ಹೊಸ ಪೇಯ ‘ಅಡಿಕೆ ಚಹಾ’

ಮಸಾಲಾ ಟೀ, ಗ್ರೀನ್ ಟೀ, ಬ್ಲ್ಯಾಕ್ ಟೀ, ಲೆಮನ್ ಟೀ ಸೇರಿದಂತೆ ಏಳೆಂಟು ಬಗೆಯ ಟೀ ನಮಗೆ ಗೊತ್ತು. ಚೀನಾದ ಜನರು ಚಹಾ ಪ್ರಿಯರು. ಅವರು 64 ಬಗೆಯ ಹೂವುಗಳಿಂದ ಚಹಾ ಮಾಡುತ್ತಾರೆ. ಈಗ ಈ ಪಟ್ಟಿಗೆ ‘ಅಡಿಕೆ ಚಹಾ (ಅರೆಕಾ ಟೀ)’ ಸೇರ್ಪಡೆಯಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮಂಡಗದ್ದೆಯ ಯುವ ಸಂಶೋಧಕ ನಿವೇದನ್ ನೆಂಪೆ ಅವರ ಕನಸಿನ ಕೂಸು ಇದು. ವಾರದ ಹಿಂದೆ ‘ಅಡಿಕೆ ಚಹಾ’ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ಅಡಿಕೆ ಮಲೆನಾಡು ಹಾಗೂ ಕರಾವಳಿ ಜನರ ಜೀವನಾಡಿ. ಐದು ಲಕ್ಷಕ್ಕೂ ಅಧಿಕ ಕುಟುಂಬಗಳು ಅಡಿಕೆಯನ್ನೇ ನಂಬಿ ಜೀವನ ನಡೆಸುತ್ತಿವೆ. ಕಳೆದೆರಡು ದಶಕದಲ್ಲಿ ಅಡಿಕೆ ಕೃಷಿಕರು ಖುಷಿ ಪಟ್ಟದ್ದಕ್ಕಿಂತ ನೋವು ಅನುಭವಿಸಿದ್ದೇ ಜಾಸ್ತಿ.
ದಶಕದ ಹಿಂದೆ ಅಡಿಕೆಯ ಬೆಲೆ ಏರುತ್ತಾ ಹೋಯಿತು. ಕೆ.ಜಿ. ಅಡಿಕೆಯ ಬೆಲೆ ₹300ರ ಗಡಿ ದಾಟಿತು. ಭತ್ತದ ಗದ್ದೆಗಳಲ್ಲಿ ಅಡಿಕೆ ತೋಟಗಳು ತಲೆ ಎತ್ತಿದವು. ನಾಲ್ಕೈದು ವರ್ಷಗಳಲ್ಲೇ ಅಡಿಕೆ ಬೆಲೆ ಪಾತಾಳಕ್ಕೆ ಇಳಿಯಿತು. ನೂರಾರು ಕುಟುಂಬಗಳು ಅಡಿಕೆ ತೋಟ ನಾಶ ಮಾಡಿ ರಬ್ಬರ್ ಗಿಡಗಳನ್ನು ನೆಟ್ಟವು. ಎರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಗುಟ್ಕಾವನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಇದು ಅಡಿಕೆ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿತ್ತು. ಈಗ ಅಡಿಕೆ ಚಹಾ ಬಿಡುಗಡೆಯಾಗಿರುವುದು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.
ಬಾಲ್ಯದ ವೇದನೆಯಿಂದ ಹುಟ್ಟಿದ ಆವಿಷ್ಕಾರ
ನಿವೇದನ್ ಹೆತ್ತವರು ಅಡಿಕೆ ಕೃಷಿಕರು. ಅವರಿಗೆ 1.5 ಎಕರೆ ಅಡಿಕೆ ತೋಟ ಇತ್ತು. ಪ್ರತಿ ಸಲ ಅಡಿಕೆ ಬೆಲೆ ಕುಸಿದಾಗ ಕುಟುಂಬ ಸಂಕಷ್ಟ ಅನುಭವಿಸುತ್ತಿತ್ತು. ಮಗನ ಶಾಲಾ ಶುಲ್ಕ ಪಾವತಿಸಲು ಕುಟುಂಬ ಪಡಿಪಾಟಲು ಪಡುತ್ತಿತ್ತು. ಈ ನೋವು ನಿವೇದನ್ ಅವರ ಆವಿಷ್ಕಾರಕ್ಕೆ ಪ್ರೇರಣೆಯಾಯಿತು.
