ಶನಿವಾರ, ಮಾರ್ಚ್ 6, 2021
32 °C

ಹಳ್ಳಿಗಳ ಅಭಿವೃದ್ಧಿಗೆ ಸರ್ಕಾರದ ಇಚ್ಛಾಶಕ್ತಿ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳ್ಳಿಗಳ ಅಭಿವೃದ್ಧಿಗೆ ಸರ್ಕಾರದ ಇಚ್ಛಾಶಕ್ತಿ ಅಗತ್ಯ’

ಗದಗ:  ಹಿಂದುಳಿದಿರುವ ಉತ್ತರ ಕರ್ನಾಟಕದ ಹಳ್ಳಿಗಳ ಅಭಿವೃದ್ಧಿಗೆ ಸರ್ಕಾರದ ಇಚ್ಛಾಶಕ್ತಿ, ಶಾಸಕರು ಮತ್ತು ಮಂತ್ರಿಗಳ ಒತ್ತಾಸೆ ಜೊತೆಗೆ ಐಎಎಸ್ ಅಧಿಕಾರಿಗಳ ಕಾಳಜಿ ಪ್ರಮುಖ ಪಾತ್ರ ವಹಿಸಬಲ್ಲದು ಎಂದು ತೋಂಟದಾರ್ಯ ಮಠದ ಡಾ. ಸಿದ್ದಲಿಂಗ ಸ್ವಾಮೀಜಿ ಹೇಳಿದರು.ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಡೆದ ಶಿವಾನುಭವದಲ್ಲಿ ಉತ್ತರ ಕರ್ನಾಟದ ಸಮಸ್ಯೆಗಳು ಕುರಿತ ಉಪನ್ಯಾಸ  ಹಾಗೂ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಎ.ಎಂ.ಗೌಡರ ದಂಪತಿ ಸನ್ಮಾನ ನೆರವೇರಿಸಿ ಮಾತನಾಡಿದ ಅವರು, ಕರ್ನಾಟಕ ಎಂದರೆ ಕೇವಲ ಬೆಂಗಳೂರು-ಮೈಸೂರು ಎಂಬ ಭಾವನೆ ತೀರಾ  ಬದಲಾಗುತ್ತ ಬಂದಿದೆ. ಉತ್ತರ ಕರ್ನಾಟಕದತ್ತ ಸರ್ಕಾರ ಕಣ್ತೆರೆದು ನೋಡುತ್ತಿವೆ. ಡಾ.ನಂಜುಂಡಪ್ಪ ವರದಿ ಅನುಷ್ಟಾನ ಇನ್ನೂ ಪೂರ್ಣಗೊಂಡಿಲ್ಲ.  ಹೈದರಬಾದ್‌  ಕರ್ನಾಟಕದಂತೆ ಕಲ್ಯಾಣ ಕರ್ನಾಟಕ ಭಾಗ ಕೂಡ ದೀನಾವಸ್ಥೆಯಲ್ಲಿದೆ. ಬಸವಣ್ಣನ ನಾಡಿನಲ್ಲೇ ಪರಿಶಿಷ್ಟ ಜಾತಿ ಪಂಗಡದವರಿಗೆ ಯಾವುದೇ ಉನ್ನತ ಸ್ಥಾನಮಾನ ಸಿಕ್ಕಿಲ್ಲದೆ ಇರುವುದು ದುರದೃಷ್ಟಕರ ಎಂದು ನುಡಿದರು.ಸಮೃದ್ಧಿಯ ನಾಡು ನಿರ್ಮಾಣಕ್ಕೆ ಸರ್ಕಾರ,  ವಿಶೇಷವಾಗಿ ಐಎಎಸ್ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳು ಫಲಕಾರಿ­ಯಾಗಬೇಕು ಆಯಾ ಜಿಲ್ಲೆಗಳ ಸ್ಥಿತಿ ಗತಿ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳಿಗಿದ್ದಂತೆ ಐಎಎಸ್ ಅಧಿಕಾರಿಗಳಿಗೂ ಕೂಡ ಅರಿವಿರಬೇಕು.ಅಭಿವೃದ್ದಿ ಕುರಿತ ಪರಿಶ್ರಮದ ಫಲಶೃತಿ ಬೇಗನೆ ಆಯಾ ಪ್ರದೇಶದ ಜನತೆಗೆ ಮುಟ್ಟುವಂತಾಗಬೇಕು ಎಂದು ಸ್ವಾಮೀಜಿ ಕಳಕಳಿ ವ್ಯಕ್ತಪಡಿಸಿದರು.ಉತ್ತರ ಕರ್ನಾಟಕದ ಸಮಸ್ಯೆಗಳು ಕುರಿತು ಗುಲ್ಬರ್ಗಾದ ಡಾ.ಅಂಬೇಡ್ಕರ ಕಾಲೇಜಿನ ಪ್ರಾ. ಡಾ.ಬಸವರಾಜ ಕುಮ್ಮನೂರು ಅವರು, ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯಗಳ ರಂಗದಲ್ಲಿ ಇಂದಿಗೂ ಉತ್ತರ ಕರ್ನಾಟಕ ರಾಜ್ಯದ ಇತರೆ ಭಾಗಗಳಿಗಿಂತ ಹಿಂದಿದೆ ಎಂಬುದನ್ನು ಅಂಕಿ ಅಂಶಗಳ ಮೂಲಕ ವಿವರಿಸಿದರು.  ಐಎಎಸ್ ಅಧಿಕಾರಿಗಳಲ್ಲಿ ಉತ್ತರ ಕರ್ನಾಟಕ ಮೂಲದವರ ಸಂಖ್ಯೆ ಶೇಕಡಾ 10 ರಷ್ಟಿದೆ. ಶೇ.36 ರಷ್ಟು ಬೆಂಗಳೂರು-ಮೈಸೂರು ಮೂಲದವರಿದ್ದಾರೆ. ಉಳಿದಂತೆ  ಶೇ.54 ರಷ್ಟು ಹೊರರಾಜ್ಯದವರಿದ್ದಾರೆ. ಕೆಎಎಸ್ ಅಧಿಕಾರಿಗಳಲ್ಲಿ ಶೇ.31 ರಷ್ಟು ಮೈಸೂರು ಹಾಗೂ ಶೇ.36 ರಷ್ಟು ಬೆಂಗಳೂರು ಮೂಲದವರು.  ಹೀಗಾಗಿ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಕಾಲ ಇರಲು ಅಧಿಕಾರಿಗಳು ಮನಸ್ಸು ಮಾಡುವುದಿಲ್ಲ. ಈ ನಿಲುವು ಬದಲಾಗಬೇಕಾಗಿದೆ ಎಂದು ಕುಮ್ಮನೂರು  ಪ್ರತಿಪಾದಿಸಿದರು.ಪ್ರಾಚಾರ್ಯ ಶಿವಾನಂದ ಪಟ್ಟಣಶೆಟ್ಟಿ, ಪ್ರೊ.ದಲಾಲಿ, ಬಿ.ಎಸ್. ಮಲ್ಲಾಪು, ಎಚ್.ಎಸ್.ಸಿಂಧೆ, ಪ್ರೊ. ಕಾಳೆ ಮೊದಲಾದವರು ಇದ್ದರು.

