ಗುರುವಾರ , ಮೇ 28, 2020
27 °C

ಹೀಗೊಂದು ದಾಂಪತ್ಯ ಗಾಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |1917. ಮದರಾಸಿನ ಒಂದು ಚಿಕ್ಕ ಸಭೆ. ಹರೀಂದ್ರರು ಮಾತನಾಡುತ್ತಿದ್ದಾರೆ. ಬರೀ ಮಾತಲ್ಲ ಅದು.

ಅಕ್ಷರಶಃ ವಾಗ್ಝರಿ. ಹಾಡು, ಮಾತು, ಸಂಗೀತ, ಸಾಹಿತ್ಯ ಅಭಿನಯಗಳೆಲ್ಲವೂ ಒಟ್ಟಿಗೆ ಪ್ರವಾಹದೋಪಾದಿಯಲ್ಲಿ ಹರಿದಂತೆ.ಆಗಿನ್ನೂ ಎಳೆವಯದ ಮುಗ್ಧೆ; ನಾಟಕ ಸಂಗೀತ ಎಂದರೆ ಆಗಲೇ ಜೀವ ಪ್ರೀತಿ ನನಗೆ. ಆ ಪ್ರತಿಭೆಯ ಮೋಡಿಗೊಳಗಾದೆ. ಎಂತಹ ವ್ಯಕ್ತಿ ಈತ! ಉದ್ಗರಿಸಿದೆ.ಅವರೋ! ನನ್ನ ವಿಶಾಲ ನೇತ್ರಗಳನ್ನು ಕಂಡು ಮರುಳಾದರಂತೆ. ಮದುವೆಯಾದರೆ ಈ ಹುಡುಗಿಯನ್ನೇ ಎಂದು ನಿರ್ಧರಿಸಿದರಂತೆ.ಹೇಗಿದೆ!ಬಾಹ್ಯ ಆಕರ್ಷಣೆಗೆ ಒಳಗಾದ ಹರೀಂದ್ರರು!ಬೌದ್ಧಿಕ ಆಕರ್ಷಣೆಗೆ ಒಳಗಾದ ನಾನು! ವ್ಯತ್ಯಾಸದ ಅರಿವೇ ಆಗದ ನನ್ನ ವಯಸ್ಸು.ಪ್ರಖರ ಪ್ರತಿಭೆಯೊಂದಿಗೆ ಜೀವನವಿಡೀ ಕಳೆಯಬಲ್ಲೆನೆಂಬುದು ಹುಚ್ಚು ಆತ್ಮವಿಶ್ವಾಸವೆ?ನನ್ನ ಮೊದಲ ಪತಿ, ತೀರಿಕೊಂಡದ್ದು ಇಲ್ಲೇ, ಇದೇ ಮದರಾಸಿನಲ್ಲಿ. ಇಲ್ಲೇ ಈಗ ಈತನ ಭೇಟಿ. ವಿಶ್ವನಾಟಕಕಾರ ಎಷ್ಟು ಚೆನ್ನಾಗಿ ಪ್ರತಿಯೊಂದು ಬದುಕಿನ ಕತೆಯನ್ನು ಬೆಳೆಸುತ್ತಾನೆ! ಒಂದರಂತೆ ಒಂದು ಅನಿಸಿಯೂ ಒಂದರಂತಿರದ ಹಾಗೆ!ಸುಖೀ ದಾಂಪತ್ಯಗಳೆಲ್ಲ ಒಂದೇ ತೆರನವು. ಅಸುಖೀ ದಾಂಪತ್ಯಗಳು ಮಾತ್ರ ಒಂದರಿಂದೊಂದು ಭಿನ್ನ ಎಂದ ಟಾಲ್ಸ್‌ಟಾಯ್. ಇಲ್ಲ, ಪ್ರಾಯಶಃ ಅವೂ ಭಿನ್ನವಲ್ಲ, ಹಾಗೆ ಕಾಣುವುದು ಮಾತ್ರವೇನೊ.ಮನಸ್ಸಿಗೆ ಗರಿ ಮೂಡುತ್ತಿದ್ದ ಕಾಲ ಅದು.  ಗಗನಗಳ ಮಿತಿ ಮೀಂಟಿ, ಗಗನಂಗಳನು ದಾಟಿ ಸೂಚಿ ಸೂತ್ರಂಗಳ ಹರಿದು ತೇಲಿ ಹೋಗುವ ಕನಸ ಕಾಲ.ಆತ ಹಾಡುವುದು, ಅಭಿನಯಪೂರ್ವಕ ಕವನ ವಾಚಿಸುವುದು, ಗಂಟೆಗಟ್ಟಲೆ ನಿರರ್ಗಳವಾಗಿ ಸಾಹಿತ್ಯದ ಮಾತುಕತೆಯಾಡುವುದು...ಎಲ್ಲ ನೋಡಿ, ಪಾಪ, ಅಮ್ಮನಿಗೆ ಸಹಜವಾಗಿಯೇ ತನ್ನ ಮಗಳ ಒಂಟಿತನ ನಿವಾರಿಸಲ್ಲ ವ್ಯಕ್ತಿ ಈತನೇ ಸರಿ ಅನಿಸಿರಬೇಕು.ಅವರ ಆಧುನಿಕ ವಾಚನ-ಅಭಿನಯದ ಎದುರು ಅಮ್ಮನ ರಾಮಾಯಣ ಮಹಾಭಾರತ ವಾಚನ! ಅದನ್ನು ಶ್ರದ್ಧೆಯಿಂದ  ಕೇಳುತ್ತ ಕೂಡುವ ಹರೀಂದ್ರರು!ಅವರದೋ ಬಿಚ್ಚು ಮನಸು. ಅಮ್ಮನದೋ ಆಲಿಸುವ ಮನಸು. ಅವಳೊಡನೆ ಹರೀಂದ್ರರು ಬಾಲ್ಯದಿಂದಲೂ ಸಾಗಿಕೊಂಡೇ ಬಂದ ತನ್ನ ಪ್ರೇಮಪ್ರಸಂಗಗಳನ್ನು ಹೇಳಿಕೊಂಡರು. ಅಮ್ಮ-ಆಲಿಸಿದಳು!ಅವು ಕೇವಲ ‘ಪ್ರೇಮ’ ಪ್ರಸಂಗಗಳಷ್ಟೇ ಆಗಿದ್ದರೆ ನಾನೂ ಗೆಲ್ಲುತ್ತಿದ್ದೆ.  ಆತನ ಕಥನದ ಮೋಡಿ ಹೇಗಿತ್ತೆಂದರೆ ಅವೆಲ್ಲ ಬರೀ ಪ್ರೇಮವೇ, ಪ್ರೇಮ ಬಿಟ್ಟರೆ ಮತ್ತೇನೂ ಅಲ್ಲ ಎಂದು ಎಂಥವರೂ ನಂಬಬೇಕು. ಜೀವನಾನುಭವದಿಂದ ಪಕ್ವಳಾದ ನನ್ನ ತಾಯಿಯೂ ನಂಬಿದಳೆಂದರೆ!ಅವೆಲ್ಲವೂ ಗತ. ಗತಕ್ಕೆ ಅತಿ ಪ್ರಾಧಾನ್ಯ ಕೊಡುತ್ತ ಹೋದಷ್ಟೂ ಭವಿಷ್ಯದ ಬೆಳಕು ಮಸುಕಾಗುತ್ತದೆ ಎನ್ನುವುದು ಅವಳ ವಾದ. ಅವಳು ತನ್ನ ದಿನಗಳನ್ನು ಕಳೆದದ್ದೂ ಹೀಗೆಯೇ ತಾನೆ? ಆಗುವುದು ಆಯಿತು. ಮುಂದೇನು? ಈಗ ಆಗಬೇಕಾದ್ದೇನು? ಎಂದು ಯೋಚಿಸಿದವಳು.ಹರೀಂದ್ರರನ್ನು ಮದುವೆಯಾದರೆ ನನ್ನ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲದು ಎಂಬುದು ಅವಳಿಗೆ ಮುಖ್ಯವಾಗಿತ್ತು.

