ಹಲ್ಲೆ: ಪಿಎಸ್ಐ ಅಮಾನತಿಗೆ ಆಗ್ರಹ
ಬೇಲೂರು: ಧಾರ್ಮಿಕ ಕಾರ್ಯಕ್ರಮ ಅಂಗವಾಗಿ ಹಾಕಿದ್ದ ಬಂಟಿಂಗ್ಸ್ ತೆರವುಗೊಳಿಸುತ್ತಿದ್ದ ಯುವಕರ ಮೇಲೆ ಸಬ್ಇನ್ಸ್ಪೆಕ್ಟರ್ ವೆಂಕಟೇಶ್ ಹಲ್ಲೆ ನಡೆಸಿದ ಘಟನೆ ಖಂಡಿಸಿ ತಾಲ್ಲೂಕಿನ ಅರೇಹಳ್ಳಿಯಲ್ಲಿ ಸಾರ್ವಜನಿಕರು ಠಾಣೆಯ ಮುಂದೆ ಶನಿವಾರ ಮಧ್ಯರಾತ್ರಿ ನಂತರ ದಿಢೀರ್ ಪ್ರತಿಭಟನೆ ನಡೆಸಿದರು.
ಅರೇಹಳ್ಳಿ ಸಿದ್ಧಿವಿನಾಯಕ ದೇವಸ್ಥಾನದ ದಶಮಾನೋತ್ಸವ ಕಾರ್ಯಕ್ರಮ ಶನಿವಾರ ಬೆಳಿಗ್ಗೆ ಮತ್ತು ರಾತ್ರಿ ನಡೆದಿತ್ತು. ಕಾರ್ಯಕ್ರಮಕ್ಕೆ ಹಾಕಲಾಗಿದ್ದ ಬಂಟಿಂಗ್ಸ್ಗಳನ್ನು ಡಿಶ್ ಸತೀಶ್ ಮತ್ತು ಗ್ರಾಮದ ಇತರ ಯುವಕರು ತೆರವುಗೊಳಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್ ಮತ್ತು ಪೊಲೀಸ್ ಪೇದೆ ಸಿದ್ದಪ್ಪ ಯುವಕರ ಮೇಲೆ ಏಕಾಏಕಿ ಹಲ್ಲೆ ನಡೆಸಿದರು. ಸತೀಶ್ಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಬೇಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಸುದ್ದಿ ತಿಳಿದ ನಾಗರಿಕರು ಜಿಲ್ಲಾ ಪಂಚಾಯಿತಿ ಸದಸ್ಯ ಅಮಿತ್ ಶೆಟ್ಟಿ ನೇತೃತ್ವದಲ್ಲಿ ರಾತ್ರಿ 12.30ರ ಸುಮಾರಿಗೆ ಪೊಲೀಸ್ ಠಾಣೆ ಮುಂದೆ ಜಮಾಯಿಸಿದರು. ವೆಂಕಟೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆಗ್ರಹಿಸಿದರು.
ಸ್ಥಳಕ್ಕೆ ಬಂದ ಸರ್ಕಲ್ ಇನ್ಸ್ಪೆಕ್ಟರ್ ಮಂಜಯ್ಯ ಮತ್ತು ಸಬ್ ಇನ್ಸ್ಪೆಕ್ಟರ್ ದೀಪಕ್ ಪ್ರತಿಭಟನಾಕಾರರನ್ನು ಸಮಾಧಾನಗೊಳಿಸಿದರು.
`ಅರೇಹಳ್ಳಿಯ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್ ಅವರ ದೌರ್ಜನ್ಯ ಮಿತಿಮೀರಿದೆ, ಠಾಣೆಯಲ್ಲಿ ಲಂಚದ ಹಾವಳಿ ಹೆಚ್ಚಾಗಿದೆ. ಕಾಫಿ ಬೆಳೆಗಾರರು, ವಾಹನಗಳ ಮಾಲೀಕರನ್ನು ಹಣಕ್ಕಾಗಿ ಪೀಡಿಸಲಾಗುತ್ತಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದ ವೆಂಕಟೇಶ್ ಅವರನ್ನು ಅಮಾನತುಗೊಳಿಸಬೇಕು. ಇಲ್ಲವಾದರೆ ಮಂಗಳವಾರ ಅರೇಹಳ್ಳಿ ಬಂದ್ ನಡೆಸಲಾಗುವುದು~ ಅಮಿತ್ಶೆಟ್ಟಿ ಭಾನುವಾರ ಎಚ್ಚರಿಕೆ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.