ಭಾನುವಾರ, ಜನವರಿ 26, 2020
28 °C

ಹೆಣ್ಣು ಭ್ರೂಣ ಹತ್ಯೆ ಕೊಲೆಗೆ ಸಮಾನ: ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಹೆಣ್ಣು ಭ್ರೂಣ ಹತ್ಯೆಯನ್ನು ಕಾನೂನಿನ ಅಡಿ ಕೊಲೆ ಎಂದು ಪರಿ­ಗಣಿಸ­ಬೇಕು ಎಂಬ ಚಿಂತನೆ ನಡೆಯು­ತ್ತಿದೆ. ಅದಕ್ಕೆ ಕಾನೂನು ತಜ್ಞರು, ಮಹಿಳಾ ಸಂಘಟನೆಗಳ ಪ್ರಮುಖರು ಸಮ್ಮತಿ ಸೂಚಿಸಿದ್ದಾರೆ. ಈ ಚಿಂತನೆ ಕಾರ್ಯರೂಪಕ್ಕೆ ಬರಬೇಕಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ರೇಣುಕ ಪ್ರಸಾದ್ ಹೇಳಿದರು.ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ಕಾಯ್ದೆ (ಪಿಸಿ ಅಂಡ್ ಪಿಎನ್ ಡಿಟಿ ಆಕ್ಟ್ 1994) ಕುರಿತು  ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿ­ಯಾನ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ ವತಿಯಿಂದ ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಗರ್ಭಪೂರ್ವ ಮತ್ತು ಪ್ರಸವ­ಪೂರ್ವ ಲಿಂಗ ಪತ್ತೆ ಕಾಯ್ದೆ 1994­ರಲ್ಲೇ ರೂಪುಗೊಂಡು 1996ರಿಂದಲೇ ಜಾರಿಗೆ ಬಂದಿದೆ. ಆದರೆ ಪರಿಣಾಮ­ಕಾರಿಯಾಗಿ ಅನುಷ್ಠಾನ ಮಾತ್ರ ಇನ್ನೂ ಆಗಿಲ್ಲ. ಹೀಗಾಗಿಯೇ ಹೆಣ್ಣು ಭ್ರೂಣ ಹತ್ಯೆಯನ್ನು ಕಾನೂನಿನ ಅಡಿ ಕೊಲೆ ಎಂದು ಪರಿಗಣಿಸಬೇಕು ಎಂಬ ಗಂಭೀರ ಚಿಂತನೆ ಚಾಲ್ತಿಯಲ್ಲಿದೆ ಎಂದರು.ಪರಿಣಾಮಕಾರಿ ಅನುಷ್ಠಾನದ ಉದ್ದೇಶ­ದಿಂದ ಕಾಯ್ದೆಯನ್ನು 2003­ರಲ್ಲಿ ತಿದ್ದುಪಡಿ ಮಾಡಲಾಯಿತು. ಶಿಕ್ಷೆ ಪ್ರಮಾಣದಲ್ಲಿ ಹೆಚ್ಚಳ, ಲಿಂಗಪತ್ತೆ ಮಾಡುವ ಕೇಂದ್ರಗಳನ್ನು ಪೂರ್ವಾನು­ಮತಿ ಇಲ್ಲದೆ ಪರಿಶೀಲನೆ ಮಾಡುವ ಮತ್ತು ಬಂದ್ ಮಾಡುವ ಅಧಿಕಾರ ವಿಸ್ತರಣೆ ಮೂಲಕ ಕಾಯ್ದೆಯನ್ನು ತೀಕ್ಷ್ಣಗೊಳಿಸಲಾಗಿದೆ. ಶಿಕ್ಷೆ ಪ್ರಮಾಣವೂ ಜಾಸ್ತಿಯಾಗಿದೆ ಎಂದರು.ಹಲವು ಅಂಶಗಳನ್ನು ಸೇರಿಸಿ ಕಾಯ್ದೆ­ಯನ್ನು ತಿದ್ದುಪಡಿ ಮಾಡಿದರೂ ಭ್ರೂಣ­ಹತ್ಯೆ ತಡೆಯಲು ಸಾಧ್ಯವಾಗು­ತ್ತಿಲ್ಲ. ಹೀಗಾಗಿ ಭ್ರೂಣದ ಮಾಹಿತಿ­ಯನ್ನು ಸಂಜ್ಞೆಯ ಮೂಲಕ ನೀಡಿದರೂ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದರು.ಸಮಾನತೆ ಸೃಷ್ಟಿಯಾಗಲಿ: ಹೆಣ್ಣು ಭ್ರೂಣ ಹತ್ಯೆ ತಡೆಯಲು ಕಾನೂನು­ಗಳಿಂದಷ್ಟೇ ಸಾಧ್ಯವಿಲ್ಲ. ಪೋಷಕರಲ್ಲಿನ ಸಾಂಪ್ರದಾಯಿಕ ಮನಃಸ್ಥಿತಿ ಬದಲಾಗ­ಬೇಕು ಎಂದು ಕಾರ್ಯಾಗಾರವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಡಿ.ಕೆ.ರವಿ ಹೇಳಿದರು.ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಮಹಿಳೆ­ಯರಿಗೆ ಶೇ 33ರಷ್ಟು ಮೀಸ­ಲಾತಿ­ಯನ್ನು ರಾಜ್ಯ ಸರ್ಕಾರ ನೀಡಿದೆ. ಆದರೆ ಅಷ್ಟು ಸಂಖ್ಯೆಯ ಅರ್ಹ ಮಹಿಳೆಯರು ಲಭ್ಯವಿಲ್ಲದ ಸನ್ನಿವೇಶ ನಿರ್ಮಾಣವಾಗಿದೆ. ಅದನ್ನು ನಿವಾರಿಸ­ಬೇಕೆಂದರೆ ಹೆಣ್ಣು ಭ್ರೂಣ ಹತ್ಯೆ ತಡೆಯಲೇಬೇಕು ಎಂದರು.ಒಲಿದರೆ ನಾರಿ ಮುನಿದರೆ ಮಾರಿ ಎಂಬ ವಿಶ್ಲೇಷಣೆ ಮೂಲಕ ಮಹಿಳೆ ವ್ಯಕ್ತಿತ್ವವನ್ನು ಇಬ್ಬಗೆಯಾಗಿ ವ್ಯಾಖ್ಯಾನಿ­ಸುವುದು ಈಗಿನ ಕಾಲಕ್ಕೆ ಸರಿಯಲ್ಲ. ಏಕೆಂದರೆ ಹೆಣ್ಣು ಮತ್ತು ಗಂಡು ಸಮಾನರು ಎಂದು ಒಪ್ಪಿಕೊಂಡಿ­ದ್ದಾ­ಗಿದೆ. ದೈಹಿಕ ವ್ಯತ್ಯಾಸಗಳನ್ನು ಹೊರತು­ಪಡಿಸಿದರೆ ಗಂಡಿನಷ್ಟೇ ಮಹಿಳೆ ಕೂಡ ಸಮರ್ಥಳಾಗಿದ್ದಾಳೆ ಎಂ­ದರು.ಜಿಲ್ಲಾ ಏಡ್ಸ್ ನೋಡಲ್ ಅಧಿಕಾರಿ ಡಾ.ಎನ್.ರಾಜಕುಮಾರ್ ಪ್ರಾಸ್ತಾವಿಕ ಮಾತನಾಡಿ, ಭ್ರೂಣ ಹತ್ಯೆ ಮಾಡಿದವ­ರನ್ನು ಜೈಲಿಗೆ ಕಳುಹಿಸುವುದರಿಂದ ಸಮಸ್ಯೆ ನಿವಾರಿಸುವುದು ಸಾಧ್ಯವಿಲ್ಲ. ಬದಲಿಗೆ ಪೋಷಕರಲ್ಲಿ ಹೆಣ್ಣು-–ಗಂಡು ತಾರತಮ್ಯ ಹೋಗಬೇಕು. ಆಮಿಷಗಳಿಗೆ ಈಡಾಗಿ ಭ್ರೂಣ ಮಾಹಿತಿ ನೀಡುವ, ಹತ್ಯೆಗೆ ಪ್ರಚೋದಿಸುವ ವೈದ್ಯ ಸಿಬ್ಬಂದಿಯೂ ತಮ್ಮ ಧೋರಣೆ ಬದಲಿಸಿ­ಕೊಳ್ಳಬೇಕು ಎಂದು ಸಲಹೆ ಮಾಡಿದರು.ಹೆಣ್ಣು ಭ್ರೂಣ ಹತ್ಯೆ ಸಲುವಾಗಿ ಗರ್ಭಪಾತ ಮಾಡುವುದರಿಂದ ಗರ್ಭಿಣಿ ಆರೋಗ್ಯದ ಮೇಲೆ ಮಾರಕ ಪರಿಣಾಮಗಳಾಗುವ ಸಾಧ್ಯತೆ ಇರುತ್ತದೆ. ಗರ್ಭಾಶಯಕ್ಕೆ ತೊಂದರೆ, ಮಾನಸಿಕ ಆಘಾತಗಳು ಲೈಂಗಿಕ, ಕೌಟುಂಬಿಕ ಜೀವನದ ಮೇಲೂ ದುಷ್ಪರಿಣಾಮ ಬೀರುತ್ತದೆ. ಅದರಿಂದ ಇಡೀ ಕುಟುಂಬ ವ್ಯವಸ್ಥೆಯೇ ಅಸ್ತವ್ಯಸ್ತಗೊಳ್ಳುತ್ತದೆ. ಭ್ರೂಣ ಹತ್ಯೆಗೆ ಮುಂದಾಗುವ ಮುನ್ನ ಈ ಬಗ್ಗೆ ಸಂಬಂಧಿಸಿದವರೆಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ನುಡಿದರು.ಹಿರಿಯ ಸಿವಿಲ್ ನ್ಯಾಯಾಧೀಶೆ ಎಸ್.ರೇಣುಕ. ಜಿಲ್ಲಾ ಪಂಚಾಯತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿಮೋಲ್, ಜಿಲ್ಲಾ ಪಂಚಾಯತಿ ಸದಸ್ಯೆ ಮಂಗಮ್ಮ ಮುನಿಸ್ವಾಮಿ ಮಾತನಾಡಿದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ.­ಆರ್.­ಫಯಾಜ್ ಖಾನ್, ಜಿಲ್ಲಾ ಪಂಚಾ­ಯತಿ ಉಪಕಾರ್ಯದರ್ಶಿ ಜಿ.ಎಫ್.­ಬದನೂರು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಯಣ್ಣ, ತಾಲ್ಲೂಕು ವೈದ್ಯಾಧಿಕಾರಿ ಲತಾ ಪ್ರಮೀಳ ವೇದಿಕೆ­ಯಲ್ಲಿದ್ದರು.

ನಂತರ ಡಾ.ಮಹ್ಮದ್ ಷರೀಫ್ ಮತ್ತು ಡಾ.ವೆಂ.ಶ್ರೀನಿವಾಸ್ ವಿಶೇಷ ಉಪನ್ಯಾಸಗಳನ್ನು ನೀಡಿದರು.

ಪ್ರತಿಕ್ರಿಯಿಸಿ (+)