ಮಂಗಳವಾರ, ಜೂನ್ 15, 2021
21 °C

ಹಿರಿಯೂರು ಪುರಸಭೆಯಲ್ಲಿ ಗಂಡಂದಿರ ದರ್ಬಾರ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ಪುರಸಭೆಯಲ್ಲಿ ಮಹಿಳಾ ಸದಸ್ಯರ ಪರ ಅವರ ಗಂಡಂದಿರು ಅಧಿಕಾರಿ ಚಲಾಯಿಸಿ ಆಡಳಿತದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಜಿಲ್ಲಾ ಯೋಜನಾ ಸಮಿತಿ ಸದಸ್ಯ ಮತ್ತು ಹಿರಿಯೂರು ಪುರಸಭಾ ಸದಸ್ಯ ಜಿ. ಧನಂಜಯಕುಮಾರ್ ಎಂದು ದೂರಿದ್ದಾರೆ.ಈ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ದಾಖಲೆಗಳ ಸಮೇತ ದೂರು ಅವರು ದೂರು ಸಲ್ಲಿಸಿದ್ದಾರೆ.

ಆಡಳಿತದಲ್ಲಿ ಪುರಸಭಾ ಅಧ್ಯಕ್ಷರ ಪತಿಯ ಹಸ್ತಕ್ಷೇಪ ನಿಯಂತ್ರಿಸಬೇಕು. ಮಹಿಳೆಯರಿಗೆ ಸಂವಿಧಾನದತ್ತವಾಗಿ ದೊರೆತಿರುವ ಹಕ್ಕುಗಳನ್ನು ರಕ್ಷಿಸಬೇಕು. ಪ್ರತಿ ಹಂತದಲ್ಲೂ ಹಸ್ತಕ್ಷೇಪ ಮಾಡುತ್ತಿರುವುದರಿಂದ ಅಧ್ಯಕ್ಷರ ಸದಸ್ಯತ್ವವನ್ನು ಅನೂರ್ಜಿತ ಗೊಳಿಸುವಂತೆ ಒತ್ತಾಯಿಸಿದ್ದಾರೆ.ಕರ್ನಾಟಕ ಪುರಸಭೆಗಳ ಅಧಿನಿಯಮ 1964ರ ಸೆಕ್ಷನ್ 43ರ ಕಲಂ(ಖ) ಪ್ರಕಾರ ಅಧ್ಯಕ್ಷರು ಮುನ್ಸಿಪಲ್ ಕೌನ್ಸಿಲ್‌ನ ಹಣಕಾಸು ಮತ್ತು ಕಾರ್ಯನಿರ್ವಾಹಕ ಆಡಳಿತದ ಮೇಲೆ ನಿಗಾ ಇಡಬೇಕು. ವಿನಃ ಹಣ ಬಿಡುಗಡೆ ಮಾಡುವ ಯಾವುದೇ ಕಡತಗಳಿಗೆ ಸಹಿ ಹಾಕುವಂತಿಲ್ಲ ಎಂದು ಸ್ಪಷ್ಟವಾಗಿ ಇದ್ದರೂ ಹಿರಿಯೂರು ಪುರಸಭಾಧ್ಯಕ್ಷೆ ಮಂಜುಳ ಅವರು ಹಣ ಪಾವತಿಸುವ ಕಡತಗಳಿಗೆ ಸಹಿ ಮಾಡುತ್ತಿದ್ದಾರೆ.ಗುತ್ತಿಗೆದಾರರನ್ನು ಹೆದರಿಸಿ, ಬೆದರಿಸಿ ಭ್ರಷ್ಟಾಚಾರಕ್ಕೆ ನಾಂದಿ ಹಾಡುತ್ತಿದ್ದಾರೆ. ಅವರ ಪತಿ ಎಚ್. ವೆಂಕಟೇಶ್ ಅವರು ನಿತ್ಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾ ಅಧ್ಯಕ್ಷರಿಗೆ ಸಲಹೆ ಸೂಚನೆಗಳನ್ನು ನೀಡುವುದು, ಕಡತಗಳನ್ನು ಮನೆಗೆ ತರಿಸಿಕೊಂಡು ನೋಡುವುದು, ಗುತ್ತಿಗೆದಾರರ ಮೇಲೆ ಒತ್ತಡ ತಂತ್ರಗಳನ್ನು ತರುವುದು ಸೇರಿದಂತೆ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಇದರಿಂದ ಗುತ್ತಿಗೆದಾರರು, ಇತರ ಬಿಲ್‌ಗಳನ್ನು