ಶನಿವಾರ, ಮೇ 21, 2022
28 °C

ಹೊಯ್ಸಳರ ನಾಡಲ್ಲಿ ಗುಡಿಸಲು ಸಾಮ್ರಾಜ್ಯ

ಎಚ್.ಎಸ್. ಅನಿಲ್ ಕುಮಾರ್ Updated:

ಅಕ್ಷರ ಗಾತ್ರ : | |

ಹಳೇಬೀಡು: ಹೊಯ್ಸಳ ಅರಸರು ವೈಭವದಿಂದ ಅಳ್ವಿಕೆ ನಡೆಸಿದ `ದ್ವಾರಸಮುದ್ರ', ಇಂದಿನ ಹಳೇಬೀಡಿನಲ್ಲಿ ಸೂರಿಲ್ಲದವರ ಸಂಖ್ಯೆ ಹೆಚ್ಚಾಗುತ್ತಿದ್ದು ಗುಡಿಸಲುಗಳ ಸಾಮ್ರಾಜ್ಯವಾಗಿದೆ.ಬೆಣ್ಣೆಗುಡ್ಡ ಬಳಿಯ ಅರಮನೆ ಆವರಣ, ಕೋಟೆ ಹಾಗೂ ದೇವಾಲಯಗಳ ಅವಶೇಷಗಳು ಈಗ ಗುಡಿಸಲುಗಳಿಂದ ಮುಚ್ಚುತ್ತಿವೆ. ಪಟ್ಟಣದಲ್ಲಿ ನಿವೇಶನಗಳ ಬೆಲೆ ಗಗನಕ್ಕೆ ಮುಟ್ಟಿದೆ. ಬಡಜನತೆ ಒಂದು ಹೊತ್ತು ಉಪವಾಸ ಮಾಡಿ ಕಾಸು ಕೂಡಿಟ್ಟರೂ ನಿವೇಶನ ಖರೀದಿ ಸುಲಭ ಸಾಧ್ಯವಾಗಿಲ್ಲ. ಹೀಗಾಗಿ ಸೂರಿಲ್ಲದವರಿಗೆ ಸರ್ಕಾರಿ ಜಾಗವೇ ಗತಿಯಾಗಿದೆ.ಐದಾರು ವರ್ಷದ ಹಿಂದೆ ಅತಿವೃಷ್ಟಿಯಿಂದ ಐತಿಹಾಸಿಕ ದ್ವಾರಸಮುದ್ರ ಕೆರೆ ಪ್ರವಾಹದಂತೆ ಹರಿಯಿತು. ಕೆರೆ ಅಂಚಿನಲ್ಲಿದ್ದ ಕೆಲವು ಗುಡಿಸಲುಗಳು ನೀರಿನಲ್ಲಿ ಕೊಚ್ಚಿಹೋದವು. ನಿರಾಶ್ರಿತರು ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆಯುವಂತಾಗಿತ್ತು.`ನಾವು ನಿರಾಶ್ರಿತರಾಗಿದ್ದಾಗ ರಾಜಕಾರಣಿಗಳು ಹಾಗೂ ಅಧಿಕಾರಿಗಳು ನೀಡಿದ್ದ ಭರವಸೆಗಳು ಸಹ ನಮ್ಮ ಗುಡಿಸಲು ಪಕ್ಕದಲ್ಲಿ ವೇಗವಾಗಿ ಹರಿಯುತ್ತಿದ್ದ ನೀರಿನಂತೆ ಕೊಚ್ಚಿ ಹೋದವು. ಮಳೆ ನಿಂತ ನಂತರ ಕೇಳುವವರಿಲ್ಲದೆ ಪುನಃ ಇದೇ ಜಾಗ ಸೇರಿದೆವು' ಎನ್ನುತ್ತಾರೆ ಕೆರೆ ಅಂಚಿನ ನಿವಾಸಿಗಳು.ಬೇಲೂರು ರಸ್ತೆಯಲ್ಲಿ ವಾಸಿಸುತ್ತಿರುವ ದಲಿತರ ಮನೆಗಳು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸೇರುತ್ತಿವೆ. ದಲಿತ ಕುಟುಂಬಗಳು ಸೂರಿಗಾಗಿ ಅಲೆದಾಡುವಂತಾಗಿದ್ದು, ಮುಂದಿನ ಜೀವನಕ್ಕಾಗಿ ಅರಮನೆ ಆವರಣದ ಕೋಟೆ ಪಕ್ಕದ ಜಾಗ ಸೇರಿದ್ದಾರೆ. ಬೆಣ್ಣೆಗುಡ್ಡದ ಪಕ್ಕದಲ್ಲಿರುವ ಈ ಸ್ಥಳಕ್ಕೆ ಗುಡ್ಡದಿಂದ ಬಂಡೆ ಉರುಳಬಹುದು. ಮಳೆ ಹೆಚ್ಚಾದರೆ ಇಲ್ಲಿಯ ಮನೆಗಳಿಗೆ ಗುಡ್ಡದಿಂದ ನೀರು ನುಗ್ಗಬಹುದು.ಇಲ್ಲಿ ಮನೆ ನಿರ್ಮಿಸುವುದಕ್ಕೆ ಪುರಾತತ್ವ ಇಲಾಖೆಯ ಕಾನೂನಿನ ನಿಯಮ ಅಡ್ಡಿಯಾಗಿದೆ. ಅರಮನೆ ಆವರಣದ ಸುತ್ತಮುತ್ತ ಗುಡಿಸಲು ಆವರಿಸಿದ್ದರೂ ದ್ವಾರಸಮುದ್ರ ಕೆರೆ ಬಳಿಯ ಬೂದಿಗುಂಡಿ ಬಡಾವಣೆ ಗುಡಿಸಲಿನಿಂದ ಮುಕ್ತವಾಗಿಲ್ಲ. ಇಷ್ಟಾದರೂ ದೇವಾಲಯದ ಜಗುಲಿ ಬಸ್ ನಿಲ್ದಾಣ ಆಶ್ರಯಿಸಿದವರು ಸಾಕಷ್ಟ ಮಂದಿ ಸೂರಿಗಾಗಿ ಜಪ ಮಾಡುತ್ತಿದ್ದಾರೆ. ಸೂರು ಕೇಳುವವರಲ್ಲಿ ಮೂಲನಿವಾಸಿಗಳು ಮಾತ್ರವಲ್ಲದೆ ವಲಸೆ ಬಂದ ತಮಿಳು ಮೂಲದ ಶಿಲ್ಪಿಗಳ ಸಂಖ್ಯೆಯೂ ಕಡಿಮೆ ಇಲ್ಲ.