ಪಾರ್ವತಮ್ಮ ಮಲ್ಲಪ್ಪ ಗೌಡರ ಸ್ಮರಣಾರ್ಥ ಶಿವಾನುಭವದ ಭಕ್ತಿಸೇವೆ ವಹಿಸಿಕೊಂಡಿದ್ದ ಹಿರಿಯ ರೋಟರಿ­ಯನ್ ಅಲ್ಲದೆ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಎ.ಎಂ.ಗೌಡರ ದಂಪತಿ ಅನ್ನು ಸನ್ಮಾನಿಸಲಾಯಿತು.ಬೆಟಗೇರಿಯ  ವಷರಾ ಐಲಿ ಮತ್ತು ನಯನಾ ಐಲಿ ಅವರಿಂದ  ಸುಶ್ರಾವ್ಯ ವಚನ ಸಂಗೀತ ನಡೆಯಿತು. ಪೂಜಾ ಅಮರೇಶ ಶಿವರೆಡ್ಡಿ ಹಾಗೂ ಸ್ಪೂರ್ತಿ ನಂದಿ ಬಸವರಾಜ ಯಚ್ಚಲಗಾರ ಅವರಿಂದ ಧರ್ಮಗ್ರಂಥ ಪಠಣ ಹಾಗೂ ಧರ್ಮಚಿಂತನ ನಡೆಯಿತು.ಪ್ರೊ.ಎಸ್.ಎನ್.ಆದಿ ಸ್ವಾಗತಿಸಿದರು. ಶಂಕ್ರಣ್ಣ ಅಂಗಡಿ ನಿರೂಪಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ,  ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಶಿವಲೀಲಮ್ಮ ಕುರಡಗಿ, ಕಾರ್ಯದರ್ಶಿ ಈರಣ್ಣ ಹೊನಗಣ್ಣವರ, ಸಹ ಕಾರ್ಯದರ್ಶಿ ಗುರಬಸವಲಿಂಗ ತಡಸದ, ಖಜಾಂಚಿ ಪ್ರಭಯ್ಯ ಹಿರೇಮಠ  ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.