಗಿ ದೇಶದಾದ್ಯಂತ ನೂರಕ್ಕೂ ಹೆಚ್ಚು ಲೆಕ್ಕಪತ್ರ ಪರಿಶೀಲನಾ ಕಚೇರಿಗಳನ್ನು ಸಂಸ್ಥೆ ಹೊಂದಿದೆ. ಇವುಗಳಲ್ಲಿ ಸುಮಾರು 60 ಸಾವಿರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಗಾಗಿ ಸರ್ಕಾರ ವಾರ್ಷಿಕ 300 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಇವೆಲ್ಲದರ ಹೊರತಾಗಿಯೂ ಮಹಾಲೇಖಪಾಲರಿಂದಾಗಿ ಸರ್ಕಾರದ ಭ್ರಷ್ಟಾಚಾರದ ಪ್ರಮಾಣ ಕಡಿಮೆಯಾಗಿಲ್ಲ, ಹೆಚ್ಚಾಗುತ್ತಲೇ ಇದೆ ಎನ್ನುವುದಕ್ಕೆ ಬಯಲಾಗುತ್ತಿರುವ ಹಗರಣಗಳೇ ಸಾಕ್ಷಿ.ಮಹಾಲೇಖಪಾಲ ಸಂಸ್ಥೆ ಹಲ್ಲಿಲ್ಲದ ಹಾವಿನಂತಾಗಿರುವುದು ಇದಕ್ಕೆ ಮುಖ್ಯ ಕಾರಣ. ಸಾಮಾನ್ಯವಾಗಿ ಮಹಾಲೇಖಪಾಲರು ವರ್ಷಕ್ಕೆ ಸುಮಾರು ನೂರು ವರದಿಗಳನ್ನು ಸಂಸತ್‌ಗೆ ಸಲ್ಲಿಸುತ್ತಾರೆ. ಆ ವರದಿಗಳನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಪರಿಶೀಲಿಸಿ ಸಂಬಂಧಿತ ಇಲಾಖೆಗಳಿಂದ ಸ್ಪಷ್ಟೀಕರಣ ಕೇಳುತ್ತದೆ. ಇದರ ಬಗ್ಗೆ ಸಂಸತ್‌ನ ಉಭಯಸದನಗಳಲ್ಲಿಯೂ ಚರ್ಚೆ ನಡೆಯುತ್ತದೆ. ಆದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಿರುವುದು ಅಪರೂಪ. ಈ ಹಿನ್ನೆಲೆಯಲ್ಲಿ ಮಹಾಲೇಖಪಾಲರ ವರದಿಯನ್ನು ನೇರವಾಗಿ `ಪ್ರಥಮ ಮಾಹಿತಿ ವರದಿ~ಯನ್ನಾಗಿ ಪರಿಗಣಿಸಿ ಅದರ ಆಧಾರದ ಮೇಲೆ ಕ್ರಮಕೈಗೊಳ್ಳಬೇಕೆಂಬ ಸಲಹೆ ಇದೆ. ಈ ರೀತಿ ಮಹಾಲೇಖಪಾಲರನ್ನು ಇನ್ನಷ್ಟು ಬಲಗೊಳಿಸಲು ಪ್ರಯತ್ನಿಸುವ ಬದಲಿಗೆ ಸರ್ಕಾರ ಅದರ ಹಲ್ಲು ಕಿತ್ತು ಇನ್ನಷ್ಟು ದುರ್ಬಲ ಮಾಡಲು ಹೊರಟಿರುವುದು ಖಂಡನೀಯ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.