ಪಡೆಯುವವರು ಹಿರಿಯೂರು ಪುರಸಭೆಗೆ ಛೀಮಾರಿ ಹಾಕುತ್ತಿದ್ದು, ಪುರಸಭೆಯ ಮಾನ ಹರಾಜು ಆಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಸ್ಥಳೀಯ ಸಂಸ್ಥೆಗಳಲ್ಲಿ ಪಾರದರ್ಶಕ ಆಡಳಿತ ನಡೆಸಬೇಕಾದರೆ, ಮಹಿಳಾ ಸದಸ್ಯರ ಸಹೋದರರಾಗಲಿ, ಸ್ನೇಹಿತರಾಗಲಿ, ಬಂಧುಗಳಾಗಲಿ, ಗಂಡಂದಿರಾಗಲಿ, ಹಿಂಬಾಲಕರಾಗಲಿ ಕಚೇರಿಗಳಿಗೆ ಆಗಮಿಸುವಂತಿಲ್ಲ.  ಕಚೇರಿಗೆ ಬಂದರೂ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಒಂದು ವೇಳೆ ಹಸ್ತಕ್ಷೇಪ ಮಾಡಿದರೆ ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಸಹ ಈಗಾಗಲೇ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಪತ್ರ ಬರೆದು ಎಚ್ಚರಿಸಿದ್ದಾರೆ. ಆದರೂ ಹಸ್ತಕ್ಷೇಪ ನಿಂತಿಲ್ಲ ಎಂದು ತಿಳಿಸಿದ್ದಾರೆ.ಹಿರಿಯೂರು ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಅಧ್ಯಕ್ಷರ ಜೊತೆಯಲ್ಲೇ ಪತಿ ವೆಂಕಟೇಶ್ ಗುದ್ದಲಿ ಪೂಜೆ ನೆರವೇರಿಸುತ್ತಿರುವುದು, ಅಧ್ಯಕ್ಷರು ಬಾರದಿದ್ದರೂ ಅವರೇ ಗುದ್ದಲಿ ಪೂಜೆ ಮಾಡುತ್ತಿರುವುದನ್ನು ಛಾಯಾಚಿತ್ರ ಸಹಿತ ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗಿದೆ ಎಂದು ಧನಂಜಕುಮಾರ್ ತಿಳಿಸಿದ್ದಾರೆ.ಕಾನೂನು ಉಲ್ಲಂಘಿಸಿರುವ ಅಧ್ಯಕ್ಷೆ ಮಂಜುಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಪ್ರತಿನಿತ್ಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಪತಿ ವೆಂಕಟೇಶ್ ಅವರನ್ನು ನಿಯಂತ್ರಿಸಬೇಕು. ಗುತ್ತಿಗೆದಾರರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಬೆದರಿಕೆಗಳನ್ನು ಸ್ಥಗಿತಗೊಳಿಸಬೇಕು. ಅಧ್ಯಕ್ಷರ ನಿಗಾ ಹೊರತುಪಡಿಸಿ ಯಾವುದೇ ಹಣಕಾಸು ಬಿಡುಗಡೆಗೆ ಸಹಿ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಜಿಲ್ಲಾಡಳಿತ ನಿರ್ದೇಶನ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.