ಬುಧವಾರ, ಏಪ್ರಿಲ್ 21, 2021
25 °C

ಹಳೆಯ ಮದುವೆ, ಹೊಸ ತಮಾಷೆ

ಸಂದೀಪ ನಾಯಕ Updated:

ಅಕ್ಷರ ಗಾತ್ರ : | |

ಹಳೆಯ ಮದುವೆ, ಹೊಸ ತಮಾಷೆ

ಮದುವೆಯ ಬಳಿಕ ಬೆಳೆಯುವ ಇನ್ನೊಂದು ಸಂಬಂಧ, ಆ ಕುರಿತಾದ ಅನುಮಾನ ನಿರ್ದೇಶಕ ದಿನೇಶ್ ಬಾಬು ಅವರಿಗೆ ಬಹುಪ್ರಿಯವಾದ ವಸ್ತುಗಳು. ಸಂಸಾರದರಲ್ಲಿ ಇನ್ನೊಂದು ಮದುವೆ ಕುರಿತಾದ ಅನುಮಾನ, ಆ ಅನುಮಾನದ ಸುಳಿಯ ಬೆನ್ನುಹತ್ತಿದಾಗ ಏಳುವ ಬಿರುಗಾಳಿಯ ಬೆನ್ನುಹತ್ತಿ ಕುತೂಹಲಕರವಾಗಿ ಸಿನಿಮಾಗಳನ್ನು ನಿರ್ದೇಶಿಸುವುದು ಬಾಬು ಶೈಲಿ. ಈಗ ಇದೇ ಬಗೆಯ ಸಿನಿಮಾವನ್ನು ಅವರು ನಿರ್ದೇಶಿಸಿದ್ದಾರೆ. ಇದು ಕೆಲಕಾಲದ ಹಿಂದೆ ತೆರೆಕಂಡ ಅವರ ನಿರ್ದೇಶನದ ‘ಎರಡನೇ ಮದುವೆ’ಯ ಎರಡನೇ ಭಾಗ. ಅಲ್ಲಿನದೇ ಪಾತ್ರಗಳು ಇಲ್ಲೂ ಇವೆ.ನವದಂಪತಿಯ ನಡುವೆ ತಪ್ಪುಕಲ್ಪನೆಯಿಂದ ಹುಟ್ಟುವ ಅನುಮಾನ ಎಲ್ಲಿಗೆ ಹೋಗಿ ಮುಟ್ಟಬಹುದು ಎಂಬ ಪುಟ್ಟ ಎಳೆ ಇದರಲ್ಲಿದೆ.ತಮ್ಮ ಮಗಳನ್ನು ಹುಡುಗನಿಗೆ ಮದುವೆ ಮಾಡಿಕೊಡುವ ಅಪ್ಪ ಅಮ್ಮ ಅವರನ್ನು ತಮ್ಮ ಮೂಗಿನ ನೇರಕ್ಕೆ, ತಮ್ಮ ಪ್ರಕಾರವೇ ಬದುಕುವಂತೆ ನಿರ್ದೇಶಿಸುತ್ತಾರೆ, ಮಾರ್ಗರ್ಶನ ಮಾಡುತ್ತಾರೆ. ಆದರೆ, ಅದು ಬೇರೆಯದೇ ತಿರುವು, ರೂಪಗಳನ್ನು ಪಡೆಯುತ್ತದೆ.ಸಂಸಾರದಲ್ಲಿ ನಡೆಯಬಾರದ ಗೊಂದಲ, ಗೋಜಲುಗಳು ಉಂಟಾಗುತ್ತವೆ. ಅವೆಲ್ಲ ತಿಳಿಯಾಗುತ್ತ ಹೋಗುವಾಗ ಸಾಕಷ್ಟು ನಗು ಉಕ್ಕಿಸುವ ಪ್ರಸಂಗಗಳು ನಡೆಯುತ್ತವೆ. ಅಸಂಗತ ಸನ್ನಿವೇಶಗಳು ಅದರಲ್ಲಿನ ತಮಾಷೆಗಳು ತಾಜಾ ಆಗಿದ್ದು ಕಥೆಯ ಗೋಜಲನ್ನು, ಅಲ್ಲಿ ಸೃಷ್ಟಿಯಾಗುವ ಕುತೂಹಲದ ಸಿಕ್ಕುಗಳನ್ನು ಬಿಡಿಸುತ್ತ ಹೋಗುವುದರಿಂದ ಪ್ರೇಕ್ಷಕನಿಗೆ ಸಾಕಷ್ಟು ರಂಜನೆ, ಖುಷಿಯನ್ನು ಕೊಡುತ್ತವೆ.

