ಶನಿವಾರ, ಜನವರಿ 18, 2020
19 °C

ಹಳೆ ವಾಹನಗಳಿಗೆ ಪ್ರದರ್ಶನ ಭಾಗ್ಯ

ಪ್ರಜಾವಾಣಿ ವಾರ್ತೆ/ ನಾಗರಾಜ ಶೆಟ್ಟಿಗಾರ್ Updated:

ಅಕ್ಷರ ಗಾತ್ರ : | |

ಸುರತ್ಕಲ್: ಇಲ್ಲಿಗೆ ಸಮೀಪದ ಹೊನ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ಶನಿವಾರ ಮತ್ತು ಭಾನುವಾರ ರಜತ ಮಹೋತ್ಸವ ಅಂಗವಾಗಿ ಭಾನುವಾರ ಹಳೆ ವಾಹನಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಹೊನ್ನಕಟ್ಟೆ ಮೈದಾನದಲ್ಲಿ ಕಾಣಿಸಿಕೊಂಡ ವಿಂಟೆಜ್ ಕಾರುಗಳು ಜನರನ್ನು ಹಳೆಯ ಕಾಲಕ್ಕೆ ಕರೆದೊಯ್ದವು.ಈ ಹಳೆಯ ಕಾರುಗಳು ಸಂಗ್ರಹದ ರೂವಾರಿ ಗಿರೀಶ್ ಪಿ.ವಿ. ಸೌದಿಯಲ್ಲಿ ತೈಲ ಕಂಪೆನಿಯೊಂದರಲ್ಲಿ ಉದ್ಯೋಗಿ ಯಾಗಿರುವ ಅವರು ಪ್ರತೀ ಎರಡು ತಿಂಗಳಿಗೊಮ್ಮೆ ಒಂದು ತಿಂಗಳ ರಜೆಯ ಮೇಲೆ ಊರಿಗೆ ಆಗಮಿಸುತ್ತಾರೆ. ಈ ಸಮಯಲ್ಲಿ ದೇಶದ ವಿವಿಧ ಕಡೆಗಳಲ್ಲಿರುವ ಹಳೆಯ ಕಾರುಗಳನ್ನು ಖರೀದಿಸಿ ಸಂಗ್ರಹಿಸುವುದೇ ಇವರ ನೆಚ್ಚಿನ ಹವ್ಯಾಸ.ಈವರೆಗೆ ಸುಮಾರು 45 ಹಳೆಯ ದ್ವಿಚಕ್ರ ವಾಹನ, ಐದು ಕಾರುಗಳನ್ನು ಸಂಗ್ರಹಿಸಿದ್ದಾರೆ. ಇದರಲ್ಲಿ ಹಳೆಯ ಸೈಕಲ್‌ಗಳು ಸೇರಿ 28 ದ್ವಿಚಕ್ರ ವಾಹನ, ಒಂದು ಜೀಪ್ ಸೇರಿ  ಎರಡು ಹಳೆಯ ಕಾರುಗಳು ಪ್ರದರ್ಶನವನ್ನು ಕಂಡವು. ಜರ್ಮನಿಯಲ್ಲಿ ಸಂಚರಿಸಿದ1939ರ ಬೈಕ್ ಕೂಡಾ ಪ್ರದರ್ಶನದಲ್ಲಿಡಲಾಗಿತ್ತು.2003ರಿಂದ ಹಳೆಯ ವಾಹನಗಳ ಸಂಗ್ರಹದಲ್ಲಿ ತೊಡಗಿರುವ ಇವರು ಕೆಲವು ವಾಹನಗಳನ್ನು ದೇಶದ ವಿವಿಧ ಭಾಗಗಳಿಂದ ಖರೀದಿಸಿದ್ದಾರೆ. ಕೆಲವು ವಾಹನಗಳನ್ನು ಸಂಬಂಧಿಕರೇ ಉಚಿತವಾಗಿ ನೀಡಿದ್ದಾರೆ. ಮುಂದೆಯೂ ಹಳೆಯ ವಾಹನಗಳ ಸಂಗ್ರಹಿಸುವ ಗುರಿಯಿಟ್ಟುಕೊಂಡಿದ್ದಾರೆ.ಕುಳಾಯಿಯಲ್ಲಿನ ತನ್ನ ಹಾಗೂ ತಂದೆಯ ಮನೆಯಲ್ಲಿ ಎರಡು ಗೋಡೌನ್‌ಗಳು ಹಾಗೂ ಒಂದು ಗ್ಯಾರೇಜನ್ನು ಹಳೆಯ ವಾಹನಗಳ ಸಂಗ್ರಹಕ್ಕಾಗಿಯೇ ನಿರ್ಮಿಸಿದ್ದಾರೆ. ಶೇ 90ರಷ್ಟು ರನ್ನಿಂಗ್ ಕಂಡೀಷನ್‌ನಲ್ಲಿ ಈ ವಾಹನಗಳಿವೆ. ವೆಸ್ಪಾ, ಕಾಂಬಿ, ರೀಟಾ, 1977ರ ಎನ್‌ಫೀಲ್ಡ್ ಕ್ರುಸೇಡರ್ ಮುಂತಾದ ಬೈಕ್‌ಗಳು, ವಿಂಟೇಜ್ ಕಾರುಗಳು ಹೊನ್ನಕಟ್ಟೆಯಲ್ಲಿ ಪ್ರದರ್ಶನ ಕಂಡ ಪ್ರಮುಖ ವಾಹನಗಳು. ಮಂಗಳೂರು, ನಿಟ್ಟೆ, ಕೆಆರ್‌ಇಸಿಯಲ್ಲಿ ನಡೆದ ಪ್ರದರ್ಶನಗಳಲ್ಲಿಯೂ ಇವರು ಭಾಗವಹಿಸಿ ಜನರಿಂದ ಮೆಚ್ಚುಗೆ ಪಡೆದಿದ್ದಾರೆ.ಭಾನುವಾರ ಹೊನ್ನಕಟ್ಟೆಯಲ್ಲಿ ನಡೆದ ಪ್ರದರ್ಶನವನ್ನು ಪಣಂಬೂರು ಬೀಚ್ ಪ್ರವಾಸೋದ್ಯಮ ಯೋಜನೆ ಮುಖ್ಯಸ್ಥ ಯತೀಶ್ ಬೈಕಂಪಾಡಿ ಉದ್ಘಾಟಿಸಿ, ಹಳೆಯ ವಾಹನಗಳ ಸಂಗ್ರಹ ಸವಾಲಾಗಿದ್ದು, ಈ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದ ಗಿರೀಶ್ ಸಾಧನೆಯನ್ನು ಶ್ಲಾಘಿಸಿದರು.

ಪ್ರತಿಕ್ರಿಯಿಸಿ (+)