ಭಾನುವಾರ, ಫೆಬ್ರವರಿ 28, 2021
23 °C

ಹಿಮ ಸಾಗರವೀ ಸ್ಕಂದಗಿರಿ

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಹಿಮ ಸಾಗರವೀ ಸ್ಕಂದಗಿರಿ

ಬೆಂಗಳೂರಿನಿಂದ ಸುಮಾರು 70 ಕಿ.ಮೀ ದೂರವಿರುವ ಸ್ಕಂದಗಿರಿ ಬೆಟ್ಟದ ಸುತ್ತಮುತ್ತ ಡಿಸೆಂಬರ್‌ ಮತ್ತು ಜನವರಿಯಲ್ಲಿ ಮಾತ್ರ ದಟ್ಟ ಮೋಡ ಕವಿಯುತ್ತದೆ. ನಸುಕಿನ 5 ರಿಂದ 7ರ ವೇಳೆಗೆ ಬೆಟ್ಟದ ತುದಿ ತಲುಪಿದರೆ, ಮೋಡ ಸ್ಪರ್ಶಿಸುವ ಪುಟ್ಟ ಪ್ರಯತ್ನ ಮಾಡಬಹುದು. ನಂದಿ ಗಿರಿಧಾಮದ ಬದಿಯಲ್ಲಿರುವ ಈ ಬೆಟ್ಟ ಬೆಳಕಿಗೆ ಬಂದದ್ದು ಕಡಿಮೆ.ಕೈ ಚಾಚಿದಷ್ಟು ಸಮೀಪದಿ ಸಿಗುವ ಬೆಳ್ಳಿ ಮೋಡ. ಅದರ ಮೇಲೆ ನಾಜೂಕು ಹೆಜ್ಜೆಯಿಟ್ಟು ಮುಂದೆ ಸಾಗುವ ಹಂಬಲ. ಮನದುಂಬುವಷ್ಟು ಮಂಜು ಹಿಡಿದು ಮನೆಗೆ ಕದ್ದುಮುಚ್ಚಿ ಒಯ್ಯುವ ಹುಚ್ಚು, ತಳಪಾಯವಿಲ್ಲದ ಸಮುದ್ರದ ಅಲೆಗಳಲ್ಲಿ ಆಯಾಸಗೊಳ್ಳದೇ ಸೂರ್ಯನವರೆಗೆ ಈಜುವ ಬಯಕೆ...

 