ವಿಧಾನಸೌಧ ಮುಟ್ಟಿದೆ

`ಹಳೇಬೀಡಿನ ವಸತಿ ಸಮಸ್ಯೆಯನ್ನು ಶಾಸಕರು ವಿಧಾನಸೌಧಕ್ಕೆ ಮುಟ್ಟಿಸಿ ಅಲ್ಲಿ ಚರ್ಚಿಸುವ ಭರವಸೆ ನೀಡಿದ್ದಾರೆ. ಹಾಲಿ ಗುಡಿಸಲುಗಳಿರುವ ಸ್ಥಳದಲ್ಲಿಯೇ ಸುರಕ್ಷಿತ ಸೂರು ನೀಡಲು ಪ್ರಯತ್ನ ನಡೆಸಲಾಗುವುದು. ಒಟ್ಟಾರೆ ಪಟ್ಟಣದಲ್ಲಿಯ ಸೂರಿಲ್ಲದವರಿಗೆ ಒಂದಲ್ಲ ಒಂದು ಕಡೆ ಸೂರುಕಲ್ಪಿಸಲು ಶಾಸಕರು ಉತ್ಸುಕರಾಗಿದ್ದಾರೆ'

ಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷಉಪಗ್ರಾಮವೇ ಸೂಕ್ತ

`ಸರ್ಕಾರಿ ಜಮೀನು ದೊರಕದಿದ್ದರೆ ಸರ್ಕಾರ ಖಾಸಗಿ ಜಮೀನು ಖರೀದಿಸಿ ಉಪಗ್ರಾಮ ನಿರ್ಮಿಸಬೇಕು. ರಸ್ತೆ, ವಿದ್ಯುತ್, ಕುಡಿಯುವ ನೀರು ಪೂರೈಕೆ ಮಾಡಿ ಸೂರಿಲ್ಲದವರ ಪಟ್ಟಿ ಮಾಡಿ ಮನೆಗಳನ್ನು ನಿರ್ಮಿಸಿಕೊಡಬೇಕು. ಅಗ ಮಾತ್ರ ಹಳೇಬೀಡು ಗಿಡಿಸಲುಗಳಿಂದ ಮುಕ್ತವಾಗಲು ಸಾಧ್ಯ'

ನಿಂಗಪ್ಪ, ಗ್ರಾಮ ಪಂಚಾಯಿತಿ

ಮಾಜಿ ಅಧ್ಯಕ್ಷ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.