ನಾನು ದಕ್ಷಿಣದ ತಿರುಗಾಟದಲ್ಲಿದ್ದೆ.ಅವಳ ಪತ್ರ, ‘ಮದುವೆ ನಿಶ್ಚಯಿಸಿದೆ, ಬಾ!’. ಅದು 1919. ಪ್ರಥಮ ಮಹಾಯುದ್ಧ ಮುಗಿದ ವರ್ಷ! ನನ್ನ ಜೀವನದ ದ್ವಿತೀಯ ಮಹಾಯುದ್ಧ ಆರಂಭವಾಯಿತು. ಅಗಲ ಕಣ್ಣನ್ನು ಪ್ರೀತಿಸಿದ ಒಬ್ಬ ಬಹುಮುಖ ಪ್ರತಿಭೆಯೊಂದಿಗೆ ವಾದ್ಯ, ಓಲಗವಿಲ್ಲದ ಸಾದಾ ಮದುವೆ, ನಡೆದೇ ಹೋಯಿತು. ಬದುಕು ಹೇಗೆಲ್ಲ ಕವಲೊಡೆಯುತ್ತದೆ! ನಯಂಪಳ್ಳಿ ಮನೆಗೆ ಮದುವೆಯಾಗಿ ಹೋದೆ. ವಿಧವೆಯಾದೆ.ಕಾಲದ ಅನುಮತಿ ಇಲ್ಲದೆಯೂ ಹರೀಂದ್ರರನ್ನು ಮದುವೆಯಾದೆ; ವೈಧವ್ಯ ಅಳಿಸಿಹಾಕಿದೆ.

*

ಹ್ಞಾಂ. ಮದುವೆಯಾಯಿತು.