ನಿವೇದನ್ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕ ಪಡೆದುದು ಮಂಡಗದ್ದೆಯ ಸರ್ಕಾರಿ ಶಾಲೆಯಲ್ಲಿ. ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಪದವಿ (ಫಾರ್ಮಸಿ) ಶಿಕ್ಷಣ ಪಡೆದರು.
ನಿವೇದನ್ ಅವರಿಗೆ ಮೊದಲಿನಿಂದಲೂ ಸಂಶೋಧನೆಯ ತುಡಿತ. ಭಾರತೀಯ ವೈದ್ಯಕೀಯ ಪದ್ಧತಿಗಳ ಬಗ್ಗೆ ಭಾರಿ ಪ್ರೀತಿ. ಅಂತಿಮ ಪದವಿಯಲ್ಲಿದ್ದಾಗ ಕಲಬುರ್ಗಿಯಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸುವ ಅವಕಾಶ ಲಭಿಸಿತು.
ಇದು ಬದುಕಿನ ಮಹತ್ವದ ತಿರುವು. ಆಸ್ಟ್ರೇಲಿಯಾದ ಸ್ವಿನ್ಬರ್ನ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್ಮೆಂಟ್ ಟೆಕ್ನಾಲಜಿಯಲ್ಲಿ ಉನ್ನತ ಶಿಕ್ಷಣ ಪಡೆಯುವ ಸುವರ್ಣಾವಕಾಶ ಪ್ರಾಪ್ತವಾಯಿತು.
ನಿವೇದನ್ ಅವರು ಆಸ್ಟ್ರೇಲಿಯಾದಲ್ಲಿ ಉನ್ನತ ಶಿಕ್ಷಣ ಪಡೆದರು. ಅಲ್ಲೇ ಉದ್ಯೋಗ ಲಭಿಸಿತು. ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ. ಉದ್ಯೋಗದ ನಿಮಿತ್ತ ಮೂರುವರೆ ವರ್ಷಗಳಲ್ಲಿ ಐದಾರು ದೇಶಗಳನ್ನು ಸುತ್ತಾಡಿದರು. ಆದರೂ ತೃಪ್ತಿ ಇರಲಿಲ್ಲ. ‘ತಾಯಿ’ ಹಾಗೂ ‘ತಾಯಿನಾಡಿನ’ ಸೆಳೆತ ಜೋರಾಯಿತು. 2011ರಲ್ಲಿ ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸಿದರು.
ಮಂಡಗದ್ದೆಗೆ ಬಂದು ‘ಮಿಸ್ಟಿಕ್ ಆ್ಯರೋಮ್ಯಾಟಿಕ್ಸ್’ ಎಂಬ ಕಂಪೆನಿ ಆರಂಭಿಸಿದರು. ತಮ್ಮ ಆವಿಷ್ಕಾರದಿಂದ ದೇಶಕ್ಕೆ ಸಹಾಯವಾಗಬೇಕು ಎಂಬುದು ಅವರ ಹಂಬಲ. ಹಳೆಯ ಕಾಗದಗಳನ್ನು ಪುನರ್ಬಳಕೆ ಮಾಡಿ ವಿಸಿಟಿಂಗ್ ಕಾರ್ಡ್ಗಳನ್ನು ಮಾಡಿದರು.
ಕೃಷಿಕರಿಗೆ ಸಹಾಯವಾಗುವಂತಹ ಆವಿಷ್ಕಾರಗಳನ್ನು ಮಾಡಬೇಕು ಎಂದು ಮನಸ್ಸಿನಲ್ಲಿ ಕೊರೆಯುತ್ತಲೇ ಇತ್ತು. ಕೆಲವು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯ ಕೆಲಸ ಮಾಡಿದರು. ಆದರೂ ತೃಪ್ತಿ ಇರಲಿಲ್ಲ.
ಎರಡು ವರ್ಷದ ಸಂಶೋಧನೆ: ರಾಜ್ಯ ಸರ್ಕಾರ 2013ರಲ್ಲಿ ಗುಟ್ಕಾ ನಿಷೇಧ ಮಾಡಿತು. ಅಧಿಕ ಪ್ರಮಾಣದ ಅಡಿಕೆ ಬಳಕೆಯಾಗುತ್ತಿದ್ದುದು ಗುಟ್ಕಾಕ್ಕೆ. ಇದಕ್ಕೊಂದು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ನಿವೇದನ್ ಯೋಚಿಸಿದರು. ಆಗ ಹುಟ್ಟಿದ್ದೇ ಅಡಿಕೆ ಚಹಾದ ಕಲ್ಪನೆ.
