ಗುರುವಾರ , ಮೇ 13, 2021
18 °C

`ಹಿಂಡಲಗಾ ಜೈಲಿನಲ್ಲಿ ಅಕ್ರಮ ತಡೆಯಲು ಕ್ರಮ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: `ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಶೀಘ್ರದಲ್ಲೇ ಅಲ್ಲಿ ಸಭೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು' ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.ಸಾರ್ವಜನಿಕರಿಂದ ಅಹವಾಲು ಆಲಿಸಲು ನಗರಕ್ಕೆ ಸೋಮವಾರ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, `ಹಿಂಡಲಗಾ ಜೈಲಿನಲ್ಲಿ ಕೈದಿಗಳಿಗೆ ಮೊಬೈಲ್, ಮದ್ಯ ಪೂರೈಕೆಯಾಗುತ್ತಿರುವ ಕುರಿತು ಮೇಲಿಂದ ಮೇಲೆ ವರದಿಯಾಗುತ್ತಿದೆ.ಈ ಹಿನ್ನೆಲೆಯಲ್ಲಿ ಬಂಧಿಖಾನೆ ಇಲಾಖೆಯ ಉಪ ಮಹಾ ನಿರೀಕ್ಷಕರು ಜೈಲಿಗೆ ಭೇಟಿ ನೀಡಿ ತನಿಖೆ ನಡೆಸಿದ್ದು, ಇದರಲ್ಲಿ ಶಾಮೀಲಾಗಿರುವ 9 ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ. ಹಲವು ವರ್ಷಗಳಿಂದ ಒಂದೇ ಜೈಲಿನಲ್ಲಿ ಅಧಿಕಾರಿಗಳು ಇರುವುದು' ಎಂದು ತಿಳಿಸಿದರು.`ಜೈಲಿನಲ್ಲಿ ಶೀಘ್ರದಲ್ಲೇ ಮೊಬೈಲ್ ಜಾಮರ್ ಅಳವಡಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು. ವಾಸ್ತವ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳಲು ಜೈಲಿಗೆ ಶೀಘ್ರದಲ್ಲೇ ಭೇಟಿ ನೀಡಿ, ಸಭೆ ನಡೆಸಲಾಗುವುದು' ಎಂದು ತಿಳಿಸಿದರು.ಮಳೆಗೆ 10 ಬಲಿ

`ಮಳೆಗಾಲ ಆರಂಭವಾದಾಗಿನಿಂದ ಇದುವರೆಗೆ ಜಿಲ್ಲೆಯಲ್ಲಿ ಮಳೆ ಹಾಗೂ ಸಿಡಿಲಿಗೆ ಒಟ್ಟು 10 ಜನರು ಬಲಿಯಾಗಿದ್ದಾರೆ. ಇವುಗಳ ಪೈಕಿ ಈಗಾಗಲೇ 6 ಕುಟುಂಬಗಳಿಗೆ ತಲಾ 1.50 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗಿದೆ. ಶೀಘ್ರದಲ್ಲೇ ಉಳಿದ 4 ಕುಟುಂಬದವರಿಗೆ ಪರಿಹಾರ ನೀಡಲಾಗುವುದು' ಎಂದು ತಿಳಿಸಿದರು.`ಮಳೆಯಿಂದಾಗಿ ಜಿಲ್ಲೆಯಲ್ಲಿ 122 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ಸಂತ್ರಸ್ತರಿಗೆ ತಲಾ 1500 ರೂಪಾಯಿ ಪರಿಹಾರ ನೀಡಲಾಗುವುದು' ಎಂದು ಸಚಿವರು ತಿಳಿಸಿದರು.`ಜಿಲ್ಲೆಯಲ್ಲಿ ಮಳೆ ಆರಂಭವಾಗಿರುವುದರಿಂದ ಶೇ. 50ರಷ್ಟು ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿದೆ. ಸಮಸ್ಯೆ ಇರುವ ಕಡೆ ತಹಸೀಲ್ದಾರರು ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರವು ಒಪ್ಪಿಕೊಂಡಂತೆ ತನ್ನ ಜಲಾಶಯದಿಂದ ಕೃಷ್ಣಾ ನದಿಗೆ ನಿಗದಿಪಡಿಸಿದಷ್ಟು ನೀರನ್ನು ಹರಿಸಿದ್ದು, ಹಿಪ್ಪರಗಿ ಜಲಾಶಯದವರೆಗೂ ನೀರು ತಲುಪಿದೆ' ಎಂದು ತಿಳಿಸಿದರು.ನಗರ ಅಭಿವೃದ್ಧಿಗೆ ಒತ್ತು