ಪತಿಯೊಂದಿಗೆ ಊರು, ದೇಶ ಸಂಚಾರ, ಹೊಸ ನಾಟಕಗಳು.ಹೊಸ ನಾಟಕ ಪ್ರಯೋಗಗಳಿಗೆ ಹೊಂದಿಕೊಂಬ ಹೊಸ ಪರಿಕರಗಳು. ನಾಟಕ ರಚನೆ, ಸಂಗೀತ ಸಂಯೋಜನೆ, ನಿರ್ದೇಶನ ಎಲ್ಲ ಹರೀಂದ್ರರದೇ. ಥಿಯೇಟರ್ ಇಲ್ಲದೆ, ಸಾರ್ವಜನಿಕ ಹಾಲುಗಳಲ್ಲಿ, ಬೆಳಗೆದ್ದು ನಾವೇ ಸ್ವತಃ ಗುಡಿಸಿ, ಸಂಜೆಯಾಯಿತೆಂದರೆ ಪಾತ್ರಗಳಾಗಿ ಮೆರೆದು ಜನಮನದಲ್ಲಿ ನೆಲೆಗೊಳ್ಳುತ್ತಿದ್ದ ಸುಂದರ ದಿನಗಳವು. ನಮ್ಮ ಕನಸು ಮಹತ್ವಾಕಾಂಕ್ಷೆಗಳನ್ನು ಕೈಗೂಡಿಸಿಕೊಳ್ಳಲು ಯುವತಂಡವೊಂದನ್ನು ಕಟ್ಟಿದೆವು. ಸಣ್ಣ ದೊಡ್ಡ ಊರುಗಳಲ್ಲೆಲ್ಲ ನಾಟಕವಾಡುತ್ತ ದೇಶದುದ್ದಗಲಕ್ಕೂ ತಿರುಗಾಡಿದೆವು. ಪ್ರಯೋಗಶೀಲ, ತಾಜಾ ನಾಟಕಗಳೆನಿಸಿಕೊಂಡು ನಮ್ಮ ಪ್ರದರ್ಶನಗಳು ಜನಪ್ರಿಯವಾದವು. ನಾವು ಕರೆಯದೆಯೂ ನಟಿಯರೂ ಬಂದು ನಾಟಕದಲ್ಲಿ ಭಾಗವಹಿಸಿ, ಕೆಲದಿನಗಳ ಮಟ್ಟಿಗಾದರೂ ಜೊತೆಗಿದ್ದು ತೆರಳುತ್ತಿದ್ದರು... ಸ್ತ್ರೀ ಪುರುಷರಿಬ್ಬರೂ ನಾಟಕದಲ್ಲಿ ಭಾಗವಹಿಸುವ ಕಲ್ಪನೆಯನ್ನು ಅಂತೂ ಸಾಕಾರಗೊಳಿಸಿಕೊಂಡೆವು. ಹರೀಂದ್ರರೊಂದಿಗಿನ ಬದುಕು ನನಗೆ ನಾಟಕ ಶಾಲೆಯಾಯ್ತು. ಕಾಸ್ಟ್ಯೂಮ್ ಡಿಸೈನಿಂಗ್‌ನಲ್ಲಿ ಅಪಾರ ಆಸ್ಥೆ ನನಗೆ. ಆ ಹೊಣೆಯೊಂದಿಗೆ ನಟನೆಯನ್ನೂ ಕಲಿಯುತ್ತ ಬದುಕಿದ ಆ ಅನುಭವ, ಆಹ!  ಪುನಶ್ಚೇತರಿಕೆಗೆ ಚಿಮುಕಿಸಿದ ಮಂತ್ರಜಲವಾಯ್ತು.ಮುಂಬಯಿಯಲ್ಲಿ ಟಾಗೋರ್ ತನ್ನ ಡಾನ್ಸ್ ಡ್ರಾಮಾ ತಂದಿದ್ದಾರೆ. ಪ್ರದರ್ಶನ ನಡೆಯುತ್ತಿದೆ. ಸದ್ಯ ಯಾವ ಪಾತ್ರವನ್ನೂ ಮಾಡದೆ ರಂಗದ ಒಂದು ಕಡೆ ಅವರು ಸುಮ್ಮನೆ ಕುಳಿತಿದ್ದಾರೆ. ಅವರ ಇರವೇ ಪ್ರೇಕ್ಷಾಂಗಣಕ್ಕೊಂದು ವೈಭವ ತಂದಿದೆ. ಪ್ರದರ್ಶನಕ್ಕೊಂದು ಪಾವಿತ್ರ್ಯ ನೀಡಿದೆ. ಪ್ರೇಕ್ಷಕರು ತುಟಿ ಪಿಟಕ್ಕೆನ್ನದೆ ಒಂದು ಮಹಾನ್ ಆನಂದವನ್ನು ಅನುಭವಿಸುತ್ತಿರುವವರಂತೆ ಕುಳಿತಿದ್ದಾರೆ.ಸರೋಜಿನಿ ನಾಯ್ಡು, ಟಾಗೋರರಿಗೆ ಕಾವ್ಯಾತ್ಮಕ ಗೌರವವನ್ನು ಅರ್ಪಿಸಿ, ಹೂಹಾರವನ್ನು ಅವರ ಪಾದದ ಬಳಿ ಇರಿಸುತ್ತಿದ್ದಂತೆ ಇಡೀ ಸಭಾಂಗಣದಲ್ಲಿ- ‘ಗುರುದೇವಕೀ ಜೈ!’ ಮಾರ್ದನಿಗೊಡುತ್ತದೆ.ನಾವು ಟಾಗೋರರನ್ನು ಭೇಟಿಯಾದೆವು, ಅವರೊಡನೆ ನಮ್ಮ ಪ್ರಥಮ ಭೇಟಿಯದು. ರಂಗಪ್ರಯೋಗಗಳ ನಮ್ಮ ಕನಸನ್ನು ಆಲಿಸಿದರು ಟಾಗೋರ್. ‘ಚಿಕ್ಕಂದಿನಲ್ಲಿ ನನಗೆ ಸಿಕ್ಕಿದ ಒಂದೇ ಒಂದು ತರಬೇತಿ ಎಂದರೆ ಲಯ, ರಿದಂ, ಚಿಂತನೆಯಲ್ಲಿ ರಿದಂ, ಧ್ವನಿಯಲ್ಲಿ ರಿದಂ...’ ಎಂದಿದ್ದರಲ್ಲ ಅವರು? ಎಷ್ಟೋ ದಿನಗಳ ಮೇಲೆ ಅದನ್ನು ನೆನೆದು ನಾನು ನನ್ನೊಳಗೇ ನುಡಿದೆ. ‘ಹೌದು, ಗುರುದೇವ. ಅಷ್ಟೇ ಅಲ್ಲ, ಬದುಕಿನಲ್ಲಿಯೂ ರಿದಂ... ಅದಿಲ್ಲದೆ ಜೀವನ ಇಲ್ಲ. ಸರಿಯೇ. ಆದರೆ ರಿದಂ ತಿಳಿದೂ ಅವಜ್ಞೆ ತೋರುವವರೊಡನೆ... ಹೇಗೆ ರಿದಂ ಕೂಡಿಸಲಿ?’....ಹೀಗೆ ಇಂಥವರ ಭೇಟಿ, ಪ್ರತಿಭಾನ್ವಿತ ವ್ಯಕ್ತಿಗಳ ಪರಿಚಯ, ಒಡನಾಟ ದೇಶವನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವ ಚಟುವಟಿಕೆ ಇತ್ಯಾದಿಗಳಲ್ಲಿ ಮೈಮರೆತಿದ್ದೆ ನಾನು. ಸಾಂಸ್ಕೃತಿಕ ಪುನರುಜ್ಜೀವನದ ದಿಕ್ಕಿನಲ್ಲೇ ಸಾಗುತಿದ್ದ ನಮ್ಮ ರಂಗ ಪ್ರದರ್ಶನಗಳಲ್ಲಿ ನಾನೂ ‘ಸಹಭಾಗಿ’ ಎಂದು ಎಂಥ ಸಂಭ್ರಮದಲ್ಲಿದ್ದೆ.

