ಭಾನುವಾರ, ಏಪ್ರಿಲ್ 11, 2021
20 °C

ಹಳ್ಳಿಗೆ ಸಂಪರ್ಕ ಕಡಿತ-ಮುಳುಗಿದ ಬೆಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಾಥಪುರ: ವರುಣನ ಆರ್ಭಟ ದಿಂದಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಕೆಲವು ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಡಿತ ಗೊಂಡಿದೆ. ನದಿ ಪಾತ್ರದಲ್ಲಿ ಅಪಾರ ಪ್ರಮಾಣದ ಬೆಳೆ ನೀರಿನಲ್ಲಿ ಮುಳುಗಿದೆ.ಕೆಲವು ದಿನಗಳಿಂದ ಕಾವೇರಿ ಜಲಾನಯ ಪ್ರದೇಶದಲ್ಲಿ ಬಿಡುವಿಲ್ಲದೇ ಸುರಿಯುತ್ತಿರುವ ಮಳೆಯ ಕಾರಣ ಕಾವೇರಿ ಮೈದುಂಬಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ಜಲಾವೃತಗೊಂಡಿರುವ ಬೆಳೆಗಳಿಗೆ ಇನ್ನೂ ಮುಕ್ತಿ ದೊರಕಿಲ್ಲ. ವಾಣಿಜ್ಯ ಬೆಳೆಗಳಾದ ತಂಬಾಕು, ಶುಂಠಿ, ಎಳ್ಳು ಹಾಗೂ ತೋಟದ ಬೆಳೆ ಹಾನಿಗೀಡಾಗಿವೆ.ಈವರೆಗೆ ನೀರಿಲ್ಲದೆ ಬಾಡುತ್ತಿದ್ದ ಹೊಗೆಸೊಪ್ಪಿಗೆ ದುತ್ತನೆ ನೆರೆ ಬಂದೆರಗಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.ನದಿ ಪಾತ್ರದಲ್ಲಿ ಬರುವ ಸಾಕಷ್ಟು ಬೆಳೆ ಪ್ರದೇಶಕ್ಕೆ ಧಕ್ಕೆಯುಂಟಾಗಿದ್ದು, ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ನೀರು ಹಾಯಿಸಿಕೊಂಡು ಕಷ್ಟಪಟ್ಟು ಬೆಳೆದಿದ್ದ ಹೊಗೆಸೊಪ್ಪು, ಶುಂಠಿ, ಎಳ್ಳು ಮತ್ತಿತರ ಬೆಳೆಗಳು ಜಲಾವೃತಗೊಂಡಿವೆ.ಕೆಲವು ಕಡೆ ರೈತರು ನದಿ ಪಾತ್ರದಲ್ಲಿ ಬೆಳೆದ ತಂಬಾಕು ಮತ್ತು ಶುಂಠಿ ಇನ್ನಿತರ ಬೆಳೆಗಳು ಸರಿಯಾಗಿ ಕಟಾವಿಗೆ ಬಾರದಿದ್ದರೂ ಸಹ ಅರೆಬರೆ ಫಸಲು ಬಂದಿರುವುದನ್ನೇ ಕಟಾವು ಮಾಡಿ ಸಿಕ್ಕಿದಷ್ಟನ್ನು ಕೈಗೆ ತೆಗೆದುಕೊಳ್ಳಲು ಮುಂದಾಗಿದ್ದಾರೆ.ರಸ್ತೆ ಸಂಪರ್ಕ ಕಡಿತ: ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಬೆಟ್ಟಸೋಗೆ- ಬಸವಾಪಟ್ಟಣ ನಡುವೆ ಬರುವ ಕಾಲು ಹಾದಿಯ ಕೊಲ್ಲಿಯ ಕಿರು ಸೇತುವೆ ನೀರಿನಲ್ಲಿ ಸಂಪೂರ್ಣ ಮುಳುಗಿ ಕಳೆದ 3 ದಿನಗಳಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ.ಹೀಗಾಗಿ ಈ ಮಾರ್ಗದಲ್ಲಿ ಬರುವ ಬೊಮ್ಮನಹಳ್ಳಿ, ರುದ್ರಪಟ್ಟಣ ಮತ್ತು ಬೆಟ್ಟಸೋಗೆ ಗ್ರಾಮದ  ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಓಡಾಟಕ್ಕೆ ರಸ್ತೆ ಸಂಪರ್ಕ ಇಲ್ಲವಾಗಿದೆ. ಇದರಿಂದಾಗಿ ಈ ಕಾಲು ಹಾದಿ ಮೇಲೆ ಕಾಲ್ನಡಿಗೆಯಲ್ಲಿ ಬರುತ್ತಿದ್ದ ಜನತೆ ಸುತ್ತಿ ಬಳಸಬೇಕಾಗಿದೆ.ಭೇಟಿ ಇಲ್ಲ: ಪ್ರವಾಹ ಬಂದು ಕಾವೇರಿ ನದಿ ಪಾತ್ರದಲ್ಲಿ ಬೆಳೆದ ಅಪಾರ ಪ್ರಮಾಣದ ಬೆಳೆ ಹಾನಿಗೆ ಒಳಗಾಗಿದ್ದರೂ ಸಹ ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ತಾಲ್ಲೂಕು ತಹಶೀಲ್ದಾರ್ ಇಲ್ಲವೇ ಕಂದಾಯ ಇಲಾಖೆ ಅಧಿಕಾರಿಗಳಾಗಲೀ ಭೇಟಿ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತ ಸಂಘದ ಮುಖಂಡ ಜಗದೀಶ್ ದೂರಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.