ಸೋಮವಾರ, ಜನವರಿ 27, 2020
21 °C
ಬೆಚ್ಚಿಬಿದ್ದ ಅಂಕೋಲಾ: ಪ್ರತಿ ದಾಳಿಗೆ ಒಬ್ಬ ದುಷ್ಕರ್ಮಿ ಬಲಿ

ಹಾಡಹಗಲೇ ಉದ್ಯಮಿ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಕೋಲಾ: ಸಹಕಾರಿ ಧುರೀಣ ಹಾಗೂ ಉದ್ಯಮಿ ಆರ್‌.ಎನ್‌. ನಾಯಕ (57) ಅವರನ್ನು ದುಷ್ಕರ್ಮಿಗಳು ಶನಿವಾರ ಇಲ್ಲಿ ಹಾಡಹಗಲೇ ಗುಂಡಿಕ್ಕಿ ಕೊಂದಿದ್ದಾರೆ. ದುಷ್ಕರ್ಮಿಗಳು ಉತ್ತರ ಪ್ರದೇಶದ ಸುಪಾರಿ ಹಂತಕರು ಎನ್ನಲಾಗಿದೆ.



ಆಗ ನಾಯಕ ಅವರ ಪೊಲೀಸ್‌ ಗನ್‌ಮ್ಯಾನ್‌ ರಮೇಶ್‌ ಗೌಡ ಪ್ರತಿದಾಳಿ ನಡೆಸಿದಾಗ ಒಬ್ಬ ದುಷ್ಕರ್ಮಿ ಹತನಾಗಿದ್ದು, ಮತ್ತೊಬ್ಬನನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.



ದ್ವಾರಕಾ ಸೌಹಾರ್ದ ಕ್ರೆಡಿಟ್‌ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದ ನಾಯಕ ಅವರು ಕೆ.ಸಿ. ರಸ್ತೆಯಲ್ಲಿರುವ ಸಂಘದ ಕಚೇರಿಯಿಂದ ಮಧ್ಯಾಹ್ನ 1.45ರ ಸಮಯ­ದಲ್ಲಿ ಹೊರ ಬಂದು ಮನೆಗೆ ತೆರಳಲು ಕಾರು ಹತ್ತಿದರು. ಜತೆಯ­ಲ್ಲಿದ್ದ ಗನ್‌ಮ್ಯಾನ್‌ ಕಾರಿನಲ್ಲಿ ಕುಳಿತು­ಕೊಳ್ಳಲು ಹಿಂದಿನ ಬಾಗಿಲು ತೆರೆಯು­ತ್ತಿದ್ದಂತೆಯೇ ದುಷ್ಕ­ರ್ಮಿ­ಗಳು ನಾಯಕ ಅವರ ಮೇಲೆ ಗುಂಡಿನ ದಾಳಿ ನಡೆಸಿ­ದರು.



ತೀವ್ರವಾಗಿ ಗಾಯಗೊಂಡ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗ­ದಲ್ಲಿಯೇ ಮೃತ­ಪಟ್ಟರು. ದಾಳಿ ನಂತರ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದ ಒಬ್ಬ ಹಂತಕನನ್ನು ನಾಯಕ ಅವರ ಗನ್‌ಮ್ಯಾನ್‌ ಅಟ್ಟಿಸಿಕೊಂಡು ಹೋಗಿ ಗುಂಡು ಹಾರಿಸಿದ. ಆ ದುಷ್ಕರ್ಮಿ  ಪಟ್ಟಣದ  ಬಸ್‌ ನಿಲ್ದಾಣದ ದ್ವಾರದಲ್ಲಿ ಮೃತಪಟ್ಟ.



ಪರಾರಿಯಾಗಲು ಯತ್ನಿಸಿದ ಇನ್ನೊಬ್ಬನನ್ನು ವಿಜಯಾ ಬ್ಯಾಂಕ್ ಸಮೀಪ ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿ, ಪೊಲೀಸರ ವಶಕ್ಕೆ ಒಪ್ಪಿಸಿದರು. ಇತರ ಮೂವರು ಹಂತಕರು ತಾವು ತಂದಿದ್ದ ಓಮ್ನಿ ವಾಹನ ಬಿಟ್ಟು ಪರಾರಿಯಾದರು ಎನ್ನಲಾಗಿದೆ.



ಹತ್ಯೆಯ ವಿಷಯ ತಿಳಿಯುತ್ತಿದ್ದಂತೆಯೇ ಸಾರ್ವಜನಿಕರು ಆಸ್ಪತ್ರೆ ಮತ್ತು ನಾಯಕ ಅವರ ಮನೆ ಮುಂದೆ ಜಮಾಯಿಸಿದರು. ಇದರಿಂದಾಗಿ ಕೆಲ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತು. ವರ್ತಕರು ಪಟ್ಟಣದಾದ್ಯಂತ ಸ್ವಯಂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದರು.



ಭೂ ಮಾಫಿಯಾ ಕಾರಣ?:  ಸಹಕಾರಿ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ನಾಯಕ ಇತ್ತೀಚೆಗೆ ಭೂ ವ್ಯವಹಾರದಲ್ಲೂ ನಿರತರಾಗಿದ್ದರು. ಈ ದಾಳಿಗೆ ಭೂ ಮಾಫಿಯಾ ಕಾರಣವೆಂದು ಹೇಳಲಾಗುತ್ತಿದೆ.  ಹಂತಕನ ಶವವನ್ನು ಪೊಲೀಸರು ಸುರಕ್ಷತಾ ದೃಷ್ಟಿಯಿಂದ ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಅಲ್ಲದೇ ಸೆರೆ ಸಿಕ್ಕ ಇನ್ನೊಬ್ಬನನ್ನು ರಹಸ್ಯ ಸ್ಥಳಕ್ಕೆ ಸಾಗಿಸಿದ್ದಾರೆ.



3ನೇ ಪ್ರಕರಣ: ಜಿಲ್ಲೆಯಲ್ಲಿ ಸಾರ್ವಜನಿಕ ಮುಖಂಡರನ್ನು ಹತ್ಯೆ ಮಾಡಿದ ಮೂರನೇ ಪ್ರಕರಣ ಇದು. ಹಿಂದೆ ಭಟ್ಕಳ ಶಾಸಕರಾಗಿದ್ದ ಡಾ. ಚಿತ್ತರಂಜನ್‌ ಮತ್ತು ಕಾರವಾರ ಶಾಸಕ ವಸಂತ ಅಸ್ನೋಟಿಕರ್‌ ಕಗ್ಗೊಲೆಯಾಗಿದ್ದರು.

 

ಪ್ರತಿಕ್ರಿಯಿಸಿ (+)