ಬುಧವಾರ, ಜೂಲೈ 8, 2020
21 °C

ಹಾಸಿಕ್‌ಒಮಾನಿನ ಕಾಮನಬಿಲ್ಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸಿಕ್!

ಗೆಳೆಯರೊಬ್ಬರು ಈ ಹೆಸರು ಹೇಳಿದಾಗ ‘ನಾಸಿಕವೇ?’ ಎಂದು ಮೂಗರಳಿಸಿದೆ! ‘ಅಲ್ಲ, ಮಾರಾಯಾ ಇದು ಹಾಸಿಕ್, ನೀನು ಒಮಾನಿನಲ್ಲಿರುವಾಗ ಪಿಕ್‌ನಿಕ್ ಹೋಗಬೇಕಾದ ಒಂದು ಸಮುದ್ರ ದಂಡೆ ಎಂದು ವಿವರಣೆ ನೀಡಿದ್ದರು.ಒಮಾನಿನ ದಕ್ಷಿಣ ತುದಿಯಾದ ಸಲಾಲದಲ್ಲಿ ಎರಡೂವರೆ ವರ್ಷ ವಾಸಮಾಡುವ ಅವಕಾಶ ಒದಗಿ ಬಂದಿತ್ತು. ಎಷ್ಟೋ ದಿನ ಹಾಸಿಕ್‌ಗೆ ಹೋಗುವ ಯೋಚನೆ ಬಂದರೂ ಒಬ್ಬನೇ ಹೋಗುವಂತಿರಲಿಲ್ಲ. ಸುಮಾರು ಇನ್ನೂರು ಕಿ.ಮೀ. ದೂರ. ನಿರ್ಜನ ಪ್ರದೇಶ- ಪರದೇಶ ಬೇರೆ. ಹೀಗಾಗಿ ಸರಿಯಾದ ಜೊತೆ ಬೇಕಿತ್ತು.ಫೋರ್ ವೀಲರ್ ವಾಹನವೂ ಬೇಕಿತ್ತು. ದೋಫಾರ್ ಪವರ್ ಕಂಪನಿಯಲ್ಲಿ ಹಿರಿಯ ಎಂಜಿನಿಯರ್ ಆಗಿರುವ ಮೋಹನ್ ಟಿ ಮತ್ತು ಶಾರದಾ ಅವರು ನಮ್ಮ ಸಹಾಯಕ್ಕೆ ಬಂದರು. ಇಲ್ಲಿ ವಾರದ ರಜೆ ಶುಕ್ರವಾರ. ಒಂದು ಶುಕ್ರವಾರ ಹಾಸಿಕ್‌ಗೆ ಹೋಗಲು ಕಾಲ ಕೂಡಿ ಬಂತು.ಹಾಸಿಕ್ ಸಲಾಲದಿಂದ ಪೂರ್ವಕ್ಕಿದೆ. ಎಡಕ್ಕೆ ಪರ್ವತ ಸಾಲು ಬಲಕ್ಕೆ ಹಿಂದೂ ಮಹಾಸಾಗರ. ನಡುವೆ ಕಡಿದಾದ, ಸಮತಟ್ಟಾದ ರಸ್ತೆ. ಟಾಕಾ, ಮಿರಬಾತ್, ಸಾದಾ ಊರುಗಳನ್ನು ದಾಟಿ ಒಂದೇ ಒಂದು ನರಹುಳವಾಗಲೀ ನಿಜಹುಳವಾಗಲೀ ರಸ್ತೆಗೆ ಅಡ್ಡಬರದ ದಾರಿಯಲ್ಲಿ ಸಾಗುವಾಗ ಇದು ಭೂರಮೆಯ ಸೆರಗಿನ ತುದಿಯೋ ಎಂಬ ಸಂದೇಹ ಬರುತ್ತದೆ. ಯಾಕೆಂದರೆ ಇಲ್ಲಿಂದ ಮುಂದಕ್ಕೆ ರಸ್ತೆ ಇಲ್ಲ. ಎದುರಾಗುವುದು ಕಡಿದಾದ ಗುಡ್ಡಗಳು ಮಾತ್ರ.