ಭಾನುವಾರ, ಮೇ 16, 2021
22 °C

ಹೆದ್ದಾರಿ ತುಂಬ ಗುಂಡಿ: ಸಂಚಾರಕ್ಕೆ ಸಂಚಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆದ್ದಾರಿ ತುಂಬ ಗುಂಡಿ: ಸಂಚಾರಕ್ಕೆ ಸಂಚಕಾರ

ಸಕಲೇಶಪುರ: ತಾಲ್ಲೂಕಿನ ಕ್ಯಾನಹಳ್ಳಿ ಸಮೀಪ ದೋಣಿಗಾಲ್-ಬೈಂದೂರು ನಡುವಿನ ರಾಜ್ಯ ಹೆದ್ದಾರಿ ಸಂಪೂರ್ಣ ಗುಂಡಿ ಬಿದ್ದು ವಾಹನಗಳ ಸಂಚಾರಕ್ಕೆ ಸಂಚಕಾರ ಉಂಟಾಗಿದೆ.ದೋಣಿಗಾಲ್‌ನಿಂದ ಕೆರೋಡಿವರೆಗೆ ಸುಮಾರು 25 ಕಿ.ಮೀ. ದೂರದವರೆಗೂ ತಾಲ್ಲೂಕು ವ್ಯಾಪ್ತಿಯಲ್ಲಿ ಹಾದು ಹೋಗುವ ಈ ರಾಜ್ಯ ಹೆದ್ದಾರಿ ಮೂಲಕ ಸುಮಾರು 100ಕ್ಕೂ ಹೆಚ್ಚು ಗ್ರಾಮಗಳು ಸಂಪರ್ಕದಲ್ಲಿ ಬರುತ್ತವೆ. ನಿತ್ಯ 30ಕ್ಕೂ ಹೆಚ್ಚು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು, ಸಾವಿರಾರು ಖಾಸಗಿ ವಾಹನಗಳು ಸಂಚಾರ ಮಾಡುವ ಈ ಹೆದ್ದಾರಿ ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಬಹು ಮುಖ್ಯ ಹೆದ್ದಾರಿಯಾಗಿದೆ.ಮಾಜಿ ಶಾಸಕ ಬಿ.ಬಿ.ಶಿವಪ್ಪ ಶಾಸಕರಾಗಿದ್ದ ಅವಧಿಯಲ್ಲಿ ಡಾಂಬರೀಕಣಗೊಂಡಿದ್ದ ಈ ರಸ್ತೆಗೆ ಲೋಕೋಪಯೋಗಿ ಇಲಾಖೆಯಿಂದ ನಂತರ ಒಂದೇ ಒಂದು ಗುಂಡಿಯನ್ನೂ ಕೂಡ ಮುಚ್ಚಿಲ್ಲ. ರಸ್ತೆಯ ಉದ್ದಕ್ಕೂ ಅಳವಾದ ಹೊಂಡಗಳು ಬಿದ್ದು, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ. ದೋಣಿಗಾಲ್ ಅಂಚೆ ಕಚೇರಿ ಬಳಿ ರಸ್ತೆ ಶೇ.50ಕ್ಕೂ ಹೆಚ್ಚು ಭಾಗ ಕುುಸಿತಗೊಂಡಿದ್ದು, ಬಲಭಾಗದಲ್ಲಿ 100 ಅಡಿಗೂ ಅಳವಾದ ಕಂದಕವಿದೆ. ಚಾಲಕರು ಜಾಗ್ರತೆ ತಪ್ಪಿದರೆ ಭಾರೀ ದೊಡ್ಡ ಅನಾಹುತ ಸಂಭವಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.ಕ್ಯಾನಹಳ್ಳಿ ಹಾಗೂ ಕುಲ್ಲಹಳ್ಳಿ ನಡುವೆ ರಸ್ತೆ ಹಾಳಾಗಿದ್ದು, ಕೆಲವೆಡೆ ಡಾಂಬರ್ ಕಿತ್ತು ಇಡೀ ರಸ್ತೆಯೇ ಗುಂಡಿ ಬಿದ್ದಿದೆ. ಬುಧವಾರ ಸರಕು ಸಾಗಣೆ ಲಾರಿ ರಸ್ತೆ ಮಧ್ಯೆ  ಗುಂಡಿಯಲ್ಲಿ ಸಿಕ್ಕಿ ಮುಂದಕ್ಕೂ, ಹಿಂದಕ್ಕೂ ಹೋಗದೆ ಸಂಚಾರ ಅಸ್ತವ್ಯಸ್ತಗೊಂಡಿತು. ಜೆಸಿಬಿ ಯಂತ್ರ ಬಳಸಿ ಆ ಲಾರಿಯನ್ನು ಗುಂಡಿಯಿಂದ ಮೇಲೆತ್ತಬೇಕಾದ ಸ್ಥಿತಿ ಉಂಟಾಗಿದೆ ಎಂದರೆ ರಸ್ತೆಯ ಸ್ಥಿತಿ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ.ಬ್ಯಾಕರವಳ್ಳಿಯಿಂದ ಕೆರೋಡಿವರೆಗೂ ಮಳೆ ನೀರು ರಸ್ತೆ ಪಕ್ಕದಲ್ಲಿಯೇ ಹರಿಯುವುದರಿಂದ ಎರಡೂ ಬದಿಯಲ್ಲಿ  ಒಂದೊಂದು ಅಡಿಗೂ ಆಳವಾದ ಚರಂಡಿಗಳು ನಿರ್ಮಾಣಗೊಂಡಿವೆ. ಎದುರಿನಿಂದ ಯಾವುದೇ ವಾಹನಗಳು ಬಂದರೂ ತಕ್ಷಣಕ್ಕೆ ರಸ್ತೆಯಿಂದ ಕೆಳಗೆ ವಾಹನಗಳನ್ನು ಇಳಿಸುವುದಕ್ಕೆ ಸಾಧ್ಯವಿಲ್ಲ. ವೇಗದಲ್ಲಿಯೇ ರಸ್ತೆಯ ಪಕ್ಕಕ್ಕೆ ಇಳಿಸಿದರೆ ಅಪಘಾತ ಕಟ್ಟಿಟ್ಟ ಬುತ್ತಿ. ಇಂತಹ ಸಮಸ್ಯೆಯಿಂದಾಗಿ ಈ ಮಾರ್ಗದಲ್ಲಿ ತಿಂಗಳಿಗೆ ಒಂದೆರಡು ರಸ್ತೆ ಅಪಘಾತಗಳು ನಡೆಯುತ್ತಲೇ ಇವೆ.ತಾಲ್ಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳು, ಗ್ರಾಮೀಣ ರಸ್ತೆಗಳು, ಪುರಸಭಾ ರಸ್ತೆಗಳು ಪ್ರತಿಯೊಂದು ರಸ್ತೆಗಳು ಕೂಡ ಗುಂಡಿ ಬಿದ್ದು ಸಂಚಾರಕ್ಕೆ ಅಯೋಗ್ಯವಾಗಿದ್ದು, ಇವುಗಳ ಬಗ್ಗೆ ಗಮನ ಹರಿಸಬೇಕಾದ ಜನಪ್ರತಿನಿಧಿಗಳು ಸಮಸ್ಯೆಯನ್ನು ಕಂಡೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.