ಭಾನುವಾರ, ಜನವರಿ 19, 2020
29 °C
ನಿವೃತ್ತ ಐಎಎಸ್‌ ಅಧಿಕಾರಿ ವಿ. ಬಾಲಸುಬ್ರಮಣಿಯನ್ ಅಭಿಮತ

ಹೆಚ್ಚುವರಿ 10 ಟಿಎಂಸಿ ಕಾವೇರಿ ನೀರು ಪೂರೈಕೆ ಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕಾವೇರಿಯಿಂದ ನಗರಕ್ಕೆ ಹೆಚ್ಚುವರಿಯಾಗಿ ೧೦ ಟಿಎಂಸಿ ಕುಡಿ ಯುವ ನೀರು ತರುವುದು ಸುಲಭವಲ್ಲ’ ಎಂದು ನಿವೃತ್ತ ಐ ಎ ಎಸ್‌ ಅಧಿಕಾರಿ ವಿ. ಬಾಲಸುಬ್ರಮಣಿಯನ್ ಅಭಿಪ್ರಾಯ ಪಟ್ಟರು.ಕರ್ನಾಟಕ ರಾಜ್ಯ ವಿಶ್ವ ವಿದ್ಯಾಲ­ಯಗಳ ನಿವೃತ್ತ ಕುಲಪತಿಗಳ ಒಕ್ಕೂಟ ಹಾಗೂ ನೀತಿ  ಮತ್ತು ನಡವಳಿಕೆ ಅಧ್ಯಯನ ಕೇಂದ್ರದ  (ಸಿಪಿಪಿ) ಸಹ­ಯೋಗ­ದಲ್ಲಿ ಶನಿವಾರ ನಗರದಲ್ಲಿ ಏರ್ಪಡಿಸಲಾಗಿದ್ದ ‘ಬೆಂಗಳೂರು ನಗರ ಎದುರಿಸಬಹುದಾದ ಭೀಕರ ನೀರ ಕ್ಷಾಮ ತಡೆಗಟ್ಟುವ ಬಗೆ’ ಕುರಿತಾದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.‘ಕಾವೇರಿಯಿಂದ ರಾಜ್ಯಕ್ಕೆ ದೊರೆತಿರುವ 270 ಟಿಎಂಸಿ ನೀರಿನಲ್ಲಿ ಬೆಂಗಳೂರು ನಗರದ ಬಳಕೆಗೆ ಹೆಚ್ಚುವರಿ ಯಾಗಿ ೧೦ ಟಿಎಂಸಿ ನೀರನ್ನು ಪೂರೈಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ನಗರದ ನೀರಿನ ಸಮಸ್ಯೆಗೆ ಸಚಿವ ಸಂಪುಟದ ಈ ನಿರ್ಧಾರ ಪರಿಹಾರವಲ್ಲ. ಈ ಹೆಚ್ಚುವರಿ ನೀರನ್ನು ನಗರಕ್ಕೆ ತರಲು ಸಾಕಷ್ಟು ತಾಂತ್ರಿಕ ಹಾಗೂ ಕಾನೂನು ತೊಡಕು ಗಳು ಎದುರಾಗುತ್ತವೆ’ ಎಂದರು.‘ನಗರದ ಬಳಕೆಗಾಗಿ ಈಗಾಗಲೇ ೧೭.೬೪ ಟಿಎಂಸಿ ನೀರನ್ನು ಕಾವೇರಿ ನ್ಯಾಯಮಂಡಳಿ ನಿಗದಿ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ೧೦ ಟಿಎಂಸಿ ನೀರನ್ನು ಪಡೆಯುವುದು ಅಷ್ಟು ಸುಲಭದ ಮಾತಲ್ಲ. ರಾಜ್ಯದ ರೈತರ ನೀರನ್ನು ಬೆಂಗಳೂರಿಗೆ ತಂದು ಕೊಡುವುದು ಕಷ್ಟವಾಗುತ್ತದೆ’ ಎಂದು ಹೇಳಿದರು.‘ಶರಾವತಿ ನದಿಯು ನಾಲ್ಕು ವರ್ಷಗಳಿಗೆ ಒಮ್ಮೆ ತುಂಬುತ್ತದೆ. ಆ ನೀರನ್ನು ಬಳಸಿ ವಿದ್ಯುತ್‌ ಅನ್ನು ಉತ್ಪಾದಿಸಲಾಗುತ್ತದೆ. ಇಂತಹ ಪರಿಸ್ಥಿತಿ ಯಲ್ಲಿ ಅಲ್ಲಿಂದ ನಗರಕ್ಕೆ ನೀರು ತರುವ ಯೋಜನೆ ಸುಲಭವಾಗಿ ಅನುಷ್ಠಾನಕ್ಕೆ ಬರಲು ಹೇಗೆ ಸಾಧ್ಯ’ ಎಂದರು.‘ಒಂದು ವೇಳೆ ನೀರು ತರಬೇಕಾದರೆ ಶರಾವತಿ ನದಿಯಿಂದ ನಗರಕ್ಕೆ ನೀರು ಪೂರೈಸಲು ಸುಮಾರು ೩೦೦ ಕಿ.ಮೀ. ದೂರದಿಂದ ಕೊಳವೆ ಮಾರ್ಗ ನಿರ್ಮಾಣ ಮಾಡಬೇಕು. ಈ ಮಾರ್ಗ ದಲ್ಲಿ ಪಶ್ಚಿಮ ಘಟ್ಟಗಳು ಇರುವುದರಿಂದ ಅಮೂಲ್ಯ ವನ್ಯ ಸಂಪತ್ತು ನಾಶವಾಗುವ ಸಂಭವವಿದೆ. ನಂತರ ನೀರನ್ನು ಎತ್ತಲು ಹೆಚ್ಚು ವಿದ್ಯುತ್ ಸಹ ಬೇಕಾಗುತ್ತದೆ’ ಎಂದು ವಿವರಿಸಿದರು.‘ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಲಾಗದ ಯೋಜನೆ ಗಳನ್ನು ಕೈಬಿಟ್ಟು, ಇರುವ ನೀರಿನ ಮೂಲಗಳನ್ನು ಪತ್ತೆಮಾಡಿ, ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.ಮಾಜಿ ಸಚಿವ ಸುರೇಶ್‌ಕುಮಾರ್ ಮಾತನಾಡಿ, ‘ಸರ್ಕಾರಿ ಸ್ಥಳಗಳಲ್ಲಿ ಮಳೆ ನೀರು ಸಂಗ್ರಹ, ಬಳಕೆ ಮಾಡಿದ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುವುದು ಸೇರಿದಂತೆ ನೀರು ಪೋಲಾಗುವುದನ್ನು ತಡೆಯುವುದರಿಂದ ನಗರದ ನೀರಿನ ಸಮಸ್ಯೆಯನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಬಹುದು’ ಎಂದರು.‘ವೃಷಭಾವತಿ ತ್ಯಾಜ್ಯ ನೀರಿನ ಘಟಕದಿಂದ ಎರಡು ಹಂತದಲ್ಲಿ ನೀರನ್ನು ಶುದ್ಧೀಕರಿಸಿ, ಪೈಪ್‌ಲೈನ್ ಮೂಲಕ ತಾವರೆಕೆರೆವರೆಗೆ ಬಿಟ್ಟು, ಅಲ್ಲಿಂದ ನೈಸರ್ಗಿಕವಾಗಿ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಹರಿಸಬೇಕು. ಅಲ್ಲಿಂದ ಮತ್ತೊಮ್ಮೆ ಶುದ್ಧೀಕರಿಸಿ ಆ ನೀರನ್ನು ಜನರಿಗೆ ಕುಡಿಯಲು ಸರಬರಾಜು ಮಾಡಬೇಕು. ಅಲ್ಲದೆ ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸ ಬೇಕು’ ಎಂದು ಸಲಹೆ ನೀಡಿದರು.ಸಚಿವ ರಾಮಲಿಂಗಾರೆಡ್ಡಿ ಮಾತ ನಾಡಿ, ‘ಕುಡಿಯುವ ನೀರಿನ ವಿಷಯದಲ್ಲಿ ನಗರದ ಭವಿಷ್ಯ ಕರಾಳ ವಾಗಿದೆ. ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕೆರೆಗಳು ತುಂಬಿ ೧೮ ವರ್ಷ ಕಳೆದಿದೆ. ಆದರೂ ನಗರದಲ್ಲಿನ ನೀರಿನ ಸಮಸ್ಯೆಯನ್ನು ಕಡಿಮೆ ಮಾಡಲು ಸರ್ಕಾರ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಇದಕ್ಕೆ ಜನರ ಸಹಕಾರದ ಅಗತ್ಯವೂ ಇದೆ’ ಎಂದು ಹೇಳಿದರು.ಸಿಪಿಪಿ ಟ್ರಸ್ಟಿ ಪಿ.ಜಿ.ಆರ್.ಸಿಂಧ್ಯ, ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳ ನಿವೃತ್ತ ಕುಲಪತಿಗಳ ಒಕ್ಕೂಟದ ಅಧ್ಯಕ್ಷ ಡಾ. ಎಂ. ಮಹದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.ನೀರಿನ ಸಮಸ್ಯೆಗೆ ಪರಿಹಾರ