ಆದರೆ ಆ ಸಂಭ್ರಮವೆ ಕಲಕಿತು. ಬದುಕಿನ ರಂಗಭೂಮಿಯೇ ಕಂಪಿಸತೊಡಗಿತು.  ನಿಲ್ಲಲು ತಾಣವೆಲ್ಲಿ... ನಾ ಹುಡುಕತೊಡಗಿದ್ದೆ.

*

ಹರೀಂದ್ರ ನಿಸ್ಸಂಶಯವಾಗಿಯೂ ಬೌದ್ಧಿಕವಾಗಿ ಎತ್ತರದ ವ್ಯಕ್ತಿ. ಅವರೆದುರು ನಾನು ಕುಬ್ಜಳೆ? ಸದಾ ಆತಂಕವಿತ್ತು ನನಗೆ. ಆ ಕಂಠ, ಆ  ಅಪ್ರತಿಮ ಅಭಿನಯ ಕಂಡಾಗೆಲ್ಲ ನಾನೆಲ್ಲಿಯೂ ಇಲ್ಲ ಎಂಬ ಕೀಳರಿಮೆ ಚುಚ್ಚುತ್ತಿತ್ತು.|ಆತನೋ, ನನ್ನಲ್ಲಿ ಆತಂಕದ ಛಾಯೆ ಕಂಡರೆ ಸಾಕು, ಮಾತಾಡಿ ಕತೆಯಾಡಿ ಅದನ್ನು ಓಡಿಸಿಬಿಡುತ್ತಿದ್ದ. ಮಾತಿನ ಜಾದೂಗಾರನಾತ. ಮಾತಿನ ಜಾದೂಗಾರರೆಲ್ಲ ಕೊನೆಗೆ ಅದೇ ಕಾಯಿಲೆಗೆ ತುತ್ತಾಗುವರೇನು? ತಮ್ಮ ಜಾದೂವಿಗೆ ತಾವೇ ಒಳಗಾಗುತ್ತ ತಮ್ಮನ್ನೇ ತಾವು ಮೋಹಿಸುತ್ತ, ಇನ್ನೊಬ್ಬರ ಕಾಳಜಿಗಿಂತ ಹೆಚ್ಚು ತಮ್ಮ ಮಾತಿನ ಗಾಳದಲ್ಲಿ ಎದುರಿರುವವರನ್ನು ಹಿಡಿದು, ಆತ್ಮಾನಂದ ಪಡೆಯುತ್ತಾರೇನು?- ಬಲೆಗೆ ಬಿದ್ದವರೋ ಅಂಥವರ ಮೋಡಿಯಲ್ಲಿ ಸಕಲವನ್ನೂ ಮರೆಯುತ್ತಾರೆ.ಯಾರಿಗೇನು ಹೇಳುವುದು! ನಾನೇ ಹಾಗಾದೆನಲ್ಲ!ಅವರ ಆ ಮೋಡಿ ನನಗೆ ಮಾತ್ರವಲ್ಲ. ಯಾವ ಹೆಣ್ಣಿಗಾದರೂ ಸರಿ. ಅಥವಾ ಹೆಣ್ಣು ಅಂತಾದರೆ ಸರಿ, ಕೆದರಿಕೊಳುತ್ತದೆ ಎಂಬ ಸತ್ಯ ಹಾಗೂ ಮೋಡಿಗೆಡಹುವ ಮಾತುಗಾರಿಕೆ ಆತ್ಮರತಿಯ ಒಂದು ವಿಧಾನ ಎಂಬ ಅರಿವು ನನಗೆ ಮೂಡಿದ್ದೇ ಎಷ್ಟು ತಡವಾಗಿ!

ಆಗಲೇ ರಾಮು ಹುಟ್ಟಿದ್ದ.

ತಾಯ್ತನ ನನ್ನನ್ನು ತೂಗುತಿತ್ತು.

