ಮಂಗಳವಾರ, ಮೇ 11, 2021
25 °C

ಹುಬ್ಬಳ್ಳಿ-ಸೋಲಾಪುರ ಸೇತುವೆ ಸಂಚಾರಕ್ಕೆ ಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ-ಸೋಲಾಪುರ ಸೇತುವೆ ಸಂಚಾರಕ್ಕೆ ಮುಕ್ತ

ಕೆರೂರ: ಸವದತ್ತಿ ಬಳಿಯ ನವಿಲು ತೀರ್ಥ (ರೇಣುಕಾ) ಜಲಾಶಯದಿಂದ ಹರಿಬಿಟ್ಟ ನೀರಿನಿಂದಾಗಿ ಕಳೆದ ನಾಲ್ಕು ದಿನಗಳ ಕಾಲ ಪ್ರವಾಹದಲ್ಲಿ ಮುಳುಗಿದ್ದ ಗೋವನಕೊಪ್ಪ ಗ್ರಾಮದ ಬಳಿಯ ಮಲಪ್ರಭಾ ಸೇತುವೆ ಭಾನುವಾರ  ಭಾರಿ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ.  ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೆರೂರ, ಕುಳಗೇರಿ, ಗೋವನಕೊಪ್ಪದ ಡಾಬಾಗಳ ಬಳಿ ಕಳೆದ ನಾಲ್ಕು ದಿನಗಳಿಂದ ನೂರಾರು ಸರಕು ಸಾಗಣೆ ವಾಹನಗಳು ಬಿಡಾರ ಹೂಡಿದ್ದವು.ಲಘು ವಾಹನ ಇಲ್ಲ:  ಸೇತುವೆಯು ಪ್ರವಾಹದ ಇಳಿಮುಖದಿಂದ ಸಂಚಾರಕ್ಕೆ ಮುಕ್ತವಾದರೂ ಸೇತುವೆ ಮುಂದಿನ ನರಗುಂದ ತಾಲ್ಲೂಕಿನ ಕೊಣ್ಣೂರ ಬಳಿಯ ಕೊಡ್ಲಿ ತೋಟದ ಹಳ್ಳದ ಒತ್ತುವರಿ ನೀರು ನಿಂತಿರುವ ಪರಿಣಾಮ ಚಿಕ್ಕ ಹಾಗು ಲಘು ವಾಹನಗಳು ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಸಂಚರಿಸದಂತಾಗಿದೆ. ಇವು ಮತ್ತೆ ಹೊಳೆ ಆಲೂರ ಇಲ್ಲವೇ ರಾಮದುರ್ಗ ಮಾರ್ಗವಾಗಿ ಸುತ್ತು ಬಳಸಿ ಹೋಗಬೇಕಾಗಿದೆ. ಈ ಹಳ್ಳದ ನೀರು ಇನ್ನೂ ಎರಡು ದಿನ ಸರಿಯುವ ಲಕ್ಷಣವಿಲ್ಲ.ಈ ಹಳ್ಳ ದಾಟಲು ಹೋದ ಲಾರಿಯೊಂದು ನಡುನೀರಲ್ಲಿ ಸಿಕ್ಕ ಪರಿಣಾಮ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತವಾಗಿತ್ತು.ಜಲಾಶಯ ಭರ್ತಿ: ಬೆಳಗಾವಿಯ ಖಾನಾಪುರ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಮಳೆ ಪ್ರಮಾಣ ತಗ್ಗಿದ್ದು, ನವಿಲು ತೀರ್ಥ ಜಲಾಶಯಕ್ಕೆ ಸದ್ಯ 4100 ಕ್ಯೂಸೆಕ್ ಒಳ ಹರಿವು ಇದೆ. ಜಲಾಶಯದಲ್ಲಿ ನೀರಿನ ಮಟ್ಟ 37.73 ಟಿಎಂಸಿ (ಗರಿಷ್ಠ) ಇದೆ. ಮಲಪ್ರಭಾ ನದಿ ಪಾತ್ರಕ್ಕೆ ಹಾಗೂ ನರಗುಂದ, ನವಲಗುಂದಗಳ ಬಲದಂಡೆ ಕಾಲುವೆಗಳಿಗೆ 1,300 ಕ್ಯೂಸೆಕ್, ಎಡದಂಡೆಗೆ 800 ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.ಸೇತುವೆ ಬಳಿ ನಾಲ್ಕು ದಿನಗಳಿಂದ ಕುಳಗೇರಿ ಕ್ರಾಸ್ ಪೋಲಿಸ್ ಸಿಬ್ಬಂದಿ ನಿಯೋಜಿಸಿದ್ದರಿಂದ ಈ ಬಾರಿ ಯಾವುದೇ ಅಪಘಾತಕ್ಕೆ ಅವಕಾಶ ಆಗಲಿಲ್ಲ.ಕೃಷ್ಣಾ ಪ್ರವಾಹ: ಬೆಳೆ ಹಾನಿ

ಬನಹಟ್ಟಿ: ಮಹಾರಾಷ್ಟ್ರದ ಕೋಯ್ನಾ ಆಣೆಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟ ಕಾರಣ, ಕೃಷ್ಣಾ ನದಿಗೆ ಮಹಾಪೂರ ಬಂದಿದೆ. ಬನಹಟ್ಟಿ ಬಳಿಯ  ಆಸಂಗಿ, ಅಸಕಿ ಗ್ರಾಮಗಳ ನೀರಿನ ಒತ್ತು ಆವರಿಸಿದೆ. ಹೊಲ ಗದ್ದೆಗಳು ನೀರಿನಿಂದ ತುಂಬಿಕೊಂಡಿದ್ದು, ಕಬ್ಬು, ಗೋದಿ, ಜೋಳ ಮತ್ತಿತರ ಬೆಳೆಗಳಿಗೆ ಹಾನಿಯಾಗಿದೆ.  ನೀರು ಪೂರೈಕೆಗೆ ತೊಂದರೆ ಇಲ್ಲ: ರಬಕವಿ-ಬನಹಟ್ಟಿ ನಗರಗಳಿಗೆ ನೀರು ಪೂರೈಸುವ ಜಾಕ್‌ವೆಲ್ ಸುತ್ತ   ಹಿನ್ನೀರು ತುಂಬಿಕೊಂಡಿದ್ದರೂ, ನಗರಸಭೆ ಸಿಬ್ಬಂದಿಯ ಆರೇಳು ಜನರು, ಜಾಕ್‌ವೆಲ್‌ನಲ್ಲೇ  ಉಳಿದುಕೊಂಡಿದ್ದಾರೆ. ಇದರಿಂದ ನಾಗರಿಕರಿಗೆ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿದೆ. ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ನಗರಸಭೆ ಆಯುಕ್ತ ಚಿಕ್ಕಣ್ಣ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.