ಹೀಗೆ ಮನದಾಳದಲ್ಲಿ ಆಕಾಂಕ್ಷೆ ಹೊತ್ತು ಕವಿಯತ್ರಿ ಉಷಾ ಆ ಬೆಟ್ಟವನ್ನೇರಿ ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದಾಗ, ವರ್ಣಿಸಲು ಪದಗಳು ಸಿಗಲಿಲ್ಲ. ಕೆಲ ಹೊತ್ತಿನ ಬಳಿಕ ಒಂದೊಂದೇ ಪದ ಸಿಕ್ಕವಾದರೂ ನಂತರ ಸಂಭ್ರಮದಿ ಮಾತುಗಳೇ ಹೊರಳಲಿಲ್ಲ. ನೀಲಾಕಾಶ ಸೂರ್ಯನಿಂದ ಕೆಂಪಾಗುವುದು ಕಂಡು ಕಣ್ಣು ಮಿಟುಕಿಸಲಿಲ್ಲ.ಚಿಕ್ಕಬಳ್ಳಾಪುರ ತಾಲ್ಲೂಕಿನ ಕಳವಾರ ಗ್ರಾಮದ ಸಮೀಪವಿರುವ ಸ್ಕಂದಗಿರಿ ಬೆಟ್ಟ ಕವಿಯತ್ರಿ ಮೇಲೆ ಮಾಡಿದ ಹಿತವಾದ ಪರಿಣಾಮವಿದು. ಉಷಾ ಒಬ್ಬರಷ್ಟೇ ಅಲ್ಲ, ಕವಿಯಾಗುವ ಅದಮ್ಯ ಉತ್ಕಟತೆ ಮತ್ತು ಎತ್ತರದ ಮೋಡ ಬಾಚಿ ತಬ್ಬಿಕೊಳ್ಳುವ ಉಮೇದಿನಲ್ಲಿ ಇರುವವರಿಗೆ ಸ್ಕಂದಗಿರಿ ಹೇಳಿ ಮಾಡಿಸಿದ ತಾಣ. ಬೆಟ್ಟದ ತುತ್ತ ತುದಿಗೆ, ಅದರಲ್ಲೂ ಮುಂಜಾವಿನ 5 ರಿಂದ 7ರವರೆಗಿನ ಅವಧಿಯಲ್ಲಿ ತಲುಪಿದರೆ, ಕಲ್ಪನೆಗಳ ಮೆರವಣಿಗೆ ಆರಂಭವಾಗುತ್ತದೆ.ಬೆಳ್ಳಿಮೋಡಗಳು ಇಡೀ ಬೆಟ್ಟವನ್ನು ಅಪಹರಿಸಿ ಕಾಣದ ಜಗತ್ತಿಗೆ ಹೊತ್ತೊಯ್ಯುತ್ತವೆ ಎಂಬ ಕಳವಳ ಒಂದೆಡೆ, ಮತ್ತೊಂದೆಡೆ ದೇವಾನುದೇವತೆಗಳ ಪುಷ್ಪಕ ವಿಮಾನದ ರೀತಿಯಲ್ಲಿ ಚಲಿಸುತ್ತೇವೆ ಎಂಬ ಖುಷಿ. ಸೂರ್ಯ ತಾನು ಉದಯಿಸುವ ವೇಳೆ ಆಕಾಶದ ಬಣ್ಣಗಳನ್ನು ಅದೆಷ್ಟು ಬಾರಿ ಬದಲಿಸುವನೋ? ನಿರೀಕ್ಷೆ ವ್ಯಾಪ್ತಿಗೂ ನಿಲುಕುವುದಿಲ್ಲ. ಪ್ರಸಿದ್ಧ ನಂದಿ ಗಿರಿಧಾಮದ ಬದಿಯಲ್ಲಿರುವ ಸ್ಕಂದಗಿರಿ ಈಗಲೂ ಎಲೆಮರೆಕಾಯಿಯಂತೆ ಇದೆ. ದೀಪದ ಬುಡ್ಡೆ ಕೆಳಗೆ ಕತ್ತಲು ಎಂಬಂತೆ ನಂದಿ ಗಿರಿಧಾಮದ ದಟ್ಟ ಪ್ರಭಾವದಿಂದ ಅದು ಹೆಚ್ಚು ಬೆಳಕಿಗೆ ಬಂದಿಲ್ಲ. ಇದೆಲ್ಲವನ್ನೂ ಬದಿಗಿರಿಸಿ ಬೆಟ್ಟವನ್ನೇರಿದರೆ, ಇದಕ್ಕಿಂತ ಸುಂದರ ಜಾಗ ಇನ್ನೊಂದಿಲ್ಲ ಎಂಬ ಭಾವನೆ ಮೂಡದೇ  ಇರುವುದಿಲ್ಲ. ಕಡಿದಾದ ದಾರಿಯಲ್ಲಿರುವ ಬಂಡೆಗಲ್ಲುಗಳನ್ನು ದಾಟಿ ಹತ್ತುವಾಗಿನ ಪ್ರಯಾಸ ಬೆಟ್ಟದ ತುದಿ ತಲುಪಿದಾಗ ಕೆಲವೇ ಕ್ಷಣಗಳಲ್ಲಿ ಕಾಣೆಯಾಗುತ್ತದೆ.ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 1530 ಮೀಟರ್‌ ಎತ್ತರದಲ್ಲಿರುವ ಸ್ಕಂದಗಿರಿಗೆ ಈಗಲೂ ಅಚ್ಚುಕಟ್ಟಾದ ರಸ್ತೆಯಿಲ್ಲ. ಇಂತಹದೊಂದು ವಿಶಿಷ್ಟ ಸ್ಥಳ ಇದೆ ಎಂಬುದಕ್ಕೆ ಯಾವುದೇ ನಾಮಫಲಕ, ಸೂಚನಾಫಲಕವೂ ಅಲ್ಲಿಲ್ಲ. ಕಳವಾರ ಗ್ರಾಮದ ಪಾಪಾಘ್ನಿ ಮಠದ ಹಿಂಬದಿಯಿಂದ ನಡಿಗೆ ಪ್ರಯಾಣ ಆರಂಭಿಸಿದರೆ, ಬೆಟ್ಟದ ತುದಿ ತಲುಪಲು ಕನಿಷ್ಠ 2 ಗಂಟೆ ಬೇಕು. ಕಾಲುದಾರಿಯುದ್ದಕ್ಕೂ ಎರಡೂ ಬದಿಗಳಲ್ಲಿ ಗಿಡಗಂಟಿಗಳಿದ್ದು, ಅಲ್ಲಲ್ಲಿ ಸಿಗುವ ಬೃಹತ್‌ ಬಂಡೆಗಲ್ಲುಗಳ ಮೇಲೆ ವಿರಮಿಸಬಹುದು.ಚೆಂದನೆಯ ಸೂರ್ಯೋದಯ ನೋಡಬೇಕೆಂದೇ ಬಹುತೇಕ ಮಂದಿ ಮಧ್ಯರಾತ್ರಿ 3ರ ಸುಮಾರಿಗೆ ಬೆಟ್ಟವನ್ನೇರಲು ಆರಂಭಿಸುತ್ತಾರೆ. ಇನ್ನೂ ಕೆಲವರು ರಾತ್ರಿ 8ರಿಂದ ಕಾರ್ಯಾಚರಣೆ ಆರಂಭಿಸುತ್ತಾರೆ. ನೀರು, ತಂಪು ಪಾನೀಯ ಮತ್ತು ಕೊಂಚ ತಿಂಡಿ ತಿನಿಸು ಒಯ್ಯುವ ಅವರು ಬೆಟ್ಟದ ತುದಿ ತಲುಪಿದಾಗ ಅವುಗಳನ್ನು ಸವಿಯುತ್ತಾರೆ. ಅಸ್ಪಷ್ಟ ಕಾಲುದಾರಿ ಇರುವ ಕಾರಣ ಟಾರ್ಚ್‌ ಹಿಡಿದು ನಡೆದರೂ ದಾರಿ ತಪ್ಪಿ ಕಾಡಿಗೆ ನುಸುಳುವ ಸಾಧ್ಯತೆಯೇ ಹೆಚ್ಚಿರುತ್ತದೆ.ಕೆಲ ತಿಂಗಳ ಹಿಂದೆ ಕೇರಳದ ರಾಜ್ಯದ ನಾಲ್ವರು ಯುವಕರು ಬೆಟ್ಟವನ್ನೇರಲು ಯತ್ನಿಸಿ, ದಟ್ಟವಾದ ಕಾಡಿನಲ್ಲಿ ತಪ್ಪಿಸಿಕೊಂಡಿದ್ದರು. ಅವರನ್ನು ಹಗಲುರಾತ್ರಿ ಎನ್ನದೇ ಹುಡುಕಿ ವಾಪಸ್‌ ನಗರಕ್ಕೆ ಕರೆ ತರುವುದರಲ್ಲಿ ಅರಣ್ಯ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿಗಳಿಗೆ ಸಾಕುಸಾಕಾಯಿತು. ಮೋಡದ ಬಗೆಬಗೆಯ ಛಾಯಾಚಿತ್ರಗಳನ್ನು ಕ್ಲಿಕ್ಕಿಸಲು ಯತ್ನಿಸಿ, ಯುವಕನೊಬ್ಬ ಜಾರಿ ಬಿದ್ದು ಪ್ರಾಣವನ್ನೇ ಕಳೆದುಕೊಂಡ. ಆತನನ್ನು ಪತ್ತೆ ಮಾಡಲು ಸಹ ಪೊಲೀಸರು ಪ್ರಯಾಸ ಪಟ್ಟಿದ್ದರು.ಇಂತಹ ಅವಘಡ ಜರುಗುತ್ತವೆಯೆಂದು ನಾವು ಯಾರನ್ನೂ ಮಧ್ಯರಾತ್ರಿ ವೇಳೆ ಬೆಟ್ಟವನ್ನೇರಲು ಅವಕಾಶ ನೀಡುತ್ತಿಲ್ಲ. ಬೆಟ್ಟದ ಬಳಿ ಕಾವಲಿರುವ ಅರಣ್ಯ ಸಿಬ್ಬಂದಿ ಯಾರನ್ನೂ ಬೆಟ್ಟದ ಸುತ್ತಮುತ್ತ ಸುಳಿಯಲೂ ಬಿಡುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.ಪಾಳೇಗಾರರ ಮೆಚ್ಚಿನ ತಾಣ

