ಬುಧವಾರ, ಮೇ 18, 2022
27 °C

ಹೆದರಿಕೆ ಹುಟ್ಟಿಸುವ ಪುಟಾಣಿ ರೈಲು ಸಂಚಾರ

ಪ್ರಜಾವಾಣಿ ವಾರ್ತೆ/ ವಿಜಯ್ ಹೂಗಾರ Updated:

ಅಕ್ಷರ ಗಾತ್ರ : | |

ಹಾವೇರಿ: ಪುಠಾಣಿ ರೈಲು ಪ್ರಾಂಗಣದ ಸರಿಯಾದ ನಿರ್ವಹಣೆ ಇಲ್ಲದೇ ಗಿಡಗಂಟಿಗಳು ಬೆಳೆದು ಕಾಡಿನಂತ ಗೋಚರವಾಗುತ್ತಿದ್ದು, ಮಕ್ಕಳು ಪುಠಾಣಿ ರೈಲಿನಲ್ಲಿ ಹತ್ತಲು ಹೆದರುವಂತಹ ಸ್ಥಿತಿ ನಿರ್ಮಾಣವಾಗಿದೆ.ನಾಲ್ಕು ವರ್ಷಗಳ ಹಿಂದೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಕ್ಕಳ ಮನರಂಜನೆ ಉದ್ದೇಶದಿಂದ ನಗರದ ಮುನ್ಸಿಪಲ್ ಹೈಸ್ಕೂಲ್ ಪಕ್ಕದ ಬಯಲು ಜಾಗೆಯಲ್ಲಿ ಪುಠಾಣಿ ರೈಲು ಉದ್ಯಾನ ಸ್ಥಾಪಿಸಿತ್ತಲ್ಲದೇ, ಗಿಡಮರಗಳ ಮಧ್ಯ ಸುಂದರ ಉದ್ಯಾನ ನಿರ್ಮಿಸಿ ಪುಠಾಣಿ ರೈಲಿನ ಓಡಾಟ ಆರಂಭಿಸಿತ್ತು.ಈ ಮಧ್ಯ ಉದ್ಯಾನ ಪ್ರಾಂಗಣದಲ್ಲಿ ಸಿಮೆಂಟ್‌ನ ಪ್ರಾಣಿ ಪಕ್ಷಿಗಳ ಶಿಲ್ಪಗಳನ್ನು ನಿಲ್ಲಿಸುವ ಮೂಲಕ ಉದ್ಯಾನಕ್ಕೆ ಮತ್ತಷ್ಟು ಮೆರಗು ನೀಡಲಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಪುಠಾಣಿ ರೈಲು ನಿರ್ವಹಣೆ ಮಾಡುವಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ  ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆಂಬುದಕ್ಕೆ ಉದ್ಯಾನದಲ್ಲಿ ಬೆಳೆದಿರುವ ಕಸ ಕಡ್ಡಿ ಗಿಡಗಳು ಹುಲ್ಲು ಸಾಕ್ಷಿಯಾಗಿದೆ.ಮಕ್ಕಳು ಸ್ವಚ್ಛಂದವಾಗಿ ಓಡಾಡುವಂತಹ ವಾತಾವರಣ ಇರಬೇಕಾದ ಉದ್ಯಾನದಲ್ಲಿ ಕಾಡಿನಂತೆ ಹುಲ್ಲು ಬೆಳೆದಿದ್ದರಿಂದ ಮಕ್ಕಳು ಅಷ್ಟೇ ಏಕೆ ದೊಡ್ಡವರೇ ಅದರಲ್ಲಿ ಕಾಲು ಇಡಲು ಹೆದರುತ್ತಿದ್ದಾರೆ. ಹೆಚ್ಚಾಗಿ ಜನರ ಓಡಾಟ ಇಲ್ಲದ್ದರಿಂದ ಹಾವು, ಚೇಳುಗಳಂತಹ ವಿಷ ಜಂತುಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ.21 ಲಕ್ಷ ರೂ.