ಶನಿವಾರ, ಏಪ್ರಿಲ್ 17, 2021
32 °C

ಹಿಂಗಾರು ಬೆಳೆಗೆ ಆಸರೆಯಾದ ನೀಲಂಚಂಡಮಾರುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾದಾಮಿ: `ನೀಲಂ~ ಚಂಡಮಾರುತವು ಆಂಧ್ರ ಮತ್ತು ತಮಿಳುನಾಡಿಗೆ ಶಾಪವಾದರೆ ಉತ್ತರ ಕರ್ನಾಟಕದಲ್ಲಿ ಚಂಡಮಾರುತದಿಂದ ಮಳೆಯಾಗಿ ರೈತರಿಗೆ ವರವಾಗಿ ಪರಿಣಮಿಸಿತು.ಇನ್ನೇನು ಇದೇ ರೀತಿಯಾಗಿ ಬಿಸಿಲು ಬಿದ್ದರೆ ಬಿತ್ತಿದ ಹಿಂಗಾರು ಬೆಳೆ ಬತ್ತಿ ಬಾಡಿ ಹೋಗುತ್ತವೆ ಎಂದು ರೈತರು ಕೈಕಟ್ಟಿಕೊಂಡು ಚಿಂತಾಕ್ರಾಂತರಾದಾಗ ಆಕಸ್ಮಿಕವಾಗಿ ಬಂದ `ನೀಲಂ~ ಚಂಡಮಾರುತ ಬೆಳೆಗಳಿಗೆ ಆಸರೆಯಾಗಿ ರೈತರ ಮುಖದಲ್ಲಿ ಕಳೆ ಮೂಡಿತು.ಕಳೆದ ವಾರ ಜಿಟಿಜಿಟಿ ಮಳೆ ಮತ್ತು ಕೆಲಕಾಲ ಧಾರಾಕಾರ ನೀಲಂ ಚಂಡ ಮಾರುತ ಮಳೆಯಿಂದ ದಿನದಿಂದ ದಿನಕ್ಕೆ ಹಿಂಗಾರು ಜೋಳ, ಕಡಲೆ, ಕುಸುಬೆ, ಗೋಧಿ, ಸೂರ್ಯಕಾಂತಿ ಹಾಗೂ ಹುರಳಿ ಬೆಳೆಯು ಹೊಲದಲ್ಲಿ ಹಸುರಿನಿಂದ ನಯನ ಮನೋಹರವಾಗಿ ಕಂಗೊಳಿಸಿ ರೈತರು ಸಂತಸದಲ್ಲಿದ್ದಾರೆ.ರೈತನಿಗೆ ಭಾಷೆ ಕೊಟ್ಟ ಉತ್ತರಿ ಮಳೆಯು ಈ ಬಾರಿ ಕೊಟ್ಟಿತು. ಸಾಮಾನ್ಯವಾಗಿ ಎಲ್ಲ ರೈತರು ಹಿಂಗಾರು ಬಿತ್ತನೆ ಕಾರ್ಯವನ್ನು ಉತ್ತರಿ ಮಳೆಗೆ ಭೂಮಿಗೆ ಬೀಜವನ್ನು ಹಾಕುವರು.ಈ ಮಳೆಗೆ ಬಿತ್ತಿದರೆ ಬೆಳೆಯು ನಾಟಿ ಹುಲುಸಾಗಿ ಬೆಳೆದು ಅಧಿಕ ಇಳುವರಿ ಬರುವುದು ಎಂಬ ನಂಬಿಕೆ ಎಂದು ರೈತ ಮಲ್ಲಪ್ಪ ಹೊಸಮನಿ ಹೇಳಿದರು.ಉತ್ತರಿ ಮಳೆಯು ಕೈಕೊಟ್ಟದ್ದರಿಂದ ರೈತರು ಭಾರಿ ನಿರಾಶೆಯಾದರು.ಆದರೆ ಹಸ್ತ ಮಳೆಯು ತಾಲ್ಲೂಕಿನಲ್ಲಿ ರೈತರಿಗೆ ಸ್ವಲ್ಪು ಅನುಕೂಲ ಮಾಡಿದ್ದರಿಂದ ಬಿತ್ತನೆಯ ಕಾರ್ಯ ಚುರುಕಾಗಿ ನಡೆದವು.ತಾಲ್ಲೂಕಿನ ಕಪ್ಪು ಮಣ್ಣಿನ ಭೂಮಿಯಲ್ಲಿ ಬಾದಾಮಿ ಸೇರಿದಂತೆ ಹಲಕುರ್ಕಿ, ಕಟಗೇರಿ, ಹಂಸನೂರು, ಕೆಲವಡಿ, ಹೆಬ್ಬಳ್ಳಿ, ಮಣ್ಣೇರಿ,ಖ್ಯಾಡ, ಮುಮರೆಡ್ಡಿಕೊಪ್ಪ, ಸುಳ್ಳ, ಕಿತ್ತಲಿ, ನಂದಿಕೇಶ್ವರ, ಪಟ್ಟದಕಲ್ಲು ಮತ್ತಿತರ ಕಡೆ ಬಿತ್ತನೆಯಾದ ಹಿಂಗಾರು ಬೆಳೆಗಳು  ಹಸಿರಾಗಿ ರೈತಾಪಿ ವರ್ಗ ಸಂತಸದಲ್ಲಿದ್ದಾರೆ.ತಾಲ್ಲೂಕಿನ ಒಟ್ಟು ಹಿಂಗಾರು ಬೆಳೆಯ 48000 ಹೆಕ್ಟೇರ್ ಕ್ಷೇತ್ರದ ಪೈಕಿ 43440 ಹೆಕ್ಟೇರ್ ಕ್ಷೇತ್ರವು ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆಯಿಂದ ತಿಳಿದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.