ಗುರುವಾರ , ಜನವರಿ 23, 2020
23 °C

ಹುತ್ತರಿ ಸಂಭ್ರಮಕ್ಕೆ ಕೊಡಗು ಸಜ್ಜು

ಪ್ರಜಾವಾಣಿ ವಾರ್ತೆ/ – ಸಿ.ಎಸ್. ಸುರೇಶ್‌ Updated:

ಅಕ್ಷರ ಗಾತ್ರ : | |

ನಾಪೋಕ್ಲು: ಕೊಡಗಿನಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲಾಗುವ ಹಲವು ಹಬ್ಬಗಳ ಸಾಲಿನಲ್ಲಿ ತನ್ನದೇ ಆದ ವೈಶಿಷ್ಟ್ಯದೊಂದಿಗೆ ಆಚರಿಸಲ್ಪಡುವ ಹಬ್ಬ ಹುತ್ತರಿ.ಕಾವೇರಿ ತವರಿನ ಈ ಸಿರಿ ಹಬ್ಬ ಮತ್ತೆ ಬಂದಿದೆ. ರೈತರ ಪರಿಶ್ರಮಕ್ಕೆ ಕಾವೇರಿ ಮಾತೆ ನೀಡುವ ಕಾಣಿಕೆ ಇದು. ಹುತ್ತರಿ, ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಹಬ್ಬ. ಈ ಬಾರಿ ಡಿ. 15 ರಂದು ಹುಣ್ಣಿಮೆಯ ದಿನ ಕೊಡಗಿನಲ್ಲಿ ಸಿರಿ ಹಬ್ಬದ ಸಂಭ್ರಮ. ಜಿಲ್ಲೆಯಾದ್ಯಂತ ಹುತ್ತರಿ ಆಚರಣೆಗೆ ಸಿದ್ಧತೆಗಳು ನಡೆಯುತ್ತಿವೆ.ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವ ಹಬ್ಬ ಹುತ್ತರಿ. ಕೊಡವ ನುಡಿಯ ಪುತ್ತರಿ (ಪುದಿಯ ಅರಿ) ಅಂದರೆ ಹೊಸ ಅಕ್ಕಿ. ವ್ಯವಸಾಯವನ್ನೇ ನೆಚ್ಚಿ ಬದುಕುವ ಬಹುತೇಕ ರೈತಾಪಿ ವರ್ಗ ಪೈರುಗಳು ಬೆಳೆದಾಗ ನಿರ್ದಿಷ್ಟ ಕಾಲದಲ್ಲಿ ಶಾಸ್ತ್ರೋಕ್ತವಾಗಿ ಕೊಯ್ದು ತಂದು ಮನೆಯನ್ನು ತುಂಬಿಸಿಕೊಳ್ಳುವುದೇ ಈ ಹುತ್ತರಿ ಹಬ್ಬದ ವಿಶೇಷತೆ. ಹಬ್ಬ ಆಚರಿಸುವ ದಿನಾಂಕವನ್ನು ಪ್ರತಿವರ್ಷ ಕೊಡಗಿನ ಪ್ರಮುಖ ದೇವಾಲಯವಾದ ಕಕ್ಕಬ್ಬೆಯ ಇಗ್ಗುತಪ್ಪ ದೇವಾಲಯದಲ್ಲಿ ಶಾಸ್ತ್ರೋಕ್ತವಾಗಿ ನಿಶ್ಚಯಿಸುತ್ತಾರೆ.  ಹಬ್ಬದಂದು ಹುತ್ತರಿಯ ಸಾಂಪ್ರದಾಯಿಕ ಆಚರಣೆಗಳು ಆರಂಭಗೊಳ್ಳುವುದು ನೆಲ್ಲಕ್ಕಿ ಬಾಡೆಯಿಂದ (ಇದು ನಡುಕೋಣೆ). ಕೊಡವರ ಸಾಂಪ್ರದಾಯಿಕ ಉಡುಪು ಧರಿಸಿ, ಕುಪ್ಪುಸ ತೊಟ್ಟು, ಸೊಂಟಕ್ಕೆ ನಡುಪಟ್ಟಿ ಬಿಗಿದು, ಅದರಲ್ಲಿ ಪೀಚೆ ಕತ್ತಿಯನ್ನು ಸಿಕ್ಕಿಸಿ ಮನೆಯೊಡೆಯ ನೆಲ್ಲಕ್ಕಿ ಬಾಡೆಯಲ್ಲಿ ಬೆಳಗುತ್ತಿರುವ ತೂಗುದೀಪದ ಮುಂದೆ ಕೈಜೋಡಿಸಿ ಕುಲದೇವರನ್ನು ಪ್ರಾರ್ಥಿಸುತ್ತಾರೆ.