ಶುಕ್ರವಾರ, ಜೂನ್ 25, 2021
30 °C

ಹೊಸ ಸವಾಲು.....

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

ಹೊಸ ಸವಾಲು.....

ಸುಮಾರು 70ರ ದಶಕದಿಂದೀಚೆಗೆ ಗಾರ್ಮೆಂಟ್ಸ್ ವಲಯದಲ್ಲಿ ಅತ್ಯಂತ ಪರಿಣಾಮಕಾರಿ ಪಾತ್ರ ನಿರ್ವಹಿಸುತ್ತಿರುವವರು ಮಹಿಳಾ ಕಾರ್ಮಿಕರು. ಪ್ರಾರಂಭದ ಹಂತದಲ್ಲಿ ಅವರು ಎದುರಿಸಿದ ಸಮಸ್ಯೆ ಸವಾಲುಗಳು ಲೆಕ್ಕಕ್ಕೆ ಸಿಗುವುದು ಕಷ್ಟ. ಎಲ್ಲವನ್ನೂ ಮೌನವಾಗಿ ಸ್ವೀಕರಿಸುತ್ತ ಬಂದ ಗಾರ್ಮೆಂಟ್ಸ್ ಕ್ಷೇತ್ರದ ಮಹಿಳಾ ಕಾರ್ಮಿಕರು 90ನೇ ದಶಕದ ನಂತರ ಬಾಯಿ ಬಿಡಲು ಆರಂಭಿಸಿದರು.ತಮ್ಮ ಹಕ್ಕು-ಬಾಧ್ಯತೆಗಳ ಬಗ್ಗೆ ಪ್ರಶ್ನಿಸಲು ಶುರು ಮಾಡಿದರು. ಇದೆಲ್ಲದ ಫಲವಾಗಿ ಅವರಿಗೆ ಒಂದಿಷ್ಟು ಸವಲತ್ತುಗಳು ದೊರೆತವೇನೊ ನಿಜ. ಆದರೆ ಅದರೊಂದಿಗೆ ಹೆಣೆದುಕೊಂಡು ಬಂದ ಹೊಸ ಸವಾಲುಗಳಿಗೆ ಸಿಕ್ಕು ಅವರು ಮತ್ತೊಮ್ಮೆ ಹೈರಾಣಾಗಿದ್ದಾರೆ.1979ರ ನಂತರ ಗಾರ್ಮೆಂಟ್ಸ್ ವಲಯದಲ್ಲಿ ಉಂಟಾದ ಭಾರೀ ಬದಲಾವಣೆಯ ಕಾಲಘಟ್ಟದಲ್ಲಿ ಮಹಿಳೆಯರಿಗೆ ಅವಕಾಶಗಳೇನೊ ಹೆಚ್ಚಿದವು. ಜೊತೆ-ಜೊತೆಗೆ ಸಮಸ್ಯೆ-ಸವಾಲುಗಳೂ ಹೊಸ ರೂಪದೊಂದಿಗೆ ಎದುರಾಗಿವೆ. ಇತ್ತ ಮಹಿಳೆ ದುಡಿಯಲೇಬೇಕಾದ ಪರಿಸ್ಥಿತಿ. ಅತ್ತ ದುಡಿಯುವ ಕ್ಷೇತ್ರದಲ್ಲಿ ಅಹಿತಕರ ಬದಲಾವಣೆ... ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಗಾರ್ಮೆಂಟ್ಸ್ ಕ್ಷೇತ್ರದ ಮಹಿಳೆ ಬದುಕು ಹೇಗೆ ಸಾಗುತ್ತಿದೆ? ಮಹಿಳಾ ದಿನಾಚರಣೆ ಅವರ ಬದುಕಿನಲ್ಲಿ ಏನನ್ನು ಧ್ವನಿಸುತ್ತದೆ...

