ಸೋಮವಾರ, ಮೇ 10, 2021
21 °C

ಹೇಮಾವತಿಯ ಆರೈಕೆಯಲ್ಲಿ ಪೋಷಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾಲ್ಕು ವರ್ಷಗಳ ಗೃಹಬಂಧನದಿಂದ ಮುಕ್ತಿ ಪಡೆದು ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಲ್ಲೇಶ್ವರದ 15ನೇ ಅಡ್ಡರಸ್ತೆ ನಿವಾಸಿ ಹೇಮಾವತಿ ಅವರು ಪೋಷಕರೊಂದಿಗೆ ಸಂತಸದಿಂದ ಕಾಲ ಕಳೆಯುತ್ತಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.`ಹೇಮಾವತಿ, ಆರೋಗ್ಯ ಸ್ಥಿತಿಯಲ್ಲಿ ಸುಧಾರಿಸಿದ್ದು, ಶನಿವಾರದಿಂದ ತಜ್ಞರು ಆಕೆಯೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಚಿಕಿತ್ಸೆ ವೇಳೆ ನಾವು ಗಮನಿಸಿದಂತೆ ಹೇಮಾವತಿ, ತನ್ನ ಪೋಷಕರನ್ನು ಅತಿಯಾಗಿ ಪ್ರೀತಿಸುತ್ತಾಳೆ' ಎಂದು ನಿಮ್ಹಾನ್ಸ್‌ನ ಸೂಪರಿಂಟೆಂಡೆಂಟ್ ಡಾ.ವಿ.ಎಲ್.ಸತೀಶ್ ತಿಳಿಸಿದರು.`ಮಾಧ್ಯಮಗಳು ನಮ್ಮ ಅಭಿಪ್ರಾಯವನ್ನೂ ಕೇಳದೆ, ಮಗಳ ವಿಷಯದಲ್ಲಿ ಮನಬಂದಂತೆ ಸುದ್ದಿ ಮಾಡಿದವು. ಆದರೆ, ಈಗ ಯಾರೊಬ್ಬರು ಆಸ್ಪತ್ರೆಯ ಬಳಿ ಸುಳಿಯು ತ್ತಿಲ್ಲ. ಯಾವುದೇ ತಂದೆ-ತಾಯಿ ಮಕ್ಕಳನ್ನು ಅಷ್ಟೊಂದು ಅಮಾನವೀಯವಾಗಿ ನೋಡಿಕೊಳ್ಳಲು ಸಾಧ್ಯವೇ' ಎಂದು ಹೇಮಾವತಿಯ ತಂದೆ ರೇಣುಕಪ್ಪ ಪ್ರಶ್ನಿಸಿದರು.`ಮೊದಲು ಆರೋಗ್ಯವಾಗಿಯೇ ಇದ್ದ ಮಗಳಿಗೆ ಐದು ವರ್ಷದ ಹಿಂದೆ ಚಿಕೂನ್‌ಗುನ್ಯ ಕಾಯಿಲೆ ಬಂದಿತ್ತು. ಇದರಿಂದಾಗಿ ಆಕೆಯ ಕೈಕಾಲುಗಳು ಸ್ವಾಸ್ಥ್ಯ ಕಳೆದುಕೊಂಡವು. ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ (ಕಿಮ್ಸ), ಮದರ್ ಥೆರೆಸಾ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಕೊಡಿಸಿದರೂ ಆಕೆ ಗುಣಮುಖಳಾಗಲಿಲ್ಲ. ಹೀಗಾಗಿ ಆಕೆಗೆ ಮನೆಯಲ್ಲೇ ಆರೈಕೆ ಮಾಡುತ್ತಿದ್ದೆವು. ಇದನ್ನೇ ಮಾಧ್ಯಮಗಳು ಗೃಹಬಂಧನ ಎಂದು ಕರೆದರೆ ಇಂತಹ ಬೇಕಾದಷ್ಟು ಪ್ರಕರಣಗಳು ಅವರಿಗೆ ಸಿಗುತ್ತವೆ' ಎಂದು ಆಕ್ರೋಶದಿಂದ ನುಡಿದರು.