ಬೆಳಿಗ್ಗೆ ಬೇಗ ಹೊರಡಬೇಕೆಂದುಕೊಂಡರೂ ಮಕ್ಕಳು ತಯಾರಿ ಆಗುವಾಗ ಗಂಟೆ ಒಂಬತ್ತಾಯಿತು. ಮೋಹನ್ ಅವರ ಇಸುಜು ಗಾಡಿ ಘಟ್ಟದಲ್ಲಿ ಏರಿಳಿಯುವಾಗ ಮಗಳು ಸ್ಫೂರ್ತಿಗೆ ವಾಂತಿ. ಸುಧಾರಿಸಿಕೊಂಡು ಮುಂದೆ ಬಂದರೆ ಏರುಬಿಸಿಲು. ಬಟಾಬಯಲು. ಹಸಿರಿನ ಉಸಿರಿರದ ಪರ್ವತ ಶ್ರೇಣಿಗಳು. ಎಂದೋ ನೀರು ಹರಿದ ಕುರುಹುಗಳು.ರಸ್ತೆಯ ಬಲಕ್ಕೆ ಉದ್ದಕ್ಕೂ ಸಮುದ್ರ ತೀರ. ಆದರೆ ಅಬ್ಬರಿಸಿ ಬರುವ ತೆರೆಗಳಿಲ್ಲ. ತುಂಬಿದ ಕೊಡದ ತುಳುಕಿನ ಹಾಗೆ. ಹೆಚ್ಚೆಂದರೆ ಕುಕ್ಕರಹಳ್ಳಿಕೆರೆಯಲ್ಲಿ ತುಳುಕುವ ನೀರಿನ ಹಾಗೆ. ಗಂಭೀರವಾಗಿ ನೀರು ನಿಂತಂತೆ ಕಾಣುತ್ತಿತ್ತು. ಮುಂದೆ ಹೋದಂತೆ ಕಡುಹಸಿರು ಬಣ್ಣದ ಕಪ್ಪು ನೀರು. ಅದೆಷ್ಟು ಆಳವೋ ಅದರೊಳಗೆ ಅದೆಂಥ ಭಯಾನಕ ಲೋಕವೋ! ದೂರದಿಂದ ನೋಡುವಾಗಲೇ ಹೆದರಿಸುವಂತಿತ್ತು.ಹಾಸಿಕ್ ತಲುಪುವಾಗ ನಡುಮಧ್ಯಾಹ್ನ. ಅಲ್ಲಿ ಬಂದು ನಿಂತರೆ ನೆರಳಿಲ್ಲ, ಅಂಗಡಿ ಸಾಲುಗಳಿಲ್ಲ, ಜನರ ಸುಳಿವಿಲ್ಲ. ಸುಸ್ತಾಗಿದ್ದ ಸ್ಫೂರ್ತಿಗೆ ಇಲ್ಲೇನಿದೆಯೆಂದು ಬಂದೆವೊ ಎಂಬ ಕೋಪ. ‘ಇಳಿದು ನೋಡು ಮಾರಾಯ್ತಿ’ ಎಂದು ಸಮಾಧಾನ ಮಾಡಿದೆ. ಆ ದಿನ ಒಂದೆರಡು ಕಾರು ಬಿಟ್ಟರೆ ಪ್ರವಾಸಕ್ಕೆ ಬಂದವರೂ ಯಾರಿರಲಿಲ್ಲ. ಕಾರಿಂದ ಕೆಳಗೆ ಇಳಿದರೆ ಕೊಲ್ಲಿ ರಾಷ್ಟ್ರದ ಸುಡುಸುಡು ಬಿಸಿಲು. ಒಂದು ಕ್ಷಣ ನಮಗೂ ನಿರಾಸೆಯೆನಿಸಿದ್ದು ನಿಜ. ಆದರೆ ಹಾಸಿಕದ ನೈಜ ಆಕರ್ಷಣೆ ಬೇರೆಯಿತ್ತು!