* * *

ಮದಿನಾ: ಎಲ್ಲ ದಿನಗಳಂತೆ ನಮಗೆ ಮಹಿಳಾ ದಿನವೂ ಒಂದು ದಿನವಷ್ಟೆ. ಅದೇ ದಿನಚರಿ, ಅದೇ ಮನಸ್ಥಿತಿ, ಅದೇ ಸಮಸ್ಯೆ-ಸವಾಲುಗಳು... ಬೆಳಿಗ್ಗೆದ್ದು ಗಂಡ-ಮಕ್ಳಿಗೆ ಅಡುಗೆ ಬೇಯಿಸಿ, ಮನೆಕೆಲಸ ಮುಗಿಸಿ,ಕೆಲಸಕ್ಕೆ ಬರುವುದರಲ್ಲೇ ಸಾಕಾಗಿ ಹೋಗ್ತದೆ. ಹೊಟ್ಟೆಗೇನಾದರೂ ತಿಂದ್ವೊ ಇಲ್ವೊ ಅನ್ನೂದು ಹೊಟ್ಟೆ ಚುರುಗುಟ್ಟಿದಾಗಲೇ ನೆನಪಾಗೋದು... ಮನೆಯಲ್ಲಿ ಒಂದು ರೀತಿಯ ಸಂಕಟ,ಸಮಸ್ಯೆ. ಇಲ್ಲಿ ಬಂದರೆ ಆಶಾಕಿರಣವಿಲ್ಲದ ಬದುಕಿನ ಮತ್ತೊಂದು ಮುಖ ತಿರೆದುಕೊಳ್ಳುತ್ತದೆ.ರತ್ನಮ್ಮ: ಒಂದ್ ಕಿತಾ ಕೆಲಸದ ಆವರಣದಾಗೆ ಕಾಲಿರಿಸಿದರೆ ನಾವು ಜೀತದ ಆಳುಗಳೇ. ಟೇಂ ಹಚ್ಚಿ ಊಟತಿಂಡಿಗೆ ಬಿಡ್ತಾರೆ. ಊಟ ಮುಗಿಯುವ ಮೊದಲೇ ಬಂದು ಮುಂದೆ ನಿಲ್ತಾರೆ.ಅನಿತಾ: ಅಷ್ಟೇ ಏಕೆ ಶೌಚಾಲಯಕ್ಕೆ ಹೋದರೂ ನಮ್ಮನ್ನ ಕಾಯಾಕೆ ಅಂತ ಗಾರ್ಡ್ಸ್ ನಿಂತಿರ‌್ತಾರೆ. ತಡ ಆದ್ರೆ ಬಂದು ಶೌಚದ ಬಾಗ್ಲು ಬಡಿತಾರೆ...

ವೀಣಾ: ನಾವು ಯೂನಿಯನ್ ಜೊತೆ ಗುರುತಿಸಿಕೊಂಡ್ರೆ ಟಾರ್ಗೆಟ್ ಆದಂಗೆನೇ. `ಯೂನಿಯನ್‌ಗೆ ಹೋಗ್ತಿಯಾ?~ ಅಂತ ನೇರವಾಗೇ ಬೈತಾರೆ. ನಾವು ಯಾವ ಕೆಲಸದಲ್ಲಿ ಕಂಫರ್ಟ್ ಆಗಿರುವುದಿಲ್ಲವೊ ಅದೇ ಕೆಲಸಕ್ಕೆ ಹಾಕಿ `ಇಷ್ಟು ವರ್ಷ ಆದ್ರೂ ಸರಿಯಾಗಿ ಕೆಲ್ಸ ಮಾಡೋಕೆ ಬರೋಲ್ಲ ನಿನಗೆ~ ಅಂತ ಅವಮಾನ ಮಾಡ್ತಾರೆ.ವೆಂಕಟಲಕ್ಷ್ಮಿ: ಇದ್ದಕ್ಕಿದ್ದಂತೆ ಹೊಟ್ಟೆ ನೋವು ಬಂದಾಗ ಒಂದೈದು ನಿಮಿಷ ರೆಸ್ಟ್ ತೆಗೆದುಕೊಳ್ಳೋಕೂ ಆಗೂದಿಲ್ಲ. `ಗಂಡಸರಿಗೆ ಸಮ ಸಂಬಳ ಬೇಕೂ ಅಂತಿರಾ? ಇಂಥದ್ದಕ್ಕೆಲ್ಲ ಕನ್ಸಿಶನ್ ಕೇಳ್ತೀರ~ ಅಂತಾರೆ.ಸರಸ್ವತಿ: ಹೆರಿಗೆ ರಜೆ ಕೊಡಬೇಕಾದ ದಿನಗಳು ಹತ್ತಿರ ಬರುತ್ತಿದ್ದಂತೆ ಏನಾದರೂ ನೆಪ ಹುಡುಕಿ ಕೆಲಸದಿಂದ ತೆಗೆದು ಹಾಕ್ತಾರೆ. ್ಞಮಗೆ ಕೇಳೊಕೆ ಬಾಯಿ ಇರಬಾರದು ಅಂಥ ನೆಪ ಹುಡುಕ್ತಾರೆ. ಎಲ್ಲದಕ್ಕೂ ಕಾನೂನು ಮೊರೆ ಹೋಗೋಕೆ ಆಗೊಲ್ಲ. ಯಾರಲ್ಲಿ ಹೇಳಿಕೊಳ್ಳೋಣ ಈ ಕಷ್ಟ?ಮಂಗಳಾ: ಗುಣಮಟ್ಟದ ಕೆಲಸ ಬೇಕು, ಟಾರ್ಗೆಟ್ ಮುಟ್ಟಲೇಬೇಕು ಅನ್ನೊ ಒತ್ತಡ. ಬೇಡಿಕೆ ಹೆಚ್ಚಿದ್ದಾಗಂತೂ ನಾವು ಮಶೀನ್‌ಗಳೇ. ಆದ್ರೆ ನಮಗೂ ಮನಸ್ಸು, ದೇಹ ಇದೆ. ಅದಕ್ಕೆ ನೋವು-ಸಂಕಟ, ಕಾಯಿಲೆಗಳು ಬರುತ್ತವೆ ಎನ್ನುವುದು ಅವರಿಗೆ ಬೇಡದ ಸಂಗತಿ.