*

ಯಾಕಾಗಿ ಆತನೊಡನೆ ನನ್ನ ಬಾಂಧವ್ಯ ಬೆಳೆಯಿತೋ, ಅದು ದಾಂಪತ್ಯದಲ್ಲಿ ಕೊನೆಗೊಂಡಿತೋ, ಆ ದಾಂಪತ್ಯವೇ ಯಾಕೆ ಕೊನೆಗೊಂಡಿತೋ... ಆಯ್ಕೆಯೇ ಆಘಾತಗಳ ಸರಮಾಲೆಗೆ ಕತ್ತು ಒಡ್ಡುವಂತೆ ಮಾಡಿತೆ! ಮತ್ತೆಮತ್ತೆ ಕನಸಿನಿಂದ ವಾಸ್ತವಕ್ಕೆ ತಳ್ಳುವ ಹರೀಂದ್ರರ ನಡತೆ!ಅದೇನೇ ಇರಲಿ, ಆತ ಇಲ್ಲದೇ ಹೋಗಿದ್ದರೆ, ರಾಜಕೀಯಕ್ಕಾದರೂ ಬಂದೇನು, ಆದರೆ ನಾಟಕರಂಗಕ್ಕೆ ಖಂಡಿತ ನಾನು ಇಷ್ಟು ನಿಕಟವಾಗಿರುತ್ತಿರಲಿಲ್ಲ. ನನ್ನ ಆಸಕ್ತಿಗೆ ಈ ಪರಿಯ ಸ್ಥಿರತೆ ಒದಗುತ್ತಲೂ ಇರಲಿಲ್ಲ. ಚಿಕ್ಕಂದಿನ ಆ ‘ಭಕ್ತ ಮೀರಾ’ ನಾಟಕದಲ್ಲೇ ಅದು ನಿಂತುಬಿಡುತಿತ್ತೇನೊ.ಹುಚ್ಚು ಹರೀಂದ್ರ. ನಾಟಕ ಮಾಡುತ್ತ ಮಾಡುತ್ತ ಜೀವನವಿಡೀ ನಾಟಕ ಆಡಿದರು. ಪಾತ್ರವಾಗುವುದರಲ್ಲಿಯೇ ಮುಗಿದುಹೋದರು. ಬರೀ ನಾಟಕವಷ್ಟೇ ಆದರು! ರಂಗಸ್ಥಳದಿಂದ ನೇಪಥ್ಯಕ್ಕೆ ಮರಳಲೇ ಇಲ್ಲ.

ನೇಪಥ್ಯಕ್ಕೆ ಮರಳಿದ ನಾನು ಕಾಯುತ್ತ ನಿಂತೆ.ಪ್ರದರ್ಶನ ಮುಗಿಯುತ್ತದೆ. ಆತ ಇತ್ತ ಬರುತ್ತಾನೆ... ಬಂದೇ ಬರುತ್ತಾನೆ... ಅಂತ.  ಆದರೆ ಬರಲೇ ಇಲ್ಲವಲ್ಲ ಆತ! ಬದಲು ನಾಟಕದ ಮೇಲೆ ನಾಟಕವಾಡಿದ.ಬಹಿರಂಗ ನಾಟಕ, ಅಂತರಂಗ ನಾಟಕ.ನೆಮ್ಮದಿಯ ಬದುಕನ್ನೇ, ಕೈಹಿಡಿದವಳ ನಂಬಿಕೆ ವಿಶ್ವಾಸವನ್ನೇ ಅಡವಿಟ್ಟು ಆಡಿದ ನಾಟಕ.ಇಷ್ಟಕ್ಕೂ-

ನಿಷ್ಕಪಟ ನಾಟಕ ಅದು! ವಿಚಿತ್ರ ಕಾಣುತ್ತದೆಯೇ? ಯಾವುದು ಪ್ರೇಮ, ಯಾವುದು ಕಾಮ, ಯಾವುದು ಆರಾಧನೆ?

ಯಾವುದು ಸ್ನೇಹ? ಕೊನೆಗೂ ನನ್ನಂಥವರಿಗೆ ಬೇಕಾದ್ದೇನು?ಬರೆಹ, ನಾಟಕ, ಕಾವ್ಯವಾಚನ, ಕುಡಿತ, ಕಾಮ. ಬಿಟ್ಟರೆ ಅವರಿಗೆ ದುಡಿಯುವ ಕೈಯೇ ಇರಲಿಲ್ಲ. ಮನಸ್ಸು ಕೂಡ. ಖರ್ಚಿಗೆ ಯಾರ ದುಡ್ಡೂ ಆದೀತು ಎನ್ನುವ ಭಂಡ. ಸಹಿಸುವುದೆಂದರೆ ಇದನ್ನೂ ಸಹಿಸಬೇಕು. ಹೇಗೆ?ಹರೀಂದ್ರರ ಜಾಯಮಾನವೇ ವಿಲಾಸಿಯಾದರೆ, ತಿದ್ದಲು ನಾನು ಯಾರು? ನೂರಾರು ಎದೆಗುದಿಗಳು.  ಕಣ್ಣೆದುರೇ ಸತ್ಯ ಹೊಳೆಯುತಿತ್ತು. ನನಗೆ ಕಂಡಿರಲಿಲ್ಲ... ಅಥವಾ ಅದನ್ನು ಸತ್ಯ ಎಂದು ನಂಬಲು ಮರುಳು ಮನಸ್ಸು ತಯಾರಿರಲಿಲ್ಲ.ಎಷ್ಟೆಲ್ಲ ಸತ್ಯಗಳು. ಪಥ್ಯ-ಅಪಥ್ಯ, ಬದ್ಧ-ಅಬದ್ಧ, ಅಂತೆ ಇರುವ, ಅಂತೆ ಕಾಣುವ, ಕಂಡಂತಿಲ್ಲದ, ಕಾಣದ-ನೂರಾರು ಸತ್ಯಗಳು! ಕೆಲವು ತಾವಾಗಿ ಎದ್ದು ಹೊಳೆದು ಅಲ್ಲಿಯೇ ಕಂತುತ್ತವೆ. ಕೆಲವನ್ನು ನಾವೇ ಬೇಕೆಂದೇ ಇಂಗಿಸಿಕೊಳ್ಳುತ್ತೇವೆ... ಎಂತಲೇ ಜಗತ್ತು ಸಾಗುತ್ತಿದೆ... ಹ್ಞ?- ಕೆಲವು ಮಾತ್ರ ಏನೇನು ಮಾಡಿದರೂ ನಂದುವುದಿಲ್ಲ, ಕಂತುವುದಿಲ್ಲ, ಇಂಗುವುದಿಲ್ಲ, ಕಂದುವುದಿಲ್ಲ... ಬದಲು ಎದುರೆದುರೇ ಇನ್ನಷ್ಟು ಬೆಳೆಯುತ್ತಿರುತ್ತವೆ. ಅಲಕ್ಷಿಸಲು ಸಾಧ್ಯವೇ ಆಗದಂತೆ.ಉಳಿದಿರುವುದೊಂದೇ. ಮನಸ್ಸು ಸೇರದಾಗ ದೂರವಾಗುವುದು. ಹತ್ತಿರಿದ್ದು ವಿಷವಾಗುವುದಕ್ಕಿಂತ ದೂರವಿದ್ದು ಪಾವನವಾಗುವುದು ಲೇಸು. ಚಕಮಕಿ ಚಿಂತೆ, ಒಳಗೇ. ಹೊರಹಾಕುವಂತಿಲ್ಲ.ಹೊರಹಾಕದೆಯೂ ಹೇಗೆ ತಿಳಿಯುವುದೊ!