‘ಹುತ್ತರಿ ಹಬ್ಬದ ಈ ಸಂದರ್ಭದಲ್ಲಿ ಕದಿರು ತೆಗೆಯಲು ಹೋಗುವಲ್ಲಿ ಪುತ್ತರಿ ಕತ್ತಿಯನ್ನು ತೆಗೆದು ತರುವಲ್ಲಿ ಯಾವ ಅಡ್ಡಿ ಆತಂಕಗಳಾಗದಂತೆ ನಡೆಸಿಕೊಡುವ ಜವಾಬ್ದಾರಿ ಇಗ್ಗುತ್ತಪ್ಪನಿಗೆ ಸೇರಿದ್ದು’. ಈ    ಪ್ರಾರ್ಥನೆಯ ಬಳಿಕ ಮನೆ ಮಂದಿಯೆಲ್ಲ ಒಟ್ಟುಗೂಡಿ ಭತ್ತದ ಗದ್ದೆಗೆ ತೆರಳುವರು.ಪ್ರಥಮ ಕೊಯ್ಲಿಗೆಂದು ನಿರ್ದಿಷ್ಟ ಪಡಿಸಿದ ಗದ್ದೆಯಲ್ಲಿ ಕುಟುಂಬದ ಹಿರಿಯ ಭತ್ತದ ಪೈರುಗಳನ್ನು ಪೂಜಿಸಿ ಅದಕ್ಕೆ ಹಣ್ಣು ಕಾಯಿ, ಹಾಲು, ಜೇನುಗಳನ್ನು ಸಮರ್ಪಿಸುತ್ತಾನೆ. ಆ ಬಳಿಕ ‘ಪೊಲಿ ಪೊಲಿಯೇ ದೇವಾ’ ಎಂದು ಏರುದನಿಯಲ್ಲಿ ಕೂಗುತ್ತ ಭತ್ತದ ತೆನೆಗಳನ್ನು ಕತ್ತರಿಸಿ ತಂದು ಮನೆಯನ್ನು ತುಂಬಿಕೊಳ್ಳುವ ವಿಧಿವತ್ತಾದ ಆಚರಣೆ ಈ ಹಬ್ಬದಲ್ಲಿ ಪ್ರಮುಖ ಅಂಶ.ಹುತ್ತರಿಯಂದು ಅಡುಗೆ ವೈವಿಧ್ಯಮಯವಾಗಿರುತ್ತದೆ. ಬಾಳೇಹಣ್ಣಿನಿಂದ ತಯಾರಿಸಿದ ‘ತಂಬಿಟ್ಟು’, ಘಮಘಮಿಸುವ ಏಲಕ್ಕಿ ಪುಟ್, ಆಗತಾನೆ ಗದ್ದೆಯಿಂದ ಕೊಯ್ದು ಭತ್ತದ ಅಕ್ಕಿಯನ್ನು ಸೇರಿಸಿ ಮಾಡಿದ ಹೊಸ ಅಕ್ಕಿಗೆ ಐದಾರು ಪುಟ್ಟ ಕಲ್ಲು ಚೂರುಗಳನ್ನು ಸೇರಿಸಿ ಪಾಯಸ ಮಾಡುತ್ತಾರೆ. ಊಟ ಮಾಡುವಾಗ ಕಲ್ಲು ಸಿಕ್ಕಿದವರಿಗೆ ಕಲ್ಲಾಯುಷ್ಯ (ಅಂದರೆ ದೀರ್ಘಾಯುಷ್ಯ) ಎಂಬುದಾಗಿ ಹಿರಿಯರ ಆಶೀರ್ವಾದ ಲಭಿಸುತ್ತದೆ. ಹುತ್ತರಿಯಲ್ಲಷ್ಟೇ ಈ ವಿಶೇಷ ಕಾರ್ಯಕ್ರಮ ಕಾಣಬಹುದು.ಹುತ್ತರಿ ಹಬ್ಬವೆಂದರೆ ವಾರಗಟ್ಟಲೆ ಸಂಭ್ರಮ. ಹಬ್ಬ ಒಂದು ದಿನವಾದರೂ ಅದಕ್ಕೆ ಸಂಬಂಧಿಸಿದ ಆಚರಣೆಗಳೂ ವಾರಗಟ್ಟಲೆ ಜರುಗುತ್ತವೆ. ಹುತ್ತರಿಯ ಅಂಗವಾಗಿ ಆ ದಿನಗಳಲ್ಲಿ ‘ಮಂದ್’ ಎಂಬ ಊರ ಕ್ರೀಡಾಂಗಣದಲ್ಲಿ ಊರವರೆಲ್ಲರೂ ಸೇರಿ ನೃತ್ಯ, ಕುಣಿತ ಮತ್ತು ಶೌರ್ಯ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಾರೆ.ರಡೂ ಕೈಗಳಲ್ಲಿ ಬೆತ್ತದ ಬಾರು ಕೋಲುಗಳನ್ನು ಹಿಡಿದು ಅವುಗಳನ್ನು ವಿವಿಧ ಭಂಗಿಗಳಲ್ಲಿ ಕ್ರಮಬದ್ಧವಾಗಿ ಬೀಸುತ್ತ ಕುಣಿಯುವ ಕೋಲಾಟ ‘ಹುತ್ತರಿ ಕೋಲಾಟ’ವೆಂದೇ ಪ್ರಸಿದ್ಧಿ ಪಡೆದಿದೆ. ಕೊಡಗಿನಲ್ಲಿ ಮಾತ್ರವೇ ಕಾಣಬಹುದಾದ ಹುತ್ತರಿ ಹಬ್ಬವು ಅಲ್ಲಿನ ಸಂಪ್ರದಾಯ ಕೃಷಿ ಚಟುವಟಿಕೆಯ ಮೇಲಿನ ಆಸಕ್ತಿ ಇತ್ಯಾದಿಗಳ ಪ್ರತಿರೂಪವಾಗಿದೆ.

ಪ್ರತಿಕ್ರಿಯಿಸಿ (+)