ಶನಿವಾರ, ಜನವರಿ 18, 2020
21 °C
facebook ಟೂರಿಸಂ

ಹೊಂಬೆಳಕಲ್ಲಿ ಹಂಪಿ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಂಬೆಳಕಲ್ಲಿ ಹಂಪಿ ವೈಭವ

‘ಪ್ರತಿ ಸೂರ್ಯೋದಯವೂ ಹೊಸ ಬದುಕಿನ ಭರವಸೆ ನೀಡುತ್ತದೆ (Every sunset brings the promise of a new dawn – Ralph Waldo Emerson)’ ಎನ್ನುತ್ತಾರೆ ರಾಲ್ಫ್ ವಾಲ್ಡೊ ಎಮರ್ಸನ್ . ಇದೇ ಕ್ಯಾಪ್ಷನ್ ಅನ್ನೇ ಮೂಲವಾಗಿಟ್ಟುಕೊಂಡು, ‘ಹಂಪಿಯನ್ನು ಸ್ಮಾರಕಗಳಿಂದ ನೋಡುವ ಜೊತೆಗೆ, ಸೂರ್ಯೋದಯ – ಸೂರ್ಯಾಸ್ತದ ಸಮಯದಲ್ಲಿ ನೋಡಬೇಕು’ ಎನ್ನುವುದು ಶಿವಶಂಕರ್ ಅವರ ಅನುಭವದ ಮಾತು. ಸೂರ್ಯ ಹುಟ್ಟುವ, -ಮುಳುಗುವ ತಾಣಗಳನ್ನು ಗ್ರಹಿಸಿರುವ ಇವರು, ಇಂಥ ಜಾಗದಲ್ಲಿ ನಿಂತರೆ, ಹೀಗೆ ಫೋಟೊ ತೆಗೆಯಬಹುದೆಂದು ಹೇಳುತ್ತಾರೆ. ತುಂಗಭದ್ರಾ ಜಲಾಶಯ, ಎಡದಂಡೆ, ಬಲದಂಡೆ ಕಾಲುವೆ, ಹಂಪಿಯ ಹೇಮಕೂಟ, ಚಕ್ರತೀರ್ಥ, ಅಚ್ಯುತ ದೇಗುಲದಂತಹ ಹಲವು ತಾಣಗಳನ್ನು ಸೂರ್ಯಾಸ್ತ, ಸೂರ್ಯೋ­ದ­ಯದ ಹೊತ್ತಿನಲ್ಲೇ ಚಿತ್ರಿಸಿದ್ದಾರೆ.

ಹೊಂಬಣ್ಣದಲ್ಲಿ ಕಾಣುವ ಈ ತಾಣಗಳ ಚಿತ್ರ ಹಾಗೂ ಆ ಚಿತ್ರದೊಂದಿಗಿರುವ ವಿಶ್ವ ವಿಖ್ಯಾತ ಛಾಯಾಗ್ರಾಹಕರ ಉಕ್ತಿಗಳು, ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಕಾರಣವಾಗಿವೆ.

ಪ್ರವಾಸಿ ತಾಣವಾಗಿ ಹಂಪಿ ಖ್ಯಾತಿ ಪಡೆದಿದ್ದರೂ, ಬಹಳ ಪ್ರವಾಸಿಗರು ಛಾಯಾಗ್ರಾಹಕರ ‘ಅಮೃತ ಘಳಿಗೆ’ ಎಂದೇ ಕರೆಯುವ ಸೂರ್ಯಾಸ್ತ, ಸೂರ್ಯೋದಯದ ಸಮಯದಲ್ಲಿ ಕಾಣುವ ಹಂಪಿಯನ್ನು ನೋಡಲು ಇಷ್ಟಪಡುತ್ತಾರೆ. ಮಲ್ಯವಂತ ಹಾಗೂ ಮಹಂತ ಪರ್ವತಗಳಲ್ಲಿ ಇಂಥ ಅಪರೂಪದ ದೃಶ್ಯಗಳನ್ನು ಕಾಣಬಹುದು. ಹಂಪಿಗೆ ಬರುವ ವಿದೇಶಿ ಪ್ರವಾಸಿಗರು ‘ಸೂರ್ಯೋದಯ, ಸೂರ್ಯಾಸ್ತದ ಸ್ಥಳಗಳನ್ನು ತೋರಿಸಿದರೆ ಮಾತ್ರ ಪೂರ್ಣ ಹಣ ಕೊಡುತ್ತೇವೆ’ ಎಂದು ಗೈಡ್‌ಗಳಿಗೆ ಷರತ್ತು ವಿಧಿಸಿ ಕರೆದೊಯ್ಯುತ್ತಾರೆ. ‘ಅಂಥ ತಾಣಗಳ ಚಿತ್ರ ತೆಗೆದು ಫೇಸ್ ಬುಕ್‌ಗೆ ಹಾಕಿದ್ದೇನೆ. ಬಹಳ ದೊಡ್ಡ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆ ತಾಣಗಳ ವೀಕ್ಷಣೆಗೆ ಸಾಕಷ್ಟು ಪ್ರವಾಸಿಗರು ಬರುತ್ತಿದ್ದಾರೆ’ ಎನ್ನುತ್ತಾರೆ ಶಿವಶಂಕರ್.

