ಶನಿವಾರ, ಮೇ 28, 2022
29 °C

ಹೇಮಾವತಿ ಸೇತುವೆ ನಿರ್ಮಾಣ: ಅಂದಾಜು ಪಟ್ಟಿ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಕಲೇಶಪುರ: ಪಟ್ಟಣದ ಹೊರ ವರ್ತುಲ (ಬೈಪಾಸ್) ರಸ್ತೆ ಮತ್ತು ಹೇಮಾವತಿ ನದಿಗೆ ಸೇತುವೆ ನಿರ್ಮಾಣ ಕಾಮಗಾರಿಯ ಅಂದಾಜುಪಟ್ಟಿಯನ್ನು ಖಾಸಗಿ ಸಂಸ್ಥೆಯೊಂದು ಶೀಘ್ರದಲ್ಲಿ ಕೇಂದ್ರ ಭೂ ಸಾರಿಗೆ ಇಲಾಖೆಗೆ ಸಲ್ಲಿಸಲಿದ್ದು, ಬೈಪಾಸ್ ನಿರ್ಮಾಣದ ಸ್ಥಳೀಯರ ಕನಸು ನನಸಾಗುವ ಬೆಳವಣಿಗೆ ಕಂಡು ಬಂದಿದೆ. ತೇಜಸ್ವಿನಿ ಚಿತ್ರಮಂದಿರ ಸಮೀಪದಿಂದ ತೋಟದಗದ್ದೆ ಎಸ್ಟೇಟ್‌ವರೆಗೆ 3.9 ಕಿ.ಮೀ ಬೈಪಾಸ್ ರಸ್ತೆ ಹಾಗೂ ಇದರ ಮಧ್ಯದಲ್ಲಿ ಹೇಮಾವತಿ ನದಿಗೆ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ.ಈ ಕಾಮಗಾರಿ ಅಂದಾಜುಪಟ್ಟಿ ಸಿದ್ಧಪಡಿಸುವಂತೆ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಬೆಂಗಳೂರಿನ ವ್ಹಿಲ್‌ಬರ್ ಸ್ಮಿತ್ ಖಾಸಗಿ ಕಂಪನಿಗೆ ಗುತ್ತಿಗೆ ನೀಡಿದೆ. ಇದರಿಂದಾಗಿ ಕಾಮಗಾರಿ ಒಂದೂವರೆ ದಶಕಗಳಿಂದ ಮಂದಗತಿಯಲ್ಲಿ ಸಾಗಿದ್ದ ಈ ಯೋಜನೆಗೆ ಮರುಜೀವ ಬಂದಂತಾಗಿದೆ. ಕಂಪೆನಿ ನಿರ್ದೇಶಕ ವಿ.ವಿ.ವೆಂಕಟರಾಮನ್, ರಾಷ್ಟ್ರೀಯ ಹೆದ್ದಾರಿ ಇಲಾಖೆ ಎಇಇ ಸೋಮಶೇಖರ್‌ರೊಂದಿಗೆ ಎರಡು ಬಾರಿ ಸ್ಥಳ ಪರಿಶೀಲಿಸಿದ್ದಾರೆ. ಈ ಸಂಸ್ಥೆ ಎಂಜಿನಿಯರುಗಳು ಯೋಜನೆಗೆ ಸಂಬಂಧಿಸಿದ ಅಂದಾಜುಪಟ್ಟಿ ಸಿದ್ಧತೆ ಅಂತಿಮ ಹಂತದಲ್ಲಿದ್ದು, ಇಷ್ಟರಲ್ಲೇ ಪಟ್ಟಿಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸಲ್ಲಿಸುವುದಾಗಿ ಕಂಪನಿ ಮೂಲಗಳು ತಿಳಿಸಿವೆ.ಫೆಬ್ರುವರಿ ಅಂತ್ಯದೊಳಗೆ ಅಂದಾಜು ಪಟ್ಟಿ ನೀಡುವಂತೆ ಕೇಂದ್ರ ಭೂ ಸಾರಿಗೆ ಇಲಾಖೆ ಕಂಪನಿಗೆ ಸೂಚಿಸಿದೆ. ಮಾರ್ಚ್ ಅಂತ್ಯದೊಳಗೆ ಕೇಂದ್ರದಿಂದ ಕಾಮಗಾರಿಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿರ್ಲಕ್ಷ ಧೋರಣೆ:  2000-01ರ ಬಜೆಟ್‌ನಲ್ಲಿ ಕೇಂದ್ರ ಈ ಬೈಪಾಸ್ ನಿರ್ಮಾಣಕ್ಕೆ ರೂ. 5 ಕೋಟಿ ನೀಡಿತ್ತು.ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ನಂತರ 9 ವರ್ಷಗಳವರೆಗೆ ಈ ಕಾಮಗಾರಿಗೆ ಕೇಂದ್ರದಿಂದ ಯಾವುದೇ ಅನುದಾನ ಬರಲಿಲ್ಲ. 2009-10ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ರೂ 20 ಕೋಟಿ ಬಿಡುಗಡೆ ಮಾಡಿತ್ತು.

 

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಂದು ವರ್ಷದಿಂದ ಕೇಂದ್ರ ಭೂ ಸಾರಿಗೆ ಇಲಾಖೆಗೆ ಕಾಮಗಾರಿ ಅಂದಾಜು ಪಟ್ಟಿ ನೀಡದೆ  ಪುನಃ ಇಚ್ಚಾಶಕ್ತಿ ಕೊರತೆ ಪ್ರದರ್ಶಿಸಿದ್ದರು.ಪರಿಣಾಮವಾಗಿ ಕಾಮಗಾರಿ ಪ್ರಗತಿ ಕಾಣದೇ ಹಣವನ್ನು ಕೇಂದ್ರ ಹಿಂಪಡೆಯಿತು. ಪಟ್ಟಣ ಹೃದಯ ಭಾಗದಲ್ಲಿ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರು ವುದರಿಂದ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರ ಸಮಸ್ಯೆ ಉಲ್ಬಣವಾಗಿದೆ. 2010-11ರ ಬಜೆಟ್‌ನಲ್ಲಿ 30 ಕೋಟಿ ರೂಪಾಯಿ ಬಿಡುಗಡೆಯಾಗಿದೆ.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.