ಗುರುವಾರ , ಮಾರ್ಚ್ 4, 2021
30 °C

ಹೊಸ ಸಿನಿಮಾ ‘ಶುರುವಾಗಿದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ ಸಿನಿಮಾ ‘ಶುರುವಾಗಿದೆ’

ಇನ್ನೇನು ಆಷಾಢ ಬಂದೇ ಬಿಟ್ಟಿತು, ಅಧಿಕ ಆಷಾಢವೂ ಇದೆ. ಆಷಾಢದಲ್ಲಿ ಒಳ್ಳೆಯ ಕೆಲಸ ಶುರು ಮಾಡುವಂತಿಲ್ಲ ಎನ್ನುವುದು ನಂಬಿಕೆ. ಹಾಗಾಗಿ, ಆಷಾಢಕ್ಕೆ ಮುನ್ನ ಗಡಿಬಿಡಿಯಲ್ಲಿ ಮುಹೂರ್ತದ ನಡೆಸಿದ ಚಿತ್ರಗಳ ಪೈಕಿ ‘ಶುರುವಾಗಿದೆ’ ಚಿತ್ರದ ಮುಹೂರ್ತವೂ ನೆರವೇರಿದೆ.ಚಿತ್ರದ ಹೆಸರೇ ‘ಶುರುವಾಗಿದೆ’. ಒಂದಷ್ಟು ಚಿತ್ರಗಳಿಗೆ ಸಹಾಯಕರಾಗಿ ಕೆಲಸ ಮಾಡಿದ ಶ್ರೀಕಾಂತ್‌ ಕಿರುಚಿತ್ರಗಳನ್ನೂ ಮಾಡಿದ್ದಾರೆ. ಮಂಡ್ಯದವರಾದ ಶ್ರೀಕಾಂತ್ ಇದೀಗ ಕಥಾಚಿತ್ರವೊಂದರ ನಿರ್ದೇಶನಕ್ಕೆ ತೊಡಗಿದ್ದಾರೆ. ಗುರಿಯೇ ಇರದ ನಾಯಕನ ಬದುಕಿಗೊಂದು ಹೊಸ ಉದ್ದೇಶ ಸಿಕ್ಕಾಗ ಆತನ ಜೀವನ ಶುರುವಾಗುವುದರಿಂದ ಚಿತ್ರಕ್ಕೆ ಈ ಶೀರ್ಷಿಕೆ ಸೂಕ್ತವಂತೆ.ಚಿತ್ರತಂಡದಲ್ಲಿ ಪರಿಚಿತರೆಂದರೆ ಕೆ. ಕಲ್ಯಾಣ್ ಮಾತ್ರ. ಅವರ ಪ್ರಕಾರ, ‘ಚಿತ್ರದ ಪ್ರತಿ ಸನ್ನಿವೇಶದಲ್ಲೂ ತಿರುವುಗಳಿವೆ. ಆ ತಿರುವಿನಲ್ಲಿ ಹೊಸ ಭಾವನೆಗಳು ಶುರುವಾಗುತ್ತವೆ. ಹಾಗಾಗಿ ಈ ಶೀರ್ಷಿಕೆ ಸೂಚಿಸಿದೆ’ ಎಂದು ಅವರು ಶೀರ್ಷಿಕೆಗೆ ನ್ಯಾಯ ಸಲ್ಲಿಸುತ್ತಾರೆ. ಚಿತ್ರದಲ್ಲಿ ಆರು ಹಾಡುಗಳಿದ್ದು ಎಲ್ಲವೂ ಕಲ್ಯಾಣ್ ಅವರ ಲೇಖನಿಯಿಂದಲೇ ಮೂಡಿಬರಲಿದ್ದು, ಅವರೇ ರಾಗ ಸಂಯೋಜಿಸಲಿದ್ದಾರೆ. ಹಾಡುಗಳ ಸೀಡಿ ಕೊಳ್ಳುವವರೇ ಇಲ್ಲದ ಈ ದಿನಗಳಲ್ಲಿ, ಚಿತ್ರವನ್ನು ನೋಡಿ ಹೊರಬರುವ ಪ್ರೇಕ್ಷಕ ಹಾಡುಗಳನ್ನು ಖರೀದಿಸುವಂತೆ ಮಾಡುವ ಸಂಗೀತ ನೀಡಬೇಕೆಂಬುದು ಅವರ ಆಶಯ.ದೀಪಕ್ ಜೈರಾಂ ‘ಶುರುವಾಗಿದೆ’ ಸಿನಿಮಾದ ನಾಯಕ. ಈ ಹೊಸ ನಾಯಕ ಚಿತ್ರಕ್ಕಾಗಿ ಒಂದು ವರ್ಷ ಸಿದ್ಧತೆ ನಡೆಸಿದ್ದಾರಂತೆ. ಚಿತ್ರದಲ್ಲಿ, ನಿರ್ದೇಶಕನಾಗಲು ಹವಣಿಸುವ ಮತ್ತು ಆತನ ಪಡಿಪಾಟಲುಗಳನ್ನು ದೀಪಕ್ ತಮ್ಮ ಪಾತ್ರದಲ್ಲಿ ಹಿಡಿದಿಡಲಿದ್ದಾರೆ. ಕಿರುಚಿತ್ರಗಳು ಮತ್ತು ಮಾಡೆಲಿಂಗ್‌ನಲ್ಲಿ ತೊಡಗಿರುವ ಮಂಗಳೂರಿನ ಸೌಮ್ಯ ಕಾಂಚನ್ ಮೊದಲ ಬಾರಿ ನಾಯಕಿಯಾಗಿದ್ದಾರೆ. ‘ಉಗ್ರಾಕ್ಷ’ ಚಿತ್ರದಲ್ಲೂ ಅವರು ಬಣ್ಣಹಚ್ಚಿದ್ದಾರಂತೆ. ಮತ್ತೊಬ್ಬ ನಾಯಕಿ ಮಾಧುರಿ ಕೂಡ ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ಶಿವಶಂಕರ್ ಚಿತ್ರದ ನಿರ್ಮಾಪಕರು. ಮನೋಹರ್ ಜೋಷಿ ಅವರದು ಕ್ಯಾಮೆರಾ ಜವಾಬ್ದಾರಿ. ಜುಲೈನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು ಬೆಂಗಳೂರು, ಮೈಸೂರುಗಳಲ್ಲಿ ಚಿತ್ರೀಕರಣ ನಡೆಯಲಿದೆ.                              

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.