ಗಾಂಧೀಜಿ ಹೇಗೋ ತಿಳಿದುಕೊಂಡರು.

*

ಕರಾಚಿ ಅಧಿವೇಶನದಿಂದ ಮರಳುವಾಗ ಆತ ಮಾಡಿದ ದಾಂಧಲೆಯೋ...! ನೆಹರೂ, ಗಾಂಧೀಜಿ ಎಲ್ಲರೂ ‘ಒಮ್ಮೆ ಈ ಸುಳಿಯಿಂದ ಹೊರಗೆ ಬಾ’- ಎಂಬವರೇ. ಅಂದರೆ- ನನ್ನನ್ನು ನಾನು ಸ್ವತಂತ್ರಗೊಳಿಸಿಕೊಳ್ಳದೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಲಾರೆ ಎಂದಂತೆ.‘ಆಕೆಗೆ ಇನ್ಯಾರನ್ನೋ ಮದುವೆಯಾಗಲು ಹವಣಿಕೆ ಇರಬಹುದು ಬಾಪೂ. ಅವಳ ವಿಷಯದಲ್ಲಿ ನೀವು ತಲೆ ಹಾಕಬೇಡಿ’- ಗಾಂಧೀಜಿಗೆ ಬಂದ ಅನಾಮಿಕ ಪತ್ರವದು.ಹೋ! ಅಕ್ಷರ ಯಾರದು? ನೋಡಿ ನಕ್ಕೆ. ನನಗೆ ಗುರುತಿಲ್ಲವೆ!ಅಕ್ಕ ಸರೋಜಿನಿಗೆ ಮುದ್ದಿನ ತಮ್ಮನ ಬದುಕು ಮುರಿದು ಬೀಳುವುದು ನೋಡಲು ಸಾಧ್ಯವಾಗುತ್ತಿಲ್ಲ... ಸಹಜವೇ.

ಆದರೆ ಪ್ರಿಯ ಸರೋಜಿನೀ ನಾಯ್ಡು ಅವರೇ, ನನ್ನ ಸ್ಥಿತಿಯಲ್ಲಿ ನಾನು ತೆಗೆದುಕೊಳ್ಳುವ ತೀರ್ಮಾನವೂ ಸಹಜವೇ.

