ಸೋಮವಾರ, ಮೇ 16, 2022
30 °C

ಹೆತ್ತ ಮಕ್ಕಳನ್ನೇ ಜೀತಕ್ಕಿಟ್ಟ ತಾಯಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆತ್ತ ಮಕ್ಕಳನ್ನೇ ಜೀತಕ್ಕಿಟ್ಟ ತಾಯಿ...

ತುಮಕೂರು: ಹೆತ್ತ ತಾಯಿಯೇ ಕುರುಡು ಮಗನನ್ನು ತ್ಯಜಿಸಿದ, ಹೆಣ್ಣು ಮಕ್ಕಳನ್ನು ಜೀತಕ್ಕಿಟ್ಟ ಘಟನೆ ನಗರದ ಗೂಡ್ಸ್‌ಶೆಡ್ ಕಾಲೊನಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಜೀತದ ಮನೆಯಿಂದ ಓಡಿಬಂದ ಮಕ್ಕಳು ಶುಕ್ರವಾರ ಮಾಧ್ಯಮದ ಎದುರು ತಮ್ಮ ಕಣ್ಣೀರ ಕಥೆಯನ್ನು ಹಂಚಿಕೊಂಡರು.ಸೈದಾಬಾನು (14), ಅಸ್ಮಾಬಾನು (12) ನರಕದಿಂದ ಪಾರಾಗಿ ಬಂದ ಮಕ್ಕಳು. ಸೈದಾಬಾನುಗೆ ತಾನು ಎಲ್ಲಿ ಕೆಲಸಕ್ಕಿದ್ದೆ ಎನ್ನುವುದೂ ಗೊತ್ತಿಲ್ಲ. ಅಸ್ಮಾಬಾನು ಮಾತ್ರ ತಾನು ಬೆಂಗಳೂರಿನ ಕೋಲ್ಸ್‌ಪಾರ್ಕ್ ಬಡಾವಣೆಯ ಶ್ರೀಮಂತರ ಮನೆಯಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಹೇಳುತ್ತಾಳೆ.ಸೈದಾಬಾನು ಅಕ್ಕ ಅಫ್ಸಾನಾಬಾನು (17) ಸಹ ಜೀತದಲ್ಲಿದ್ದಾಳೆ. ಈಕೆ ಇನ್ನೂ ಮನೆಗೆ ಹಿಂದಿರುಗದಿರುವುದು ಕುಟುಂಬದಲ್ಲಿ ಆತಂಕ ಮೂಡಿಸಿದೆ. `ನಾನು ಕೆಲಸ ಮಾಡುತ್ತಿದ್ದ ಮನೆಯ ಸಂಬಂಧಿಗಳ ಮನೆಯಲ್ಲಿಯೇ ನನ್ನ ಅಕ್ಕ ಜೀತ ಮಾಡುತ್ತಿದ್ದಾಳೆ. ಆ ಮನೆಯೂ ಕೋಲ್ಸ್‌ಪಾರ್ಕ್ ಬಡಾವಣೆಯಲ್ಲಿಯೇ ಇದೆ~ ಎಂದು ಅಸ್ಮಾಬಾನು ವಿವರಿಸುತ್ತಾಳೆ.ಚಿತ್ರಹಿಂಸೆ: ಮಕ್ಕಳನ್ನು ಜೀತಕ್ಕಿಟ್ಟುಕೊಂಡಿದ್ದವರು ಮಕ್ಕಳ ಮೇಲೆ ಸಾಕಷ್ಟು ದೌರ್ಜನ್ಯ ನಡೆಸಿದ್ದಾರೆ. ಅಸ್ಮಾಬಾನು ಬಲತೊಡೆಯನ್ನೇ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟಿದ್ದಾರೆ. ಸೈದಾಬಾನು ತೋಳಿನ ಮೇಲೆ ಕಚ್ಚಿದ ಕಲೆಗಳು, ಮೂಗಿನಿಂದ ರಕ್ತ ಸುರಿದ ಗುರುತು ಎದ್ದು ಕಾಣುತ್ತದೆ.