ಬುಧವಾರ, ಮಾರ್ಚ್ 3, 2021
20 °C
ಭೂಮಿ ದಾನಿ ಭರವಸೆ ಈಡೇರಿಸದ ಸರ್ಕಾರ: ಆರೋಪ

ಹಾಸ್ಟೆಲ್‌ಗೆ ಬೀಗ ಜಡಿದು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸ್ಟೆಲ್‌ಗೆ ಬೀಗ ಜಡಿದು ಪ್ರತಿಭಟನೆ

ಶಿರಹಟ್ಟಿ: ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ನಿವೇಶನ ದಾನ ಮಾಡಿದ ವ್ಯಕ್ತಿಯು ಮಕ್ಕಳನ್ನು ಹೊರಗೆ ಕಳುಹಿಸಿ ವಸತಿ ನಿಲಯಕ್ಕೆ ಬೀಗ ಜಡಿದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ಧ  ಪ್ರತಿಭಟನೆ ನಡೆಸಿದ ಘಟನೆ ತಾಲ್ಲೂಕಿನ ನವೇಭಾವನೂರ ಗ್ರಾಮದಲ್ಲಿ ಜರುಗಿದೆ.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಸ್ಟೆಲ್‌ಗೆ ಭೂಮಿ ದಾನ ಮಾಡಿದ ನನಗೆ ಕಳೆದ ಒಂಬತ್ತು ವರ್ಷಗಳಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೀಡಿದ ಭರವಸೆಯಂತೆ ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಹನಮಂತಗೌಡ ಪಾಟೀಲ ದೂರಿದರು.ಒಂದು ಲಕ್ಷ, ಮನೆಯ ಒಬ್ಬ ಸದಸ್ಯನಿಗೆ ಸರ್ಕಾರಿ ನೌಕರಿ ಹಾಗೂ ಮನೆ ನಿರ್ಮಿಸಿ ಕೊಡಲಾಗುವುದು ಎಂದು ತಾಲ್ಲೂಕಿನ ರಾಜಕೀಯ ನಾಯಕರು ಭರವಸೆ ನೀಡಿದ್ದರು. ಇಲ್ಲಿತನಕ ಈಡೇರಿಲ್ಲ. ವೃಥಾ ಕಾಲಹರಣ ಮಾಡುತ್ತ ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕುಟುಂಬದ ಸದಸ್ಯರಾದ ನಿಂಗನಗೌಡ ಪಾಟೀಲ, ಸಂತೋಷಗೌಡ ಪಾಟೀಲ, ಹಾಗೂ ಸಿದ್ದನಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.ಕಳೆದ ಒಂಬತ್ತು ವರ್ಷಗಳ ಹಿಂದೆ ಈಗಿನ ಮುಖ್ಯಮಂತ್ರಿ ಕಾಮಗಾರಿ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಿದ್ದರು. 2014–15ರಲ್ಲಿ ಉದ್ಘಾಟನೆಗೊಂಡ ಸಂದರ್ಭದಲ್ಲಿ  ಶಾಸಕರು ಭರವಸೆ ನೀಡಿದ್ದರು. ಆದರೆ ಈಡೇರಿಲ್ಲ ಎಂದರು.ಹಾಸ್ಟೆಲ್‌ಗೆ ಬೀಗ ಜಡಿದ ಸುದ್ದಿಯನ್ನು ತಿಳಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹರ್ತಿ ಸ್ಥಳಕ್ಕೆ ಧಾವಿಸಿ ಫೆ. 27 ರೊಳಗಾಗಿ ಭೂದಾನಿಗಳ ಬೇಡಿಕೆಗಳನ್ನು ಈಡೇರಿಸುವದಾಗಿ ಭರವಸೆ ನೀಡಿದರು.ಮೂಲ ಸೌಲಭ್ಯಗಳ ಕೊರತೆ: 85 ವಿದ್ಯಾರ್ಥಿಗಳು ಇರುವ ವಸತಿನಿಲಯದಲ್ಲಿ ಮೂಲ ಸೌಕರ್ಯಗಳ ಕೊರತೆಯಿದೆ. ನಿಲಯದ ಮೈದಾನದಲ್ಲಿ ಕಲ್ಲು ಮುಳ್ಳುಗಳೇ ಆಕ್ರಮಿಸಿದ್ದು, ಮಕ್ಕಳು ಆಟವಾಡಲು ತೀವ್ರ ತೊಂದರೆಯಾಗಿದೆ. ಈ ಭಾಗದ ಬಹುದಿನ ಬೇಡಿಕೆಯಾಗಿದ್ದ ವಸತಿ ನಿಲಯಕ್ಕೆ ಅಗತ್ಯವಿರುವ ಸೌಕರ್ಯಗಳನ್ನು ಒದಗಿಸಿ ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸಬೇಕು ಎಂದು ಸತೀಶ ಕಮ್ಮಾರ, ಶಿವಾನಂದ ಪಾಟೀಲ, ಚಂದ್ರಗೌಡ ಪಾಟೀಲ ಒತ್ತಾಯ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.