ಮುರಿದು ಬೀಳುತ್ತಿರುವುದು ನಿಮ್ಮ ತಮ್ಮನ ಬದುಕು ಮಾತ್ರವಲ್ಲವಲ್ಲ!ಇಲ್ಲ, ನಾನೇನೆನ್ನಲೂ ಇಲ್ಲ. ಸುಮ್ಮನಿದ್ದೆ. ಅವರ ಮೇಲಿನ ಗೌರವ ಅಂಥದಿತ್ತು. ಆತ ನಿಸ್ಸಂಶಯವಾಗಿ ನಿಷ್ಕಪಟಿ. ನಿಷ್ಕಪಟಿಯಾಗಿದ್ದರೂ ಕಲ್ಮಶಗೊಂಡ ಚೇತನದೊಂದಿಗೆ ಬಾಂಧವ್ಯ ಉಳಿದೀತು ಹೇಗೆ...? ಅದು ನನ್ನ ಸ್ವಭಾವಕ್ಕೇ ವಿರುದ್ಧವಾಗಿತ್ತು. ದಾಂಪತ್ಯ ಪ್ರೇಮವೆಂಬುದು ಭಿಕ್ಷೆಯಾಗಬಾರದು. ನಿತ್ಯ ನಂದಿ ಹೋಗಿ ಮತ್ತೆ ಹಚ್ಚುವ ಸಂಜೆ ದೀಪವಲ್ಲವದು.ಇರುವುದೇ ಅರಿಯದಂತೆ ಮಂದವಾಗಿ ಉರಿಯುತ್ತಲೇ ಇರುವ ಜೀವಕ್ಕೆ ಜೀವ ದೀಪ. ಬಂಗಾರದ ಹರಿವಾಣದಲ್ಲಿ ಹೃದಯವಿಟ್ಟು ನಿಂತಿದ್ದೆ. ಕೇವಲ ಹದಿಹರಯದ ಎಳಸು ನಿರ್ಧಾರವಾಯಿತೆ ನನ್ನದು?ನಿರ್ಧಾರಗಳು ನಡೆದಾದ ಮೇಲೆ ಚಿಂತಿಸುವಂತಿಲ್ಲ,ನಿಭಾಯಿಸಬೇಕು... ಮನ ಒಮ್ಮೆ ನೆಟ್ಟಿತೆಂದರೆ ಕೀಳುವುದು, ಬಿಟ್ಟು ಹೊರಡುವುದು ಎಷ್ಟು ಮರ್ಮಾಂತಿಕ... ಆದರೆ ಮನಸ್ಸೆಂಬುದು ಅತ್ಯಂತ ಸ್ವತಂತ್ರದ್ದು. ಅದನ್ನು ಮಣಿಸುವುದು, ಒಮ್ಮೊಮ್ಮೆ, ಮರಣಿಸಿದಂತೆ. ಇಟ್ಟ ನಂಬಿಕೆ ಸಂಪೂರ್ಣ ಮುಗಿವವರೆಗೂ ಕದಲಕೂಡದು ಎಂದಿತು ಮನಸ್ಸು. ಒಪ್ಪಿದೆ ನಾನು.ಆದರೆ ನನ್ನ ಅಗತ್ಯವೇ ಇಲ್ಲದಲ್ಲಿ ನಿಂತು ಏನು ಮಾಡಲಿ?ಹೆಂಡತಿಯ ಪಾತ್ರಧಾರಿಯೆ ನಾನು?ತಳಮಳ.

ಈಗಲೂ ಒಮ್ಮೊಮ್ಮೆ ಸಮಯ ಸಿಕ್ಕಾಗ, ಆ ಎಳೆಯ ಕಮಲಾ ಎಂಬ ಹುಡುಗಿಯನ್ನು ಬಳಿ ಕರೆದು ಕುಳ್ಳಿರಿಸಿಕೊಳುತ್ತೇನೆ. ಅನಗತ್ಯ ತಳಮಳಗಳನ್ನು ಎಳೆದುಕೊಂಡೆಯಲ್ಲ ಹುಡುಗಿ! ಜೀವನದ ಉಜ್ವಲ ದಿನಗಳು ಅವೆಲ್ಲ, ವ್ಯರ್ಥ ಉರಿದು ಹೋಗಲು ಬಿಟ್ಟೆಯಲ್ಲ! ಎನ್ನುತ್ತೇನೆ.ಹುಡುಗಿ ನನ್ನನ್ನೇ ಮಾತಿಲ್ಲದೆ ನೋಡುತ್ತಾಳೆ. ‘ಬಿಡು, ಸದ್ಯ ಅವರೊಂದಿಗಿನ ಬದುಕು-ಅಗಲಿಕೆ ಎರಡೂ ಸಕಾರಾತ್ಮಕವಾಗಿ ಒದಗಿರುವುದನ್ನು  ನೆನೆಸಿಕೋ’- ಎಂದಂತೆ.ಮೊದಲು ಮೇಲುಡುಗೆ ಧರಿಸಿ ವಧುವಿನಂತೆ ಸಿಂಗರಿಸಿಕೊಂಡು ನಂತರ ಹೂವಿನ ಶಿಲುಬೆಯ ಮೇಲೆ ಮಲಗಿ ತಮ್ಮ ಪೂರ್ವಾಶ್ರಮ ತ್ಯಜಿಸುವ ಎಳೆಯ ಸನ್ಯಾಸಿನಿಯರು... ಅಂದು ಮಂಗಳೂರಿನಲ್ಲಿ ಕಂಡದ್ದು... ಮೇಲೆ ಮೇಲೆ ನೆನಪಾಗುತ್ತಿದೆ!‘ಬಾ... ಹೊರಗೆ ಬಾ... ಸ್ವಾತಂತ್ರ್ಯ ಹೋರಾಟದಲ್ಲಿ ಮನನೆಡು’- ಆಂತರ್ಯದಲ್ಲಿ ಗಾಂಧೀಜಿಯವರ ಕರೆ ಅನುರಣಿಸುತಿತ್ತು.ಅಂತೂ ಒಂದನೇ ಮಹಾಯುದ್ಧ ಮುಗಿದ ವರ್ಷ ಆರಂಭವಾದ ಒಂದು ಪರ್ವ, ಎರಡನೇ ಮಹಾಯುದ್ಧದ ಮೊದಲು ತನ್ನ ನಿಜರೂಪ ಪ್ರಕಟಿಸಿ ಮುಕ್ತಾಯಗೊಂಡಿತು. ಬಾಡಿತ್ತು ಜೀವ, ಸೋಲೋ ಅದು ಗೆಲುವೋ... ಒಟ್ಟಿನಲ್ಲಿ ದಣಿದಿತ್ತು.