* * *ಹೀಗೇ ಕೇಳುತ್ತ ಹೋದರೆ ಮುಗಿಯುವುದೇ ಇಲ್ಲ ಸಿದ್ಧ ಉಡುಪು ತಯಾರಿಕಾ ಘಟಕಗಳಲ್ಲಿ ದುಡಿಯುವ ಮಹಿಳೆಯರ ಕಥೆಗಳು. ಕೆಲವು ಸಮಸ್ಯೆಗಳಲ್ಲಿ ಯಾವುದೇ ಕಾಯ್ದೆ-ಕಾನೂನು ಇವರ ಸಹಾಯಕ್ಕೆ ಆಗುವುದೇ ಇಲ್ಲ ಎನ್ನುವುದು ವಾಸ್ತವ. ತಮ್ಮ ಹಕ್ಕು ಬಾಧ್ಯತೆಗಳ ಬಗ್ಗೆ ಎಷ್ಟೇ ಜಾಗೃತಿ ಪಡೆದುಕೊಂಡರೂ, ಸಂಘಟಿತರಾಗಿ ನಿಂತರೂ ಇದೆಲ್ಲದರ ಆಚೆ ಇಂದಿಗೂ ಅವರನ್ನು ಚುಚ್ಚುವ ಮೊನಚಾದ ಚೂರಿಗಳಿವೆ ಅಲ್ಲಿ.ಕುಟುಂಬದಲ್ಲಿ ತೀರದ ಸಂಕಷ್ಟ, ಅದರಿಂದ ದುಡಿಯುವ ಅನಿವಾರ್ಯತೆ, ಈ ಅನಿವಾರ್ಯತೆಯ ಲಾಭ ಪಡೆಯುವ ಆಡಳಿತ ಮಂಡಳಿಯ ಹುನ್ನಾರ, ಕಾರ್ಯಕ್ಷೇತ್ರದಲ್ಲಿ ಅಹಿತಕರ ವಾತಾವರಣ... ಈ ಸ್ಥಿತಿಯಲ್ಲಿ ಮಹಿಳಾ ದಿನದ ಮಹತ್ವವನ್ನು ಅವರು ಹೇಗೆ ತಾನೆ ಸಾರ್ಥಕಗೊಳಿಸಿಯಾರು?ಅಳುವ ಕಂದಮ್ಮಗಳು 

ಗಾರ್ಮೆಂಟ್ಸ್‌ಗಳಲ್ಲಿ ದುಡಿಯುವ ಬಹುಪಾಲು ಮಹಿಳೆಯರು ದೂರದ ಊರುಗಳಿಂದ ವಲಸೆ ಬಂದವರು. ಮನೆಯಲ್ಲಿ ಹಿರಿಯರಿರುವುದು ಅಪರೂಪ. ದಿನಬೆಳಗಾದರೆ ಕೆಲಸಕ್ಕೆ ಓಡುವ ಆತುರ, ಆಡುವ ಮಕ್ಕಳನ್ನು ಅಂಗಳದಲ್ಲಿ ಅನಾಥರಂತೆ ಬಿಟ್ಟು ಹೋಗುವುದು ಹೇಗೆಂಬ ತುಡಿತ... ಕೆಲಸ ಮುಗಿಸಿ ಮನೆಗೆ ಹಿಂತಿರುಗುವಷ್ಟು ಹೊತ್ತು ಕಂದನೆಡೆಗೆ ಹಂಬಲಿಸುವ ಮನ... ಅವರಿಗೆ `ಪ್ಲೇಹೋಂ~ನಂತಹ ದುಬಾರಿ ವ್ಯವಸ್ಥೆ ಮಾಡುವ ಶಕ್ತಿಯೂ ಇಲ್ಲ.ಮಕ್ಕಳ ಜೀವದ ಮೇಲಿನ ಹಂಗು ತೊರೆದು ಒಂಟಿಯಾಗಿ ಬಿಟ್ಟು ಬರುವ ಮನಸ್ಸೂ ಇಲ್ಲ.