ಜೀವವೈವಿಧ್ಯದ ಪರಿಚಯ

ಹಂಪಿ ಎಂದರೆ ಕಲ್ಲು-ಬಂಡೆಗಳ ಸ್ಮಾರಕವಷ್ಟೇ ಅಲ್ಲ. ಜೀವ ವೈವಿಧ್ಯದ ತಾಣ. ಬಂಡೆಗಳಲ್ಲೇ ರೂಪುಗೊಂಡಿರುವ ಕಲ್ಲಿನ ಕೆರೆಗಳು, ಹೊಂಡಗಳು, ಹರಿಯುವ ತುಂಗಭದ್ರೆ.. ಅದು ಅದ್ಭುತ ಜೀವವೈವಿಧ್ಯದ ತಾಣ. ದುರಂತವೆಂದರೆ, ಹಂಪಿ ನೋಡಿದ ಕಣ್ಣಿಗೆ, ಜೀವ ಜಗತ್ತಿನ ಪ್ರಪಂಚ ಕಾಣುವುದೇ ಇಲ್ಲ. ‘ಇಂಥ ಕೊರತೆ ನೀಗಿಸಲಿಕ್ಕಾಗಿಯೇ ಹಂಪಿಯ ತಾಣಗಳ ಚಿತ್ರದ ಜೊತೆಗೆ, ತಾಣದ ಸುತ್ತಲಿನ ಜೀವವೈವಿಧ್ಯದ ಪರಿಚಯ ಮಾಡಿಸುತ್ತಿದ್ದಾರೆ’ ಶಿವಶಂಕರ್. ಹಂಪಿ ಹಾಗೂ ತುಂಗಭದ್ರ ಜಲಾಶಯದ ಸುತ್ತಲಿನ ಪರಿಸರದಲ್ಲಿರುವ ಕಳ್ಳೇಬೇರ (ನೊಣಹಿಡ್ಕ), ಕೊಳಕರ್ಕ, ಕೊಗಡಿ, ಉಲಿಯಕ್ಕಿಯಂತಹ ನೂರಾರು ವಿಧದ ಪಕ್ಷಿಗಳ ಚಿತ್ರ ಫೇಸ್‌ಬುಕ್ ನಲ್ಲಿ ಅಪ್‌ಲೋಡ್ ಆಗಿದೆ.

  ಚಿತ್ರದ ಜೊತೆಗೆ ಪ್ರತಿ ಪಕ್ಷಿಯ ವಾಸಸ್ಥಾನ, ಇಂಗ್ಲಿಷ್ ಹೆಸರು ಹಾಗೂ ಸ್ಥಳೀಯ ಹೆಸರನ್ನು ಸ್ಟೇಟಸ್‌ನಲ್ಲಿ ಪ್ರಕಟಿಸುತ್ತಾರೆ. ‘ಹಂಪಿ ನೋಡಲು ಬರುವವರು, ಹಕ್ಕಿ ಪಕ್ಷಿಗಳನ್ನು ನೋಡಬೇಕು. ಪರಿಸರ ಕಾಳಜಿ ಮೆರೆಯಬೇಕು’ ಎಂಬುದು ಇದರ ಉದ್ದೇಶ. ಈ ಚಿತ್ರಗಳ ಕುರಿತು ಸಾಕಷ್ಟು ಚರ್ಚೆಗಳಾಗುತ್ತವೆ. ಪಕ್ಷಿ ವೀಕ್ಷಣೆಗಾಗಿಯೂ ಗೆಳೆಯರು ಹಂಪಿಯತ್ತ ಹೆಜ್ಜೆ ಹಾಕುತ್ತಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ವಿಶ್ವದ ಮೂಲೆ ಮೂಲೆಗೆ ‘ಕಾಣದ ಹಂಪಿಯನ್ನು ಜನರಿಗೆ ಪರಿಚಯಿಸಬೇಕು’ ಎಂಬ ಉದ್ದೇಶದೊಂದಿಗೆ ವ್ರತ ಹಿಡಿದವರಂತೆ ಪ್ರತಿ ನಿತ್ಯ ಚಿತ್ರಗಳನ್ನು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡುವ ಶಿವಶಂಕರ್, ಆ ಚಿತ್ರಗಳನ್ನು ಯಾರು ಬೇಕಾದರೂ ಒಳ್ಳೆಯ ಉದ್ದೇಶಗಳಿಗೆ ಬಳಸಬಹುದೆಂಬ ಅನುಮತಿಯನ್ನು ನೀಡುವ ಮೂಲಕ ‘ಕ್ರೆಡಿಟ್ ಅನ್ನೂ ಮುಕ್ತವಾಗಿಟ್ಟಿದ್ದಾರೆ’. ಶಿವಶಂಕರ್ ಸಂಪರ್ಕ ಸಂಖ್ಯೆ : 09448234764, shivashankar.banagar.5@facebook.com

ಪ್ರತಿಕ್ರಿಯಿಸಿ (+)