ಸ್ಕಂದಗಿರಿ ಬೆಟ್ಟ ಹಲವು ವರ್ಷಗಳ ಕಾಲ ಪಾಳೇಗಾರರ ವಶದಲ್ಲಿತ್ತು. ಶತ್ರುವಿನ ಕಾಟದಿಂದ ತಪ್ಪಿಸಿಕೊಳ್ಳಲು ಮತ್ತು ಚೆಂದದ ಪರಿಸರದಲ್ಲಿ ಬದುಕಲು ಅವರು ಬೆಟ್ಟದ ಮೇಲೆ ಕೋಟೆ ನಿರ್ಮಿಸಿಕೊಂಡಿದ್ದರು. ದೈವಭಕ್ತರಾಗಿದ್ದ ಅವರು ಪುರಾತನ ದೇಗುಲ ನಿರ್ಮಿಸಿ, ಪ್ರತಿ ನಿತ್ಯವೂ ದೇವರ ಪೂಜೆ ಮಾಡುತ್ತಿದ್ದರು. ಶತಮಾನಗಳು ಕಳೆದರೂ ಪುರಾತನ ದೇಗುಲ ಈಗಲೂ ಯಥಾಸ್ಥಿತಿಯಿದೆ. ಒಳಾವರಣದಲ್ಲಿ ಇರಬೇಕಾದ ನಂದಿ ಹೊರಾವರಣದಲ್ಲಿ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.