`ಎರಡನೇ ರಾಜಧಾನಿ ಎನಿಸಿಕೊಳ್ಳುತ್ತಿರುವ ಬೆಳಗಾವಿ ನಗರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಲಾಗುವುದು. ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿ, ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ವಾರದೊಳಗೆ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ, ಜಿಲ್ಲೆಯ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು' ಎಂದು ಜಾರಕಿಹೊಳಿ ತಿಳಿಸಿದರು.`ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧೀಜಿ ವಹಿಸಿದ್ದ ಸ್ಮರಣೆಗಾಗಿ ನಗರವನ್ನು ಪಾರಂಪರಿಕವಾಗಿ ಅಭಿವೃದ್ಧಿಗೊಳಿಸುವ ಕುರಿತು ಮಾಜಿ ಶಾಸಕ ಅಭಯ ಪಾಟೀಲ ಅವರು ಒಂದು ಯೋಜನೆಯ ಪ್ರಸ್ತಾವವನ್ನು ಸಲ್ಲಿಸಿದ್ದರು. ಇದರಲ್ಲಿನ ಹಲವು ಪ್ರಮುಖ ಅಂಶಗಳನ್ನು ಅನುಷ್ಠಾನಗೊಳಿಸಲು ಯತ್ನಿಸುತ್ತೇನೆ' ಎಂದು ಸಚಿವರು ತಿಳಿಸಿದರು.`ವಿದ್ಯುತ್ ಸಮಸ್ಯೆ ಉದ್ಭವಿಸದಂತೆ ಎಚ್ಚರಿಕೆ ವಹಿಸಬೇಕು. ಅನಿವಾರ್ಯ ಇರುವಾಗ ವಿದ್ಯುತ್ ಕಡಿತಗೊಳಿಸುವ ಮುನ್ನ ಸಾರ್ವಜನಿಕರಿಗೆ ತಪ್ಪದೇ ಮೊದಲು ಮಾಹಿತಿ ನೀಡಬೇಕು. ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು' ಎಂದು ತಿಳಿಸಿದರು.`ಅಬಕಾರಿ ಇಲಾಖೆಯಿಂದ ರಾಜ್ಯದ ಬೊಕ್ಕಸಕ್ಕೆ 11 ಸಾವಿರ ಕೋಟಿ ಆದಾಯ ಬರುತ್ತಿದೆ. ಹೀಗಾಗಿ ಇಲಾಖೆಗೆ ಆಧುನಿಕ ಸ್ಪರ್ಶ ನೀಡಲು ಹೆಚ್ಚಿನ ಅನುದಾನ ನೀಡುವಂತೆ ಬೇಡಿಕೆ ಇಡಲಾಗಿದೆ. ಅಬಕಾರಿ ಸಿಬ್ಬಂದಿಗಳಿಗೆ ಅತ್ಯಾಧುನಿಕ ಉಪಕರಣಗಳನ್ನು ನೀಡುವ ಬಗ್ಗೆ ಚಿಂತನೆ ನಡೆದಿದೆ' ಎಂದು ತಿಳಿಸಿದರು.ಜಿಲ್ಲಾಧಿಕಾರಿ ಎನ್. ಜಯರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರವೀಣ ಕುಮಾರ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.