ಮಂಗಳವಾರ, ಮೇ 11, 2021
26 °C

ಹೂಳೆತ್ತಲು ಆಗ್ರಹಿಸಿ ಉಪವಾಸ: ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ಬಳಿಯಿರುವ ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆಯಲು ಸರ್ಕಾರ ಇದೇ ಜೂನ್ 17ರೊಳಗೆ ಕಾರ್ಯ ಯೋಜನೆ ರೂಪಿಸದಿದ್ದರೆ, ಜಲಾಶಯದ ಬಳಿ ಎರಡು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಶಾಸಕ ಬಿ.ಶ್ರೀರಾಮುಲು ಎಚ್ಚರಿಸಿದ್ದಾರೆ.ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,  ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ಲಕ್ಷಾಂತರ ರೈತರ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯದಲ್ಲಿ ಅಂದಾಜು 34 ಟಿಎಂಸಿಯಷ್ಟು ಹೂಳು ತುಂಬಿರುವುದರಿಂದ ಬೇಸಿಗೆ ಅವಧಿಯ ಬೆಳೆಗೆ ಹಾಗೂ ಕುಡಿಯುವ ನೀರಿಗೆ ತೀವ್ರ ತೊಂದರೆ ಎದುರಾಗುತ್ತಿದೆ. ಅಲ್ಲದೆ, ಹೂಳು ತುಂಬಿರುವುದರಿಂದ ಉತ್ತಮ ಮಳೆ ಸುರಿದರೂ ಜಲಾಶಯ ಪೂರ್ಣ ತುಂಬದೆ, ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ ಎಂದರು.ಜಲಾಶಯದಲ್ಲಿನ ಹೂಳೆತ್ತಲು ಪ್ರಸಕ್ತ ಬಜೆಟ್‌ನಲ್ಲಿ ಹಣ ತೆಗೆದಿರಿಸಲಾಗಿದೆ ಎಂದು ಮುಖ್ಯಮಂತ್ರಿಯವರು ಪ್ರಕಟಿಸಿದ್ದು, ಕೂಡಲೇ ಅಧ್ಯಯನ ತಂಡವೊಂದನ್ನು ಕಳುಹಿಸಿ ಹೂಳೆತ್ತಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತರೊಂದಿಗೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಅವರು ತಿಳಿಸಿದರು.ಬರ ನಿರ್ವಹಣೆಯಲ್ಲಿ ವಿಫಲ: ರಾಜ್ಯದಾದ್ಯಂತ ಬರಗಾಲದ ಹಿನ್ನೆಲೆಯಲ್ಲಿ ಗಂಭೀರ ಪರಿಸ್ಥಿತಿ ಇದ್ದರೂ, ಸರ್ಕಾರ ಹಾಗೂ ಅಧಿಕಾರಿಗಳು ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಂಡಿಲ್ಲ ಎಂದ ಅವರು, ಮುಖ್ಯಮಂತ್ರಿಯವರು ಕೇವಲ ಜಿಲ್ಲಾಧಿಕಾರಿ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದರೆ ಸಾಲದು. ಬದಲಿಗೆ, ಬರಪೀಡಿತ ಪ್ರದೇಶಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಅರಿಯಬೇಕು ಎಂದರು.ಕುಡಿಯುವ ನೀರೂ ದೊರೆಯದೆ ಉತ್ತರ ಕರ್ನಾಟಕದ ಅನೇಕ ಗ್ರಾಮಗಳಲ್ಲಿ ಜನತೆ ತತ್ತರಿಸಿದ್ದಾರೆ. ಅವರಿಗೆ ಟ್ಯಾಂಕರ್ ಮೂಲಕ ನೀರು ಸರಬ ರಾಜು ಮಾಡುವ ಹೆಸರಿ ನಲ್ಲಿ ಅಧಿಕಾರಿಗಳು, ಶಾಸಕರು, ರಾಜಕಾರಣಿಗಳು ಹಣ ಲಪಟಾಯಿತ್ತಿದ್ದಾರೆ ಎಂದು ಅವರು ದೂರಿದರು.ಗುಲ್ಬರ್ಗಾ ಜಿಲ್ಲೆಯಲ್ಲಿ ಜನರು ಕುಡಿಯುವ ನೀರಿಗಾಗಿ ಜನರು  ಪರದಾಡುತ್ತಿದ್ದು, ಈ ಕುರಿತ ಚಿತ್ರಗಳು ಲಭ್ಯವಾಗಿವೆ ಎಂದು ಅವರು, ಕೆಲವು ಭಾವಚಿತ್ರಗಳನ್ನು ಮಾಧ್ಯಮದವರೆದುರು ಪ್ರದರ್ಶಿಸಿದರು.24ರಿಂದ ಪಾದಯಾತ್ರೆ: 
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಇದೇ 24ರಿಂದ ಜೂನ್ 17ವರೆಗೆ ಬೀದರ್‌ನ ಬಸವ ಕಲ್ಯಾಣದಿಂದ ಬೆಂಗಳೂರುವರೆಗೆ ಪಾದಯಾತ್ರೆ ಮಾಡಲು ನಿರ್ಧರಿಸಿದ್ದಾಗಿ ತಿಳಿಸಿದ ಅವರು, ಪಾದಯಾತ್ರೆ ವೇಳೆ ಜನರ ಸಮಸ್ಯೆಗಳ ಕುರಿತು ಮಾಹಿತಿ ಕಲೆಹಾಕಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ವರದಿ ಸಲ್ಲಿಸುವುದಾಗಿ ಹೇಳಿದರು.ಗದುಗಿನಲ್ಲಿ ಇತ್ತೀಚೆಗೆ `ಉತ್ತರಕ್ಕಾಗಿ ಉಪವಾಸ~ ಸತ್ಯಾಗ್ರಹ ನಡೆಸಿದಾಗ ಮುಖ್ಯಮಂತ್ರಿಯವರು ಸೌಜನ್ಯಕ್ಕೂ ಭೇಟಿ ಮಾಡಿ ಚರ್ಚಿಸಲಿಲ್ಲ. ಇದು ಕೇವಲ ತಮಗೆ ಮಾತ್ರವಲ್ಲ, ಇಡೀ ರಾಜ್ಯದ ಜನತೆಗೆ ಮಾಡಿದ ಅವಮಾನ ಎಂದು ಅವರು ಟೀಕಿಸಿದರು.ರೆಸಾರ್ಟ್ ರಾಜಕಾರಣ ಮಾಡುತ್ತ, ಭೋಜನಕೂಟ, ಚಹಾಕೂಟ ಏರ್ಪಡಿಸುತ್ತ, ಅಧಿಕಾರಕ್ಕಾಗಿ ಕಚ್ಚಾಟ ನಡೆಸುತ್ತಿರುವ ಬಿಜೆಪಿ ಶಾಸಕರು, ಮತ್ತು ಮುಖಂಡರನ್ನು ರಾಜ್ಯದ ಜನತೆ ಮುಂಬರುವ ಚುನಾವಣೆಯಲ್ಲಿ ಸಾರಾಸಗಟಾಗಿ ತಿರಸ್ಕರಿಸಲಿದ್ದಾರೆ ಎಂದು ಶ್ರೀರಾಮುಲು ಹೇಳಿದರು.ಮೇಯರ್ ಕೆ.ಹನುಮಂತಪ್ಪ, ಉಪಮೇಯರ್ ಇಬ್ರಾಹಿಂ ಬಾಬು, ಪಾಲಿಕೆ ಸದಸ್ಯ ಬಸವರಾಜ್, ಡಾ.ಮಹಿಪಾಲ್ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.