ಸೋಮವಾರ, ಏಪ್ರಿಲ್ 19, 2021
31 °C

ಹೆದ್ದಾರಿ ತಡೆ, ಪೊಲೀಸ್ ಠಾಣೆಗೆ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಬಾಲಕನೊಬ್ಬ ಅನುಮಾನಾ ಸ್ಪದವಾಗಿ ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ದೂರು ನೀಡಿದರೂ ಪೊಲೀ ಸರು ಸ್ಥಳಕ್ಕೆ ಆಗಮಿಸದೆ ಕರ್ತವ್ಯ ಲೋಪ ಎಸಗಿದ್ದಾರೆ. ಬಾಲಕನ ಸಾವಿಗೆ ಕಾರಣರಾದ ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕಾವೇರಿಪುರ ಬಡಾವಣೆ ನಿವಾಸಿಗಳು ಮಂಗಳ ವಾರ ಪಟ್ಟಣದಲ್ಲಿ ಹೆದ್ದಾರಿ ತಡೆದು ಪ್ರಭಟನೆ ನಡೆಸಿದರು.ಹೆದ್ದಾರಿ ವೃತ್ತದಲ್ಲಿ ಮೃತ ಬಾಲಕನ ಶವ ಇಟ್ಟು ಸುಮಾರು ಅರ್ಧ ತಾಸು ಪ್ರತಿಭಟನೆ ನಡೆಸಿದರು. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಮುಖ್ಯ ಬೀದಿಯಲ್ಲಿ ಪೊಲೀಸ್ ಠಾಣೆವರೆಗೆ ಪ್ರತಿಭಟನಾ ಮೆರ ವಣಿಗೆ ನಡೆಸಿದರಲ್ಲದೆ, ಪೊಲೀಸ್ ಠಾಣೆ ಎದುರು ಶವದೊಡನೆ ಧರಣಿ ಆರಂಭಿಸಿದರು. ಎರಡು ತಾಸು ಧರಣಿ ನಡೆಸಿ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಒಂದು ಹಂತದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.ರೈತ ಮುಖಂಡ ಕೆ.ಎಸ್. ನಂಜುಂಡೇಗೌಡ, ಪುರಸಭೆ ಸದಸ್ಯರಾದ ದಿನೇಶ್, ಅಣ್ಣಾಸ್ವಾಮಿ ಇತರರು ಸಕಾಲಕ್ಕೆ ಆಗಮಿಸದ ಕಾರಣಕ್ಕೆ ಪೊಲೀಸರ ವಿರುದ್ಧ ಕಿಡಿಕಾರಿದರು.

ಕಾವೇರಿಪುರ ಬಡಾವಣೆಯ ಲೇ.ರಾಜು ಎಂಬವರ ಮಗ ಅಂತೋಣಿ ರಾಜ್ (6) ಎಂಬ ಬಾಲಕನ ಶವ ಮಂಗಳವಾರ ಬೆಳಿಗ್ಗೆ ಕಾವೇರಿ ನದಿಯಲ್ಲಿ ಸಿಕ್ಕಿದ್ದು, ದೇಹಕ್ಕೆ ಮೀನಿನ ಬಲೆ ಸುತ್ತಿಕೊಂಡಿದೆ.ಸೋಮವಾರ ಬೆಳಿಗ್ಗೆ ಕಾಣೆಯಾಗಿದ್ದ ಬಾಲಕನನ್ನು ದುಷ್ಕರ್ಮಿಗಳು ಕೊಲೆ ಮಾಡಿ ನದಿಗೆ ಎಸೆದಿರುವ ಶಂಕೆಯಿದೆ. ಶಂಕಿತರು ಸೋಮವಾರದಿಂದ ನಾಪತ್ತೆ ಆಗಿದ್ದು ಆರೋಪಿಗಳನ್ನು ಶೀಘ್ರ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಕರ್ತವ್ಯ ಲೋಪ ಎಸಗಿರುವ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಎಂ.ಶ್ರೀನಿವಾಸ್, ಜಯಕುಮಾರ್, ಭಾಗ್ಯಮ್ಮ, ನಾರಾಯಣ ಸ್ವಾಮಿ, ಸ್ವಾಮಿ ಇತರರು ಆಗ್ರಹಿಸಿದರು. ಬಾಲಕನ ತಾಯಿ ಮರಿಯಮ್ಮ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಅಮಾನತು: ಬಾಲಕ ನಾಪತ್ತೆಯಾದ ಹಾಗೂ ಶವ ಸಿಕ್ಕಿದ ಕುರಿತು ಮೌಖಿಕ ದೂರು ನೀಡಿಯೂ ಸ್ಥಳಕ್ಕೆ ತೆರಳಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಠಾಣೆಯ ಮುಖ್ಯ ಪೇದೆ ಶಿವಣ್ಣ ಎಂಬವರನ್ನು ಅಮಾನತು ಮಾಡಲಾಗುವುದು ಎಂದು ಡಿವೈಎಸ್ಪಿ ಎ.ಲಾರೆನ್ಸ್ ತಿಳಿಸಿದ್ದಾರೆ. ವಜ್ರ ವಾಹನದಲ್ಲಿ ಸಂಚರಿಸುವ ಪೊಲೀಸರ ವಿರುದ್ಧವೂ ದೂರು ಬಂದಿದ್ದು ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.