ಅಡಿಕೆಯ ವೈದ್ಯಕೀಯ ಗುಣಲಕ್ಷಣಗಳ ಬಗ್ಗೆ ಮಾಹಿತಿ ಕಲೆ ಹಾಕಲಾರಂಭಿಸಿದರು.
ಆರೋಗ್ಯಕ್ಕೆ ಸಹಕಾರಿಯಾದ 21 ಅಂಶಗಳು ಅಡಿಕೆಯಲ್ಲಿವೆ ಎಂಬ ಅಂಶ ಇಂಟರ್ನ್ಯಾಷನಲ್ ಫಾರ್ಮಾ ಜರ್ನಲ್ನಲ್ಲಿ ಲಭಿಸಿತು. ನೂರಾರು ವೈಜ್ಞಾನಿಕ ಪತ್ರಿಕೆಗಳನ್ನು ಓದಿದರು. ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದರು.
ಎರಡು ವರ್ಷಗಳ ಹಿಂದೆ ಅಡಿಕೆಯ ಮೌಲ್ಯವರ್ಧನೆಯ ಕೆಲಸ ಆರಂಭಿಸಿದರು. ‘ಈ ಹುಡುಗನಿಗೆ ಪೂರ್ತಿ ತಲೆ ಕೆಟ್ಟಿದೆ’ ಎಂದು ಕೆಲವರು ಲೇವಡಿ ಮಾಡಿದರು.
ಅಂತಹ ಸಂದರ್ಭದಲ್ಲಿ ಅವರಿಗೆ ನೆರವಿಗೆ ಬಂದುದು ಕ್ಯಾಂಪ್ಕೊದ ಅಡಿಕೆ ಸಂಶೋಧನಾ ಪ್ರತಿಷ್ಠಾನ. ಪ್ರತಿಷ್ಠಾನದ ಅಧ್ಯಕ್ಷರೂ ಆಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಇವರ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.
ಒಂದು ವರ್ಷದ ನಿರಂತರ ಸಂಶೋಧನೆಯ ಬಳಿಕ ಅಡಿಕೆ ಚಹಾ ಸಿದ್ಧಗೊಂಡಿತು. ಆ ಬಳಿಕ ಅವರು ಉತ್ಪನ್ನದ ಆಧುನೀಕರಣದ ಕಡೆಗೆ ಗಮನ ಹರಿಸಿದರು. ಮೂರು–ನಾಲ್ಕು ತಿಂಗಳಲ್ಲಿ ಅಡಿಕೆ ಚಹಾದ ಬ್ಯಾಗ್ಗಳನ್ನು ಸಿದ್ಧಪಡಿಸಿದರು.
ಕೆಲವು ತಿಂಗಳ ಹಿಂದೆ ಆಹಾರ ಇಲಾಖೆಯ ಪ್ರಮಾಣಪತ್ರ ಸಿಕ್ಕಿತು. ಸಿಎಫ್ಟಿಆರ್ಐ ಮಾನ್ಯತೆ ಲಭಿಸಿತು. ಅಖಿಲ ಭಾರತ ತಾಂತ್ರಿಕ ನಿರ್ವಹಣಾ ಪರಿಷತ್ತು ನಡೆಸಿದ ‘ಭಾರತದಲ್ಲಿಯೇ ತಯಾರಿಸಿ ಕೌಶಲ ಪ್ರಶಸ್ತಿ ಸ್ಪರ್ಧೆ’ಯಲ್ಲಿ ‘2015ನೇ ಸಾಲಿನ ಅತ್ಯುತ್ತಮ ಆವಿಷ್ಕಾರ ಪ್ರಶಸ್ತಿ’ ದೊರಕಿತು. ‘ಹಕ್ಕುಸ್ವಾಮ್ಯ ’ (ಪೇಟೆಂಟ್) ಪಡೆಯಲು ಅವರು ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಈಗಾಗಲೇ ಪ್ರಾಧಿಕಾರದಿಂದ ಉತ್ಪನ್ನದ ‘ಬೌದ್ಧಿಕ ಆಸ್ತಿ ಹಕ್ಕು’ ಲಭಿಸಿದೆ.