ಖರ್ಚು: ಪುಠಾಣಿ ರೈಲು ಉದ್ಯಾನ ನಿರ್ಮಾಣಕ್ಕೆ ಸುಮಾರು 21 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಅದಕ್ಕೊಬ್ಬ ಚಾಲಕ ಹಾಗೂ ಕಾವಲುಗಾರರನ್ನು ಸಹ ನೇಮಕ ಮಾಡಲಾಗಿದೆ. ಎಲ್ಲವೂ ವ್ಯವಸ್ಥಿತವಾಗಿ ನಡೆದಿದ್ದರೆ, ಮಕ್ಕಳನ್ನು ಆಕರ್ಷಿಸುವ ಕೇಂದ್ರ ಸ್ಥಾನವಾಗಬೇಕಿತ್ತು. ಆದರೆ, ಅದು ಮಕ್ಕಳುಗಳಿಲ್ಲದೇ ಬೀಕೋ ಎನ್ನುತ್ತಿದೆ.ನಿಂತ ರೈಲು: ಪುಠಾಣಿ ರೈಲು ಓಡುವುದಕ್ಕೋ ಅಥವಾ ನೋಡುವುದಕ್ಕೋ ಎನ್ನುವ ಪ್ರಶ್ನೆ ಅದನ್ನು ನೋಡಿದವರಲ್ಲಿ ಹುಟ್ಟಿಕೊಳ್ಳದೇ ಇರದು. ತಿಂಗಳುಗಟ್ಟಲೇ ಒಂದೇ ಕಡೆ ನಿಂತಲ್ಲಿಯೇ ನಿಂತಿರುವುದೇ ಇಂತಹ ಪ್ರಶ್ನೆ ಹುಟ್ಟಲು ಕಾರಣ. ಪುಠಾಣಿ ರೈಲು ಓಡಾಡುವುದಿರುವುದಕ್ಕೆ ಹಾಗೂ ಉದ್ಯಾನದಲ್ಲಿ ಸ್ವಚ್ಛತೆ ಇಲ್ಲದಿರುವುದಕ್ಕೆ ಪಾಲಕರು ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋಗಲು ಮುಂದಾಗುತ್ತಿಲ್ಲ ಎನ್ನುತ್ತಾರೆ ನಗರದ ನಿವಾಸಿ ಹಾಗೂ ವ್ಯಾಪಾರಸ್ಥ ಮಲ್ಲಿಕಾರ್ಜುನ ಹಾವೇರಿ.ಸಂಶಯವಿಲ್ಲ: ಪುಠಾಣಿ ರೈಲು ಓಡಿಸದೇ ಹಾಗೆ ಬಿಟ್ಟರೆ ಹಾಗೂ ಉದ್ಯಾನವನ ಸ್ವಚ್ಛಗೊಳಿಸದೇ ಇದ್ದರೆ, ಪುಠಾಣಿ ರೈಲು ಹಾಳಾಗುವುದರಲ್ಲಿ ಸಂಶಯವಿಲ್ಲ. ಲಕ್ಞಾಂತರ ರೂಪಾಯಿ ಖರ್ಚು ಮಾಡಿ ಅದರ ನಿರ್ವಹಣೆಗೆ ನಿರ್ಲಕ್ಷ್ಯ ತೋರುತ್ತಿರುವುದು ಏಕೆ ಎಂಬುದು ಮಾತ್ರ ಗೊತ್ತಾಗುತ್ತಿಲ್ಲ.ಕೂಡಲೇ ಉದ್ಯಾನದಲ್ಲಿ ಬೆಳೆದಿರುವ ಹುಲ್ಲು, ಕಸದ ಗಿಡಿಗಳನ್ನು ತೆಗೆದು ಸ್ವಚ್ಛಗೊಳಿಸಬೇಕು. ಮಕ್ಕಳನ್ನು ಆಕರ್ಷಿಸಲು ಯೋಜನೆ ರೂಪಿಸಿ ಅದನ್ನು ಕಾರ್ಯರೂಪಕ್ಕೆ ತರಬೇಕು ಎಂದು ಹೇಳುತ್ತಾರೆ ಸಾಮಾಜಿಕ ಕಾರ್ಯಕರ್ತ ಬಸವರಾಜ ಮಾಸೂರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.