ಹೆಸರು: ಚಿನ್ನದ ಬೆಲೆ ನಿರೀಕ್ಷೆಯಲ್ಲಿ ರೈತ

ಶಹಾಪುರ: ಕಳೆದ ಐದು ವರ್ಷಗಳಿಂದ ಸಮರ್ಪಕವಾಗಿ ಮುಂಗಾರು ಮಳೆ ಬರದೆ ರೈತರು ಅಲ್ವಾವಧಿ ಬೆಳೆಯಾದ ಹೆಸರು ಬೆಳೆ ಬಿತ್ತುವುದನ್ನು ಕೈ ಬಿಟ್ಟಿದ್ದರು. ಪ್ರಸಕ್ತ ಬಾರಿ ಬೆಳೆಗೆ ಸಾಕಾಗುವಷ್ಟು ಮಳೆ ಬಂದಿದ್ದರಿಂದ ಬಿತ್ತನೆ ಮಾಡಿದ ಹೆಸರು ಬೆಳೆಯು ಕಾಯಿ ಕಟ್ಟಿದೆ. ಭೂಮಿಯಲ್ಲಿ ತೇವಾಂಶ ಉತ್ತಮವಾಗಿದ್ದು, ರೈತರಿಗೆ ಹೆಸರು ಬೆಳೆಯು ಚಿನ್ನವಾಗಿದೆ.
ತಾಲ್ಲೂಕಿನ ವಡಿಗೇರಾ, ದೋರನಹಳ್ಳಿ, ವಡಿಗೇರಾ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಆರಂಭದಿಂದಲೂ ಉತ್ತಮ ಮಳೆಯಾಗಿದೆ. ಆದರೆ ಶಹಾಪುರ, ಹಯ್ಯಾಳ ಹೋಬಳಿ ಕೊರತೆ ಮಳೆಯನ್ನು ಅನುಭವಿಸುವಂತೆ ಆಗಿತ್ತು. ಈಗ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಬೆಳೆಗೆ ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ದಾನಪ್ಪ ಕತ್ನಳ್ಳಿ.
ಹೆಸರು ಬೆಳೆಯು ಕೇವಲ 45 ದಿನದ ಬೆಳೆಯಾಗಿದೆ. ತಾಲ್ಲೂಕಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿರುವುದರಿಂದ ಹೆಸರು ಬೆಳೆಗೆ ಜೇಡಿ ರೋಗ ಕಾಣಿಸಿಕೊಂಡಿದೆ. ಔಷಧಿ ಸಿಂಪರಣೆಯಲ್ಲಿ ರೈತರು ಮಗ್ನರಾಗಿದ್ದಾರೆ.
ವಡಿಗೇರಾ ಮತ್ತು ಗೋಗಿ ಹೋಬಳಿ ವ್ಯಾಪ್ತಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಮಳೆ ಬಿಡುವು ನೀಡಿದರೆ ಸಾಕು ಹೊಲದಲ್ಲಿ ಬೆಳೆದ ಕಸಕಡ್ಡಿಯನ್ನು ತೆಗೆದು ಗೊಬ್ಬರ ಹಾಕಲು ಅನುಕೂಲವಾಗುತ್ತದೆ ಎನ್ನುತ್ತಾರೆ ರೈತ ವೆಂಕಟೇಶ ಮುಡಬೂಳ.
ಜೇಡಿ ಮಣ್ಣು (ಕಪ್ಪು ಮಣ್ಣು) ಜಮೀನಿನ ತಗ್ಗು ಪ್ರದೇಶದಲ್ಲಿ ನೀರು ನಿಂತಿರುವುದರಿಂದ ತುಸು ತೇವಾಂಶ ಹೆಚ್ಚಾಗಿ ತಂಪು ಉಂಟಾಗಿದೆ. ಇದರಿಂದ ಬೆಳೆದು ನಿಂತ ಹೆಸರು ಬೆಳೆ ಒಣಗುತ್ತಿದೆ ಎಂದು ರೈತ ಶಿವಣ್ಣ ಆತಂಕ ವ್ಯಕ್ತಪಡಿಸಿದರು.
ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಗದ್ದೆಯಲ್ಲಿಯೂ ರೈತರು ಹೆಸರು ಬಿತ್ತನೆ ಮಾಡಿದ್ದಾರೆ. ಹೆಸರು ಬೆಳೆಯನ್ನು ತೆಗೆದುಕೊಂಡು ನಂತರ ಭತ್ತ ನಾಟಿ ಮಾಡುವ ಆಲೋಚನೆಯಲ್ಲಿ ಇದ್ದಾರೆ. ಕಾಲುವೆಗೂ ಕೂಡಾ ನಿರೀಕ್ಷಿತಕ್ಕಿಂತ ಮುಂಚಿತವಾಗಿ ನೀರು ಹರಿಸಿದರು.
ಆದರೆ, ನಾಟಿ ಮಾಡುವ ಭತ್ತದ ಸಸಿಯ ಅವಧಿಗೆ ಬಂದಿಲ್ಲ. ತುಸು ಭತ್ತ ನಾಟಿಗೆ ವಿಳಂಬವಾಗುತ್ತಲಿದೆ. ಅಂದು ಮಳೆಗಾಗಿ ಪರಿತಪಿಸಿದ ರೈತರು ಈಗ ಮಳೆ ಬಿಡುವಿಗಾಗಿ ಕಾಯುತ್ತಿದ್ದಾರೆ.
ಖರೀದಿ ಕೇಂದ್ರ ಸ್ಥಾಪಿಸಿ: ಐದು ವರ್ಷದ ಬಳಿಕ ರೈತರಿಗೆ ಹೆಸರು ಬೆಳೆ ಕೈಗೆ ಬಂದಿದೆ. ಉತ್ತಮ ಇಳುವರಿ ಬರುವ ನಿರೀಕ್ಷೆಯಿದೆ. ಧಾರಣಿಯು ಕೂಡಾ ಸದ್ಯಕ್ಕೆ ಪ್ರತಿ ಕ್ವಿಂಟಲ್ಗೆ ₹5 ಸಾವಿರ ಇದೆ.
ಹೆಸರು ಮಾರುಕಟ್ಟೆಗೆ ಬರುವ ವೇಳೆಗೆ ಧಾರಣಿ ಕುಸಿಯುವ ಭೀತಿ ನಮ್ಮನ್ನು ಕಾಡುತ್ತಿದೆ. ಹೆಸರಿಗೆ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ಸಂಚಾಲಕ ಮಲ್ಲಣ್ಣ ಪರಿವಾಣ ಗೋಗಿ ಮನವಿ ಮಾಡಿದ್ದಾರೆ.
*
ಹೆಸರು ಬೆಳೆ ಕಾಳು ಕಟ್ಟಿದ್ದು, ಉತ್ತಮ ಇಳುವರಿ ನಿರೀಕ್ಷೆಯಿದೆ. ವಡಿಗೇರಾ, ಗೋಗಿ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬೆಳೆಯಲಾಗಿದೆ. ಮಳೆ ಬಿಡುವು ಕೊಟ್ಟರೆ ಅನುಕೂಲ.
-ದಾನಪ್ಪ ಕತ್ನಳ್ಳಿ,
ಕೃಷಿ ತಾಂತ್ರಿಕ ಅಧಿಕಾರಿ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.