`ಪೊರಕೆ, ದೊಣ್ಣೆಯಿಂದ ನನ್ನನ್ನು ಹೊಡೆಯುತ್ತಿದ್ದರು. ಹೊಟ್ಟೆ ತುಂಬ ಊಟ ಕೊಡುತ್ತಿರಲಿಲ್ಲ. ಹಸಿವು ತಡೆಯಲಾರದೆ ಕದ್ದು ತಿಂದಿದ್ದು ಗೊತ್ತಾದರೆ ನೆಲಕ್ಕೆ ಬೀಳುವಷ್ಟು ಚಚ್ಚುತ್ತಿದ್ದರು. ಅಕ್ಕ ಅಫ್ಸಾನಾಬಾನುಗೆ ಇನ್ನೂ ಹೆಚ್ಚಿನ ಚಿತ್ರಹಿಂಸೆ ಕೊಟ್ಟಿರಬಹುದು~ ಎಂದು ಮಕ್ಕಳಿಬ್ಬರು ಕಣ್ಣೀರುಗರೆಯುತ್ತಾರೆ.`ಮನೆಯವರೆಲ್ಲಾ ಹೊರಗೆ ಹೋಗಿದ್ದ ಸಮಯ ಕಾದು ಬೀದಿಗೆ ಓಡಿ ಬಂದೆ. ನಾನು ಎಲ್ಲಿದ್ದೇನೆ ಎಂಬುದೇ ಗೊತ್ತಾಗಲಿಲ್ಲ. ಗಾರೆ ಕೂಲಿ ಮಾಡುತ್ತಿದ್ದ ತೆಲುಗು ಭಾಷಿಕನಿಗೆ ನನ್ನ ಕಥೆ ಹೇಳಿದ. ಅವನು ಒಬ್ಬ ಆಟೊ ಚಾಲಕನ ಬಳಿ ಕರೆತಂದು ಆತ ನನ್ನನ್ನು ಮಾತನಾಡಿಸಿ, ಒಂದು ರಾತ್ರಿ ತನ್ನ ಮನೆಯಲ್ಲಿ ಊಟ ಹಾಕಿ ಮಾರನೇ ದಿನ (ಶುಕ್ರವಾರ) ಇಲ್ಲಿಗೆ ಕರೆದುಕೊಂಡು ಬಂದು ಕ್ಷೇಮವಾಗಿ ಬಿಟ್ಟುಹೋದ~ ಎಂದು ಸೈದಾಬಾನು ತನ್ನ ಕಥೆ ಹೇಳಿಕೊಳ್ಳುತ್ತಾಳೆ.`ನಾನು ಕಸ ಹಾಕಲು ಬೀದಿಗೆ ಬಂದೆ. ಆಮೇಲೆ ಹಿಂದೆ ನೋಡದೆ ಒಂದೇ ಸಮ ಓಡಿ, ಬಸ್ ಹತ್ತಿ ತುಮಕೂರಿಗೆ ಬಂದೆ~ ಎಂದು ಅಸ್ಮಾಬಾನು ತಾನು ಪರಾರಿಯಾದ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾಳೆ.`ನನ್ನ ಮಗ ಸತ್ತುಹೋದ ಮೇಲೆ ಗಂಡು ಮಕ್ಕಳನ್ನು ಇಲ್ಲಿಗೆ ತಂದು ಬಿಟ್ಟು ಹೋದರು. ಹೆಣ್ಣು ಮಕ್ಕಳನ್ನು ಜೀತಕ್ಕೆ ಹಾಕಿದರು. ಈಗ ಈ ಮಕ್ಕಳು ನಾನೇ ದಿಕ್ಕು ಅಂತ ಬಂದಿವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಹಿರಿಯಳಾದ ಅಪ್ಸನಾಬಾನುಳನ್ನು ಹುಡುಕಿಕೊಡಲು ಜಿಲ್ಲಾಡಳಿತ ನೆರವು ನೀಡಬೇಕು~ ಎಂದು ಅಜ್ಜಿ ಖೈರುನ್ನಿಸಾ ಸೆರಗೊಡ್ಡಿ ಬೇಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.