ಮಧುಮೇಹ ದೂರ
‘ಅಡಿಕೆ ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಚಹಾ ಸೇವನೆಯಿಂದ ವೃದ್ಧಾಪ್ಯ ದೂರವಾಗುತ್ತದೆ. ಖಿನ್ನತೆ ಮಾಯವಾಗುತ್ತದೆ. ಇದು ನಂಜು ನಿವಾರಕವೂ ಹೌದು. ಜೀರ್ಣಕ್ರಿಯೆ ಸುಗಮವಾಗಿ ಹಸಿವನ್ನು ಹೆಚ್ಚಿಸಲಿದೆ. ಜತೆಗೆ ಇದು ಮಧುಮೇಹ ನಿವಾರಕವೂ ಹೌದು’ ಎಂದು ಅವರು ಹೇಳುತ್ತಾರೆ.
ಇದಕ್ಕೆ ಅವರು ಒಂದು ಉದಾಹರಣೆಯನ್ನೂ ನೀಡುತ್ತಾರೆ. ‘ಈಗ 50 ವರ್ಷಕ್ಕೆ ಹಲ್ಲು ಉದುರಲು ಶುರುವಾಗುತ್ತದೆ. ಕವಳ (ವೀಳ್ಯದೆಲೆ) ತಿನ್ನುವವರನ್ನು ಗಮನಿಸಿ. 60 ವರ್ಷ ದಾಟಿದರೂ ಅವರ ಗಲ್ಲು ಗಟ್ಟಿಯಾಗಿರುತ್ತದೆ. ಅಡಿಕೆ ಸೇವನೆ ಇದಕ್ಕೆ ಕಾರಣ’ ಎಂದು ಅವರು ಹೇಳುತ್ತಾರೆ.
ಚಹಾ ತಯಾರಿಕೆ ಹೇಗೆ?
ಮೂರು ಗ್ರಾಮ್ ತೂಕದ ಬೆಟ್ಟೆ ಅಡಿಕೆಯಿಂದ ಒಂದು ಕಪ್ ಚಹಾ ತಯಾರಿಸಬಹುದು ಎಂದು ಅವರು ಮಾಹಿತಿ ನೀಡುತ್ತಾರೆ. 10 ಟೀ ಮಾಡಬಹುದಾದ ಒಂದು ಬ್ಯಾಗ್ಗೆ ₹75 ನಿಗದಿ ಮಾಡಲಾಗಿದೆ. ಅಡಿಕೆ ಟೀಗೆ ಹಾಲು, ಸಕ್ಕರೆ ಸೇರಿಸುವ ಅಗತ್ಯ ಇಲ್ಲ. ಸ್ಯಾಚೆಟ್ ಅನ್ನು ಬಿಸಿನೀರಿನಲ್ಲಿ ಅದ್ದಿದರೆ ನಿಮಿಷದಲ್ಲಿ ಚಹಾ ಸಿದ್ಧವಾಗುತ್ತದೆ.
ಮಾಹಿತಿಗೆ: 7760056777
‘ಚಹಾದ ಮಾರುಕಟ್ಟೆ
‘ಚಹಾದ ಮಾರುಕಟ್ಟೆ ವಿಶಾಲವಾದುದು. ಮಾರುಕಟ್ಟೆಯ ಶೇ 0.01 ಪಾಲು ಸಿಕ್ಕರೂ ಸಾಕು. ದೊಡ್ಡ ಮಟ್ಟದ ಯಶಸ್ಸು ಗಳಿಸುತ್ತೇವೆ. ಕೆಲವೇ ದಿನಗಳಲ್ಲಿ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಅವರು ಸಂತಸ ವ್ಯಕ್ತಪಡಿಸುತ್ತಾರೆ.
‘ರೈತರ ಉತ್ಪನ್ನಗಳ ಬೆಲೆ ಹೆಚ್ಚಳ, ಮಾರುಕಟ್ಟೆ ವಿಸ್ತರಣೆಗೆ ಶ್ರಮಿಸಬೇಕು ಎಂಬ ಮಹಾದಾಸೆ ಇದೆ. ಅದಕ್ಕಾಗಿ ಹೊಸ ಹೊಸ ಉತ್ಪನ್ನ ತಯಾರಿಸಬೇಕು ಎಂಬ ಸಂಕಲ್ಪ ಮಾಡಿದ್ದೇನೆ. ಮೇ ತಿಂಗಳಲ್ಲಿ ಮತ್ತೊಂದು ಉತ್ಪನ್ನ ಹೊರ ತರಲಾಗುವುದು’ ಎಂದು ಅವರು ತಿಳಿಸುತ್ತಾರೆ.
-ನಿವೇದನ್ ನೆಂಪೆ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.