ಆದರೆ, ಮಗಳು ರಾತ್ರಿ ವೇಳೆ ಊಟಕ್ಕಾಗಿ ಕಿರುಚಿಕೊಳ್ಳುತ್ತಿದ್ದಳು ಎಂಬ ಮಾತಿಗೆ ದುಃಖತಪ್ತರಾಗಿಯೇ ಪ್ರತಿಕ್ರಿಯಿಸಿದ ಹೇಮಾವತಿಯ ತಾಯಿ ಪುಟ್ಟಗೌರಮ್ಮ, `ಮಗಳು ಮಲಗಿದ್ದಲ್ಲೇ ಮಲ-ಮೂತ್ರ ಮಾಡುತ್ತಿದ್ದಳು. ಅದನ್ನು ಸ್ವಚ್ಛಗೊಳಿಸಲು ಕೈಹಿಡಿದು ಮೇಲೆತ್ತುತ್ತಿದ್ದೆವು. ಮೊದಲೇ ಕೀಲು ನೋವಿನಿಂದ ಬಳಲುತ್ತಿದ್ದ ಮಗಳು, ಜೋೀರಾಗಿ ಕಿರುಚಿಕೊಳ್ಳುತ್ತಿದ್ದಳು' ಎಂದರು.ಗುಂಡಿಗೆ ಬಿದ್ದು ಮಹಿಳೆ ಸಾವು

ಬೆಂಗಳೂರು: ಎಚ್‌ಎಎಲ್ ಸಮೀಪದ ಜ್ಯೋತಿನಗರದಲ್ಲಿ ಮೀನಾಕ್ಷಿ (45) ಎಂಬುವರು ನೀರಿನ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.ಅವರ ಪತಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇದರಿಂದಾಗಿ ಅವರು ಮಕ್ಕಳ ಜತೆ ವಾಸವಾಗಿದ್ದರು ಎಂದು ಎಚ್‌ಎಎಲ್ ಪೊಲೀಸರು ತಿಳಿಸಿದ್ದಾರೆ.ಗುರುವಾರ (ಜೂನ್ 13) ರಾತ್ರಿ ಮನೆಯಿಂದ ಹೊರಗೆ ಹೋಗಿದ್ದ ಮೀನಾಕ್ಷಿ ಅವರು ವಾಪಸ್ ಬಂದಿರಲಿಲ್ಲ. ಈ ಸಂಬಂಧ ಅವರ ಮಕ್ಕಳು ಶುಕ್ರವಾರ ದೂರು ಕೊಟ್ಟಿದ್ದರು. ಅವರ ಮನೆಯಿಂದ ಸ್ವಲ್ಪ ದೂರದ ನಿರ್ಜನ ಪ್ರದೇಶದಲ್ಲಿನ ನೀರಿನ ಗುಂಡಿಯಲ್ಲಿ ಮಹಿಳೆಯೊಬ್ಬರ ಶವ ಬಿದ್ದಿರುವುದನ್ನು ನೋಡಿದ ಸ್ಥಳೀಯರು ಠಾಣೆಗೆ ಭಾನುವಾರ ಮಾಹಿತಿ ನೀಡಿದರು. ಈ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮೀನಾಕ್ಷಿ ಅವರು ಸಾವನ್ನಪ್ಪಿರುವುದು ಗೊತ್ತಾಯಿತು ಎಂದು ಪೊಲೀಸರು ಹೇಳಿದ್ದಾರೆ.ಆ ಗುಂಡಿಯ ಬಳಿ ಹೋಗಿದ್ದ ಮೀನಾಕ್ಷಿ ಅವರು ಆಕಸ್ಮಿಕವಾಗಿ ಗುಂಡಿಯೊಳಗೆ ಬಿದ್ದು ಮೃತಪಟ್ಟಿದ್ದಾರೆ. ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದೂರು ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.