1933. ಮುಂಬೈ ಕೋರ್ಟಿನಲ್ಲಿ- ಯಾವ ಅಪರಾಧ ಮಾಡದೆಯೂ ಅಪರಾಧಿಯಂತೆ ನಿಂತದ್ದು, ವಿಚ್ಛೇದನ ಪಡೆದದ್ದು, ಎಲ್ಲವೂ ಯಾಕಿನ್ನೂ ಜೀರ್ಣವಾಗದೆ ಮನದಲ್ಲಿ ಹಾಗೆಯೇ ಉಳಿದಿದೆ? ವರ್ಷಗಳಾದರೂ ಅಳಿಯದೆ?

ಕೊನೆಗೂ ಹೊರಬಂದೆ, ನನ್ನ ನಾವೆಯನೇರಿ ನನ್ನದೇ ಪಯಣಕೆ ಹೊರಟೆಮನದಲ್ಲಿ ಮಾರ್ಗ- ಗಾಂಧಿ.

ಸ್ವಾತಂತ್ರ್ಯ ಮಂತ್ರ- ಗಾಂಧಿ.

*

ಬಹಳ ಬಹಳ ವರ್ಷಗಳ ಮೇಲೆ ಅನಾರೋಗ್ಯದಿಂದ ನಾನು ಆಸ್ಪತ್ರೆಯಲ್ಲಿದ್ದ ಒಂದು ದಿನ-

ಮಂಪರಿನ ಕಣ್ತೆರೆದು ನೋಡುತ್ತೇನೆ- ಹರೀಂದ್ರ!ವೃದ್ಧಾಪ್ಯದಂಚಿನಲ್ಲಿನ ಹರೀಂದ್ರನಾಥ ಚಟ್ಟೋಪಾಧ್ಯಾಯರು! ಮುಗುಳುನಗುತಿದ್ದಾರೆ. ಶುದ್ಧಾಂತಃಕರಣದ ದೃಷ್ಟಿ ಬೀರುತಿದ್ದಾರೆ.ಮಂಪರೋ ಇದು ಎಚ್ಚರವೋ.

ಕಂಪಿಸುವುದನ್ನೇ ಮರೆತ ಹೃದಯ, ತನ್ನಂತೆ ಝಿಲ್ಲ ಕಂಪಿಸಿತು.

ಕಂಬನಿ, ಒಳಗೇ ಹನಿಯಿತು.

ಹೇಗೆ ಅದನೆಲ್ಲ ಬಣ್ಣಿಸಲಿ, ಎಂತು? ಬಣ್ಣಿಸದಿರಲಿ ಎಂತು?

ಒಳಹೊರಗೆ ಓಡಾಡುವ ನಿತ್ಯದ ಉಸಿರೂ ನನಗೇ ಗೊತ್ತಾಗದಂತೆ ಬಿಸಿಯೇರಿದ ಬಗೆಯನ್ನು?

ಬಿಸುಸುಯ್ದ ಬಗೆಯನ್ನು?

‘ಹೇಗಿದ್ದೀರಿ?’- ಕೇಳಿದೆ.

‘ನೀನು ಹೇಗಿದ್ದೀ? ನೋಡೋಣವೆಂತ ಬಂದೆ’.

ಮೌನವಾಗಿ ಕಣ್ಮುಚ್ಚಿಕೊಂಡೆ. ಚಂದದ ಕ್ಷಣವನ್ನು ಒಳಕಳಿಸಿ ಮುಚ್ಚಿಟ್ಟುಕೊಂಡೆ.

ಹ್ಞಾಂ ಹ್ಞಾಂ... ಕಮಲಾದೇವೀ, ನಿನ್ನಲ್ಲಿ ಈಗ ಆತ ಒಬ್ಬ ಕವಿ, ನಾಟಕಕಾರನಾಗಿಯೇ ಉಳಿದಿದ್ದರೆ, ಅವನಲ್ಲಿ ನೀನುಳಿದಿರುವುದು ಒಬ್ಬ ಸಮಾಜಸೇವಕಿಯಾಗಿ ಮಾತ್ರ. ದೂರಾದರೂ ಉಳಿದ ಸ್ನೇಹ ಈ ಇವರಿಬ್ಬರ ನಡುವಿನ ಸ್ನೇಹ ಅಂತಿಟ್ಟುಕೋ. ಅಷ್ಟೇ.

ಸಾಕುಸಾಕು.

*

ಗಣೇಶನನ್ನು ಕೂರಿಸಿ ಆವಾಹನೆ ಆರಾಧನೆ ಹೋಮ ಹವನ ಅಲಂಕಾರ... ಪೂಜೆ... ನೈವೇದ್ಯ ಎಲ್ಲ ಮಾಡಿ ಮುಗಿಸಿ, ಕೊನೆಗೆ ವಿಸರ್ಜಿಸಿ ನಿರ್ಮಮಕಾರದಿಂದ ನೀರಿಗೆಸೆದು ಬಿಡುವರಲ್ಲ. ಅದ್ಭುತ ದರ್ಶನವದು. ಹರೀಂದ್ರರನ್ನು ಬಿಟ್ಟು ಹೊರ ಬಂದಾಗಲೂ, ಸ್ವಾತಂತ್ರ್ಯ ಲಭಿಸಿ, ರಾಜಕೀಯದಿಂದ ಹೊರಬಂದಾಗಲೂ ನನ್ನನ್ನು ಕೈಹಿಡಿದು ನಡೆಸಿದ್ದು ಪೂರ್ತಿಯಾಗಿ ಈ ದೇಶದ್ದೇ ಆದ ಈ ಮಹಾನ್ ದರ್ಶನವೇ.(ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಆತ್ಮಕತೆ ಆಧರಿಸಿ ಬರೆದ ಬರಹದ ಒಂದು ಭಾಗ)

 


 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.