ಕಾನೂನಿನ ಪ್ರಕಾರ ಕಾರ್ಖಾನೆಯೊಂದರಲ್ಲಿ 30ಕ್ಕಿಂತ ಹೆಚ್ಚು ಮಹಿಳೆಯರು ದುಡಿಯುತ್ತಿದ್ದರೆ ಅಂತಹ ಸ್ಥಳಗಳಲ್ಲಿ ಕ್ರಷ್ ವ್ಯವಸ್ಥೆ ಹಾಗೂ ತಾಯಂದಿರಿಗೆ ಎರಡು ಹೊತ್ತು ಹಾಲು ಕುಡಿಸಲು ಅವಕಾಶ ಇರಬೇಕು. ಆದರೆ ಈ ಕಾನೂನಿಗೆ ಅನೇಕ ಕಾರ್ಖಾನೆಗಳಲ್ಲಿ ಬೆಲೆ ಇಲ್ಲ.`ಕೆಲವು ಕಡೆ ಕ್ರಷ್ ವ್ಯವಸ್ಥೆಯೇ ಇಲ್ಲ. ಕೆಲವು ಕಡೆ ಹೆಸರಿಗೆ ಮಾತ್ರ ಕ್ರಷ್ ಇದ್ದು, ಯಾವುದೇ ವ್ಯವಸ್ಥೆ ಇಲ್ಲ, ಇನ್ನೂ ಕೆಲವು ಕಡೆ ಅಪಾಯಕಾರಿ ಸ್ಥಳಗಳಲ್ಲಿ ಕ್ರಷ್‌ಗಳನ್ನು ಮಾಡಲಾಗಿದೆ. ಮತ್ತೆ ಕೆಲವು ಕಡೆ ಹಾಲು ಕುಡಿಸುವುದಕ್ಕೂ ತಾಯಂದಿರಿಗೆ ರಿಯಾಯಿತಿ ನೀಡುವುದಿಲ್ಲ. ಈ ಬಗ್ಗೆ ಆಡಳಿತ ಮಂಡಳಿಯ ಜೊತೆ ಬಾರಿ ಮಾತುಕತೆ ನಡೆಸಿದರೂ ಪ್ರಯೋಜನ ಆಗಿಲ್ಲ~ ಎನ್ನುತ್ತಾರೆ `ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರ ಮುನ್ನಡೆ~ ಸಂಘಟನೆಯ ಉಪಾಧ್ಯಕ್ಷೆ ಆರ್. ಪ್ರತಿಭಾ.

ಬ್ರಾಂಡ್‌ಗಳಿಗಿರುವ ಬೆಲೆ ಕಾರ್ಮಿಕರಿಗಿಲ್ಲ...

ಪೀಟರ್ ಇಂಗ್ಲಂಡ್, ರ‌್ಯಾಂಗ್ಲರ್, ಲೀವೈಸ್, ನೈಕಿ, ಗ್ಯಾಪ್, ವಾಲ್ಮಾರ್ಟ್...