ಅದು ಪರ್ವತದ ಮೇಲಿಂದ ಹನಿಹನಿಯಾಗಿ ಬೀಳುವ ತಣ್ಣನೆ ನೀರು, ಕೊಲ್ಲಿ ರಾಷ್ಟ್ರಗಳಲ್ಲಿ ಅನನ್ಯವಾದುದು. ವರ್ಷದುದ್ದಕ್ಕೂ ಬೀಳುವ ಈ ತಣ್ಣನೆ ನೀರಿಗೆ ಮೈಯೊಡ್ಡಿನಿಲ್ಲುವುದೇ ಒಂದು ಅನುಭವ. ನುರಿತವರು ಮಾಡುವ ಮಸಾಜಿನ ಹಾಗೆ. ಜನ ಇದಕ್ಕಾಗಿಯೇ ದೂರದೂರಗಳಿಂದ ಇಲ್ಲಿಗೆ ಬರುತ್ತಾರೆ. ಪರ್ವತದಿಂದ ಹರಿದು ಬರುವ ಇದು ನೈಜ ಮಿನರಲ್ ವಾಟರ್. ಬೊಗಸೆಯಲ್ಲಿ ಹಿಡಿದು ಕುಡಿಯುವ ಖುಷಿಯೇ ಖುಷಿ!ತಣ್ಣೀರಲ್ಲಿ ಮಿಂದ ಖುಷಿಯಲ್ಲಿ ತಲೆಯೆತ್ತಿ ನೋಡುತ್ತೇನೆ, ಪ್ರಕೃತಿ ಮಾತೆಗೆ ತೊಡಿಸಿದ ಕಿರೀಟಗಳ ಹಾಗೆ ಪರ್ವತಸಾಲು! ಅವರವರ ಭಾವಕ್ಕೆ ತಕ್ಕಂತೆ ರೂಪಗಳು. ವಿಶೇಷವೆಂದರೆ ಒಂದೊಂದೂ ಒಂದೊಂದು ಬಣ್ಣದಲ್ಲಿವೆ. ಮಕ್ಕಳಿಗಾಗಿ ಅಮ್ಮ ಮಾಡಿದ ನಾಟಕದ ಕಿರೀಟದ ಹಾಗೆ ಮಿಂಚುತ್ತಿದ್ದವು. ಅವುಗಳನ್ನು ನಮ್ಮ ಕಣ್ಣಲ್ಲೂ ಕ್ಯಾಮರಾದಲ್ಲೂ ತುಂಬಿಕೊಳ್ಳುವುದು ಸುಲಭವಿರಲಿಲ್ಲ.ಇಲ್ಲಿಗೆ ಬರುವಾಗಲೇ ಮಧ್ಯಾಹ್ನವಾಗಿತ್ತಲ್ಲ? ಹಸಿವಾಗತೊಡಗಿತು. ಮನೆಯಿಂದ ತಂದ ಚಪಾತಿ- ಪುಳಿಯೋಗರೆ ಕಾಯುತ್ತಿದ್ದವು. ಅವನ್ನು ತಿಂದು ತಣ್ಣನೆ ನೀರು ಕುಡಿದೆವು. ಮಕ್ಕಳು ಸಮುದ್ರ ದಂಡೆಗೆ ಹೋದರು. ನಾವು ಪರ್ವತದ ನೆರಳಲ್ಲಿ ಕುಳಿತು ಹರಟೆಹೊಡೆದೆವು. ಈ ಜಾಗದಿಂದ ಒಂದು ಕಿ.ಮೀ. ದೂರದಲ್ಲಿ ಹಾಸಿಕ್ ಊರಿದೆಯಂತೆ. ಅದು ಒಂದು ಕಾಲದಲ್ಲಿ ಮಹತ್ವದ ಬಂದರು. ಈಗ ಮೀನು ಹಿಡಿಯಲಿಕ್ಕಷ್ಟೇ ಸೀಮಿತ. ಪುರಾತನ ಊರು ಈಗಲೂ ಇದೆ.