ಶನಿವಾರ, ಆಗಸ್ಟ್ 15, 2020
21 °C

ಹಾಸನ: ಭೂಮಿ ಕಬಳಿಕೆ ವಿರುದ್ಧ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಭೂಮಿ ಕಬಳಿಕೆ ವಿರುದ್ಧ ಧರಣಿ

ಹಾಸನ: ತಾಲ್ಲೂಕಿನ ದುದ್ದ ಹೋಬಳಿಯ ಕೋರವಂಗಲ ಕಾವಲಿನಲ್ಲಿ ಆಶ್ರಯ ಯೋಜನೆಗಾಗಿ ಮೀಸಲಿಟ್ಟಿದ್ದ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಕಬಳಿಸುತ್ತಿದ್ದಾರೆ. ಇದನ್ನು ತಡೆದು ದಲಿತರಿಗೆ ವಿತರಿಸಬೇಕು ಎಂದು ಆಗ್ರಹಿಸಿ ಮಾದಿಗ ದಂಡೋರ ಸಂಸ್ಥೆಯ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರದಿಂದ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ.ಇಲ್ಲಿನ 2 ಎಕರೆ 20ಗುಂಟೆ ಜಾಗವನ್ನು ಹಿಂದೆಯೇ ಆಶ್ರಯ ಯೋಜನೆಗೆಂದು ಮೀಸಲಿಡಲಾಗಿತ್ತು. ಆದರೆ, ಇಲ್ಲಿಯ ಗೌಡಯ್ಯ ಎಂಬುವವರು ಈ ಜಮೀನು ತನ್ನದೆಂದು ವಾದಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳ ನ್ಯಾಯಾಲಯ ಈ ಜಮೀನು ಸರ್ಕಾರಕ್ಕೆ ಸೇರಿದ್ದು ಎಂದು ಸ್ಪಷ್ಟಪಡಿಸಿದೆ. ಆದರೆ, ಗೌಡಯ್ಯ ಹೈಕೋರ್ಟ್ ಮೊರೆ ಹೋಗಿದ್ದಾರೆ. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ನಾಲ್ಕು ವಾರದೊಳಗೆ ವಿವಾದಿತ ಜಮೀನಿನ ಸಂಪೂರ್ಣ ಮಾಹಿತಿ ನೀಡುವಂತೆ 2010ರ ಜೂನ್ 2ರಂದು ಆದೇಶ ನೀಡಿತ್ತು. ಆದರೆ, ತಾಲ್ಲೂಕು ಆಡಳಿತ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.ನ್ಯಾಯಾಲಯದ ಆದೇಶದಂತೆ ಸ್ಥಳಕ್ಕೆ ಸರ್ವೆ ಮಾಡಲು ಬಂದಿದ್ದ ಅಧಿಕಾರಿಗಳು ಸಹ ಗೌಡಯ್ಯ ಅವರ ಪರವಾಗಿ ಮಾತನಾಡುತ್ತ, ಸ್ಥಳೀಯರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಈ 2 ಎಕರೆ 20ಗುಂಟೆ ಜಾಗವನ್ನು ಆಶ್ರಯ ಯೋಜನೆಗೇ ಬಳಕೆ ಮಾಡಿ ಇಲ್ಲಿ ಗುಡಿಸಲುಗಳಲ್ಲಿ ವಾಸಿಸುವವರಿಗೆ ಹಸ್ತಾಂತರಿಸಬೇಕು, ಜಮೀನಿನ ಸ್ಥಿತಿಗತಿಯ ಬಗ್ಗೆ ಕೂಡಲೇ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ಊಟ, ತಿಂಡಿ ಮಾಡಿ ಪ್ರತಿಭಟನೆ ನಡೆಸಿದರು. ಬೇಡಿಕೆ ಈಡೇರುವವರೆಗೆ ಅಹೊರಾತ್ರಿ ಪ್ರತಿಭಟನೆ ನಡೆಸುತ್ತೇವೆ ಎಂದು ಮಾದಿಗ ದಂಡೋರ ಜಿಲ್ಲಾ ಘಟಕದ ಸಂಚಾಲಕ ವಿಜಯಕುಮಾರ್ ತಿಳಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.