ಈ ಹೆಸರುಗಳನ್ನು ಕೇಳಿದರೆ ಹುಬ್ಬೇರುತ್ತದೆ. ಅಮೆರಿಕಾ, ಯೂರೋಪ್, ಆಸ್ಟ್ರೇಲಿಯಾ, ಜಪಾನ್ ಒಳಗೊಂಡಂತೆ ಜಗತ್ತಿನ ಅನೇಕ ಕಡೆ ಮಾರಾಟವಾಗುವ ಹೆಸರಾಂತ ಸಿದ್ಧ ಉಡುಪುಗಳ ಬ್ರಾಂಡ್‌ಗಳಿವು.ಆಕರ್ಷಕ ಹಾಗೂ ಅತ್ಯಾಧುನಿಕ ಫೀಲ್ ನೀಡುವ ಈ ಶೋಕಿಯ ಬ್ರಾಂಡ್ ಬಟ್ಟೆ ತೊಡುವುದು ಎಂದರೆ ಪ್ರತಿಷ್ಠೆಯ ಸಂಕೇತ. ಅದರ ಮೇಲೆ ತೂಗು ಹಾಕಿದಷ್ಟು ಬೆಲೆಯನ್ನು ತೆಪ್ಪಗೇ ಕೊಟ್ಟು ಖರೀದಿಸುತ್ತೇವೆ ನಾವು.ಆದರೆ ಈ ಬಟ್ಟೆ ಅದೆಲ್ಲೊ ನಾವು ಕಾಣದ ವಿದೇಶದಲ್ಲಿ ಸಿದ್ಧಗೊಂಡು ಬಂದಿರುವುದಲ್ಲ. ಈ ಬಟ್ಟೆಗಳನ್ನು ಬೆಂಗಳೂರಿನ ಬನ್ನಿಕುಪ್ಪೆ, ಬ್ಯಾಟರಾಯನಪುರ, ಕೆಂಚೇನಿಹಳ್ಳಿಯಂತಹ ಪ್ರದೇಶಗಳಲ್ಲಿ ವಾಸಿಸುವ ಬಡ ಮಹಿಳಾ ಕೂಲಿ ಕಾರ್ಮಿಕರು ಸಿದ್ಧಪಡಿಸುತ್ತಾರೆ... ಅವರ ಶ್ರಮವೇಕೆ ನಮ್ಮ ಕಣ್ಣಿಗೆ ಕಾಣುವುದಿಲ್ಲ! ಆ ಬಟ್ಟೆಗಳಿಗಾಗಿ ನಾವು ತೆತ್ತುವ ಬೆಲೆ ಈ ಕಾರ್ಮಿಕರ ತುತ್ತಿಗೆ ದಕ್ಕುವುದಿಲ್ಲ. ಬದಲಾಗಿ ಕಾರ್ಪೋರೇಟ್ ವಲಯದವರ ಬಂಗಲೆಗಳಲ್ಲಿ ಶೇಖರಣೆಯಾಗುತ್ತವೆ ಎಂಬ ಸತ್ಯ ಎಷ್ಟು ಜನಕ್ಕೆ ಗೊತ್ತಿದೆ?`ನಿಜ, ಸಿದ್ಧ ಉಡುಪುಗಳಿಂದ ನಮ್ಮ ದೇಶಕ್ಕೆ ಸಿಗುವ ವಿದೇಶಿ ವಿನಿಮಯ ಒಂದು ಲಕ್ಷ ಕೋಟಿಗೂ ಅಧಿಕ. ಈ ಉದ್ದಿಮೆಯ ಒಟ್ಟು ಆದಾಯದಲ್ಲಿ ಶೇ 25ರಷ್ಟು ಮಾತ್ರ ಸ್ಥಳೀಯ ಕಂಪೆನಿಗಳಿಗೆ ದೊರೆತರೆ ಇನ್ನುಳಿದ ಶೇ 75ರಷ್ಟು ಲಾಭ ಸಲ್ಲುವುದು ಬ್ರಾಂಡ್‌ಗಳಿಗೆ. ಈ ಎಲ್ಲಾ ಪ್ರಕ್ರಿಯೆಯಲ್ಲಿ ಬಡ ಮಹಿಳಾ ಕಾರ್ಮಿಕರಿಗೆ ಸಿಗುವುದು ನೂರರಲ್ಲಿ ಒಂದು ಭಾಗವೂ ಅಲ್ಲ~ ಎನ್ನುತ್ತಾರೆ ಗಾರ್ಮೆಂಟ್ ಹಾಗೂ ಟೆಕ್ಸ್‌ಟೈಲ್ ಕೆಲಸಗಾರರ ಯೂನಿಯನ್ ಸಲಹೆಗಾರರಾದ ಕೆ.ಆರ್.ಜಯರಾಮ್.`ಈ ನೀತಿ ಬದಲಾಗಬೇಕಾದರೆ ಬೃಹತ್ ಮಟ್ಟದ ಚಳವಳಿಯೇ ನಡೆಯಬೇಕು. ಅದಾಗಬೇಕಾದರೆ ಇನ್ನೂ ಎಷ್ಟು ಶತಮಾನಗಳು ಉರುಳುತ್ತವೆಯೊ...~ ಎನ್ನುತ್ತಾರೆ ಅವರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.