ಬುಧವಾರ, ಮೇ 12, 2021
24 °C

ಹೊಸ ಪಕ್ಷ ರಚನೆಗೆ ಅಣ್ಣಾ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: `ಶುದ್ಧ ಮತ್ತು ಸಮಾನ ಮನಸ್ಕರು ಒಗ್ಗೂಡಿ ಪಕ್ಷವೊಂದನ್ನು ರಚಿಸಬೇಕು~ ಎಂದಿರುವ ಅಣ್ಣಾ ಹಜಾರೆ ಸಲಹೆಗೆ ಅಣ್ಣಾ ಬಳಗ ತನ್ನ ಪೂರ್ಣ ಬೆಂಬಲ ನೀಡಿದ್ದರೂ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ತೊಡಗಿಸಿಕೊಂಡಿರುವ ಅನೇಕ ಕಾರ್ಯಕರ್ತರು ದಿಗ್ಭ್ರಮೆಗೊಂಡಿದ್ದಾರೆ.ಅಲ್ಲದೆ ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಸ್ವರೂಪದ ಚರ್ಚೆಗೆ ಕಾರಣವಾಗಿದೆ.

ಜನಲೋಕಪಾಲ ಮಸೂದೆಯ ಮುಂದಿನ ಹಂತದ ಕುರಿತು ಹಜಾರೆ ಅವರೊಂದಿಗೆ ನಡೆಸಿದ ಸಂದರ್ಶನವನ್ನು ಕೆಲವು ಚಾನೆಲ್‌ಗಳು ಸೋಮವಾರ ಪ್ರಸಾರ ಮಾಡಿದ್ದವು.ಈ ಸಂದರ್ಭದಲ್ಲಿ `ಎಲ್ಲಾ ಪಕ್ಷಗಳ ಶುದ್ಧ ಮತ್ತು ಸಮಾನ ಮನಸ್ಕ ವ್ಯಕ್ತಿಗಳಿಂದ~ ಕೂಡಿದ ಹೊಸ ಪಕ್ಷದ ಆಲೋಚನೆ ಬಗ್ಗೆ ಹೇಳಿ ಹಜಾರೆ ತಮ್ಮ ಬೆಂಬಲಿಗರನ್ನು ಅಚ್ಚರಿಗೊಳಿಸಿದರು.ಈ ಪಕ್ಷದ ನೇತೃತ್ವವನ್ನು ತಾವು ವಹಿಸುವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರೂ ಇಂತಹ ಪಕ್ಷಕ್ಕೆ ತಮ್ಮ ಬೆಂಬಲ ನೀಡುವುದಾಗಿ ಘೋಷಿಸಿದರು.`ಅಣ್ಣಾ ಹೇಳಿಕೆಯಲ್ಲಿ ಯಾವುದೇ ತಪ್ಪು ಇಲ್ಲ. ಮಾಧ್ಯಮಗಳ ವಿವಿಧ ಅರ್ಥ ವಿವರಣೆಯನ್ನು ಗಮನಿಸಬೇಡಿ, ಹಜಾರೆ ಹೇಳಿದ್ದರತ್ತ ಗಮನ ಹರಿಸಿ. ಯಾವುದೇ ಪಕ್ಷ ಅಥವಾ ರಂಗ ಸ್ಥಾಪಿಸುವ ಬಗ್ಗೆ ಅವರು ಹೇಳುತ್ತಿಲ್ಲ. ನಾವು ಹಾಗೆ ಮಾಡುತ್ತಿಲ್ಲ~ ಎಂದು ಅಣ್ಣಾ ಬಳಗದ ಹಿರಿಯ ಸದಸ್ಯ ಮನೀಶ್ ಸಿಸೋಡಿಯ `ಪ್ರಜಾವಾಣಿ~ಗೆ ತಿಳಿಸಿದರು.ಕಾಂಗ್ರೆಸ್ಸೇತರ, ಬಿಜೆಪಿಯೇತರ ರಂಗದ ಬಗ್ಗೆ ಅವರು ಹೇಳುತ್ತಿದ್ದಾರೆ ಎಂಬ ವಿವರಣೆಯನ್ನು ಅವರು ನಿರಾಕರಿಸಿ, ಇಂತಹ ರಂಗವನ್ನು  ರೂಪಿಸುವಲ್ಲಿ ಭ್ರಷ್ಟಾಚಾರ ವಿರೋಧಿ ಭಾರತ ಯಾವುದೇ  ಪಾತ್ರ ವಹಿಸುವುದಿಲ್ಲ ಎಂದರು.ಆದರೆ ಹಜಾರೆ ಅವರ ಹೇಳಿಕೆ ಬಗ್ಗೆ ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಗಳು ಅಚ್ಚರಿ ವ್ಯಕ್ತಪಡಿಸಿವೆ. ಕಳೆದ ವಾರ ರಾಳೇಗಣ ಸಿದ್ದಿಯಲ್ಲಿ ನಡೆದ ಸಭೆಯಲ್ಲಿ ಕೂಡ ಈ ವಿಷಯ ಚರ್ಚೆ ಆಗಿರಲಿಲ್ಲ. ಜನಲೋಕಪಾಲ ಮಸೂದೆ ಮತ್ತು ಚುನಾವಣಾ ಸುಧಾರಣೆಗಳ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹೇರುವ ಬಗ್ಗೆ ಚರ್ಚೆ ನಡೆದಿತ್ತು ಎಂದು ಮೂಲಗಳು ತಿಳಿಸಿವೆ.`ಯಾವುದೇ ರಾಜಕೀಯ ಪಕ್ಷ ರಚಿಸುವ ಬಗ್ಗೆ ಸಭೆ ಚರ್ಚಿಸಿರಲಿಲ್ಲ~ ಎಂದು ಭ್ರಷ್ಟಾಚಾರ ವಿರೋಧಿ ಆಂದೋಲನದ ಹಿರಿಯ ಕಾರ್ಯಕರ್ತರೊಬ್ಬರು ಹೇಳಿದರು.ಅಣ್ಣಾ ಹೇಳಿಕೆ ಬಗ್ಗೆ ರಾಜಕೀಯ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಡಪಕ್ಷಗಳು ಈ ಕ್ರಮವನ್ನು ಬೆಂಬಲಿಸಿವೆ. `ಭ್ರಷ್ಟಾಚಾರ ವಿರುದ್ಧದ ಇಂತಹ ಕ್ರಮವನ್ನು ನಾವು ಬೆಂಬಲಿಸುತ್ತೇವೆ. ಚುನಾವಣೆಗಳಿಗೆ ಹಣ ಸಂಗ್ರಹಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಭ್ರಷ್ಟಾಚಾರ ನಡೆಸುತ್ತವೆ~ ಎಂದು ಆರೋಪಿಸಿದರು.ಆದರೆ ಕಾಂಗ್ರೆಸ್ ಅಣ್ಣಾ ರಾಜಕೀಯೇತರ ವ್ಯಕ್ತಿಯಾಗಿ ಉಳಿಯಬೇಕು ಎಂದು  ಸಲಹೆ ನೀಡಿದೆ.ಈವರೆಗೆ ಅವರ ಹೋರಾಟ ರಾಜಕೀಯೇತರ ಆಗಿದೆ ಎಂದು ಪಕ್ಷದ ಹಿರಿಯ ನಾಯಕಿ ಉತ್ತರ ಪ್ರದೇಶದ ರೀಟಾ ಬಹುಗುಣ  ಪ್ರತಿಕ್ರಿಯಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.