ಶನಿವಾರ, ಫೆಬ್ರವರಿ 27, 2021
23 °C
ಮೂಲ ಸೌಕರ್ಯಕ್ಕೆ ಒತ್ತಾಯ: ಪೊಲೀಸರಿಂದ ಲಘು ಲಾಠಿ ಪ್ರಹಾರ

ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಕೋಲಾರ: ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ರೈತರು ಎಪಿಎಂಸಿಗೆ ಹೊಂದಿಕೊಂಡಂತಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭಾನುವಾರ ದಿಢೀರ್‌ ರಸ್ತೆತಡೆ ಮಾಡಿ ಪ್ರತಿಭಟನೆ ನಡೆಸಿದರು.ರೈತರ ಪ್ರತಿಭಟನೆಯಿಂದ ರಾಷ್ಟ್ರೀಯ ಹೆದ್ದಾರಿ ಹಾಗೂ ಮಾಲೂರು ರಸ್ತೆಯಲ್ಲಿ ಮೂರು ತಾಸಿಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತವಾಗಿ ವಾಹನ ಸವಾರರು ಪರದಾಡಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋ ಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ರಸ್ತೆ ತಡೆ ಮಾಡುತ್ತಿದ್ದ ರೈತರನ್ನು ಚದುರಿಸಲು ಮುಂದಾದಾಗ ಪರಸ್ಪರರ ಮಧ್ಯೆ ವಾಗ್ವಾದ ನಡೆದು ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಈ ಹಂತದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ರೈತರ ಗುಂಪನ್ನು ಚದುರಿಸಿದರು.ಬಳಿಕ ಎಪಿಎಂಸಿ ಪ್ರವೇಶದ್ವಾರದಲ್ಲಿ ಧರಣಿ ಕುಳಿತ ರೈತರು ವಾಹನಗಳನ್ನು ಒಳ ಹೋಗದಂತೆ ತಡೆದು ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.19 ಎಕರೆ: ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್‌ ರಸ್ತೆಗೆ ಹೊಂದಿಕೊಂಡಂತಿರುವ ಎಪಿಎಂಸಿ ಮಾರುಕಟ್ಟೆಯು ಸುಮಾರು 19 ಎಕರೆ ವಿಸ್ತಾರವಾಗಿದೆ. ಟೊಮೊಟೊ, ಬದನೆಕಾಯಿ, ಈರುಳ್ಳಿ, ಬೀನ್ಸ್‌, ಕ್ಯಾರೆಟ್‌, ಮೂಲಂಗಿ ಸೇರಿದಂತೆ ವಿವಿಧ ಬಗೆಯ ತರಕಾರಿಗಳನ್ನು ರೈತರು ಪ್ರತಿನಿತ್ಯ ಈ ಮಾರುಕಟ್ಟೆಗೆ ತರುತ್ತಾರೆ.ಆಂಧ್ರಪ್ರದೇಶ, ತಮಿಳುನಾಡು, ಪಂಜಾಬ್‌ ಸೇರಿದಂತೆ ವಿವಿಧ ರಾಜ್ಯಗಳಿಂದ ತರಕಾರಿ ಸರಬರಾಜು ಮಾಡಲಾಗುತ್ತದೆ. ಅಲ್ಲದೇ, ಹೊರ ರಾಷ್ಟ್ರಗಳಿಗೂ ತರಕಾರಿ ರಫ್ತು ಮಾಡಲಾಗುತ್ತದೆ.ಮುಗಿದ ಹರಾಜು: ಪ್ರತಿನಿತ್ಯದಂತೆ ರೈತರು ಭಾನುವಾರ ಸರಕು ಸಾಗಣೆ ವಾಹನಗಳಲ್ಲಿ ಎಪಿಎಂಸಿಗೆ ತರಕಾರಿ ತೆಗೆದುಕೊಂಡು ಬಂದಿದ್ದರು. ಆದರೆ, ಬೆಳಿಗ್ಗೆ 8 ಗಂಟೆ ವೇಳೆಗಾಗಲೇ ಎಪಿಎಂಸಿ ಆವರಣದಲ್ಲಿ ವಾಹನಗಳು ತುಂಬಿ ಹೋಗಿದ್ದವು. ಸುಮಾರು 3 ತಾಸು ಕಾದರೂ ತರಕಾರಿ ವಾಹನಗಳು ಎಪಿಎಂಸಿ ಆವರಣ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಈ ನಡುವೆ ತರಕಾರಿ ಹರಾಜು ಪ್ರಕ್ರಿಯೆ ಸಹ ಮುಗಿದಿತ್ತು.ಇದರಿಂದ ಆಕ್ರೋಶಗೊಂಡ ರೈತರು ಹಾಗೂ ವಾಹನ ಚಾಲಕರು ಸರ್ವಿಸ್‌ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡಿದರು. ಪ್ರತಿಭಟನೆಯಿಂದ ಬೆಂಗಳೂರು ಹಾಗೂ ಚೆನ್ನೈ ಕಡೆಗೆ ಹೋಗಬೇಕಾಗಿದ್ದ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.‘ಎಪಿಎಂಸಿ ಆವರಣ ತುಂಬಾ ಕಿರಿದಾಗಿದೆ. ಈ ಸಂಬಂಧ ಎಪಿಎಂಸಿ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತಕ್ಕೆ ದೂರು ಕೊಟ್ಟು ಮಾರುಕಟ್ಟೆ ವಿಸ್ತರಣೆ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ, ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಉಪಾಧ್ಯಕ್ಷ ನಾರಾಯಣಗೌಡ ದೂರಿದರು.ಮಾರುಕಟ್ಟೆಯಲ್ಲಿ ರೈತರ ವಿಶ್ರಾಂತಿಗೆ ಸೂಕ್ತ ವ್ಯವಸ್ಥೆ ಇಲ್ಲ. ಕುಡಿಯುವ ನೀರು, ಶೌಚಾಲಯ, ರಸ್ತೆ ಸೇರಿದಂತೆ ಯಾವುದೇ ಮೂಲಸೌಕರ್ಯಗಳಿಲ್ಲ. ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿಯಾಗುತ್ತಿಲ್ಲ. ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ರೈತರು ಹಾಗೂ ವರ್ತಕರು ಬವಣೆ ಪಡುವಂತಾಗಿದೆ ಎಂದು ಹೇಳಿದರು.ಅಭಿವೃದ್ಧಿ ನಿರ್ಲಕ್ಷ್ಯ: ಎಪಿಎಂಸಿ ಆಡಳಿತ ಮಂಡಳಿಗೆ ಸುಂಕದ ರೂಪದಲ್ಲಿ ಕೋಟಿಗಟ್ಟಲೆ ಆದಾಯ ಬರುತ್ತದೆ. ಆದರೆ, ಆಡಳಿತ ಮಂಡಳಿಯು ಮಾರುಕಟ್ಟೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಸಹ ಮಾರುಕಟ್ಟೆ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಎಪಿಎಂಸಿ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಬಳಿಕ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವೊಲಿಸಿ ವಾಹನ ಸಂಚಾರ ಸುಗಮಗೊಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.