ಬೆಂಗಳೂರಿನ ನೀರಿನ ಸಮಸ್ಯೆ ಪರಿಹಾರಕ್ಕೆ ನಿವೃತ್ತ ಐ ಎ ಎಸ್‌ ಅಧಿಕಾರಿ ವಿ. ಬಾಲಸುಬ್ರಮಣಿಯನ್ ನೀಡಿದ ಸಲಹೆಗಳು ಇಲ್ಲಿವೆ;

*ಜಲಮಂಡಲಿ ಪೂರೈಸುತ್ತಿರುವ ನೀರಿನಲ್ಲಿ ಶೇಕಡ 40ರಷ್ಟು ನೀರು ಪೋಲಾಗುತ್ತಿದ್ದು, ಅದನ್ನು ತಡೆಯಲು ಶೇಕಡ 15ಕ್ಕೆ ಇಳಿಸಬೇಕು.*ಸರ್ಕಾರಿ ದಾಖಲೆಗಳ ಪ್ರಕಾರ ನಗರದಲ್ಲಿ ೯೩೯ ಕೆರೆಗಳಿದ್ದು, ವಾಸ್ತವವಾಗಿ ಕೇವಲ ೪೦೦ ಕೆರೆಗಳು ಮಾತ್ರ ಉಳಿದಿವೆ. ಅವುಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ಅಂತರ್ಜಲ ವೃದ್ಧಿಗೆ ಯೋಜನೆ ರೂಪಿಸಬೇಕು.*ನಗರದಲ್ಲಿರುವ ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ತೆರವುಗೊಳಿಸಬೇಕು. ಜಲಮಂಡಳಿಯ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳನ್ನು ಉನ್ನತ ದರ್ಜೆಗೆ ಏರಿಸಬೇಕು.*ನಗರದ ನಾಲ್ಕೂ ವಲಯಗಳಲ್ಲೂ ಮಳೆ ನೀರು ಸಂಗ್ರಹವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು.

ಪ್ರತಿಕ್ರಿಯಿಸಿ (+)