ಒಮಾನಿಗಳಿಗೆ ಹಾಸಿಕ್ ಒಳ್ಳೆಯ ಪಿಕ್‌ನಿಕ್ ತಾಣ. ಹತ್ತಾರು ಗಂಡಸರು ಕಾರುಗಳಲ್ಲಿ ಬಂದು ವಾರಾಂತ್ಯಗಳನ್ನು ಇಲ್ಲಿ ಕಳೆಯುತ್ತಾರೆ. ಜಗತ್ತಿನ ಎಲ್ಲ ಚಟುವಟಿಕೆಗಳಿಂದ ದೂರ ಇರುವಂತೆ ಕಾಣುವ ಈ ದಂಡೆಯಲ್ಲಿ ಪಟ್ಟಾಂಗ ಹೊಡೆಯುತ್ತಾ, ಇಸ್ಪೀಟು ಆಡುತ್ತಾ ಕಾಲಕಳೆಯುತ್ತಾರೆ; ಬರುವಾಗ ಮಾಂಸ, ಹಾಲು, ಉರುವಲುಗಳನ್ನೂ ತರುತ್ತಾರೆ. ಗಾಳಹಾಕಿ ತಾಜಾ ತಾಜಾ ಮೀನು ಹಿಡಿಯುತ್ತಾರೆ. ಇಲ್ಲೇ ಬೇಯಿಸಿಕೊಂಡು ಉಪ್ಪು-ಖಾರ ಹಾಕಿ ತಿನ್ನುವುದೇ ಅವರಿಗೆ ಖುಷಿ.ಮೂರು ಗಂಟೆಯಾಗುವಾಗ ಹಾಸಿಕ್‌ದಿಂದ ಹೊರಟೆವು. ಇನ್ನೂ ಇನ್ನೂರು ಕಿ.ಮೀ. ವಾಪಸ್ಸು ಹೋಗಬೇಕಿತ್ತು. ದಾರಿಯಲ್ಲಿ ಸಾದಾ ಎಂಬ ಪುರಾತನ ಊರು ಸಿಕ್ಕಿತು. ಅದರ ಸಮುದ್ರ ದಂಡೆ ಶಂಖುಗಳಿಗೆ ಪ್ರಸಿದ್ಧ. ಇಲ್ಲಿನ ನಾಗರಿಕತೆ ಪೋರ್ಚುಗೀಸರಿಂದ ನಾಶವಾಯಿತಂತೆ. ಅಲ್ಲಿನ ಸಮುದ್ರ ದಂಡೆಯಲ್ಲಿ ಮಕ್ಕಳು ಕಪ್ಪೆಚಿಪ್ಪುಗಳನ್ನು ಆರಿಸಿಕೊಂಡರು.ಮುಂದೆ ಬರುವಾಗ ಇನ್ನೊಂದು ಸಮುದ್ರ ದಂಡೆ- ಅಲ್ಲಿ ನಾನಾ ಆಕಾರದ ಕಲ್ಲುಗಳು ಆಕರ್ಷಕವಾಗಿದ್ದವು. ಹೀಗೂ ಉಂಟೆ ಎಂದು ಅಚ್ಚರಿ ಹುಟ್ಟಿಸಿದವು. ಅವುಗಳ ಮೇಲೆ ಕುಣಿದು ಕುಪ್ಪಳಿಸಿ ಸಲಾಲಕ್ಕೆ ವಾಪಸ್ಸು ಬಂದಾಗ ಮನಸಿನ ತುಂಬ ಬೆಳಗಿಂದ ಕಂಡ ಚಿತ್ರಗಳು ತುಂಬಿಕೊಂಡಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.