 

ಮನರಂಜನೆಯ ದೃಷ್ಟಿಯಿಂದ ಸಿನಿಮಾ ಮಜವಾಗಿದೆ. ಆದರೆ, ಬಾಬು ಅವರ ಸಿನಿಕಸುಬಿನ ದೃಷ್ಟಿಯಿಂದ ಹೇಳುವುದಾದರೆ ಅವರು ತಮ್ಮ ‘ಮನೆ, ಸಂಸಾರ’ದ ಹಳೆಯ ಕಥೆಯನ್ನೇ ಮತ್ತೆ ಹೇಳಿದ್ದಾರೆ. ಅವರೇ ಬರೆದಿರುವ ಕಥೆ, ಚಿತ್ರಕಥೆ, ಸಂಭಾಷಣೆಯಲ್ಲಿ ಹಾಗೂ ಅವರ ನಿರ್ದೇಶನದಲ್ಲಿ ‘ಬಾಬು ಶೈಲಿ’ಯೊಂದು ಇಲ್ಲೂ ಇದ್ದೇ ಇದೆ.ಬಾಬು ಅವರ ಇಷ್ಟದ ಕಲಾವಿದರಾದ ಅನಂತನಾಗ್, ಸುಹಾಸಿನಿ ಅವರೊಂದಿಗೆ ತಾರಾ, ಶರಣ್, ನವೀನ್‌ಕೃಷ್ಣ, ಪ್ರಿಯಾಂಕಚಂದ್ರ, ರಾಜು ತಾಳಿಕೋಟೆ ಕೂಡ ನಟಿಸಿದ್ದಾರೆ. ಎಲ್ಲರ ಪಾತ್ರ ನಿರ್ವಹಣೆ ಸಮರ್ಥವಾಗಿ, ಉತ್ತಮವಾಗಿದೆ. ಅನಂತನಾಗ್, ಸುಹಾಸಿನಿ ಅವರದು ಮಾಗಿದ ಅಭಿನಯ. ಸುರೇಶ್ ಭೈರಸಂದ್ರ ಅವರ ಛಾಯಾಗ್ರಹಣ ದಿನೇಶ್ ಬಾಬು ಅವರ ಛಾಯಾಗ್ರಹಣದ ಶೈಲಿಯನ್ನು ನೆನಪಿಸುತ್ತದೆ.ಹೆಚ್ಚಿನ ಬಂಡವಾಳ ಕೇಳದ ಪುಟ್ಟ ಬಜೆಟ್‌ನ ಇಂಥ ಸಿನಿಮಾಗಳು ಸಮಯ ಕಳೆಯಲು, ಒಂದು ಸಂದೇಶ ಹೇಳಲು ನಿರ್ಮಾಣವಾಗಿದ್ದರೆ ಅವುಗಳಿಂದ ಹೆಚ್ಚಿನದನ್ನು ನಿರೀಕ್ಷಿಸಲು ಆಗದು. ನಿರ್ದೇಶಕ ದಿನೇಶ್ ಬಾಬು ಅವರ ಉದ್ದೇಶ ಕೂಡ ಅದೇ ಆಗಿದ್ದರೆ ಅವರು ತಮ್ಮ ಕೆಲಸದಲ್ಲಿ ಯಶಸ್ವಿಯಾಗಿದ್ದಾರೆ ಎನ್ನಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.